ದುನಿಯಾ ವಿಜಯ್‌ ಚಿತ್ರದ ಸಂಭ್ರಮಕ್ಕೆ ಐವರು ಗಣ್ಯರು. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿ ಕಾರ್ಯಕ್ರಮ.   

ದುನಿಯಾ ವಿಜಯ್‌ ನಟಿಸಿ, ನಿರ್ದೇಶಿಸಿರುವ ‘ಸಲಗ’ ಚಿತ್ರದ ಪ್ರೀ ರಿಲೀಸ್‌ ಈವೆಂಟ್‌ ಅದ್ದೂರಿಯಾಗಿ ಆಯೋಜಿಸಲು ನಿರ್ಮಾಪಕ ಕೆ.ಪಿ. ಶ್ರೀಕಾಂತ್‌ ಮುಂದಾಗಿದ್ದಾರೆ. ಅಕ್ಟೋಬರ್‌ 10ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಟರಾದ ಶಿವರಾಜ್‌ಕುಮರ್‌, ಪುನೀತ್‌ರಾಜ್‌ಕುಮಾರ್‌, ಉಪೇಂದ್ರ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಮುಖ್ಯ ಅಥಿತಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.

ಸಲಗ: ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ದುನಿಯಾ ವಿಜಯ್ ಟೀಂ

ಚಿತ್ರಕ್ಕೆ ಸೆನ್ಸಾರ್‌ ಆಗಿದ್ದು, ‘ಎ’ ಸರ್ಟಿಫಿಕೇಟ್‌ ನೀಡಲಾಗಿದೆ. ‘ಆ್ಯಕ್ಷನ್‌ ಹಾಗೂ ಮಾಸ್‌ ಚಿತ್ರ ಆಗಿರುವ ಕಾರಣ ಚಿತ್ರಕ್ಕೆ ಎ ಸರ್ಟಿಫಿಕೇಟ್‌ ಬಂದಿದೆ. ಇದು ಬೆಂಗಳೂರಿನ ಭೂಗತ ಲೋಕದ ಕತೆ. ಪೊಲೀಸ್‌, ರೌಡಿಗಳ ಕಾಳಗ ಕೊಂಚ ಹೆಚ್ಚಾಗಿಯೇ ಇರುತ್ತದೆ. ಆ್ಯಕ್ಷನ್‌ ಹೆಚ್ಚಿರುವುದು ಬಿಟ್ಟರೆ ಅಸಭ್ಯವಾದ ಯಾವುದೇ ದೃಶ್ಯಗಳು ಚಿತ್ರದಲ್ಲಿ ಇಲ್ಲ. ತುಂಬಾ ದಿನಗಳ ನಂತರ ಕನ್ನಡಕ್ಕೆ ಮಾಸ್‌ ಸಿನಿಮಾ ಬಂದಿದೆ ಎನ್ನುವ ಖುಷಿಯಲ್ಲಿ ಈ ಸಿನಿಮಾ ನೋಡಬಹುದು’ ಎನ್ನುತ್ತಾರೆ ನಿರ್ಮಾಪಕ ಕೆ ಪಿ ಶ್ರೀಕಾಂತ್‌.

300 ಥಿಯೇಟರ್‌ಗಳಲ್ಲಿ ಸಲಗ: ಅಕ್ಟೋಬರ್‌ 14ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಒಟ್ಟು 300 ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದು, 1200 ಸ್ಕ್ರೀನ್‌ಗಳಲ್ಲಿ ‘ಸಲಗ’ ಸಿನಿಮಾ ಪ್ರದರ್ಶನಗೊಳ್ಳಲಿದೆ ಎನ್ನಲಾಗಿದೆ. ನಾಯಕಿಯಾಗಿ ಸಂಜನಾ ಆನಂದ್‌ ನಟಿಸಿದ್ದಾರೆ. ಡಾಲಿ ಧನಂಜಯ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಕ್ರೋಚ್‌ ಸುಧೀರ್‌, ಭಾಸ್ಕರ್‌, ಇಂದ್ರಕುಮಾರ್‌, ಸಂಪತ್‌ ಹೀಗೆ ದೊಡ್ಡ ತಾರಾಗಣವನ್ನು ಚಿತ್ರ ಒಳಗೊಂಡಿದೆ.

"