Cinegannada Film Festival: ಅಮೆರಿಕಾದ ಫಿಲಡೆಲ್ಫಿಯಾದಲ್ಲಿ ನಡೆಯಲಿರುವ 25ನೇ ವರ್ಷದ ‘ಅಕ್ಕ’ ಸಮ್ಮೇಳನದಲ್ಲಿ ಈ ಬಾರಿ ‘ಸಿನಿಗನ್ನಡ ಚಲನಚಿತ್ರೋತ್ಸವ 2026’ ವನ್ನು ಆಯೋಜಿಸಲಾಗಿದೆ.
ಅಮೆರಿಕಾದ ಫಿಲಡೆಲ್ಫಿಯಾದಲ್ಲಿ ನಡೆಯಲಿರುವ 25ನೇ ವರ್ಷದ ‘ಅಕ್ಕ’ ಸಮ್ಮೇಳನದಲ್ಲಿ ಈ ಬಾರಿ ‘ಸಿನಿಗನ್ನಡ ಚಲನಚಿತ್ರೋತ್ಸವ 2026’ ವನ್ನು ಆಯೋಜಿಸಲಾಗಿದೆ. ಇದಕ್ಕೋಸ್ಕರ ಸಿನಿಮಾ ಸ್ಪರ್ಧೆಯನ್ನೂ ನಡೆಸಲಾಗುತ್ತಿದೆ. ಈ ಬಗ್ಗೆ ವಿವರ ನೀಡಿದ ಈ ಉತ್ಸವದ ನಿರ್ದೇಶಕ ಪಿ. ಶೇಷಾದ್ರಿ, ‘ಜನವರಿ 1, 2025ರಿಂದ ಡಿಸೆಂಬರ್ 31, 2025ರ ಒಳಗೆ ತಯಾರಾದ, ಸೆನ್ಸಾರ್ ಪ್ರಕ್ರಿಯೆ ಮುಗಿಸಿದ ಚಿತ್ರಗಳನ್ನು ಈ ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಸುಮಾರು 150 ಸಿನಿಮಾ ಸ್ಪರ್ಧೆಗೆ ಬರುವ ನಿರೀಕ್ಷೆ ಇದೆ.
ಅವುಗಳಲ್ಲಿ 10 ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿ ಈ ಬಾರಿಯ ಅಕ್ಕ ಸಮ್ಮೇಳನದಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಇವುಗಳಲ್ಲಿ ಅತ್ಯುತ್ತಮ ಎನಿಸುವ ಮೂರು ಚಿತ್ರಗಳನ್ನು ಪ್ರಥಮ, ದ್ವಿತೀಯ, ತೃತೀಯ ಬಹುಮಾನಕ್ಕೆ ಆಯ್ಕೆ ಮಾಡಿ, ಕ್ರಮವಾಗಿ 1 ಲಕ್ಷ, 50 ಸಾವಿರ ಹಾಗೂ 25 ಸಾವಿರ ರೂಪಾಯಿ ನಗದು ಬಹುಮಾನ ನೀಡಲಾಗುವುದು. ಪ್ರಶಸ್ತಿ ಪ್ರದಾನ ಬೆಂಗಳೂರಿನಲ್ಲೇ ನಡೆಯುತ್ತದೆ. ಆಸಕ್ತರು https://cinegannadafilmfest.org/ ನಲ್ಲಿ ಅರ್ಜಿ ತುಂಬಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು’ ಎಂದರು.
ಕನ್ನಡ ಚಿತ್ರಗಳಿಗೆ ಮಾನ್ಯತೆ ಸಿಗುತ್ತಿಲ್ಲ
‘ಅಮೆರಿಕಾದಲ್ಲಿ ತಮಿಳು, ತೆಲುಗು ಸಿನಿಮಾಗಳಿಗೆ ಸಿಗುವ ಮಾನ್ಯತೆ ಕನ್ನಡ ಚಿತ್ರಗಳಿಗೆ ಸಿಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಅಮೆರಿ ಕನ್ನಡಿಗರೆಲ್ಲ ಒಟ್ಟಾಗುವ ಅಕ್ಕ ಸಮ್ಮೇಳನದಲ್ಲಿ ಈ ಸಿನಿಮೋತ್ಸವ ಆಯೋಜಿಸಲಾಗಿದ್ದು, ಕನ್ನಡ ಚಿತ್ರಗಳಿಗೆ ವಿಶ್ವಮಟ್ಟದ ಮಾನ್ಯತೆ ದೊರೆಕಿಸಿಕೊಡುವುದು ಇದರ ಉದ್ದೇಶ’ ಎಂದು ಈ ಸಿನಿಮೋತ್ಸವದ ರೂವಾರಿ ಗೌರೀಶ್ ಅಕ್ಕಿ ಹೇಳಿದರು.
ಇನ್ನೊಬ್ಬ ಆಯೋಜಕರಾದ ವನ್ಯ ಸಿನಿಮಾ ನಿರ್ದೇಶಕ ದೇವೇಂದ್ರ ಬಡಿಗೇರ್, ‘ಆಗಸ್ಟ್ ಮೊದಲ ವಾರದಿಂದ ಚಿತ್ರಗಳನ್ನು ನೋಡುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಆಗಸ್ಟ್ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲೇ ಸಮಾರಂಭ ಆಯೋಜಿಸಿ ಪ್ರಶಸ್ತಿ ವಿಜೇತ ಚಿತ್ರಗಳನ್ನು ಘೋಷಿಸಲಾಗುವುದು’ ಎಂದರು.


