ಅನಿಲ್, ಉದಯ್ ಸಾವಿಗೂ ಮುನ್ನ ಸ್ಥಳಕ್ಕೆ ತೆರಳಿದ ವಿನಯ್ ಗುರೂಜಿ ಹೀಗಂದಿದ್ದರು!
ಚಿತ್ರೀಕರಣದ ವೇಳೆ ನೀರಿನಲ್ಲಿ ಮುಳುಗಿ ನಟ ಅನಿಲ್ ಹಾಗೂ ಉದಯ್ ಅಸುನೀಗಿದ್ದರು. ಘಟನೆಗೂ ಮುನ್ನ ಈ ಸ್ಥಳಕ್ಕೆ ವಿಜಯ್ ಗುರೂಜಿ ಭೇಟಿ ನೀಡಿ, ಈ ಗುರುಗಳ ಫೋಟೋ ನೀಡಿದ್ದಾರೆ.
2017ರಲ್ಲಿ 'ಮಾಸ್ತಿಗುಡಿ' ಸಿನಿಮಾ ಚಿತ್ರೀಕರಣದ ವೇಳೆ ಖಳನಟ ಅನಿಲ್ ಹಾಗೂ ಉದಯ್ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ನಡೆಯುವುದಕ್ಕೂ ಮುನ್ನವೇ ಒಮ್ಮೆ ಈ ಸ್ಥಳಕ್ಕೆ ಕೊಪ್ಪ ತಾಲೂಕಿನ ಗೌರಿಗದ್ದೆಯ ಅವಧೂತರಾದ ವಿನಯ್ ಗುರೂಜಿ ಭೇಟಿ ನೀಡಿದ್ದರಂತೆ. ಫೈಟ್ ಮಾಸ್ಟರ್ ರವಿವರ್ಮಾ ಈ ಘಟನೆ ಬಗ್ಗೆ ನ್ಯೂಸ್ ಫಸ್ಟ್ ಸಂದರ್ಶನವೊಂದರಲ್ಲಿ ಇದೀಗ ಹಂಚಿಕೊಂಡಿದ್ದಾರೆ.
'ಮಾಸ್ತಿಗುಡಿ' ದುರಂತದಲ್ಲಿ ಸಾವಿಗೀಡಾದವರನ್ನು ನೆನೆದ ಅಂತಾರಾಷ್ಟ್ರೀಯ ವಾಹಿನಿ!
'ಮಾಸ್ತಿಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಹೆಲಿಕಾಪ್ಟರ್‌ನಿಂದ ನೀರಿಗೆ ಧುಮುಕುವ ದೃಶ್ಯವಿತ್ತು. ಯಾವುದೇ ರೀತಿಯ ಲೈಫ್ ಜಾಕೆಟ್ ಬಳಸದೇ ಅನಿಲ್ ಮತ್ತು ಉದಯ್ ಸಾಹಸಕ್ಕೆ ಮುಂದಾದರು. ಹೆಲಿಕಾಪ್ಟರ್‌ನಿಂದ ಕೆಳಗೆ ಹಾರುವ ಕೆಲವೇ ನಿಮಿಷಗಳ ಮುಂಚೆ ಸ್ಥಳಕ್ಕೆ ವಿನಯ್ ಗುರೂಜಿ ಭೇಟಿ ಕೊಟ್ಟಿದ್ದರಂತೆ. ಯಾಕೋ ಸರಿ ಹೋಗುತ್ತಿಲ್ಲ ಒಂದು ಕುಂಬಳಕಾಯಿ ತಂದು ಒಡೆಯಿರಿ ಎಂದು ಚಿತ್ರತಂಡದವರಿಗೆ ತಿಳಿಸಿದ್ದಾರೆ. ಕೊಡಲೇ ಕುಂಬಳಕಾಯಿ ತರಿಸಿ ಒಡೆಸಿದ್ದರಂತೆ. ಆದರೂ, ಅವಘಡ ಸಂಭವಿಸಿದೆ.
ಹೆಲಿಕಾಪ್ಟರ್ ಲ್ಯಾಂಡ್ ಮಾಡಿ ಕೆಲವು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿತ್ತು. ವಿಜಯ್ ಗುರೂಜಿ ಅಲ್ಲಿರುವುದು ಸರಿಬರದೇ ಹೊರಡುತ್ತೇನೆಂದು ಹೊರಟರಂತೆ. ಆದರೆ ಅವರ ಕಾರಿನಲ್ಲಿದ್ದ ಸಾಯಿಬಾಬಾ ಮೂರ್ತಿಯನ್ನು ತೆಗೆದುಕೊಂಡು ಬಂದು ದುನಿಯಾ ವಿಜಯ್ ಕೈಗೆ ಕೊಟ್ಟು, ರವಿವರ್ಮಾಗೆ ಕೊಡಿ ಎಂದೂ ಹೇಳಿದ್ದಾರೆ. ವಿಜಯ್ ತಕ್ಷಣವೇ ತಮಗೆ ತಂದು ಕೊಟ್ಟು, ಇದನ್ನು ನಿವೇ ಇಟ್ಟುಕೊಳ್ಳಬೇಕಂತೆ ಎಂದು ಹೇಳಿದ್ದರಂತೆ.
ಈ ಘಟನೆಯಿಂದ ರವಿವರ್ಮಾ ಜೈಲಿಗೆ ಹೋಗಿ ಬಂದ ಮೇಲೆ ವಿನಯ್ ಗುರೂಜಿಯನ್ನು ಭೇಟಿ ಮಾಡಿದ್ದಾರೆ. ಘಟನೆ ಬಗ್ಗೆ ವಿವರಿಸಿದ್ದಾರೆ. ' ಆ ದಿನ ಬಹಳ ದೊಡ್ಡ ದುರ್ಘಟನೆ ಆಗುವುದಿತ್ತು. ಕನಿಷ್ಠ 7 ಮಂದಿ ಸಾಯಬೇಕಿತ್ತು. ಆದರೆ ಎರಡಕ್ಕೇ ಮುಕ್ತಾಯವಾಗಿದೆ,' ಎಂದು ಗುರೂಜಿ ಹೇಳಿದ್ದರಂತೆ.