ಸಾಮಾಜಿಕ ಜಾಲತಾಣದಲ್ಲಿನ ಅಶ್ಲೀಲ ಕಾಮೆಂಟ್‌ಗಳ ವಿರುದ್ಧ ನೀಡಿದ ದೂರು ನಿರ್ಲಕ್ಷಿಸಲಾಗಿದೆ ಎಂದು ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದವರ ವಿರುದ್ಧ ದೂರು ದಾಖಲಿಸಿದ್ದರೂ ಅದನ್ನು ನಿರ್ಲಕ್ಷಿಸಲಾಗಿದೆ. ಬೇರೊಬ್ಬ ಮಹಿಳೆ (ನಟಿ ರಮ್ಯಾ) ದೂರು ನೀಡಿದಾಗ ಒಂದೇ ದಿನದಲ್ಲಿ ಕ್ರಮ ಕೈಗೊಂಡ ಪೊಲೀಸರು, ನಾನು ನಿರಂತರವಾಗಿ ವಿಚಾರಿಸಿದ ನಂತರವೂ ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ದೂರಿಗೆ ಬೆಲೆಯೇ ಇಲ್ವಾ ಎಂದು ನಟ ದರ್ಶನ್‌ ಪತ್ನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜೊತೆಗೆ, ಬುಧವಾರ ನಗರದ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿಯಾದ ವಿಜಯಲಕ್ಷ್ಮೀ, ತಾವು ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುತ್ತೇವೆ. ಯಾರದ್ದೇ ದೂರನ್ನೂ ಲಘುವಾಗಿ ಪರಿಗಣಿಸಿಲ್ಲ ಎಂದು ಆಯುಕ್ತರು ಹೇಳಿ ಕಳುಹಿಸಿರುವುದಾಗಿ ತಿಳಿದು ಬಂದಿದೆ.

ನಿರ್ಲಕ್ಷ್ಯ ಏಕೆ?

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿರುವ ವಿಜಯಲಕ್ಷ್ಮೀ, ‘ನಮ್ಮ ದೇಶದಲ್ಲಿ ಕಾನೂನು ವ್ಯವಸ್ಥೆ ಎಲ್ಲರಿಗೂ ಒಂದೇ ಎಂದು ನಾನು ನಂಬಿದ್ದೆ. ಆದರೆ ಇತ್ತೀಚಿನ ಕೆಲ ಬೆಳವಣಿಗೆಗಳು ನನ್ನ ಈ ನಂಬಿಕೆ ಅಲ್ಲಾಡಿಸುತ್ತಿವೆ. ಬೇರೊಬ್ಬ ಮಹಿಳೆ ದೂರು ನೀಡಿದಾಗ ಒಂದೇ ದಿನದಲ್ಲಿ ಕ್ರಮ ಕೈಗೊಂಡ ಪೊಲೀಸರು, ನಾನು ವಕೀಲರಿಂದ ನಿರಂತರವಾಗಿ ವಿಚಾರಿಸಿದ ನಂತರವೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಿದ್ದರೆ ನನ್ನ ದೂರಿಗೆ ಬೆಲೆಯೇ ಇಲ್ವಾ, ನನ್ನ ದೂರಿನ ಮೌಲ್ಯ ಕಡಿಮೆಯಾ’ ಎಂದು ಪ್ರಶ್ನಿಸಿದ್ದಾರೆ.

‘ಇಂದು ಖುದ್ದಾಗಿ ಈ ಬಗ್ಗೆ ವಿಚಾರಿಸಿದೆ. ಈ ವಿಳಂಬ ಯಾವುದೇ ಬಾಹ್ಯ ಒತ್ತಡದಿಂದ ಆಗಿದ್ದಲ್ಲ ಎಂದು ಭಾವಿಸುತ್ತೇನೆ. ನ್ಯಾಯಕ್ಕಾಗಿ ನಾನಿನ್ನೂ ಕಾಯುತ್ತಿದ್ದೇನೆ. ಇದನ್ನು ಇಲ್ಲಿಗೇ ಬಿಡುವುದಿಲ್ಲ’ ಎಂದು ಗುಡುಗಿದ್ದಾರೆ.

ಖಾತೆ ಡಿಲೀಟ್:

ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ, ನಿಂದಿಸಿದ ಕಿಡಿಗೇಡಿಗಳ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಗೆ ವಿಜಯಲಕ್ಷ್ಮೀ ದೂರು ನೀಡಿದ್ದರು. ಈ ದೂರಿನನ್ವಯ ಎಫ್‌ಐಆರ್ ಸಹ ದಾಖಲಾಗಿತ್ತು. ಆದರೆ ಪ್ರಕರಣ ದಾಖಲಾಗಿ ವಾರ ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಪೊಲೀಸ್‌ ಅಧಿಕಾರಿಗಳ ಪ್ರಕಾರ, ವಿಜಯಲಕ್ಷ್ಮೀ ದೂರು ನೀಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಅಕೌಂಟ್ ಡಿಲೀಟ್ ಮಾಡಿದ್ದಾರೆ. ಕೆಲವರು ತಮ್ಮ ಮೊಬೈಲ್ ಸಹ ಸ್ವಿಚ್ಡ್‌ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ತಾಂತ್ರಿಕ ಮಾಹಿತಿ ಆಧರಿಸಿ ಕಿಡಿಗೇಡಿಗಳ ಪತ್ತೆಗೆ ಹುಡುಕಾಟ ನಡೆದಿದೆ.