ಹಿರಿಯ ನಟಿ ಲೀಲಾವತಿ ಅನಾರೋಗ್ಯ; ನಟಿ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಸಿಎಂ ಸಿದ್ದರಾಮಯ್ಯ ಬಳಿ ಅಮ್ಮನ ಅನಾರೋಗ್ಯ ನೆನೆದು ವಿನೋದ್ ರಾಜ್ ಕಣ್ಣೀರಿಟ್ಟಿದ್ದಾರೆ. 'ನನ್ ತಾಯಿಯವರನ್ನು ಯಾವತ್ತೂ ನಾನು ನನ್ನ ಆಸ್ಪತ್ರೆಗೆ ಸೇರಿಸಿರಲಿಲ್ಲ. ಆದರೆ, ಈಗ ಅನಿವಾರ್ಯವಾಗಿ ಸೇರಿಸಿ ನೋಡಿಕೊಳ್ಳಬೇಕಾಯ್ತು' ಎಂದಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಟಿ ಲೀಲಾವತಿ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ಭೆಟಿಯಾಗಿ ಅವರ ಅನಾರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ನೆಲಮಂಗಲದ ಸೋಲದೇವನ ಹಳ್ಳಿಯಲ್ಲಿರೋ ಲೀಲಾವತಿ ಅವರ ನಿವಾಸಕ್ಕೆ ಭೇಟಿ ನೀಡಿರುವ ಸಿದ್ದರಾಮಯ್ಯ, ಅಲ್ಲಿ ಅವರನ್ನು ಭೇಟಿಯಾಗಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರನ್ನು ಲೀಲಾವತಿ ಮಗ ವಿನೋದ್ ರಾಜ್ ಬರಮಾಡಿಕೊಂಡಿದ್ದಾರೆ. ಲೀಲಾವತಿ ಅನಾರೋಗ್ಯದ ಬಗ್ಗೆ ಮಗ ವಿನೋದ್ ರಾಜ್ ಅವರಲ್ಲಿ ಸಿದ್ದರಾಮಯ್ಯ ವಿಚಾರಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಈ ವೇಳೆ, ಅಮ್ಮನ ಆರೋಗ್ಯ ನೆನೆದು ವಿನೋದ್ ರಾಜ್ ಕಣ್ಣೀರಿಟ್ಟಿದ್ದಾರೆ. ನನ್ ತಾಯಿಯವರನ್ನು ಯಾವತ್ತೂ ನಾನು ನನ್ನ ಆಸ್ಪತ್ರೆಗೆ ಸೇರಿಸಿರಲಿಲ್ಲ. ಆದರೆ, ಈಗ ಅನಿವಾರ್ಯವಾಗಿ ಸೇರಿಸಿ ನೋಡಿಕೊಳ್ಳಬೇಕಾಯ್ತು. ಅವರು ಮನೆಯಲ್ಲೇ ಅದೂ ಇದೂ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದರು. ಆದರೆ, ಈ ಬಾರಿ ನಾನು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲೇಬೇಕಾಯ್ತು' ಎಂದಿದ್ದಾರೆ.
'87 ವರ್ಷ ವಯಸ್ಸಿನ ಲೀಲಾವತಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿರೋ ನಟಿ ಲೀಲಾವತಿ ಅವರನ್ನು ಇತ್ತೀಚೆಗಷ್ಟೇ ಶಿವ ರಾಜ್‌ಕುಮಾರ್ ಅವರು ಭೇಟಿಯಾಗಿ ಕುಶಲೋಪರಿ ವಿಚಾರಿಸಿಕೊಂಡು ಬಂದಿದ್ದರು. ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ನೆಲಮಂಗಲಕ್ಕೆ ಬಂದಿದ್ದೆ, ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಬಂದೆ. ಈ ಜಮೀನಿನ ಸಮಸ್ಯೆ ಇದ್ದಾಗ ಲೀಲಾವತಿ ಅವರು ನನ್ನನ್ನು ಭೇಟಿ ಮಾಡಿದ್ದರು. ಹಿರಿಯ ನಟಿ ಲೀಲಾವತಿ ಅವರು ಒರಿಜಿನಲ್ ಆರ್ಟಿಸ್ಟ್. ನಾನು ಲೀಲಾವತಿಯವರ ಅನೇಕ ಸಿನಿಮಾಗಳನ್ನು ನೋಡಿದ್ದೇನೆ.
ಲೀಲಾವತಿ ಅವರು ಕನ್ನಡದಲ್ಲಿ ಅಪರೂಪ ಎನಿಸುವಂತ ನಟಿ, ನೈಜ ಕಲಾವಿದೆ. ಅವರನ್ನ ಆಸ್ಪತ್ರೆ ಗೆ ಸೇರಿಸಿದ್ರೆ ಎಲ್ಲಾ ಖರ್ಚು ನೋಡಿಕೊಳ್ತೇವೆ. ಸರ್ಕಾರದಿಂದ ಯಾವುಧೇ ರೀತಿಯಲ್ಲಿ ಸಹಾಯ ಬೇಕಿದ್ರೆ ನಾವ್ ಕೊಡ್ತೇವೆ' ಎಂದು ಭರವಸೆ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ. ಒಟ್ಟಿನಲ್ಲಿ, ಕನ್ನಡದ ಹಿರಿಯ ನಟಿ ಲೀಲಾವತಿ ಅವರು ಅನಾರೋಗ್ಯದ ನಿಮಿತ್ತ ಆಸ್ಪತ್ರೆ ಸೇರಿಕೊಳ್ಳುವಂತಾಗಿದೆ.