ಮೊಮ್ಮಗ ನಿಖಿಲ್ ಕೃಷಿ ಕಾರ್ಯ ಮೆಚ್ಚಿ ಭೇಷ್ ಎಂದ ದೇವೇಗೌಡರು!
ಕೃಷಿ ಕಾಯಕವನ್ನು ಪ್ರಾರಂಭಿಸಿದ ನಿಖಿಲ್ ಕುಮಾರಸ್ವಾಮಿ. ಇಡೀ ಕುಟುಂಬದ ಜೊತೆ ಬಿಡದಿ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.
ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ನಟ ನಿಖಿಲ್ ಕುಮಾರಸ್ವಾಮಿ ಹಲವು ಹೊಸ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರೈಡರ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ, ರಾಮನಗರದ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾ ಜನರ ಸೇವೆ ಮಾಡುತ್ತಾ, ಇದೀಗ ಕುಟುಂಬದ ನೆಚ್ಚಿನ ಕೆಲಸ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕೆಲವು ದಿನಗಳಿಂದ ಕುಮಾರಸ್ವಾಮಿ ಕುಟುಂಬ ಬಿಡದಿ ತೋಟದ ಮನೆಯಲ್ಲಿ ಪತ್ನಿ ರೇವತಿಯೊಂದಿಗಿದ್ದಾರೆ. ಈ ವೇಳೆ ನಿಖಿಲ್ ರಾಮನಗರದಲ್ಲಿ ಬೆಳೆದಿರುವ ರಾಗಿಯನ್ನು ದೇವೇಗೌಡರು ಪರಿಶೀಲಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 'ರಾಮನಗರದ ಕೇತಗಾನಹಳ್ಳಿಯಲ್ಲಿ ನಾನು ಮತ್ತು ಕುಮಾರಣ್ಣನವರು ಅತ್ಯಂತ ಪ್ರೀತಿ, ಕಕ್ಕುಲತೆಯಿಂದ ಕೃಷಿ ಮಾಡಿದ್ದೇವೆ. ನಮ್ಮಿಬ್ಬರ ಈ ಕೃಷಿ ಕಾರ್ಯವನ್ನು ಮಣ್ಣಿನ ಮಗ, ರೈತರ ನಾಯಕ ದೇವೇಗೌಡರು ಖುದ್ದು ವೀಕ್ಷಿಸಿ ಖುಷಿಪಟ್ಟ ಸಂದರ್ಭವಿದು,' ಎಂದು ಬರೆದು ಕೊಂಡಿದ್ದಾರೆ.
ಅಲ್ಲದೇ ಪತ್ನಿ ರೇವತಿ, ಅಜ್ಜಿ ಚೆನ್ನಮ್ಮ ತೆಂಗಿನ ಸಸಿ ನೆಟ್ಟಿದ್ದಾರೆ. ಅಭಿಮಾನಿಗಳ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ವೈರಲ್ ಮಾಡುವ ಮೂಲಕ ಮಣ್ಣಿನ ಮಗ ಎಂದು ನಿಖಿಲ್‌ಗೆ ಬಿರುದು ನೀಡುತ್ತಿದ್ದಾರೆ. ನಿಖಿಲ್ ತಮ್ಮ ಬಿಡದಿ ತೋಟಕ್ಕೆ ಕೆಲವು ದಿನಗಳ ಹಿಂದೆ ನಾಲ್ಕು ಗೀರ್ ತಳಿಯ ಗೋವುಗಳನ್ನು ಬರ ಮಾಡಿಕೊಂಡರು. ಪತ್ನಿ ಜೊತೆ ಪೂಜೆ ಸಲ್ಲಿಸಿ, ಈ ವಿಶೇಷ ತಳಿಯ ಗೋವುಗಳನ್ನು ಸ್ವಾಗತಿಸಿದ ಸಂದರ್ಭದ ಬಗ್ಗೆ ಬರೆದುಕೊಂಡಿದ್ದರು. 'ನಾನು ರೈತನ ಮಗನಾಗಿ ನನ್ನ ಜಮೀನಿನಲ್ಲಿ ವ್ಯವಸಾಯ ನಡೆಸಬೇಕೆಂದು ನಿರ್ಧರಿಸಿ, ನಮ್ಮ ತೋಟದಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದೇನೆ. ಎಲ್ಲಾ ರೈತರ ಮಕ್ಕಳಿಗೂ ಯಶಸ್ಸು ಸಿಗಲಿ,' ಎಂದಿದ್ದರು ನಿಖಿಲ್.