ಮಲಯಾಳಂನ ಸೌಮ್ಯ ಮೆನನ್‌ ನಾಯಕಿಯಾಗುವುದು ಪಕ್ಕಾ ಆಗಿ ಅದ್ಧೂರಿಯಾಗಿ ಮುಹೂರ್ತ ಕೂಡ ನೆರವೇರಿತ್ತು. ಇದೀಗ ಜಯ ಕರ್ನಾಟಕ ಸಂಘಟನೆ, ನಿರ್ಮಾಪಕ ಪದ್ಮನಾಭ ಗೌಡ ಮತ್ತು ಮುತ್ತಪ್ಪ ರೈ ಫ್ಯಾಮಿಲಿ ಲಾಯರ್‌ ನಾರಾಯಣ ಸ್ವಾಮಿ ಪತ್ರಿಕಾಗೋಷ್ಠಿ ನಡೆಸಿ ‘ಎಂ.ಆರ್‌’ ಚಿತ್ರ ಮಾಡದಂತೆ ಸೂಚನೆ ನೀಡಿದ್ದಾರೆ.

ಆರಂಭದಲ್ಲಿಯೇ ವಿವಾದದಲ್ಲಿ ಸಿಲುಕಿಕೊಂಡಿತು ಮುತ್ತಪ್ಪ ಬಯೋಪಿಕ್! 

ಜಯ ಕರ್ನಾಟಕ ಸಂಘಟನೆ ವಾದ

ರವಿ ಶ್ರೀವತ್ಸ ‘ಎಂ.ಆರ್‌’ ಚಿತ್ರವನ್ನು ಕೈ ಬಿಡಬೇಕು. ಚಿತ್ರದಲ್ಲಿ ಮುತ್ತಪ್ಪ ರೈ ಕುಟುಂಬ, ಜಯ ಕರ್ನಾಟಕ ಸಂಘಟನೆಯ ಹೆಸರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಆದರೆ ಅವರು ಈ ಬಗ್ಗೆ ನಮ್ಮನ್ನು ಸಂಪರ್ಕ ಮಾಡಿಲ್ಲ. ಇದರ ಜೊತೆಗೆ ನಮಗೆ ಈಗ ಚಿತ್ರಕ್ಕೆ ತೊಂದರೆ ನೀಡುತ್ತಿದ್ದಾರೆ ಎಂದು ನೊಟೀಸ್‌ ಕಳಿಸಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ಕಾನೂನು ಹೋರಾಟ ಮಾಡಲು ನಾವು ಸಿದ್ಧವಾಗಿದ್ದೇವೆ. ಈ ಬಗ್ಗೆ ವಾಣಿಜ್ಯ ಮಂಡಳಿಗೂ ಮನವಿ ಮಾಡಿದ್ದೇವೆ. ಈ ಹಿಂದೆಯೇ ಪದ್ಮನಾಭ್‌ ಗೌಡರು ಮುತ್ತಪ್ಪ ರೈ ಜೀವನ ಆಧಾರಿತ ಸಿನಿಮಾ ಮಾಡಲು ಮುಂದಾಗಿದ್ದರು. ಆದರೆ ಅದು ಸೆಟ್ಟೇರಿರಲಿಲ್ಲವಷ್ಟೇ. ಈಗ ನಮ್ಮ ಮನವಿಯ ಹೊರತಾಗಿಯೂ ರವಿ ಶ್ರೀವತ್ಸ ಸಿನಿಮಾ ಮಾಡಿಯೇ ತೀರುತ್ತೇನೆ ಎಂದರೆ ನಾವು ಅದನ್ನು ಸಹಿಸುವುದಿಲ್ಲ. ಕೂಡಲೇ ರವಿ ಮತ್ತು ತಂಡ ನಮ್ಮೊಂದಿಗೆ ಮಾತುಕತೆಗೆ ಬರಲಿ. ಸಂಘಟನೆ, ಮುತ್ತಪ್ಪ ರೈ ಮತ್ತು ಕುಟುಂಬಕ್ಕೆ ಡ್ಯಾಮೇಜ್‌ ಆಗಬಾರದು ಎನ್ನುವುದು ನಮ್ಮ ಕಾಳಜಿ ಎಂದು ಜಯ ಕರ್ನಾಟಕ ರಾಜ್ಯಾಧ್ಯಕ್ಷ ಬಿ.ಎನ್‌. ಜಗದೀಶ್‌ ತಿಳಿಸಿದ್ದಾರೆ.

ನಿರ್ಮಾಪಕ ಪದ್ಮನಾಭ ಗೌಡ, 35 ವರ್ಷದಿಂದ ಮುತ್ತಪ್ಪ ರೈ ಕುರಿತು ಸಿನಿಮಾ ಮಾಡವೇಕು ಎಂದು ದಿನೇಶ್‌ ಬಾಬು ಸೇರಿ ಹಲವರು ಪ್ರಯತ್ನ ಮಾಡಿದ್ದರು. ಆದರೆ ಮುತ್ತಪ್ಪಣ್ಣ ಅವರು ಒಪ್ಪಿರಲಿಲ್ಲ. ಒಪ್ಪಿದ್ದರೆ ಅಂದೇ ಸಿನಿಮಾ ಆಗುತ್ತಿತ್ತು. ನನಗೆ ಅಣ್ಣನ ಸಿನಿಮಾ ಮಾಡುವ ಆಸೆ ಇತ್ತು. ನಾನು ಸುದೀಪ್‌ ಅಥವಾ ದರ್ಶನ್‌ ಅವರು ಅಣ್ಣನ ಪಾತ್ರ ಮಾಡಬೇಕು ಎಂದಿದ್ದೆ. ಅಣ್ಣನಿಗೂ ಸಿನಿಮಾ ಹೀಗೆಯೇ ಬರಬೇಕು ಎನ್ನುವ ಆಸೆ ಇತ್ತು. ಆಗಲೇ ನಾನು ಅಣ್ಣ ಅಂದುಕೊಂಡಿದ್ದ ರೀತಿ ಸಿನಿಮಾ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆ. ಈಗ ರವಿ ಶ್ರೀವತ್ಸ ಮಾಡಲು ಹೊರಟಿರುವುದು ಸರಿಯಲ್ಲ. ಈ ಸಿನಿಮಾ ಆಗಬಾರದು. ಅದಕ್ಕಾಗಿಯೇ ಪ್ರಾರಂಭದಲ್ಲಿಯೇ ಹೇಳುತ್ತಿದ್ದೇವೆ. ದುಡ್ಡು ಖರ್ಚು ಮಾಡಿಕೊಳ್ಳಬಾರದು ಎನ್ನುವ ಉದ್ದೇಶ ನಮ್ಮದು. ಮುತ್ತಪ್ಪಣ್ಣನ ಕ್ಯಾರೆಕ್ಟರ್‌ಗೂ ದೀಕ್ಷಿತ್‌ಗೂ ಹೋಲಿಕೆ ಆಗುವುದಿಲ್ಲ. ಕೂಡಲೇ ರವಿ ಸಿನಿಮಾ ನಿಲ್ಲಿಸಬೇಕು ಎಂದು ಹೇಳಿದರು.

ತೆರೆ ಮೇಲೆ ಭೂಗತ ಲೋಕದ ಪುಟಗಳು;ಅದ್ದೂರಿಯಾಗಿ ಸೆಟ್ಟೇರಿದ ಎಂಆರ್‌ ಚಿತ್ರ! 

ಮುತ್ತಪ್ಪ ರೈ ಫ್ಯಾಮಿಲಿ ಲಾಯರ್‌ ವಾದ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುತ್ತಪ್ಪ ರೈ ಫ್ಯಾಮಿಲಿ ಲಾಯರ್‌ ನಾರಾಯಣ ಸ್ವಾಮಿ, 2019ರಲ್ಲಿ ಮುತ್ತಪ್ಪ ರೈ ವಿಲ್‌ ಬರೆದಿಟ್ಟಿದ್ದಾರೆ. ಯಾರಾದರೂ ತಮ್ಮ ಆತ್ಮ ಚರಿತ್ರೆ ಆಧರಿಸಿ ಸಿನಿಮಾ ಮಾಡುವುದಿದ್ದರೆ ಅದಕ್ಕೆ ನನ್ನ ಮಕ್ಕಳಾದ ರಾಕಿ ರೈ ಮತ್ತು ರಿಕ್ಕಿ ರೈ ಅವರ ಲಿಖಿತ ಒಪ್ಪಿಗೆ ಪಡೆದುಕೊಳ್ಳತಕ್ಕದ್ದು ಎಂದು. ಆದರೆ ರವಿ ಶ್ರೀವತ್ಸ ಮತ್ತು ತಂಡ ಕುಟುಂಬದಿಂದ ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಹೀಗೆ ಅನುಮತಿ ಪಡೆದುಕೊಳ್ಳದೇ ಒಬ್ಬ ವ್ಯಕ್ತಿಯ ಜೀವನ ಚರಿತ್ರೆ ಆಧರಿಸಿ ಸಿನಿಮಾ ಮಾಡುವುದು ತಪ್ಪು. ಈಗ ಮುತ್ತಪ್ಪ ರೈ ಬಗ್ಗೆ ನೆಗೆಟಿವ್‌ ಆಗಿ ಸಿನಿಮಾ ಮಾಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸಿನಿಮಾ ಮಾಡುವುದಾದರೆ ಅವರದ್ದೇ ಎಂ.ಆರ್‌. ಬ್ಯಾನರ್‌ನಲ್ಲಿ ಸಿನಿಮಾ ಮಾಡುತ್ತಾರೆ. ಇದಕ್ಕೆ ಜಯ ಕರ್ನಾಟಕ ಸಂಘಟನೆ ಮತ್ತು ಮುತ್ತಪ್ಪ ರೈ ಕುಟುಂಬಸ್ಥರ ಒಪ್ಪಿಗೆ ಸಿಕ್ಕಬೇಕು. ಆಗ ಪದ್ಮನಾಭ ಗೌಡರೇ ಸಿನಿಮಾ ಮಾಡುತ್ತಾರೆ ಎಂದು ಹೇಳಿದ್ದಾರೆ.