ಮಂಜುನಾಥ ಚಾಂದ್ ಅವರ ‘ಕಾಡ ಸೆರಗಿನ ಸೂಡಿ’ ಕಾದಂಬರಿ ಆಧರಿತ ಚಿತ್ರ ‘ಭುಗಿಲು’ ಚಿತ್ರೀಕರಣ ಪೂರ್ಣಗೊಳಿಸಿದೆ. ದಲಿತ ಸ್ವಾತಂತ್ರ್ಯ ಹೋರಾಟಗಾರನ ಕಥೆಗೆ ಜೀವ ತುಂಬುವ ಪ್ರಯತ್ನ ಈ ಚಿತ್ರದಲ್ಲಾಗಿದೆ. 

ಕಲಾತ್ಮಕವಾಗಿ ಹೊರಹೊಮ್ಮಿರುವ ‘ಭುಗಿಲು’ ಈಗಾಗಲೇ ಅಂತಾರಾಷ್ಟ್ರೀಯ ಚಿತೊ್ರೀತ್ಸವಗಳಿಗೆ ಹೋಗಿದ್ದರೂ, ಕೋವಿಡ್ ಕಾರಣದಿಂದ ಆಯ್ಕೆಗೆ ತೊಂದರೆ ಎದುರಾಗಿದೆ.

ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ನಿರ್ದೇಶಕ ಚಂದ್ರಕಾಂತ ಕೊಡ್ಪಾಡಿ, ‘ಕುಂದಾಪುರ ಭಾಗದ ಕೊರಗ ಎಂಬ ಬುಡಕಟ್ಟು ಜನಾಂಗದ ವ್ಯಕ್ತಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಹುತಾತ್ಮನಾಗುವ ಕಥೆಯಿದು. ಏಳೆಂಟು ದಶಕಗಳ ಹಿಂದಿನ ಸನ್ನಿವೇಶ. ಆಗೆಲ್ಲ ಈ ಜನಾಂಗದವರ ನೆರಳೂ ಸೋಂಕಬಾರದು ಎಂಬಷ್ಟು ಅಸ್ಪೃಶ್ಯತೆ ಇತ್ತು. ಇಂಥಾ ಹಿನ್ನೆಲೆಯ ಬ್ರಿಟಿಷರ ಟಾಯ್ಲೆಟ್ ಸ್ವಚ್ಛ ಮಾಡಿದ್ದ ವ್ಯಕ್ತಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುತ್ತಾನೆ. ಆತ ತನ್ನದೇ ತಂತ್ರಗಾರಿಕೆಯ ಮೂಲಕ ಹೇಗೆ ಬ್ರಿಟಿಷರನ್ನು ಎದುರಿಸಿದ ಎನ್ನುವುದು ಸಿನಿಮಾದಲ್ಲಿ ಬರುವ ಕುತೂಹಲಕಾರಿ ಅಂಶ’ ಎನ್ನುತ್ತಾರೆ.

36 ವರ್ಷ ಚಿತ್ರರಂಗದಲ್ಲಿದ್ದು ಸುಮಾರು 2700ಕ್ಕೂ ಅಧಿಕ ಸಿನಿಮಾಗಳ ವಿಲನ್ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದೆ, ಸೀರಿಯಲ್‌ಗಳ ಎಪಿಸೋಡ್ ನಿರ್ದೇಶಕನಾಗಿದ್ದೆ. ನನಗೆ ಮೊದಲಿಂದಲೂ ಸದಭಿರುಚಿಯ ಚಿತ್ರ ಮಾಡುವ ಹಂಬಲವಿತ್ತು. ಮಂಜುನಾಥ ಚಾಂದ್ ಅವರ ‘ಕಾಡ ಸೆರಗಿನ ಸೂಡಿ’’ ಕಾದಂಬರಿ ಬಹಳ ಇಷ್ಟವಾಯ್ತು. ಅದನ್ನೇ ಕೊಂಚ ಮಾರ್ಪಾಡಿನೊಂದಿಗೆ ಸಿನಿಮಾ ಮಾಡಲು ಹೊರಟೆ. ಅದದೇ ಲವ್ವು, ಫೈಟ್ ಚಿತ್ರಗಳಿಗಿಂತ ಭಿನ್ನವಾಗಿ ನೈಜ ಸಿನಿಮಾ ಮಾಡಬೇಕೆಂಬ ಕನಸು ಈ ಚಿತ್ರದ ಮೂಲಕ ನನಸಾಗಿದೆ- ಚಂದ್ರಕಾಂತ ಕೊಡ್ಪಾಡಿ, ನಿರ್ದೇಶಕ

ಸಂಪೂರ್ಣ ಕುಂದಾಪುರ ಭಾಷೆಯಲ್ಲೇ ಇರುವ, ಕುಂದಾಪುರದ ಆಸುಪಾಸಿನಲ್ಲೇ ನಡೆಯುವ ಚಿತ್ರವಿದು. ಸ್ವಾತಂತ್ರ್ಯಪೂರ್ವ ಕಾಲಘಟ್ಟದ ಚಿತ್ರೀಕರಣಕ್ಕೆ ಸ್ಥಳ ಹುಡುಕುವುದೇ ಈ ತಂಡಕ್ಕೆ ದೊಡ್ಡ ಸವಾಲಾಗಿತ್ತು. ಕುಂದಾಪುರದ ಅರೆಹೊಳೆ, ವಂಡ್ಸೆ ಮೊದಲಾದೆಡೆ ಕಾಡಿನ ನಡುವೆ ಹಳೆಕಾಲದ ವಾತಾವರಣ ಸೃಷ್ಟಿ ಮಾಡಿ, ಆ ಕಾಲದಂತೆ ಗುಡಿಸಲು ನಿರ್ಮಿಸಿ, ಆಧುನಿಕತೆಯ ಕುರುಹು ಎಲ್ಲೂ ಕಾಣದಂತೆ ಚಿತ್ರೀಕರಿಸಲಾಗಿದೆ. ಸುಮಾರು 130 ವರ್ಷ ಹಳೆಯ ಪಟೇಲರ ಮನೆಯಲ್ಲೂ ಚಿತ್ರೀಕರಣ ನಡೆದಿದೆ.

ಸುದೀಪ್ ಸಿನಿಮಾ ನಿರ್ದೇಶಿಸುವ ಕನಸು ಜೀವಂತವಾಗಿದೆ;ರಿಷಬ್ ಶೆಟ್ಟಿ ಲಾಕ್‌ಡೌನ್ ಡೈರಿ! 

ಚಿತ್ರದಲ್ಲಿ ನಿರ್ದೇಶಕ ಚಂದ್ರಕಾಂತ ಕೊಡ್ಪಾಡಿ ಅವರು ತನಿಯ ಎಂಬ ಮುಖ್ಯಪಾತ್ರ ಮಾಡಿದ್ದಾರೆ. ಉಳಿದಂತೆ ರಮೇಶ್ ಭಟ್, ಹಾಲೆಂಡ್ ನಟ ಗ್ರಾವಿಕ್ಸಿ, ನಮಿತಾ ದೇಸಾಯಿ, ಚಂದ್ರಕಲಾ ರಾವ್ ಇತರ ಪಾತ್ರಗಳಲ್ಲಿದ್ದಾರೆ. ಕುಂದಾಪುರ ಭಾಷೆ ಬಲ್ಲ ರಂಗಭೂಮಿ ಕಲಾವಿದರು ಚಿತ್ರದಲ್ಲಿದ್ದಾರೆ. ಪಿವಿಆರ್ ಸ್ವಾಮಿ ಸಿನಿಮಾಟೋಗ್ರಫಿ, ನಾಗೇಂದ್ರ ಪ್ರಸಾದ್ ಸಾಹಿತ್ಯ, ರಾಧಾಕೃಷ್ಣ ಬಸ್ರೂರು ಸಂಗೀತ, ಗುರುದತ್ ಅವರ ಸಂಕಲನ ಈ ಚಿತ್ರಕ್ಕಿದೆ.