ಅಲ್ಲಿರುವ ನಿಮಗೆ ಇಲ್ಲಿಂದಲೇ ನಮಸ್ಕಾರ,

ನೀ ವು ಹೊರಟು ಹೋಗುತ್ತಿದ್ದಂತೆ ನಾವೆಲ್ಲ ಮತ್ತೆ ಬಾ ಮತ್ತೆ ಹುಟ್ಟಿ ಬಾ ಅಂತ ಕರೆದು ನಮ್ಮ ಪ್ರೀತಿ, ಗೌರವ, ಅಕ್ಕರೆ ತೋಡಿಕೊಂಡೆವು. ನೀವು ಬರುವುದಿಲ್ಲ ಅಂತ ನಮಗೂ ಗೊತ್ತಿತ್ತು. ಈಗ ನೋಡಿದರೆ ನೀವು ಬಾರದೇ ಒಳ್ಳೆಯ ಕೆಲಸ ಮಾಡಿದಿರಿ ಅಂತಲೂ ಅನ್ನಿಸುತ್ತದೆ.

ನೀವು ಹೋದ ನಂತರ ನಾವು ತುಂಬಾ ಬದಲಾಗಿದ್ದೇವೆ. ನೀವಿದ್ದರೂ ಬದಲಾಗುತ್ತಿದ್ದೆವು. ಆದರೆ ನೀವಿಲ್ಲದೇ ಹೋದ ಕಾರಣ ನಾವು ಮತ್ತು ನಮ್ಮ ಆತ್ಮಸಾಕ್ಷಿ ಯಾರಿಗೂ ಹೆದರಬೇಕಾಗಿರಲಿಲ್ಲ. ನೀವಿದ್ದಾಗ ನೇರವಾಗಿ ಅಲ್ಲದೇ ಹೋದರೂ, ನಿಮ್ಮ ಪಾತ್ರಗಳ ಮೂಲಕ, ನಮ್ಮ ಅಹಂಕಾರವನ್ನು ಪ್ರಶ್ನಿಸುತ್ತಿದ್ದಿರಿ. ಕಲಿಯುವುದಿನ್ನೂ ಸಾಗರದಂತಿದೆ, ಕಲಿತವರಾರಿಲ್ಲಿ ಎಂದು ತಿದ್ದುತ್ತಿದ್ದಿರಿ. ಆಸೆಯೆಂಬ ಬಿಸಿಲುಗುದುರೆ ಏಕೆ ಏರುವೆ ಎಂದು ಎಚ್ಚರಿಸುತ್ತಿದ್ದಿರಿ. ಕೋಟೆ ಕಟ್ಟಿ ಮೆರೆದೋರೆಲ್ಲ ಏನಾದರು? ಮೀಸೆ ತಿರುವಿ ಕುಂತೋರೆಲ್ಲ ಮಣ್ಣಾದರು ಅಂತ ಚರಿತ್ರೆಯ ಪಾಠ ಹೇಳುತ್ತಿದ್ದಿರಿ. ಬಾಳುವಂಥ ಹೂವೇ ಬಾಡುವಾಸೆ ಏಕೆ ಎಂದು ಜೀವನೋತ್ಸಾಹ ತುಂಬುತ್ತಿದ್ದಿರಿ.

ಈಗ ಅಂಥದ್ದೆಲ್ಲ ಕಡಿಮೆಯಾಗಿದೆ. ನಾವೀಗ ಸುಲಭೋಪಾಯ ಕಂಡುಕೊಂಡಿದ್ದೇವೆ. ನೀವು ತೆರೆಯ ಮೇಲೆ ಸಿಗರೇಟು ಸೇದುತ್ತಿರಲಿಲ್ಲ, ಕುಡಿಯುತ್ತಿರಲಿಲ್ಲ. ನಾವು ಕುಡಿದು, ಸಿಗರೇಟು ಸೇದಿ ಮೂಲೆಯಲ್ಲಿ ಚಿಕ್ಕದಾಗಿ ಧೂಮಪಾನ, ಕುಡಿತ ಆರೋಗ್ಯಕ್ಕೆ ಹಾನಿಕರ ಅಂತ ಬೋರ್ಡು ಹಾಕುತ್ತೇವೆ. ನೀವು ತಪ್ಪು ಮಾಡಿದವರನ್ನು ಕ್ಷಮಿಸಿ ತಿದ್ದಿಕೊಳ್ಳಲು ಅವಕಾಶ ಕೊಡುತ್ತಿದ್ದಿರಿ. ಈಗ ಅಷ್ಟು ಪುರುಸೊತ್ತಿಲ್ಲ. ಅವರನ್ನು ಕೊಂದು ಕೈತೊಳೆದುಕೊಳ್ಳಲಾಗುತ್ತದೆ. ನಿಮ್ಮನ್ನು ದ್ವೇಷಿಸುವ ಶತ್ರುವೇ ಹುಟ್ಟದೇ ನೀವು ಶತ್ರುವಾಗಿದ್ದಿರಿ, ನಾವು ಹುಟ್ಟಿದ ಶತ್ರುಗಳನ್ನು ಹುಟ್ಟಿಲ್ಲ ಅನ್ನಿಸಿ ಅಜಾತ ಶತ್ರುವಾಗಿದ್ದೇವೆ. ಅಷ್ಟೇ ವ್ಯತ್ಯಾಸ.

ನೀವಿದ್ದಾಗ ವಾರಕ್ಕೊಂದು ಸಿನಿಮಾ ಬರುತ್ತಿತ್ತು. ಈಗ ದಿನಕ್ಕೊಂದು ಬರುತ್ತಿದೆ. ಆಗ ಕತೆ ಮೊದಲು ಸಿದ್ಧವಾಗಿ ನಂತರ ಸಿನಿಮಾ ಮಾಡುತ್ತಿದ್ದರು. ಈಗ ಮೊದಲು ಸಿನಿಮಾ ಆಗುತ್ತದೆ, ಕತೆಯನ್ನು ಆಮೇಲೆ ಪ್ರೇಕ್ಷಕನೇ ಹುಡುಕಿಕೊಳ್ಳಬೇಕಾಗುತ್ತದೆ. ನೀವು ಡಬ್ಬಿಂಗ್ ಬೇಡ ಎಂದಿರಿ. ಈಗ ಡಬ್ಬಿಂಗ್ ಸಿನಿಮಾಗಳ ಪತ್ರಿಕಾಗೋಷ್ಠಿಯೂ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಇಲ್ಲಿಯೇ ನಡೆಯುತ್ತದೆ. ನಿಮ್ಮ ಸಿನಿಮಾಗಳನ್ನು ಮನೆ ಮಂದಿಯೆಲ್ಲ ನೋಡುತ್ತಿದ್ದೆವು. ಈಗ ನಿರ್ದೇಶಕ-ನಿರ್ಮಾಪಕರ ಮನೆಯವರೂ ಸಿನಿಮಾ ನೋಡುವುದಿಲ್ಲ. ಮಾಡುವುದೇ ಬೇರೆ,ನೋಡುವುದೇ ಬೇರೆ. ನೀವು ಕಾದಂಬರಿ ಆಧಾರಿತ ಸಿನಿಮಾ ಮಾಡುತ್ತಿದ್ದಿರಿ. ಈಗ ಸಿನಿಮಾ ಆಧರಿಸಿ ಕಾದಂಬರಿ ಬರೆಯುತ್ತಾರೆ.

ಕಾದಂಬರಿ ಆಧಾರಿತ ಸಿನಿಮಾಗಳಿಗೆ ವಿಶೇಷ ಸಹಾಯಧನ ದೊರೆಯುತ್ತದೆ. ನಾವು ಚಿಕ್ಕವರಿದ್ದಾಗ ನಿಮ್ಮ ಸಿನಿಮಾ ನೋಡಲು ಸಿಕ್ಕಿದ್ದೇ ನಮಗೆ ಸಿಕ್ಕ ಅತ್ಯುತ್ತಮ ಪಾಠ. ನೀವೇ ನಮ್ಮ ಮುಕ್ತ ವಿಶ್ವವಿದ್ಯಾಲಯ. ಕಲೆ, ಸಂಸ್ಕೃತಿ, ಸಂಗೀತ, ನಡೆ, ನುಡಿ, ಸಜ್ಜನಿಕೆ, ತೃಪ್ತಿ- ಎಲ್ಲವನ್ನೂ ನೀವು ಕಲಿಸಿದಿರಿ. ಹೀಗಾಗಿ ಏಪ್ರಿಲ್ 24 ನಮಗೆ ಮೇಷ್ಟ್ರ ದಿನ ಇದ್ದಂತೆ. ನೀವು ಬಂದು ಇಲ್ಲಿದ್ದು ನಮ್ಮ ಕಪ್ಪುಬಿಳುಪು ಜಗತ್ತನ್ನು ವರ್ಣಮಯ ಮಾಡಿ ಹೋಗಿದ್ದಕ್ಕೆ ಮತ್ತೊಮ್ಮೆ ಧನ್ಯವಾದ. ನೀವು ಕಲಿಸಿದ ಅಚ್ಚಗನ್ನಡ, ನೀವು ಹಾಡುತ್ತಿದ್ದ ಸರಳ ಹಾಡು, ಅದರ ಅರ್ಥವಂತಿಕೆ ಎಲ್ಲವೂ ಒಂದೆರಡು ತಲೆಮಾರಿನ ಮಂದಿಯನ್ನು ಸಂತೋಷವಾಗಿಟ್ಟಿದೆ. ಅದಕ್ಕಾಗಿ ನಿಮಗೆ ನಮಸ್ಕಾರ.

- ನಿಮ್ಮ ಪ್ರೀತಿಯ ಅಭಿಮಾನಿ