ಖ್ಯಾತ ನಟ ಕಿಶೋರ್ ಕೃಷಿಯಲ್ಲಿ ನಷ್ಟ ಅನುಭವಿಸಿದ್ದಾರೆ. ಬೆಂಗಳೂರು ಹೊರವಲಯದ ತಮ್ಮ ತೋಟದಲ್ಲಿ ಕೃಷಿ ಯತ್ನ ವಿಫಲವಾಗಿದೆ. ಪತ್ನಿ ಕೂಡ ಉದ್ಯೋಗ ತ್ಯಜಿಸಿ ಕೃಷಿಯಲ್ಲಿ ಜೊತೆಗೂಡಿದ್ದರು. ಕುರಿ ಸಾಕಣೆಯಲ್ಲೂ ನಷ್ಟ ಅನುಭವಿಸಿದ ಕಿಶೋರ್, ಕೃಷಿಯಲ್ಲಿ ತಮ್ಮ ಅನುಭವದಿಂದ ಇತರರು ಪಾಠ ಕಲಿಯಬಹುದು ಎಂದಿದ್ದಾರೆ.

ಕನ್ನಡ ಚಿತ್ರರಂಗದ ಖ್ಯಾತ ನಟ ಕಿಶೋರ್ (Kishore) ಅವರು ನಟನೆ ಜೊತೆ ಕೃಷಿ ಮಾಡೋಕೆ ಮನಸ್ಸು ಮಾಡಿದ್ದರು. ಆದರೆ, ಅವರಿಗೆ ಅದರಲ್ಲಿ ಅಷ್ಟೇನೂ ಯಶಸ್ಸು ಸಿಗಲಿಲ್ಲ ಎನ್ನಲಾಗುತ್ತಿದೆ. ಬೆಂಗಳೂರಿನಿಂದ 30 ಕೀಮೀ ದೂರದಲ್ಲಿರುವ 'ಕರಿಯಪ್ಪನ ದೊಡ್ಡಿ'ಯಲ್ಲಿ ಒಂದು ದೊಡ್ಡ ತೋಟವನ್ನು ಮಾಡಿಕೊಂಡಿದ್ದಾರೆ ನಟ ಕಿಶೋರ್. ಅವರ ಪತ್ನಿ ಕೂಡ ವರ್ಷಕ್ಕೆ ಇಪ್ಪತ್ತು ಲಕ್ಷದ ಪ್ಯಾಕೇಜ್‌ ಕೆಲಸ ಬಿಟ್ಟು ಗಂಡನ ಜೊತೆ ಕೃಷಿಯಲ್ಲಿ ಕೈ ಜೋಡಿಸಿದ್ದರು. 

ನಟ ಕಿಶೋರ್ ಅವರನ್ನು ಕೃಷಿ ಬಗ್ಗೆ ಕೇಳಲು, 'ನನ್ನಿಂದ ನೀವು ಕೃಷಿಯಲ್ಲಿ ಸೋತಾಗ ಹೇಗೆ ಜಾಗರೂಕತೆಯಿಂದ ಕೃಷಿಯನ್ನು ಮಾಡ್ಬೇಕು ಅನ್ನೋದನ್ನ ಕಲೀಬಹುದು. ಜೊತೆಗೆ, ಇದರಿಂದ ನಾನು ಗಳಿಸಿದ್ದು ಏನೂ ಇಲ್ಲ' ಎಂದೇ ಹೇಳುತ್ತಾರೆ. ಅಂದರೆ, ಅಷ್ಟರಮಟ್ಟಿಗೆ ಅವರು ಕೃಷಿಯನ್ನು ನಂಬಿ ಕೈ ಸುಟ್ಟುಕೊಂಡಿದ್ದಾರೆ ಎನ್ನಬಹುದೇನೋ!

ನಟ ಕಿಶೋರ್ ಹೇಳುವ ಪ್ರಕಾರ, ಸುತ್ತಮುತ್ತಲ ಬೆಟ್ಟಗಳಿಂದ ಮಳೆ ಬಂದಾಗ ಕೆಸರು ತುಂಬಿಕೊಂಡು ಬರುತ್ತೆ.. ಈಗ ಮೊದಲಿನ ತರಹ ಕಿಶೋರ್ ಫಾರ್ಮ್ ಹೌಸ್ ಚೆಂದವಾಗಿ ಕಾಣುತ್ತಿಲ್ಲ ಎನ್ನಲಾಗಿದೆ. ಇತ್ತೀಚೆಗಷ್ಟೇ 20 ಕುರಿಮರಿಗಳನ್ನು ತಂದು ಸಾಕಿದ್ದರು ನಟ ಕಿಶೋರ್. ಆದರೆ, ಅವುಗಳಲ್ಲಿ ಹತ್ತು ಕುರಿಗಳು ಸಾವನ್ನಪ್ಪಿದವು. ಹೀಗಾಗಿ ಅವುಗಳಿಂದ ಲಾಭ ಬರುವ ಬದಲು ನಷ್ಟವೇ ಆಯ್ತು.

ಒಟ್ಟಿನಲ್ಲಿ, ನಟ ಕಿಶೋರ್‌ ಅವರು ಕಬಡ್ಡಿ ಸಿನಿಮಾ ಮೂಲಕ ಬಹಳಷ್ಟು ಖ್ಯಾತಿ ಗಳಿಸಿದರು. ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲೂ ನಟ ಕಿಶೋರ್ ಮಿಂಚುತ್ತಿದ್ದಾರೆ. ರಾಜಕೀಯ ನಾಯಕರ ಬಗ್ಗೆ, ದೇಶದ ರಾಜಕಾರಣದ ಬಗ್ಗೆ ಕೇಳಲಾಗುವ ಪ್ರಶ್ನೆಗಳಿಗೆ ತಮ್ಮ ಮನಸ್ಸಿಗೆ ತೋಚಿದ ಉತ್ತರ ಕೊಡುವ ಮೂಲಕ ನಟ ಕಿಶೋರ್‌ ಅವರು ಬಹಳಷ್ಟು ಬಾರಿ ವಿವಾದವನ್ನು ಸಹ ಮಾಡಿಕೊಂಡಿದ್ದಾರೆ. 

ರಿಷಬ್ ಶೆಟ್ಟಿ ನಟನೆ-ನಿರ್ದೇಶನದ 'ಕಾಂತಾರ' ಸಿನಿಮಾದಲ್ಲಿ ಪೊಲೀಸ್ ಪಾತ್ರದ ಮೂಲಕ ನಟ ಜನಮೆಚ್ಚುಗೆ ಗಳಿಸಿದ್ದಾರೆ. ಸದ್ಯ ಹಿಂದಿ ಹಾಗೂ ತಮಿಳು ಸಿನಿಮಾಗಳಲ್ಲಿ ಕಿಶೋರ್ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ, ಮಹಾಕುಂಭ ಮೇಳ, ಹೊಸ ಸಂವಿಧಾನ ಹೀಗೆ ನಾನಾ ಆಗುಹೋಗುಗಳಿಗೆ ಕೇಳಲಾಗುವ ಪ್ರಶ್ನೆಗೆ ಉತ್ತರ ಕೊಡುತ್ತಿದ್ದಾರೆ ಕಿಶೋರ್. 

ಇನ್ನು ಗಂಗೆಯಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರ ಆಗಲ್ಲ.. ಫಸ್ಟ್ ಆಪ್ ಆಲ್‌ ಪಾಪಗಳನ್ನೇ ಮಾಡಬಾರ್ದು.. ಗಂಗೆ ಏನ್ ಮಾಡ್ತಾಳೆ ಪಾಪ, ಅದೊಂದು ಜೀವನದಿ, ಪ್ರಕೃತಿಯ ಶಕ್ತಿ ಅಷ್ಟೇ. ಇವ್ರು ಜನರನ್ನು ದಾರಿ ತಪ್ಪಿಸ್ತಾ ಇದಾರೆ ಅಷ್ಟೇ.. ಅಧಿಕಾರ ಇರೋವರೆಗೂ ಇವೆಲ್ಲಾ ನಡೆಯುತ್ತೆ.. ಅಧಿಕಾರ ಹೋದ್ಮೇಲೆ ಎಲ್ಲಾ ಪರಿಣಾಮ ಗೊತ್ತಾಗುತ್ತೆ' ಎಂದಿದ್ದಾರೆ ಖಾಸಗಿ ಚಾನೆಲ್‌ ಸಂದರ್ಶನವೊಂದರಲ್ಲಿ ನಟ ಕಿಶೋರ್. ಅದೀಗ ಸದ್ಯ ಮೀಡಿಯಾಗಳು ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಸಂಚಲನ ಸೃಷ್ಟಿಸುತ್ತಿದೆ.