ಕಾಂತಾರ 2 ಮಾಡುವ ಮೊದಲು ವೀರೇಂದ್ರ ಹೆಗ್ಗಡೆಯವರ ಅನುಮತಿ ಕೇಳಲು ದೈವ ಹೇಳಿದೆ; ದೈವ ನರ್ತಕ
ಕಾಂತಾರ 2 ಮಾಡುವ ಮೊದಲು ವೀರೇಂದ್ರ ಹೆಗ್ಗಡೆಯವರ ಅನುಮತಿ ಕೇಳಲು ದೈವ ಹೇಳಿದೆ ಎಂದು ದೈವ ನರ್ತಕ ಉಮೇಶ್ ಬಹಿರಂಗ ಪಡಿಸಿದ್ದಾರೆ.
ಕಾಂತಾರ ಸೂಪರ್ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಕಾಂತಾರ ಪಾರ್ಟ್-2 ಮಾಡಲು ತಯಾರಿ ನಡೆಸುತ್ತಿದ್ದಾರೆ. ರಿಷಬ್ ಶೆಟ್ಟಿ ಮತ್ತು ತಂಡ ಕಾಂತಾರ-2 ಮಾಡಲುದೈವದ ಅನುಮತಿಯನ್ನು ಕೇಳಿದ್ದಾರೆ. ದೈವ ಅನುಮತಿ ನೀಡಿದೆ. ಆದರೆ ಕೆಲವು ಷರತ್ತುಗಳನ್ನು, ಎಚ್ಚರಿಕೆಯನ್ನು ದೈವ ನೀಡಿದೆ ಎನ್ನಲಾಗಿದೆ. 'ಕಾಂತಾರ' ಚಿತ್ರತಂಡಕ್ಕೆ ಅಭಯ ನೀಡಿರುವ ಅಣ್ಣಪ್ಪ ಪಂಜುರ್ಲಿ 'ಮೊದಲು ಚಿತ್ರ ಮಾಡೋವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ. ಮಾಡಿದ ಪ್ರಯತ್ನಕ್ಕೆ ಯಾವತ್ತೂ ಜಯ ಸಿಗುವ ರೀತಿ ಮಾಡುತ್ತೇನೆ. ಈ ಹಿಂದೆ ಇದ್ದ ತಂಡದ ಜೊತೆಗೆ, ಅಷ್ಟೇ ಶುದ್ಧಾಚಾರದಲ್ಲಿ ಮುಂದುವರಿಯಿರಿ' ಎಂದು ದೈವ ಅಣ್ಣಪ್ಪ ಪಂಜುರ್ಲಿ ಕಾಂತಾರ ಚಿತ್ರತಂಡಕ್ಕೆ ಅಭಯ ನೀಡಿದೆ. ಈ ನಡುವೆ ದೈವ ನರ್ತಕ ಉಮೇಶ್ ಗಂಧಕಾಡು ಅವರು ಮತ್ತೊಂದು ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಕಾಂತಾರ-2 ಮಾಡುವ ಬಗ್ಗೆ ವೀರೇಂದ್ರ ಹೆಗ್ಗಡೆಯವರ ಅನುಮತಿ ಕೇಳಲು ದೈವ ಹೇಳಿದೆ ಎನ್ನುವ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ನಟ ರಿಷಬ್ ಶೆಟ್ಟಿ ಅನುಮತಿ ಪಡೆದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ದೈವ ನರ್ತಕ ಉಮೇಶ್ ಗಂಧಕಾಡು ಮಾಹಿತಿ ನೀಡಿದ್ದಾರೆ. ಉಮೇಶ್ ಗಂಧಕಾಡು ಅವರು ಮಂಗಳೂರಿನ ಬಂದಲೆಯ ಮಡಿವಾಳಬೆಟ್ಟು ಅಣ್ಣಪ್ಪ ಪಂಜುರ್ಲಿ ದೈವದ ನರ್ತನ ಸೇವೆ ಮಾಡಿದ್ದಾರೆ. ಇವರು ರಿಷಬ್ ಶೆಟ್ಟಿಗೆ ಅಭಯ ಕೊಟ್ಟಿದ್ದ ಅಣ್ಣಪ್ಪ ಪಂಜುರ್ಲಿ ದೈವದ ಪಾತ್ರಿ. ರಿಷಬ್ ಶೆಟ್ಟಿ ಕಾಂತಾರ-2 ಬಗ್ಗೆ ಮಾತನಾಡಿ, 'ತಿಂಗಳ ಮೊದಲು ಹರಕೆ ನೇಮ ಕೊಡುವುದಾಗಿ ಹೇಳಿ ವೀಳ್ಯ ಕೊಟ್ಟಿದ್ದರು. ಮೊನ್ನೆ ರಿಷಬ್ ಮತ್ತು ಅವರ ತಂಡ ಬಂದು ದೈವದ ಹರಕೆ ಕೊಟ್ಟರು. ದೈವ ಅವರಿಗೆ ಅಭಯ ಕೊಟ್ಟಿದೆ. ನಮಗೆ ಅವರ ಪರಿಚಯ ಇರಲಿಲ್ಲ, ನಡೆಸಿಕೊಟ್ಟವರು ಮಡಿವಾಳ ಕುಟುಂಬ. ದೈವದ ನಡೆಯಲ್ಲಿ ಆದ ವಿಷಯ ನನಗೆ ಗೊತ್ತಿರಲ್ಲ, ಅದು ದೈವಕ್ಕೆ ಮಾತ್ರ ಗೊತ್ತಿರುತ್ತೆ. ದೈವದ ನೇಮೋತ್ಸವ ಆದ ನಂತರ ನನಗೆ ಭಕ್ತರು ಬಂದು ಈ ಬಗ್ಗೆ ಹೇಳಿದರು' ಎಂದು ಹೇಳಿದರು.
'ಕಾಂತಾರ-2' ಮಾಡಲು ಪಂಜುರ್ಲಿ ಅನುಮತಿ ಕೋರಿದ ರಿಷಬ್ ಶೆಟ್ಟಿ; ದೈವ ಹೇಳಿದ್ದೇನು?
'ಕಾಂತಾರ 2 ಸಿನಿಮಾ ಮಾಡಲು ದೈವ ಅನುಮತಿ ಕೊಟ್ಟಿದೆ ಅಂತ ನನಗೆ ಭಕ್ತರು ಹೇಳಿದರು.ರಿಷಬ್ ಶೆಟ್ಟಿ ಎರಡನೇ ಭಾಗದ ಬಗ್ಗೆ ದೈವದ ಬಳಿ ಕೇಳಿದರು. ಆದರೆ ಅದಕ್ಕೆ ಮೊದಲು ಧರ್ಮಸ್ಥಳ ಮಂಜುನಾಥೇಶ್ವರನ ಅನುಮತಿ ಕೇಳಲು ದೈವ ಹೇಳಿದೆಯಂತೆ. ಬಹಳ ಆಲೋಚನೆಯಲ್ಲಿ ಮುಂದಿನ ಸಿನಿಮಾ ಮಾಡಿ ಅಂತ ದೈವ ಹೇಳಿದೆಯಂತೆ. ಮೊದಲ ಚಿತ್ರದಲ್ಲಿ ಒಳ್ಳೆಯದು ಆಗಿದೆ, ಅಪವಾದವೂ ಬಂದಿದೆ. ಹತ್ತು ಹೆಜ್ಜೆ ಇಟ್ಟು ಆ ಸಿನಿಮಾ ಮಾಡಿದ್ದೀರಿ, ಇದಕ್ಕೆ ನೂರು ಹೆಜ್ಜೆ ಇಡಿ ಅಂತ ದೈವ ಹೇಳಿದೆ. ಧರ್ಮ ಪ್ರಕಾರ, ಆಚಾರ ವಿಚಾರದಲ್ಲಿ ಹೋಗಲು ದೈವ ಹೇಳಿದೆ. ಅವರು ಧರ್ಮಸ್ಥಳಕ್ಕೆ ಹೋಗ್ತಾ ಇದಾರೆ, ಮೊನ್ನೆ ದೈವವೂ ಧರ್ಮಸ್ಥಳಕ್ಕೆ ಹೋಗಲು ಅಪ್ಪಣೆ ಆಗಿದೆ. ಕಾಂತಾರ 2 ಮಾಡುವ ಮುನ್ನ ಖಾವಂದರ ಬಳಿ ಅನುಮತಿ ಕೇಳಲು ದೈವ ಅಪ್ಪಣೆ ಕೊಟ್ಟಿದೆಯಂತೆ' ಎಂದು ಹೇಳಿದರು.
'ಸೈರಾಟ್' ಮರಾಠಿ ಸಿನಿರಂಗವನ್ನೇ ನಾಶಪಡಿಸಿತು, ಆ ತಪ್ಪು ಮಾಡಬೇಡಿ; ರಿಷಬ್ ಶೆಟ್ಟಿಗೆ ಅನುರಾಗ್ ಕಶ್ಯಪ್ ಎಚ್ಚರಿಕೆ
'ರಿಷಬ್ ಬಹಳ ಒಳ್ಳೆಯವರು, ಬಹಳ ಸಂತೋಷದಿಂದ ಎಲ್ಲರಲ್ಲೂ ಇದ್ದರು. ನೇಮೋತ್ಸವದ ವೇಳೆಯೂ ಬಹಳ ಶುದ್ದಾಚಾರದಿಂದ ಅವರು ನಡೆಸಿಕೊಟ್ಟಿದ್ದಾರೆ. ನಾನು ನೋಡಿದ ಮಟ್ಟಿಗೆ ಅವರ ಸೇವೆ ನಮಗೆ ಸಂತೋಷ ಆಗಿದೆ, ಉಳಿದಿದ್ದು ದೈವಕ್ಕೆ ಬಿಟ್ಟಿದ್ದು. ದೈವದ ವಿಷಯದಲ್ಲಿ ಕೆಟ್ಟದ್ದು ಮಾಡಬಾರದು, ತಿಳಿದು ಮಾಡಲೇ ಬಾರದು. ತಿಳಿದು ಕೂಡ ತಪ್ಪು ಮಾಡಿದರೆ ಅದೊಂದು ರೀತಿಯಲ್ಲಿ ಶಾಪದ ಹಾಗೆ. ಕಾಂತಾರ ಭಾಗ 2 ಮಾಡಲು ಅವರು ಮತ್ತಷ್ಟು ಶುದ್ದಾಚಾರ ಪಾಲಿಸಬೇಕು. ಮೊದಲ ಚಿತ್ರದಲ್ಲಿ ಬಹಳ ಶುದ್ದಾಚಾರ ಪಾಲಿಸಿ ಭಕ್ತಿಯಿಂದ ಮಾಡಿದ್ದಾರೆ. ಹಾಗಾಗಿ ಎರಡನೇ ಭಾಗವನ್ನೂ ಅವರು ಅಷ್ಟೇ ಶುದ್ದಾಚಾರದಿಂದ ಮಾಡ್ತಾರೆ ಅನ್ನೋ ನಂಬಿಕೆ ಇದೆ' ಎಂದು ದೈವ ನರ್ತಕ ಉಮೇಶ್ ಗಂಧಕಾಡು ಬಹಿರಂಗ ಪಡಿಸಿದರು.