ಬೆಳಕು ಬಂದೇ ಬರುತ್ತದೆ

ಎಲ್ಲರಿಗೂ ಮನೆಯಲ್ಲೇ ಇದ್ದೂ ಇದ್ದೂ ಬೋರಾಗಿದೆ. ಈಗ ಎಂದಿನಂತೆ ಎಲ್ಲರೂ ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಹೀಗಿರುವಾಗ ಮನರಂಜನೆಗೆ ಮೊದಲಿನಂತೆಯೇ ಅವಕಾಶಗಳು ಬೇಕೇ ಬೇಕಲ್ಲವೇ. ಅದಕ್ಕಾಗಿ ಪ್ರೇಕ್ಷಕ ಕಾಯುತ್ತಿದ್ದಾನೆ. ಒಳ್ಳೆಯ ಚಿತ್ರಗಳು ಬರಬೇಕು ಅಷ್ಟೇ. ಈಗ ನಿಧಾನವಾಗಿ ದೊಡ್ಡ ದೊಡ್ಡ ಚಿತ್ರಗಳು ಬರುವ ತಯಾರಿ ಮಾಡಿಕೊಳ್ಳುತ್ತಿವೆ. ಇದು ಸಾಧ್ಯವಾದ ಮೇಲೆ ಎಲ್ಲವೂ ಸರಿಯಾಗುತ್ತದೆ ಎನ್ನುವ ವಿಶ್ವಾಸ ನಟನಾಗಿ ನನಗೆ ಇದೆ. ಈ ವೇಳೆ ನಾವುಗಳು ತುಸು ತಾಳ್ಮೆ ವಹಿಸಬೇಕು, ಜನರು ಹೆಚ್ಚು ಜಾಗೃತೆ ವಹಿಸಬೇಕು. - ಶ್ರೀಮುರಳಿ

ಮರುಬಿಡುಗಡೆ ನಿಧಾನ ಹೊಸಬಿಡುಗಡೆ ಶೂನ್ಯ;ಜನವರಿ ತನಕ ಚಿತ್ರರಂಗಕ್ಕೆ ಅಘೋಷಿತ ರಜೆ! 

ಸಹಕಾರದಿಂದ ಸಾಗಬೇಕು

ಸ್ಯಾಂಡಲ್‌ವುಡ್‌ನಲ್ಲಿ ಇರುವ ಆ್ಯಕ್ಟಿವ್‌ ಪ್ರೊಡ್ಯೂಸರ್‌ಗಳು ಮೀಟಿಂಗ್‌ ಮಾಡಲು ಮುಂದಾಗಿದ್ದೇವೆ. ಈ ವೇಳೆ ಸದ್ಯದ ಪರಿಸ್ಥಿತಿ, ಮುಂದೆ ಏನಾಗಬೇಕು ಎಂಬುದೆಲ್ಲವನ್ನೂ ಚರ್ಚೆ ಮಾಡುತ್ತೇವೆ. ಈಗ ಕೊರೋನಾ ಕಡಿಮೆ ಆಗುತ್ತಿದೆ. ಜನರಲ್ಲೂ ಅರಿವು ಮೂಡಿದೆ. ಇಂತಹ ಹೊತ್ತಿನಲ್ಲಿ ನಾವೆಲ್ಲರೂ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕಿದೆ. ಇದು ಸಾಧ್ಯವಾಗುತ್ತದೆ ಎನ್ನುವ ಭರವಸೆ ಇದೆ. ಇದೆಲ್ಲಾ ಕಾರಣಗಳಿಂದ ಶೀಘ್ರವೇ ಹೊಸ ಚಿತ್ರಗಳು ಬರಲಿವೆ. ಇಂಡಸ್ಟ್ರಿ ಮೊದಲಿನ ರೀತಿ ಗಟ್ಟಿಯಾಗಿ ನಿಲ್ಲುತ್ತದೆ. - ಕೆ.ಪಿ. ಶ್ರೀಕಾಂತ್‌, ನಿರ್ಮಾಪಕ

ಚೇತರಿಕೆ ಕಾಣಬೇಕು ಎನ್ನುವುದು ನಮ್ಮ ಆಸೆ

ಜನಕ್ಕೆ ಧೈರ್ಯ ಬಂದರೆ ನಿರ್ಮಾಪಕರಾಗಿ ನಾವು ನಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡುವುದಕ್ಕೆ ಸಿದ್ಧವಾಗಿ ಇದ್ದೇವೆ. ಚಿತ್ರಮಂದಿರಗಳ ಮಾಲೀಕರು ಮೊದಲಿನ ರೀತಿ ಬಾಡಿಗೆ ಪದ್ಧತಿ ಅನುಸರಿಸಬೇಕು, ಜೊತೆಗೆ ಬಾಡಿಗೆ ಹಣವನ್ನೂ ತುಸು ಕಡಿಮೆ ಮಾಡಿಕೊಳ್ಳಬೇಕು. ಸರ್ಕಾರವೂ ಶೇ.50 ಸೀಟ್‌ಗಳ ಭರ್ತಿ ಎನ್ನುವ ವಿಚಾರದಲ್ಲಿ ಸಡಿಲಿಕೆ ನೀಡಬೇಕು. ಹೀಗಿದ್ದರೆ ನಾವು ತೆರೆಗೆ ನಮ್ಮ ಸಿನಿಮಾಗಳನ್ನು ತರುತ್ತೇವೆ. ಈಗ ನಾವು ಮಾಡುತ್ತಿರುವ ಎಲ್ಲಾ ಪ್ರಯತ್ನಗಳೂ ಸಿನಿಮಾರಂಗ ಚೇತರಿಕೆ ಕಾಣಬೇಕು ಎನ್ನುವ ನಿಟ್ಟಿನಲ್ಲಿಯೇ ಇದೆ. - ಸೂರಪ್ಪ ಬಾಬು, ನಿರ್ಮಾಪಕ

'ಹಿಟ್ಲರ್‌' ಹೆಸರಿನಲ್ಲಿ ಭೂಗತ ಲೋಕದ ಕತೆ;ಟೈಟಲ್‌ ಲಾಂಚ್‌ ಮಾಡಿದ ಶ್ರೀಮುರಳಿ!

ಚಿತ್ರಮಂದಿರ ಜನರನ್ನು ಸೆಳೆಯುತ್ತೆ

ಬೇರೆ ಯಾವುದೇ ರೀತಿಯ ಸಮಸ್ಯೆ ಆಗಿದ್ದರೂ ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಿದ್ದರು. ಆದರೆ ಇದು ಹೆಲ್ತ್‌ಗೆ ಸಂಬಂಧಪಟ್ಟವಿಚಾರ ಆದ್ದರಿಂದ ತುಸು ಭಯ ಇದೆ ಅಷ್ಟೆ. ಇದು ಶಾಶ್ವತ ಅಲ್ಲ. ವ್ಯಾಕ್ಸಿನ್‌ ಬಂದರೆ ಎಲ್ಲವೂ ಮೊದಲಿನಂತೆ ಆಗುತ್ತದೆ. ಚಿತ್ರಮಂದಿರಗಳು ಮೊದಲಿನಂತೆ ತುಂಬೇ ತುಂಬುತ್ತವೆ. ಜನರನ್ನು ತನ್ನತ್ತ ಸೆಳೆದುಕೊಳ್ಳುವ ಶಕ್ತಿ ಚಿತ್ರಮಂದಿರಗಳಿಗೆ ಇದೆ. ಸಿನಿಮಾಗಳಿಗೆ ಇದೆ. ಇದೆಲ್ಲಾ ಆಗುತ್ತದೆ ಎನ್ನುವ ಹಂತಕ್ಕೆ ನಾವಿಂದು ಬಂದಿದ್ದೇವೆ. ಇನ್ನೂ ತುಸು ಸಮಯ ತಾಳ್ಮೆ ವಹಿಸಿದರೆ ಎಲ್ಲವೂ ಒಂದು ಹಂತಕ್ಕೆ ಬರುತ್ತದೆ.- ಸಂಜನಾ ಆನಂದ್

ಹೊಸ ದಾರಿ ಕಾಣಿಸುತ್ತಿದೆ

ಎಲ್ಲವೂ ಹಂತ ಹಂತವಾಗಿ ಸರಿಯಾಗುತ್ತಿವೆ. ಮೊದಲು ಎಲ್ಲವೂ ಲಾಕ್‌ ಆಗಿತ್ತು. ಆಮೇಲೆ ಡಬ್ಬಿಂಗ್‌, ಶೂಟಿಂಗ್‌, ಶೇ.50 ರಷ್ಟುಮಿತಿಯಲ್ಲಿ ಚಿತ್ರಮಂದಿರವನ್ನು ತೆರೆದಾಯಿತು. ಮುಂದೆ ಶೇ. 100 ರಷ್ಟುತೆರೆಯುತ್ತಾರೆ. ಜನರೂ ಬಂದೇ ಬರುತ್ತಾರೆ. ಈಗ ನಾವು ಮುಂದೆ ಒಳ್ಳೆಯ ದಿನಗಳು ಇವೆ ಎನ್ನುವ ಹೋಪ್‌ ಇಟ್ಟುಕೊಂಡು ಆ ನಿಟ್ಟಿನಲ್ಲಿ ನಮ್ಮ ಕಾರ್ಯ ನಾವು ಮಾಡುತ್ತಿದ್ದೇವೆ. ಈಗ ಸ್ಟಾರ್‌ ನಟರ ಚಿತ್ರಗಳು ತೆರೆಗೆ ಬರಬೇಕು. ಅವರಿಗೆ ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆಸಿಕೊಳ್ಳುವ ಶಕ್ತಿ ಇದೆ. ಇದು ಸಾಧ್ಯವಾಗುವ ದಿನಗಳು ತುಂಬಾ ದೂರ ಇಲ್ಲ.- ಪೃಥ್ವಿ ಅಂಬರ್‌