* ದರ್ಶನ್‌ ಟೀಕೆಗೆ ಸೋಷಿಯಲ್‌ ಮೀಡಿಯಾದಲ್ಲಿ ಜೋಗಿ ಪ್ರೇಮ್‌ ತಿರುಗೇಟು* ನಿಮ್ಮ ಯಶಸ್ಸು ಕಂಡು ಖುಷಿಪಟ್ಟ ನನ್ನನ್ಯಾಕೆ ವಿವಾದದ ಮಧ್ಯ ಎಳೆದು ತರ್ತಿದ್ದೀರಾ?* ಥಾಂಕ್ಯೂ ಫಾರ್‌ ಯುವರ್‌ ಕಿಡಿಂಗ್‌ ವರ್ಡ್ಸ್. ದೇವರು ನಿಮಗೆ ಒಳ್ಳೆಯದು ಮಾಡಲಿ 

ಬೆಂಗಳೂರು(ಜು.18): ನಾನು ಕರಿಯ ಸಿನಿಮಾ ಮಾಡಬೇಕಾದರೆ ಯಾವ ಪುಡಂಗುನೂ ಅಲ್ಲ. ನನಗೆ ಕೊಂಬು ಇರಲಿಲ್ಲ. ನಾನೊಬ್ಬ ಸಾಮಾನ್ಯ ನಿರ್ದೇಶಕ. ಡಾ ರಾಜ್‌ಕುಮಾರ್‌, ಡಾ ವಿಷ್ಣುವರ್ಧನ್‌, ರಜನಿಕಾಂತ್‌ ಅವರು ಒಳ್ಳೆಯ ನಿರ್ದೇಶಕ ಎಂದು ನನ್ನ ಬೆನ್ನು ತಟ್ಟಿದ್ರು.

ಹೀಗೆ ಹೇಳುವ ಮೂಲಕ ನಿರ್ದೇಶಕ ಪ್ರೇಮ್‌, ಅವರು ದರ್ಶನ್‌ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಉಮಾಪತಿ ಹಾಗೂ ತಮ್ಮ ನಡುವೆ ಪರಿಚಯ ಹೇಗಾಯಿತು ಎಂದು ಮಾಧ್ಯಮಗಳ ಮುಂದೆ ಶನಿವಾರ ಹೇಳುವಾಗ ‘ಪ್ರೇಮ್‌ ಅವರೇನು ದೊಡ್ಡ ಪುಡಂಗುನಾ, ಅವರಿಗೆ ಕೊಂಬು ಇದಿಯಾ’ ಎಂದು ವ್ಯಂಗ್ಯವಾಗಿ ಮಾತನಾಡಿದ್ದರು. ಕೂಡಲೇ ಜೋಗಿ ಪ್ರೇಮ್‌, ನಟ ದರ್ಶನ್‌ ಅವರ ಈ ಹೇಳಿಕೆಗೆ ನಯವಾಗಿಯೇ ತಿರುಗೇಟು ನೀಡಿದ್ದಾರೆ.

ದರ್ಶನ್ ವಾರ್ನಿಂಗ್, ಉಮಾಪತಿ 3 ಬಾಂಬ್, ಮಂಡ್ಯ ರಾಜಕೀಯಕ್ಕಿಂತ ದೊಡ್ಡ ಸುದ್ದಿ?

‘ದರ್ಶನ್‌ ಅವರೇ ನಾನು ನಿಮ್ಮ ಜತೆ ಕರಿಯ ಸಿನಿಮಾ ಮಾಡುವಾಗ ನಾನು ಯಾವ ಪುಡಂಗು ಅಲ್ಲ. ಕೊಂಬು ಇರಲ್ಲ. ಸಾಮಾನ್ಯ ನಿರ್ದೇಶಕ. ಆಗ ನನ್ನ ದೊಡ್ಡವರು, ಇಡೀ ಕರ್ನಾಟಕ ಜನ ಮೆಚ್ಚಿಕೊಂಡರು. ಹ್ಯಾಟ್ರಿಕ್‌ ನಿರ್ದೇಶಕ ಅಂತ ಬಿರುದು ಕೊಟ್ಟಾಗಲೂ ನನಗೆ ಕೊಂಬು ಬರಲಿಲ್ಲ. ನಾನು ನನ್ನದೇ ಆದ ಶೈಲಿಯಲ್ಲಿ ಸಿನಿಮಾ ಮಾಡಿಕೊಂಡು ಬಂದವನು’ ಎಂದು ಸ್ವತಃ ಪ್ರೇಮ್‌ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

ಉಮಾಪತಿ ನಿರ್ಮಾಣದಲ್ಲಿ, ದರ್ಶನ್‌ ಅವರ ನಟನೆಯಲ್ಲಿ ಪ್ರೇಮ್‌ ಅವರು ಸಿನಿಮಾ ಮಾಡಲು ಬಂದಿದ್ದರು ಎನ್ನುವ ಮಾತಿಗೂ ಸ್ಪಷ್ಟನೆ ಕೊಟ್ಟಿರುವ ಪ್ರೇಮ್‌, ‘ಬಹಳಷ್ಟುನಿರ್ಮಾಪಕರು ಹಾಗೂ ನಿಮ್ಮ ಹಾಗೂ ನನ್ನ ಅಭಿಮಾನಿಗಳು ನಮ್ಮಿಬ್ಬರ ಕಾಂಬಿನೇಶನ್‌ನಲ್ಲಿ ಯಾವಾಗ ಚಿತ್ರ ಮಾಡುತ್ತೀರಿ ಎಂದು ಕೇಳ್ತಾನೆ ಇದ್ದರು. ಇದರ ಬಗ್ಗೆ ನಿಮಗೂ ಗೊತ್ತು. ನನಗೂ ಗೊತ್ತು. ಇಬ್ಬರು ಸೇರಿ ಸಿನಿಮಾ ಮಾಡೋದರ ಬಗ್ಗೆ ಚರ್ಚೆ ಮಾಡಿದ್ವಿ. ನಾನು ನಮ್ಮ ಬ್ಯಾನರ್‌ನಲ್ಲಿ ಸಿನಿಮಾ ಮಾಡಿ, ಇಲ್ಲ ನಿಮ್ಮ ಬ್ಯಾನರ್‌ನಲ್ಲಿ ಸಿನಿಮಾ ಮಾಡೋಣ ಅಂತ ಮತ್ತೆ ಚರ್ಚೆ ಮಾಡಿದ್ವಿ. ಆದರೆ, ಉಮಾಪತಿ ಅವರು ಬಂದು ನೀವು ಹಾಗೂ ದರ್ಶನ್‌ ಸೇರಿ ನನಗೆ ಸಿನಿಮಾ ಮಾಡಿ ಕೊಡಿ ಅಂದರು. ಅದಕ್ಕೆ ನಾನು ಉಮಾಪತಿ ಅವರನ್ನ ನಿಮಗೆ ಪರಿಚಯ ಮಾಡಿದೆ. ಮೂವರು ಸೇರಿ ಸಿನಿಮಾ ಮಾಡೋಣ ಎಂದು ನಿರ್ಧರಿಸಿದ್ವಿ. ಆದರೆ, ಆಗಲೇ ಶುರುವಾಗಿದ್ದ ನನ್ನ ದಿ ವಿಲನ್‌ ಸಿನಿಮಾ ತಡವಾಗುತ್ತಿದ್ದರಿಂದ ಉಮಾಪತಿ ಅವರಿಗೆ ದರ್ಶನ್‌ ಅವರ ಡೇಟ್ಸ್‌ ಇದ್ದ ಕಾರಣ ಬೇರೆ ನಿರ್ದೇಶಕರ ಜತೆ ಸಿನಿಮಾ ಮಾಡುವಂತೆ ನಾನೇ ಹೇಳಿದ್ದೆ. ನನ್ನ ಸಂಭಾವನೆಯನ್ನೂ ಉಮಾಪತಿ ಅವರಿಗೆ ಮರುಳಿಸಿ, ರಾಬರ್ಟ್‌ ಚಿತ್ರಕ್ಕೆ ಶುಭ ಕೋರಿದವನು ನಾನು. ಚಿತ್ರ ಹಿಟ್‌ ಆಯಿತು. ಎಲ್ಲರಂತೆ ನಾನೂ ಖುಷಿ ಪಟ್ಟೆ. ಆದರೆ, ಇದರ ನಡುವೆ ನನ್ನ ಹೆಸರು ಯಾಕೆ’ ಎಂದು ಖಾರವಾಗಿಯೇ ದರ್ಶನ್‌ ಅವರನ್ನು ಪ್ರಶ್ನಿಸಿದ್ದಾರೆ.

‘ದರ್ಶನ್‌ ಅವರೇ ನಿರ್ದೇಶಕರು ಯಾವ ಪುಡಂಗಿಗಳು ಅಲ್ಲ. ಅವರಿಗೆ ಕೊಂಬು ಇರಲ್ಲ. ತೆರೆ ಮೇಲೆ ಒಬ್ಬ ನಟನನ್ನ ಹುಟ್ಟು ಹಾಕಿ ಅವನಿಗೆ ಕೊಂಬು ಬರಬೇಕಾದರೆ ನಿರ್ದೇಶಕನ ಶ್ರಮ ಎಷ್ಟಿರುತ್ತದೆಂದು ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು. ಅದು ನಿಮಗೂ ಗೊತ್ತು. ದಯವಿಟ್ಟು ಇನ್ನೊಬ್ಬ ಬಗ್ಗೆ ಮಾತನಾಡಬೇಕಾದರೆ ಯೋಚಿಸಿ ಮಾತಾಡಿ ದರ್ಶನ್‌ ಅವರೇ. ಥಾಂಕ್ಯೂ ಫಾರ್‌ ಯುವರ್‌ ಕಿಡಿಂಗ್‌ ವರ್ಡ್ಸ್. ದೇವರು ನಿಮಗೆ ಒಳ್ಳೆಯದು ಮಾಡಲಿ’ ಎಂದು ಪ್ರೇಮ್‌ ಅವರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ನಿಮ್ಮನ್ನು ನೋಡ್ಕೊಳ್ಳಿ : ರಕ್ಷಿತಾ ಪ್ರೇಮ್‌

‘ಯಾರಾದರೂ ಇನ್ನೊಬ್ಬರ ಬಗ್ಗೆ, ಅವರ ನಡತೆಯ ಬಗ್ಗೆ ಮಾತನಾಡುವ ಮುಂಚೆ ಮಾತನಾಡುವಾಗ ತನ್ನ ಬದುಕಿನಲ್ಲಿ ತಾನೇನಾಗಿದ್ದೇನೆ ಅನ್ನೋದನ್ನು ಗಮನಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಜನರ ಎದುರಲ್ಲಿ ಮಾತನಾಡುವಾಗ, ಏನು ಮಾತನಾಡುತ್ತಿದ್ದೇನೆ ಅನ್ನೋದರ ಬಗ್ಗೆ ಪರಿಜ್ಞಾನ ಇರುವುದು ಬಹಳ ಮುಖ್ಯ’ ಎಂದು ಪ್ರೇಮ್‌ ಪತ್ನಿ, ನಿರ್ಮಾಪಕಿ ರಕ್ಷಿತಾ ಪ್ರೇಮ್‌ ಹೇಳಿಕೆ ನೀಡಿದ್ದಾರೆ. ಆದರೆ ಇದಕ್ಕೂ ಮೊದಲು ಟ್ವೀಟರ್‌ನಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ರಕ್ಷಿತಾ, ದರ್ಶನ್‌ ನನ್ನ ಫ್ರೆಂಡ್‌, ಅವರ ಸ್ಥಿತಿಯ ಬಗ್ಗೆ ಬೇಸರವಿದೆ. ಆದರೆ ಪ್ರೇಮ್‌ ನನ್ನ ಹಸ್ಬೆಂಡ್‌. ಅವರಿಗೆ ಹೀಗಾಗಿರುವುದಕ್ಕೆ ಖೇದವಿದೆ. ಈ ಘಟನೆಗಳಿಂದ ನಾನು ಬಹಳ ನೊಂದಿದ್ದೇನೆ ಎಂದಿದ್ದಾರೆ.