ನಟ ಜೆಕೆ ಮತ್ತೊಮ್ಮೆ ಸದ್ದು ಮಾಡಲು ಸಜ್ಜಾದಂತೆ ಕಾಣುತ್ತಿದ್ದಾರೆ. ಅದಕ್ಕೆ ಕಾರಣ ಅವರ ನಟನೆಯ ‘ಐರಾವನ್‌’ ಚಿತ್ರದ ಟೀಸರ್‌. ಇತ್ತೀಚೆಗೆ ನಟ ಸುದೀಪ್‌ ಅವರು ಈ ಟೀಸರ್‌ ಬಿಡುಗಡೆ ಮಾಡಿದರು. ಪಕ್ಕಾ ಮಾಸ್‌ ಇಮೇಜ್‌ನಲ್ಲಿ ಜೆಕೆ ಟೀಸರ್‌ನಲ್ಲಿ ಅಬ್ಬರಿಸಿದ್ದು, ಟೀಸರ್‌ನಿಂದಲೇ ಭರವಸೆ ನೀಡಿದ್ದಾರೆ. 

ಡಾ ನಿರಂತರ ಈ ಚಿತ್ರ ನಿರ್ಮಾಪಕರು. ರಾಮ್ಸ್‌ ರಂಗ ಚಿತ್ರವನ್ನು ನಿರ್ದೇಶನ ಮಾಡಿದ್ದು, ಇವರಿಗೆ ಇದು ಮೊದಲ ಸಿನಿಮಾ. ಸುದೀಪ್‌ ಅವರು ಮುಖ್ಯ ಅತಿಥಿ ಎಂದ ಮೇಲೆ ಹಂಗಾಮ ಕೊಂಚ ಹೆಚ್ಚಾಗಿಯೇ ಇರುತ್ತದೆ. ಹೀಗಾಗಿಯೇ ಟೀಸರ್‌ ಬಿಡುಗಡೆ ಅದ್ದೂರಿಯಾಗಿಯೇ ನಡೆಯಿತು.

ಟೀಸರ್‌ ಬಿಡುಗಡೆ ಮಾಡಿ ಮಾತಿಗೆ ನಿಂತಿದ್ದು ಸುದೀಪ್‌ ಅವರು. ‘ಟೀಸರ್‌ ನೋಡುತ್ತಿದ್ದರೆ ತುಂಬಾ ಭರವಸೆ ಸಿಗುತ್ತದೆ. ಖಂಡಿತ ಈ ಚಿತ್ರದ ಮೂಲಕ ಜೆಕೆ ಮತ್ತೊಂದು ಯಶಸ್ಸು ಸಾಧಿಸುತ್ತಾರೆ. ಇಡೀ ಚಿತ್ರತಂಡಕ್ಕೆ ಗೆಲುವು ಸಿಗಬೇಕು. ತಾಂತ್ರಿಕವಾಗಿ ತುಂಬಾ ಚೆನ್ನಾಗಿ ಮಾಡಿದ್ದಾರೆ. ಈ ಚಿತ್ರವನ್ನು ನಾವೆಲ್ಲ ಜತೆಯಾಗಿ ಕೂತು ಚಿತ್ರಮಂದಿರದಲ್ಲಿ ನೋಡುವಂತಹ ವಾತಾವರಣ ಆದಷ್ಟುಬೇಗ ಬರಬೇಕು. ಚಿತ್ರತಂಡದ ಶ್ರಮಕ್ಕೆ ಬೆಲೆ ಸಿಗಬೇಕು’ ಎಂದರು ಸುದೀಪ್‌. ತಮ್ಮ ನಟನೆಯ ಚಿತ್ರದ ಟೀಸರ್‌ ಅನ್ನು ಸುದೀಪ್‌ ಬಿಡುಗಡೆ ಮಾಡಿದ ಸಂಭ್ರಮದಲ್ಲಿ ಇದ್ದ ಜೆಕೆ ವೇದಿಕೆ ಮೇಲೆ ಬಂದರು.

‘ನಾನು ಡೆಡ್ಲಿ 2 ಚಿತ್ರದ ಮೂಲಕ ನಟನಾಗಿ ಬಂದೆ. ನನ್ನ ಚಿತ್ರರಂಗಕ್ಕೆ ಪರಿಚಯಿಸಿದ್ದು ನಿರ್ಮಾಪಕ ಜಾಕ್‌ ಮಂಜು ಅವರು. ಅಲ್ಲಿಂದ ನನ್ನ ಸಿನಿಮಾ ಜರ್ನಿ ಶುರುವಾಯಿತು. ಈ ನಡುವೆ ಚಿತ್ರರಂಗದಿಂದ ದೂರವಾದಾಗ ಮತ್ತೆ ನನ್ನ ಚಿತ್ರರಂಗಕ್ಕೆ ಸುದೀಪ್‌ ಅವರೇ ‘ಕೆಂಪೇಗೌಡ’ ಚಿತ್ರದ ಮೂಲಕ ಕರೆತಂದರು. ಕಷ್ಟಇರಲಿ, ಸುಖ ಇರಲಿ ಸುದೀಪ್‌ ನನ್ನ ಜತೆಗಿದ್ದಾರೆ. ಎಲ್ಲರ ನಂಬಿಕೆಯನ್ನು ಉಳಿಸುವಂತಹ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ. ಎಲ್ಲರಿಗೂ ಈ ಸಿನಿಮಾ ಮೆಚ್ಚಿಗೆ ಆಗಲಿದೆ’ ಎಂಬುದು ಜೆಕೆ ಅವರ ಮಾತುಗಳು.

ಚಿತ್ರದಲ್ಲಿ ನಾಯಕಿಯಾಗಿ ಅದ್ವಿತಿ ಶೆಟ್ಟಿನಟಿಸಿದ್ದಾರೆ. ಅವಿನಾಶ್‌, ವಿವೇಕ್‌, ಕೃಷ್ಣ ಹೆಬ್ಬಾಳ್‌ ಚಿತ್ರದ ಪ್ರಮುಖ ಪಾತ್ರಗಳು. ದೇವೇಂದ್ರ ಚಿತ್ರಕ್ಕೆ ಛಾಯಾಗ್ರಾಹಣ ಮಾಡಿದ್ದಾರೆ. ‘ಅರ್ಜುನನ ಮೂರನೇ ಮಗನ ಹೆಸರು ಐರಾವನ್‌. ಅವನದ್ದು ರಾಕ್ಷಸ ರೂಪ. ಆ ರೂಪವನ್ನು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಬದಲಿಸಿಕೊಂಡಿದ್ದೇನೆ. ಅಂದರೆ ಈ ದಿನಗಳಲ್ಲಿ ಐರಾವನ್‌ ಕ್ಯಾರೆಕ್ಟರ್‌ ಇದ್ದರೆ ಏನಾಗುತ್ತದೆ ಎಂಬುದು ಚಿತ್ರದ ಕತೆ’ ಎಂದರು ರಾಮ್ಸ್‌ ರಂಗ. ‘ಹುಚ್ಚ ಸಿನಿಮಾದಿಂದ ಸುದೀಪ್‌ ಅವರನ್ನು ನೋಡಿಕೊಂಡು ಬಂದಿದ್ದೇನೆ. ಜೆಕೆ ಅವರ ಮೂಲಕ ಸುದೀಪ್‌ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದೆ. ಈಗ ಕಾರ್ಯಕ್ರಮಕ್ಕೆ ಬಂದು ಟೀಸರ್‌ ಲಾಂಚ್‌ ಮಾಡಿದ್ದಕ್ಕೆ ಅವರಿಗೆ ಧನ್ಯವಾದ. ಇಡೀ ತಂಡದಲ್ಲಿ ಎಲ್ಲರೂ ಯುವಕರೇ. ಯುವಕರನ್ನು ಗುರುತಿಸಬೇಕೆಂಬ ಉದ್ದೇಶದಿಂದ ಸಿನಿಮಾರಂಗಕ್ಕೆ ಬಂದಿದ್ದೇನೆ’ ಎಂದು ಹೇಳಿಕೊಂಡಿದ್ದು ನಿರ್ಮಾಪಕ ಡಾ ನಿರಂತರ ಅವರು. ಎಸ್‌ ಪ್ರದೀಪ್‌ ವರ್ಮಾ ಅವರ ಸಂಗೀತ, ಹರಿ ಸಂತೋಷ್‌ ಸಾಹಿತ್ಯ, ಕಾಂತರಾಜು ಕಡ್ಡಿಪುಡಿ ಸಂಭಾಷಣೆ ಬರೆದಿದ್ದಾರೆ.