ನಗು ನಗುತ್ತಲೇ ಮತ್ತೆ ಅಯೋಗ್ಯ-2 ತಂಡ ಸೇರಿಕೊಂಡ ನಟಿ ರಚಿತಾ ರಾಮ್, ಸತೀಶ್ ನಿನಾಸಂ!
ನಟ ಸತೀಶ್ ನಿನಾಸಂ ಮತ್ತು ನಟಿ ರಚಿತಾ ರಾಮ್ ಅಭಿನಯದ 'ಅಯೋಗ್ಯ-2' ಚಿತ್ರದ ಚಿತ್ರೀಕರಣ ಡಿಸೆಂಬರ್ 11 ರಿಂದ ಆರಂಭವಾಗಲಿದೆ. ರಚಿತಾ ರಾಮ್ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಚಿತ್ರಕ್ಕೆ ಎಸ್ ಮಹೇಶ್ ಕುಮಾರ್ ನಿರ್ದೇಶನ ಮತ್ತು ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ.
ಬೆಂಗಳೂರು (ಡಿ.03): ಕನ್ನಡ ಚಿತ್ರರಂಗದಲ್ಲಿ ನಟ ಸತೀಶ್ ನಿನಾಸಂ ಹಾಗೂ ನಟಿ ರಚಿತಾ ರಾಮ್ ಅವರು ಅಯೋಗ್ಯ-2 ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ. ಇದೀಗ ಅಯೋಗ್ಯ-2 ಸಿನಿಮಾದ ಶೂಟಿಂಗ್ ಅನ್ನು ಇದೇ ಡಿ.11ರಿಂದ ಆರಂಭಿಸಲಾಗುವುದು ಎಂದು ನಟಿ ರಚಿತಾರಾಮ್ ಮಾಹಿತಿ ನೀಡಿದ್ದಾರೆ.
ಕನ್ನಡದ ಲೇಡಿ ಸೂಪರ್ ಸ್ಟಾರ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ರಚಿತಾ ರಾಮ್ ಅವರು, ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಅಯೋಗ್ಯ-2 ಸಿನಿಮಾ ಪೋಸ್ಟರ್ ಒಂದನ್ನು ಹಂಚಿಕೊಂಡು ಸಿನಿಮಾ ಶೂಟಿಂಗ್ ಆರಂಭಿಸುವ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ನಾವೆಲ್ಲರೂ ಮತ್ತೆ ಒಟ್ಟಿಗೆ ಸೇರಿಕೊಂಡು ಅಯೋಗ್ಯ ಸಿನಿಮಾದ ಮುಂದುವರಿಗ ಭಾಗವನ್ನು ನಿರ್ಮಿಸುತ್ತಿದ್ದೇವೆ. ಇದಕ್ಕೆ ನಿಮ್ಮೆಲ್ಲರ ಪ್ರೀತಿ, ಹಾರೈಕೆ ಮತ್ತು ಬೆಂಬಲ ಬೇಕು. ನಿಮ್ಮ ಆಶೀರ್ವಾದ ಸದಾ ಹೀಗೆಯೇ ಇರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಹಿಂದೆ ಅಯೋಗ್ಯ ಸಿನಿಮಾದ ಮೂಲಕ ಭರ್ಜರಿ ಹಿಟ್ ಹಾಡುಗಳನ್ನು ನೀಡಿ ಎಲ್ಲ ಬಾಯಲ್ಲಿ ಹಾಡು ಗುನುಗುವಂತೆ ಮಾಡಿದ್ದರು. ಹಿಂದೆ ಹಿಂದೆ ಹಿಂದೆ ಹೋಗು.. ಮಕ್ ಉಗುದ್ರು ಮುಂದೆ ಹೋಗು... ಹಾಗೂ ಏನಮ್ಮಿ… ಏನಮ್ಮಿ ಯಾರಮ್ಮಿ… ನೀನಮ್ಮಿ. ಆಗೋಯ್ತು ನನ್ನ ಬಾಳು… ಹೆಚ್ಚುಕಮ್ಮಿ..ಹೆಚ್ಚುಕಮ್ಮಿ... ಹಾಡು ಭರ್ಜರಿ ಪ್ರಸಿದ್ಧಿ ಆಗಿದ್ದವು. ಜೊತೆಗೆ ಏನಮ್ಮಿ .. ಏನಮ್ಮಿ ಹಾಡಿಗೆ ಡ್ಯಾನ್ಸ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿತ್ತು. ಈ ಎರಡು ಹಾಡುಗಳು ಟ್ರೆಂಡ್ ಸೃಷ್ಟಿಸಿದ್ದವು. ಇದೀಗ ಪುನಃ ಅಯೋಗ್ಯ-2 ಸಿನಿಮಾದ ಮೂಲಕ ಜನರನ್ನು ರಂಜಿಸಲು ಅದೇ ಚಿತ್ರತಂಡ ಒಂದಾಗುತ್ತಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಮಧ್ಯದಲ್ಲೇ ಹೊರಬಂದ ಚೈತ್ರಾ ಕುಂದಾಪುರ
ಅಯೋಗ್ಯ-2 ಸಿನಿಮಾವನ್ನು ಎಸ್‌ವಿಜಿ ಫಿಲ್ಸ್ ನಿರ್ಮಿಸುತ್ತಿದ್ದು, ಎಸ್. ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಎಂ.ಮುನೇಗೌಡ ಅವರು ನಿರ್ಮಾಪಕರಾಗಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತವಿರಲಿದೆ. ಅಯೋಗ್ಯ ಸಿನಿಮಾದಲ್ಲಿದ್ದ ಸತೀಶ್ ನಿನಾಸಂ ಹಾಗೂ ನಟಿ ರಚಿತಾರಾಮ್ ನಟನೆ ಮುಂದುವರೆಯಲಿದೆ.
ಇದೀಗ ರಚಿತಾ ರಾಮ್ ಅವರು ಹಂಚಿಕೊಂಡಿರುವ ಪೋಸ್ಟರ್‌ನಲ್ಲಿ ಸತೀಶ್ ನಿನಾಸಂ, ರಚಿತಾರಾಮ್, ಎಸ್.ಮಹೇಶ್ ಕುಮಾರ್ ಹಾಗೂ ಮುನೇಗೌಡರು ಕೈಯಿಂದ 2 ಎಂದು ಸಿಂಬಲ್ ತೋರಿಸುವ ಮೂಲಕ ಶೂಟಿಂಗ್‌ಗೆ ರೆಡಿಯಾಗಿರುವುದಾಗಿ ಪೋಸ್ ಕೊಟ್ಟಿದ್ದಾರೆ. ಇನ್ನು ಸಿನಿಮಾ ಯಾವಾಗ ಶೂಟಿಂಗ್ ಮುಕ್ತಾಯ ಆಗಲಿದೆ, ಎಲ್ಲೆಲ್ಲಿ ಶೂಟಿಂಗ್ ನಡೆಯಲಿದೆ, ಯಾವಾಗ ಸಿನಿಮಾ ರಿಲೀಸ್ ಆಗಬಹುದು ಎಂಬ ಯಾವುದೇ ಮಾಹಿತಿಯನ್ನೂ ಹಂಚಿಕೊಂಡಿಲ್ಲ. ಸಿನಿಮಾ ಇದೀಗ ಸೆಟ್ಟೇರುತ್ತಿದ್ದು, ಇದಕ್ಕೆ ನೆಟ್ಟಿಗರು ಕೂಡ ಕಾಮೆಂಟ್ ಮೂಲಕ ಶುಭ ಹಾರೈಸಿದ್ದಾರೆ.