ಸ್ಯಾಂಡಲ್‌ವುಡ್‌ನಲ್ಲಿ ನಿರ್ಮಾಪಕ-ನಿರ್ದೇಶಕರ ಗಲಾಟೆ: ಕಡ್ಡಿಪುಡಿ ಚಂದ್ರು ವಿರುದ್ಧ ಪಿ.ಸಿ ಶೇಖರ್ ದೂರು ದಾಖಲು
ಸ್ಯಾಂಡಲ್‌ವುಡ್ ನಿರ್ಮಾಪಕ ಕಡ್ಡಿಪುಡಿ ಚಂದ್ರು ವಿರುದ್ಧ ನಿರ್ದೇಶಕ ಪಿಸಿ ಶೇಖರ್ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಇಬ್ಬರೂ ಲವ್ ಬರ್ಡ್ಸ್ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. ಸಿನಿಮಾ ರಿಲೀಸ್ ಆಗಿ ಅನೇಕ ದಿನಗಳ ಬಳಿಕ ಇಬ್ಬರೂ ಹಣಕಾಸಿನ ವಿಚಾರಕ್ಕೆ ಕಿತ್ತಾಡಿಕೊಂಡಿದ್ದು ಸ್ಟೇಷನ್ ಮೆಟ್ಟಿಲೇರಿದ್ದಾರೆ. ತನಗೆ ಬರಬೇಕಾದ ಸಂಭಾವನೆ ನೀಡಿಲ್ಲ ಎಂದು ನಿರ್ಮಾಪಕ ಕಡ್ಡಿ ಪುಡಿ ಚಂದ್ರು ವಿರುದ್ಧ ನಿರ್ದೇಶಕ ಪಿ.ಸಿ. ಶೇಖರ್ ಆರೋಪಿಸಿದ್ದಾರೆ. ಸಂಬಾವನೆ ಕೇಳಿದ್ದಕ್ಕೆ ಕಡ್ಡಿಪುಡಿ ಚಂದ್ರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಪಿ.ಸಿ. ಶೇಖರ್ ದೂರಿನಲ್ಲಿ ತಿಳಿಸಿದ್ದಾರೆ.
ಲವ್ ಬರ್ಡ್ಸ್ ಸಿನಿಮಾದಲ್ಲಿ ನಿರ್ದೇಶಕರಾಗಿ ಕೆಲಸ ಮಾಡಲು 20 ಲಕ್ಷ ರೂಪಾಯಿಗೆ ಅಗ್ರಿಮೆಂಟ್ ಆಗಿತ್ತು. ಅಗ್ರಿಮೆಂಟ್‌ಗೆ ತಕ್ಕಂತೆ ಪಿಸಿ ಶೇಖರ್ ಕೆಲಸ ಮಾಡಿದ್ದಾರೆ. ಈ ನಡುವೆ ಸಿನಿಮಾ ಎಡಿಟಿಂಗ್ ಸಲುವಾಗಿ ಐದು ಲಕ್ಷ ರೂಪಾಯಿ ಹೆಚ್ಚುವರಿ ಖರ್ಚು ಆಗಿತ್ತು. ಒಟ್ಟು 25 ಲಕ್ಷ ರೂಪಾಯಿ ಹಣವನ್ನು ನಿರ್ದೇಶಕ ಪಿಸಿ ಶೇಖರ್ ಅವರಿಗೆ ಕಡ್ಡಿಪುಡಿ ಚಂದ್ರು ನೀಡಬೇಕಿತ್ತು. ಆದರೆ ಅವರು ಕೊಟ್ಟಿರುವುದು 6.5 ಲಕ್ಷ ರೂಪಾಯಿ ಮಾತ್ರ. ಬಾಕಿ ಹಣ ಕೇಳಿದ್ದಕ್ಕೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂದು ಪಿಸಿ ಶೇಖರ್ ಆರೋಪ ಮಾಡಿದ್ದಾರೆ.
ತನ್ನ ದೂರಿನಲ್ಲಿ ನಿರ್ದೇಶಕ ಪಿಸಿ ಶೇಖರ್, 'ಹದಿನೆಂಟೂವರೆ ಲಕ್ಷ ರೂಪಾಯಿ ಹಣ ಕೊಟ್ಟಿಲ್ಲ. ನಕಲಿ ಸಹಿ ಮಾಡಿ ನನಗೆ ಕೊಡಬೇಕಿದ್ದ ಹಣ ನೀಡಿಲ್ಲ. ನನ್ನ ಬಗ್ಗೆಯೇ ಕೆಟ್ಟದಾಗಿ ಸಿನಿಮಾ ರಂಗದಲ್ಲಿ ಮಾತನಾಡಿದ್ದಾರೆ. ಹಲವಾರು ನಿರ್ಮಾಪಕರ ಬಳಿ ಸಿನಿಮಾದಲ್ಲಿ ಅವಕಾಶ ನೀಡದಂತೆ ಬೆದರಿಸಿದ್ದಾರೆ' ಎಂದು ಪಿ.ಸಿ. ಶೇಖರ್ ದೂರಿನಲ್ಲಿ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಲಾಗಿದೆ.
ನಿರ್ಮಾಪಕ ಚಂದ್ರು ಹೇಳುವುದೇನು?
'ಸದ್ಯ ಇದನ್ನ ಕಾನೂನು ಮೂಲಕ ಬಗಹರಿಸಿಕೊಳ್ತಿವಿ. ಈಗಾಗಲೇ ಫಿಲಂ ಚೇಂಬರ್ ಹಾಗೂ ನಿರ್ಮಾಪಕರ ಸಂಘದಲ್ಲಿ ಮಾತುಕತೆ ನಡೀತಿದೆ. ಸೋಮವಾರ ಈ ಬಗ್ಗೆ ಮಾತಾಡ್ತಿನಿ' ಅಂತ ಕಡ್ಡಿಪುಡಿ ಚಂದ್ರು ಸ್ಪಷ್ಟನೆ ನೀಡಿದ್ದಾರೆ
ನಿರ್ಮಾಪಕನಾಗಿ, ನಟನಾಗಿ ಕಡ್ಡಿಪುಡಿ ಚಂದ್ರು ಚಿತ್ರರಂಗದಲ್ಲಿ ಅನೇಕ ವರ್ಷಗಳಿಂದ ಸಕ್ರಿಯರಾಗಿದ್ದಾರೆ. ನಿರ್ದೇಶಕ ಪಿಸಿ ಶೇಖರ್ ಕೂಡ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಪಿಸಿ ಶೇಖರ್ ನಿರ್ದೇಶನ ಮತ್ತು ಕಡ್ಡಿ ಪುಡಿ ಚಂದ್ರು ನಿರ್ಮಾಣದಲ್ಲಿ ಮೂಡಿಬಂದ ‘ಲವ್ ಬರ್ಡ್ಸ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಆದರೆ ಈ ಸಿನಿಮಾ ನಿರೀಕ್ಷೆಯ ಗೆಲುವು ದಾಖಲಿಸುವಲ್ಲಿ ವಿಫಲವಾಗಿದೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರು ಜೋಡಿಯಾಗಿ ನಟಿಸಿದ್ದರು.
