ಜಾತಿನಿಂದನೆ ಕೇಸ್, ಇಂದು ಮತ್ತೆ ಹೈಕೋರ್ಟ್‌ಗೆ ನಟ ಉಪೇಂದ್ರ ಅರ್ಜಿ
ತಮ್ಮ ವಿರುದ್ಧ ದಾಖಲಾಗಿರುವ ಅಟ್ರಾಸಿಟಿ ಪ್ರಕರಣ ಸಂಬಂಧ ನಟ ಉಪೇಂದ್ರ ಇಂದು ಮತ್ತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದಾರೆ. ಹಲಸೂರು ಗೇಟ್ ಠಾಣೆ ಸೇರಿ ಉಳಿದ ಠಾಣೆಗಳ ಎಫ್ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಲಿದ್ದಾರೆ.
ಬೆಂಗಳೂರು (ಆ.16): ತಮ್ಮ ವಿರುದ್ಧ ದಾಖಲಾಗಿರುವ ಅಟ್ರಾಸಿಟಿ ಪ್ರಕರಣ ಸಂಬಂಧ ನಟ ಉಪೇಂದ್ರ ಇಂದು ಮತ್ತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದಾರೆ. ಹಲಸೂರು ಗೇಟ್ ಠಾಣೆ ಸೇರಿ ಉಳಿದ ಠಾಣೆಗಳ ಎಫ್ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಲಿದ್ದಾರೆ. ಕೇವಲ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಎಫ್ಐಆರ್ ಗೆ ಮಾತ್ರ ಹೈಕೋರ್ಟ್ ಈ ಹಿಂದೆ ತಡೆ ನೀಡಿತ್ತು. ಹೀಗಾಗಿ ಬುಧವಾರ ಮತ್ತೆ ಉಪೇಂದ್ರ ಹಿರಿಯ ವಕೀಲ ಉದಯ್ ಹೊಳ್ಳ ಮೂಲಕ ಅರ್ಜಿ ಸಲ್ಲಿಸಲಿದ್ದಾರೆ. ಬಂಧನ ಭೀತಿ ಹಿನ್ನೆಲೆ ಸದ್ಯ ಇನ್ನೂ ಅಜ್ಞಾತ ಸ್ಥಳದಲ್ಲೆ ನಟ ಉಪೇಂದ್ರ ಇದ್ದು, ಯಾರ ಕಣ್ಣಿಗೂ ಕಾಣಿಸಿಕೊಳ್ಳುತ್ತಿಲ್ಲ.
ಉಪೇಂದ್ರಗೆ 5 ವರ್ಷ ನಿಷೇಧ ಹೇರಿ: ಸಿನಿಮಾ ಮಂಡಳಿಗೆ ಒತ್ತಾಯ
ದಲಿತ ಸಮುದಾಯವನ್ನು ನಿಂದಿಸಿರುವ ನಟ ಉಪೇಂದ್ರ ಅವರಿಗೆ ಚಿತ್ರರಂಗದಿಂದ ಐದು ವರ್ಷ ನಿಷೇಧ ಹೇರಬೇಕು ಎಂದು ಸಾಮಾಜಿಕ ಕಾರ್ಯಕರ್ತ ನವೀನ್ ಗೌಡ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಒತ್ತಾಯಿಸಿದ್ದಾರೆ.
ಮಂಡಳಿಯ ಅಧ್ಯಕ್ಷರನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದ ಅವರು, ಉಪೇಂದ್ರ ಅವರ ಹೇಳಿಕೆ ದಲಿತ ಸಮುದಾಯವನ್ನು ನಿಂದಿಸುವುದಷ್ಟೇ ಅಲ್ಲದೆ, ಜಾತಿಗಳ ನಡುವೆ ಅಶಾಂತಿ, ಗಲಭೆ ಸೃಷ್ಟಿಸುವ ಉದ್ದೇಶದಿಂದ ಕೂಡಿದೆ. ಹೊಲಗೇರಿ ಎಂದರೆ ಕೆಟ್ಟಜನರು ವಾಸ ಮಾಡುವ ಪ್ರದೇಶ ಎನ್ನುವ ರೀತಿಯಲ್ಲಿ ದಲಿತರು ಕೆಟ್ಟವರು ಎನ್ನುವಂತೆ ಹೀಗಳೆದಿದ್ದಾರೆ. ಇವರ ಹೇಳಿಕೆ ವಿವಿಧ ಸಮಾಜ, ವ್ಯಕ್ತಿಗಳನ್ನು ಪ್ರಚೋದನೆಗೆ ಒಳಪಡಿಸಿ ಸಮಾಜದಲ್ಲಿ ಭಯ, ಆತಂಕ ಸೃಷ್ಟಿಸುವುದು ಹಾಗೂ ಅಪರಾಧ ಪ್ರಕರಣಗಳನ್ನು ನಡೆಸಲು ಪ್ರೇರಣೆ ನೀಡುವಂತಿದೆ. ಹಾಗಾಗಿ ಕಾನೂನಾತ್ಮಕವಾಗಿ ಪೊಲೀಸರು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಾಣಿಜ್ಯ ಮಂಡಳಿಯು ಉಪೇಂದ್ರ ಅವರಿಗೆ ಐದು ವರ್ಷ ನಿಷೇಧ ಹೇರಿ ಶೋಷಿತರ ಜೊತೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.
ಹೈಕೋರ್ಟ್ ಆದೇಶ ಪ್ರತಿ ಪರಿಶೀಲಿಸಿ ನಟ ಉಪೇಂದ್ರ ವಿರುದ್ಧ ತನಿಖೆ, ಕೇಸ್ ವರ್ಗಾವಣೆ
ಘಟನೆ ಹಿನ್ನೆಲೆ: ಪ್ರಜಾಕೀಯ 6 ವರ್ಷ ಪೂರೈಸಿದ ಸಂದರ್ಭದಲ್ಲಿ ನಟ ಉಪೇಂದ್ರ ಫೇಸ್ಬುಕ್ ಲೈವ್ ಬಂದು ಮಾತನಾಡಿದ್ದರು. ಈ ವೇಳೆ "ಊರು ಎಂದ ಮೇಲೆ ಹೊಲಗೇರಿ ಇರುತ್ತೆ" ಎನ್ನುವ ಗಾದೆ ಮಾತನ್ನು ಹೇಳಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಉಪೇಂದ್ರ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಭಾರೀ ಆಕ್ರೋಶ ವ್ಯಕ್ತವಾಯಿತು. ಕೂಡಲೇ ಉಪೇಂದ್ರ ವಿಡಿಯೋ ಡಿಲೀಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದರು. ಆದರೂ ಆಕ್ರೋಶ ಕಮ್ಮಿ ಆಗಿರಲಿಲ್ಲ. ಬೆಂಗಳೂರು, ರಾಮನಗರದಲ್ಲಿ ಉಪೇಂದ್ರ ಪ್ರತಿಕೃತಿ ದಹಿಸಿ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಉಪೇಂದ್ರ ಆಕ್ಷೇಪಾರ್ಹ ಪದ ಬಳಕೆಯನ್ನು ಖಂಡಿಸಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಹಾಗೂ ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿತ್ತು.
ದಲಿತ ವಿರೋಧಿ ಹೇಳಿಕೆ: ನಟ ಉಪೇಂದ್ರ ವಿರುದ್ಧ ಎಫ್‌ಐಆರ್: ಸಚಿವ ಮಲ್ಲಿಕಾರ್ಜುನ ವಿರುದ್ಧ ಕೇವಲ ಎನ್‌ಸಿಆರ್
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯಿತು. ಇನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ವಿಚಾರಣೆಗಾ ಹಾಜರಾಗುವಂತೆ ಉಪೇಂದ್ರಗೆ ನೋಟಿಸ್ ನೀಡಲಾಗಿತ್ತು. ಉಪೇಂದ್ರ ಅವರ ಕತ್ರಿಗುಪ್ಪೆ ಹಾಗೂ ಸದಾಶಿವ ನಗರದ ಮನೆಗಳಿಗೆ ನೋಟಿಸ್ ತಲುಪಿತ್ತು. ಉಪ್ಪಿ ಮನೆಯಲ್ಲಿ ಇಲ್ಲ ಎಂದು ತಿಳಿದ ಮೇಲೆ ವಾಟ್ಸಪ್‌ನಲ್ಲಿ ನೋಟಿಸ್ ರವಾನಿಸಲಾಗಿತ್ತು. ಬಳಿಕ ಉಪೇಂದ್ರ ವಿಡಿಯೋ ಮಾಡಿದ ಸ್ಥಳದ ಮಹಜರು ಕೂಡ ಮಾಡಲಾಯಿತು. ಬಂಧನ ಭೀತಿ ಹಿನ್ನೆಲೆ ಎಲ್ಲೂ ಕಾಣಿಸಿಕೊಳ್ಳದ ಉಪೇಂದ್ರ ಬಳಿಕ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಎಫ್ಐಆರ್ ಗೆ ಹೈಕೋರ್ಟ್ ತಡೆ ನೀಡಿತ್ತು