38 ದಿನದಲ್ಲಿ ದೃಶ್ಯ 2 ಶೂಟಿಂಗ್‌ ಮುಕ್ತಾಯ, ನವೆಂಬರ್‌ನಲ್ಲಿ ಥಿಯೇಟರ್‌ಗೆ.   ಓಟಿಟಿ ನಮಗಲ್ಲ ನಾವು ಥಿಯೇಟರ್‌ಗೇ ಬರೋದು ಎಂದು ರವಿಚಂದ್ರನ್ ಖಡಕ್ ಆಗಿ ಹೇಳಿದ್ದಾರೆ.

‘ಇಡೀ ಫ್ಯಾಮಿಲಿ ಸಿನಿಮಾ ನೋಡಿ, ಹೊಟೇಲಲ್ಲಿ ಊಟ ಮಾಡಿ ಸುತ್ತಾಟ ಮುಗಿಸಿ ಮನೆಗೆ ವಾಪಾಸಾಗೋದೇ ನಮ್ಮ ನಾಡಿನ ಕ್ರಮ. ಈ ಓಟಿಟಿ ನಮಗಲ್ಲ’ ಎಂದಿದ್ದಾರೆ ಕ್ರೇಜಿಸ್ಟಾರ್‌ ರವಿಚಂದ್ರನ್‌.

ರವಿಚಂದ್ರನ್‌ ನಟನೆಯ ‘ದೃಶ್ಯ 2’ ಚಿತ್ರ 38 ದಿನಗಳಲ್ಲಿ ಶೂಟಿಂಗ್‌ ಮುಗಿಸಿದೆ. ನವೆಂಬರ್‌ನಲ್ಲಿ ಥಿಯೇಟರ್‌ಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರ ಜೊತೆಗೆ ಹುಮ್ಮಸ್ಸಿಂದಲೇ ಮಾತನಾಡಿದ ರವಿಚಂದ್ರನ್‌, ‘ನಮ್ಮ ಚಿತ್ರ ಖಂಡಿತಾ ಫ್ಯಾಮಿಲಿ ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆಸುತ್ತೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೃಶ್ಯ 2 ಚಿತ್ರದ ಮಹತ್ವದ ಭಾಗದ ಶೂಟಿಂಗ್‌ ಮುಕ್ತಾಯ: ಆರೋಹಿ

‘ಬೇರೆ ಯಾವ ಚಿತ್ರದ ಶೂಟಿಂಗ್‌ನಲ್ಲೂ ಚಿತ್ರತಂಡದ ಜೊತೆಗೆ ಇಂಥಾ ಬಾಂಧವ್ಯ ಬೆಳೆದಿರಲಿಲ್ಲ. ನಾನಿಲ್ಲಿ ರಾಜೇಂದ್ರ ಪೊನ್ನಪ್ಪನಾಗಿಯೇ ಇದ್ದೆ. ನನ್ನ ಮಗಳ ಪಾತ್ರ ಮಾಡುವ ಹುಡುಗಿಗೆ ದಿನಾ ತಿಂಡಿ ತಂದು ಕೊಡುತ್ತಿದ್ದೆ. ಇತರರಿಗೆ ಬಿರಿಯಾನಿ ಕೊಡಿಸುತ್ತಿದ್ದೆ. ಒಂದು ದಿನ ಖಾಲಿ ಕೈಯಲ್ಲಿ ಬಂದರೆ ಎಲ್ಲಾ ಮುಖ ನೋಡುತ್ತಿದ್ದರು. ಈಗ ಶೂಟಿಂಗ್‌ ಮುಗಿಯುತ್ತಿರೋದಕ್ಕೆ ನಿಜಕ್ಕೂ ಬೇಸರವೆನಿಸುತ್ತಿದೆ’ ಎಂದರು.

ನಿರ್ದೇಶಕ ಪಿ. ವಾಸು ರವಿಚಂದ್ರನ್‌ ಮಾತಿಗೆ ದನಿಗೂಡಿಸಿದರು. ‘ಕೊಡಗಿನ ಮಳೆ, ಚಳಿಯ ನಡುವೆ ಶೂಟಿಂಗ್‌ ಮುಗಿಸಿದ್ದೇವೆ. ದೃಶ್ಯ 2 ಶೂಟಿಂಗ್‌ ಅವಿಸ್ಮರಣೀಯ ಅನುಭವ. ಈ ಸಲ ಹಾಸ್ಯ ಪಾತ್ರದಲ್ಲಿ ಸಾಧು ಕೋಕಿಲ ಕಾಣಿಸಿಕೊಳ್ಳುತ್ತಿದ್ದಾರೆ’ ಎಂದರು.

ನಾಯಕಿ ನವ್ಯಾ ನಾಯರ್‌, ‘ಕನ್ನಡ ಗೊತ್ತಿಲ್ಲದಿದ್ದರೂ ಎಲ್ಲ ಸಹಕಾರದಿಂದ ಹೇಗೆ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸೋದು ಸಾಧ್ಯವಾಯಿತು’ ಎಂದರು. ಆರೋಹಿ, ತನ್ನ ಪ್ಲಾನ್‌ಗಳನ್ನೆಲ್ಲ ಸ್ಪಾಯಿಲ್‌ ಮಾಡಿ ಮನೆ ಮಗಳಾಗಿ ನಡೆಸಿಕೊಂಡ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿದರು. ಬಾಲ ನಟಿ ಉನ್ನತಿ, ನಿರ್ಮಾಪಕರಾದ ಮುಖೇಶ್‌ ಆರ್‌ ಮೆಹ್ತಾ, ಸಿ.ವಿ. ಸಾರಥಿ, ಸಿನಿಮಾಟೋಗ್ರಾಫರ್‌ ಸೀತಾರಾಮ್‌ ಮತ್ತಿತರರು ಉಪಸ್ಥಿತರಿದ್ದರು.