ಮನುಷ್ಯ ಬೆಳೀತಾ ಬೆಳೀತಾ ಭ್ರಷ್ಟನಾಗುತ್ತಾನೆ; ನಟ ಧನಂಜಯ್ ಭಾಷಣ ವೈರಲ್!
ಸರ್ಕಾರಿ ಶಾಲೆಯಲ್ಲಿ ಗಣರಾಜೋತ್ಸವ ಆಚರಿಸಿದ ನಟ ಡಾಲಿ ಧನಂಜಯ್ ಮಕ್ಕಳಿಗೆ ಕಿವಿ ಮಾತೊಂದ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಡಾಲಿಗೆ ಜೈಕಾರ ಕೂಗಿದ ಅಭಿಮಾನಿಗಳು ರಾಜಕೀಯಕ್ಕೆ ಬರಲು ಡಿಮ್ಯಾಂಡ್ ಮಾಡುತ್ತಿದ್ದಾರೆ...
'ಟಗರು' ಚಿತ್ರದ ಮೂಲಕ ಡಾಲಿ ಎಂದು ಪರಿಚಯವಾದ ನಟ ಧನಂಜಯ್ ಇದೀಗ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ. ಬ್ಯಾಕ್ ಟು ಬ್ಯಾಕ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಡಾಲಿ ಇತ್ತೀಚಿಗೆ ಸರಕಾರಿ ಶಾಲೆಯೊಂದರಲ್ಲಿ ಗಣರಾಜ್ಯೋತ್ಸವ ಸಮಾರಂಭವಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳ ಜೊತೆ ಮಾತನಾಡಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿರುವ ಅಭಿಮಾನಿಗಳು ಡಾಲಿ ಮುಂದೆ ಬೇಡಿಕೆಯೊಂದನ್ನು ಇಟ್ಟಿದ್ದಾರೆ.
ಲಾಕ್‌ಡೌನ್‌ನಲ್ಲಿ ಶೂಟಿಂಗ್ ಆದ ಪೊಲೀಸ್ ಚಿತ್ರಕ್ಕೆ ಧನಂಜಯ್ ಹೀರೋ!
ಧನಂಜಯ್ ಮಾತು:
'ತುಂಬಾ ಖುಷಿಯಾಗುತ್ತಿದೆ ನಿಮ್ಮ ಜತೆ ಗಣರಾಜ್ಯೋತ್ಸವ ಆಚರಿಸುವುದಕ್ಕೆ. ಗಣರಾಜ್ಯೋತ್ಸವವನ್ನು ಏನಕ್ಕೆ ಆಚರಿಸುತ್ತೀವಿ ಅಂತ ಗೊತ್ತಲ್ವಾ? ಸಂವಿಧಾನ ಅಂದ್ರೆ ಗೊತ್ತಾ? ಸಿಂಪಲ್ ಆಗಿ ನಾನು ನಿಮಗೆ ಹೇಳುತ್ತೀನಿ...,' ಎಂದು ಭಾಷಣ ಆರಂಭಿಸಿದ್ದಾರೆ.
'ನಿಮ್ಮ ಶಾಲೆ ನಡೆಸುವುದಕ್ಕೆ ಒಂದು ರೀತಿ ನೀತಿ ಇರುತ್ತೆ ಅಲ್ವಾ? ಸ್ಕೂಲ್‌ಗೆ ಬಂದ್ರೆ ಇಲ್ಲಿ ಎಲ್ಲರೂ ಒಂದೇ, ಎಲ್ಲರೂ ಸಮಾನ. ಎಲ್ಲರಿಗೂ ಈಕ್ವಲ್ ರೈಟ್ಸ್ ಇವೆ. ನೀವು ಕೂಡ ನಿಮ್ಮ ಟೀಚರ್ಸ್‌ನ ಪ್ರಶ್ನೆ ಕೇಳಬಹುದು, ಅವ್ರು ನಿಮಗೆ ಉತ್ತರ ಕೊಡಬಹುದು. ತುಂಬಾ ವಿಚಾರಗಳು ಇರುತ್ತವೆ. ಒಂದು ಶಾಲೆ ನಡೆಸುವುದಕ್ಕೆ ಹಾಗೆಯೇ ದೇಶವನ್ನು ನಡೆಸಲು ಒಂದು ರೀತಿ ನೀತಿ ಇರಬೇಕಲ್ಲವೇ? ಯಾಕಂದ್ರೆ ನೀವೆಲ್ಲಾ ಮಕ್ಕಳು ತುಂಬಾ ಸಿಂಪಲ್ ಆಗಿ ಏನೇ ಹೇಳಿದರೂ ಕೇಳುತ್ತೀರಿ. ಆದರೆ ಮನುಷ್ಯ ಬೆಳೆಯುತ್ತಾ ಬೆಳೆಯುತ್ತಾ ಭ್ರಷ್ಟನಾಗುತ್ತಾನೆ. ನಾನೇ ಅದ್ಭುತ. ನಾನು ಅಂದುಕೊಂಡಿರುವುದೇ ಸತ್ಯ ಅಂತ ನಂಬುತ್ತಾನೆ. ಹಂಗಿದ್ದಾಗ ದೇಶ ನಡೆಸುವುದಕ್ಕೆ ತುಂಬಾ ಕಷ್ಟವಾಗುತ್ತದೆ. ಅದಿಕ್ಕೆ ಅಂಬೇಡ್ಕರ್ ಅಂತ ಹಿರಿಯರು ಸಂವಿಧಾನ ಪುಸ್ತಕ ಬರೆಯುತ್ತಾರೆ. ಅವರು ಇದೇ ದೇಶದವರು. ದೇಶ ಎಲ್ಲಾ ಸಾಮಾಜಿಕ, ಆರ್ಥಿಕಿ ಸ್ಥಿತಿಯನ್ನು ನೋಡಿಕೊಂಡು ಬಂದವರು. ಅವರಿಗೆ ಮುಂದಿನ ದಿನಗಳ ಪರಿಸ್ಥಿತಿ ಅರ್ಥ ಮಾಡಿಕೊಂಡೇ ಸಂವಿಧಾನವನ್ನು ಬರೆದಿದ್ದಾರೆ. ಆ ಪುಸ್ತಕವನ್ನು ನಾವೆಲ್ಲರೂ ಇವತ್ತು ಒಪ್ಪಿಕೊಂಡಿದ್ದೇವೆ. ನಾವೆಲ್ಲರೂ ಅದಕ್ಕೆ ಬದ್ದರಾಗಿರಬೇಕು. ಅದನ್ನೇ ಹಿಡ್ಕೊಂಡು ದೇಶ ನಡೆಸಬೇಕು,' ಎಂದು ಸಂವಿಧಾನ, ಗಣರಾಜ್ಯೋತ್ವದ ಮಹತ್ವವನ್ನು ಮಕ್ಕಳಿಗೆ ಅರ್ಥವಾಗುವಂತೆ ವಿವರಿಸಿದ್ದಾರೆ.
ಕೊರೋನಾ ಸಂಕಷ್ಟ: ಜನರ ನೆರವಿಗೆ ಡಾಲಿ ಧನಂಜಯ್
'ಮುಂದೆ ಕೆಲವು ವರ್ಷಗಳಲ್ಲಿ ನೀವೂ ವೋಟ್ ಹಾಕುತ್ತೀರಿ. ಅದಿಕ್ಕೆ ನಿಮಗೆ ಪ್ರಜಾಪ್ರಭುತ್ವದ ಬಗ್ಗೆ ಗೊತ್ತಿರಬೇಕು. ಮತದಾನಕ್ಕೆಇಂತಿಷ್ಟು ಹಣ ಅಂತ ನೀಡಿ ರಾಜಕಾರಣಿಗಳು ಪ್ರಜೆಗಳ ಅಧಿಕಾರವನ್ನು ಕಸಿದುಕೊಳ್ಳುತ್ತಾರೆ. ಇದರಿಂದಾನೇ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಮುಂದೆ ನೀವು ವೋಟ್ ಹಾಕುವಾಗ ದುಡ್ಡು ತೆಗೆದುಕೊಳ್ಳವುದಿಲ್ಲವೆಂದ ಈಗಲೇ ಶಪಥ ಮಾಡಿಬೇಕು. ಆಗ ದೇಶ ಚೆನ್ನಾಗಿರುತ್ತದೆ. ನೀವು ದುಡ್ಡು ತೆಗೆದುಕೊಂಡರೆ ರಾಜಕಾರಣಿಗಳು ಮಾಡುವ ತಪ್ಪುಗಳನ್ನು ಪ್ರಶ್ನೆ ಮಾಡುವುದಕ್ಕೆ ಆಗೋಲ್ಲ. ವೋಟ್ ಖರೀದಿ ಮಾಡಿರುತ್ತಾರೆ. ಹಣ ತೆಗೆದುಕೊಂಡು ನಮ್ಮ ಹಕ್ಕು ಕಳೆದುಕೊಳ್ಳುತ್ತೀವಿ,' ಎಂದು ಕಿವಿ ಮಾತು ಹೇಳಿದ್ದಾರೆ.
ನಟ ಧನಂಜಯ್ ಮಾತುಗಳನ್ನು ಕೇಳಿ ಸ್ಫೂರ್ತಿಗೊಂಡ ನೆಟ್ಟಿಗರು ನಿಮಗೆ ರಾಜಕೀಯದಲ್ಲಿ ಭವಿಷ್ಯವಿದೆ, ನೀವು ರಾಜಕೀಯಕ್ಕೆ ಕಾಲಿಡಿ ಇಷ್ಟು ಸರಳವಾಗಿ ವಿಚಾರವನ್ನು ಅರ್ಥ ಮಾಡಿಸಿದ್ದಕ್ಕೆ ಥ್ಯಾಂಕ್ಸ್ ಎಂದು ಕಾಮೆಂಟ್ ಮಾಡಿದ್ದಾರೆ.