ಪೊಲೀಸ್ ಸಿಬ್ಬಂದಿಗಳ ಬದುಕಿನ ಕತೆ 'ಲಾಫಿಂಗ್ ಬುದ್ಧ': ಕಾಂತಾರದ ರಿಷಬ್ ಶೆಟ್ರು ಹೇಳಿದ್ದೇನು?
ಪೊಲೀಸರು ಪ್ರತೀ ದಿನ ನಕರಾತ್ಮಕ ಪರಿಸರದಲ್ಲೇ ಬದುಕುತ್ತಿರುತ್ತಾರೆ. ಅವರು ಆ ನೆಗೆಟಿವಿಟಿಯನ್ನು ಮನೆಯ ಆಚೆಯೇ ಬಿಟ್ಟು ಮನೆಗೆ ಪಾಸಿಟಿವ್ ಆಗಿ ಬರಬೇಕಾಗುತ್ತದೆ. ಅಂಥಾ ಕಷ್ಟಕರ ಜೀವನ ಹೊಂದಿರುವ ಪೊಲೀಸ್ ಸಿಬ್ಬಂದಿಗಳ ಬದುಕಿನ ಕತೆ ಇದು.
‘ಪೊಲೀಸರು ಪ್ರತೀ ದಿನ ನಕರಾತ್ಮಕ ಪರಿಸರದಲ್ಲೇ ಬದುಕುತ್ತಿರುತ್ತಾರೆ. ಅವರು ಆ ನೆಗೆಟಿವಿಟಿಯನ್ನು ಮನೆಯ ಆಚೆಯೇ ಬಿಟ್ಟು ಮನೆಗೆ ಪಾಸಿಟಿವ್ ಆಗಿ ಬರಬೇಕಾಗುತ್ತದೆ. ಅಂಥಾ ಕಷ್ಟಕರ ಜೀವನ ಹೊಂದಿರುವ ಪೊಲೀಸ್ ಸಿಬ್ಬಂದಿಗಳ ಬದುಕಿನ ಕತೆ ಇದು, ತುಂಬಾ ಸೊಗಸಾಗಿ ಮೂಡಿಬಂದಿದೆ’. - ಹೀಗೆ ಹೇಳಿದ್ದು ರಿಷಬ್ ಶೆಟ್ಟಿ. ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ, ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ, ಭರತ್‌ರಾಜ್ ನಿರ್ದೇಶಿಸಿರುವ ‘ಲಾಫಿಂಗ್ ಬುದ್ಧ’ ಚಿತ್ರದ ‘ಎಂಥಾ ಚೆಂದಾನೇ’ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಿನಿಮಾ ಆ.30ರಂದು ಬಿಡುಗಡೆ ಆಗುತ್ತಿದೆ. ನಿರ್ದೇಶಕ ಭರತ್‌ರಾಜ್, ‘ಜೋಗಿ ಅವರ ‘ಎಲ್ಲಾನೂ ಮಾಡುವುದು ಹೊಟ್ಟೆಗಾಗಿ’ ಪುಸ್ತಕ ಓದಿ ಆ ಕೃತಿಯನ್ನು ಸಿನಿಮಾ ಮಾಡಲು ಹೊರಟಿದ್ದೆ. ಆಗ ನನಗೆ ಈ ಕತೆ ಸಿಕ್ಕಿತು. ಆ ಕೃತಿ ಬಿಟ್ಟು ಈ ಕತೆ ಮಾಡಿದೆ. ಇದು ಪೊಲೀಸರ ಇಷ್ಟ ಕಷ್ಟಗಳನ್ನು ತಿಳಿಸುವ ಸಿನಿಮಾ. ತಮಾಷೆಯಿಂದ ಸಾಗುತ್ತದೆ. ತೇಜಸ್ವಿ ಬರಹಗಳ ಫ್ಲೇವರನ್ನು ಇಲ್ಲಿ ತರಲು ಪ್ರಯತ್ನ ಮಾಡಿದ್ದೇನೆ’ ಎಂದರು. ಚೀನಾ ದೇಶದಲ್ಲಿ ಬುಡೈ ಎಂಬವನು ಒಂದು ಚೀಲದಲ್ಲಿ ಮಕ್ಕಳಿಗೆ ಬೇಕಾದ ಸಿಹಿ ಪದಾರ್ಥಗಳನ್ನು ತುಂಬಿಕೊಂಡು, ಮಕ್ಕಳನ್ನು ಹಾಗೂ ಎಲ್ಲರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದ.
ಭೀಮ ಕತೆ ನಾನು ನೋಡಿದ್ದು, ಕೇಳಿದ್ದು, ಅನುಭವಿಸಿದ್ದು: ದುನಿಯಾ ವಿಜಯ್ Exclusive Interview
ನಮ್ಮ ಚಿತ್ರದ ನಾಯಕ ಗೋವರ್ಧನ ಪಾತ್ರ ಸಹ ಇದೇ ರೀತಿ ಇದೆ. ಹಾಗಾಗಿ ಲಾಫಿಂಗ್ ಬುದ್ಧ ಶೀರ್ಷಿಕೆ ಇಟ್ಟಿದ್ಧೇವೆ. ಪ್ರಮೋದ್ ಶೆಟ್ಟಿ, ‘ಈ ಪಾತ್ರಕ್ಕಾಗಿ 30 ಕೆಜಿ ಏರಿಸಿ ಇಳಿಸಿದ್ದೇನೆ. ಪೊಲೀಸರ ಕತೆಗಳನ್ನು ಕೇಳಿದರೆ ಸಿಂಪಥಿ ಹುಟ್ಟುತ್ತದೆ. ಈ ಸಿನಿಮಾ ಪೊಲೀಸರ ಮೇಲೆ ಗೌರವ ಮೂಡಿಸುತ್ತದೆ’ ಎಂದರು. ಸತ್ಯವತಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಾಯಕಿ ತೇಜು ಬೆಳವಾಡಿ ತಿಳಿಸಿದರು. ಚಿತ್ರದಲ್ಲಿ ಪ್ರಧಾನ ಪಾತ್ರ ಮಾಡಿರುವ ದಿಗಂತ್, ನಾಯಕಿ ತೇಜು ಬೆಳವಾಡಿ, ನಿವೃತ್ತ ಪೊಲೀಸ್ ಅಧಿಕಾರಿ ಎಸ್‌ಕೆ ಉಮೇಶ್, ಗೀತ ರಚನಕಾರ ಕಲ್ಯಾಣ್, ವಿತರಕ ಕಾರ್ತಿಕ್ ಗೌಡ, ಡಿಓಪಿ ಚಂದ್ರಶೇಖರ್ ಇದ್ದರು.