ಶೂಟಿಂಗ್ ವೇಳೆ ಕಲುಷಿತ ತುಂಗಭದ್ರಾ ನದಿ ನೋಡಿ ಸಿಟ್ಟಿಗೆದ್ದ ನಟ ಅನಿರುದ್ಧ; ಮುಂದೆ ಮಾಡಿದ್ದೇನು ಗೊತ್ತಾ?
ಶೂಟಿಂಗ್ ಮಾಡಲೆಂದು ಶಿವಮೊಗ್ಗ ನಗರದ ಹೊರ ವಲಯಕ್ಕೆ ಹೋದಾಗ ತುಂಗಭದ್ರಾ ನದಿಯನ್ನು ನೋಡಿದ ನಟ ಅನಿರುದ್ಧ ಜತ್ಕರ್ ಅವರು ಕೋಪಗೊಂಡು ಸಿಎಂ ಸಿದ್ದರಾಮಯ್ಯಗೆ ಹೀಗೆ ಪತ್ರ ಬರೆದಿದ್ದಾರೆ.
ಶಿವಮೊಗ್ಗ / ಬೆಂಗಳೂರು (ಜೂ.26): ಶೂಟಿಂಗ್ ಮಾಡಲೆಂದು ಶಿವಮೊಗ್ಗಕ್ಕೆ ಹೋದಾಗ ತುಂಗಾ ನದಿಗೆ ಸೇರುತ್ತಿದ್ದ ಕಲುಷಿತ ನೀರು ಹಾಗೂ ನದಿಯಲ್ಲಿ ಬೆಳೆದಿದ್ದ ಕಳೆ ಗಿಡಗಳನ್ನು ನೋಡಿದ ಸಿನಿಮಾ ನಟ ಅನಿರುದ್ಧ ಜತ್ಕರ್ ಅವರು ಈ ಬಗ್ಗೆ ವಿಡಿಯೋ ಮಾಡಿಕೊಂಡು, ಸಾಕ್ಷಿ ಸಮೇತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆ. ಕೂಡಲೇ, ನದಿಗೆ ಸೇರುತ್ತಿರುವ ಕಲುಷಿತ ನೀರು ತಡೆಯುವುದು ಹಾಗೂ ನದಿಯಲ್ಲಿ ಬೆಳೆದ ಕಸವನ್ನು ಸ್ವಚ್ಛಗೊಳಿಸುವುದಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಕೊಟ್ಟ ಮನವಿ ಪತ್ರದಲ್ಲಿ 'ಶಿವಮೊಗ್ಗದಲ್ಲಿ ಆರಂಭವಾಗಿ, ಹರಿಹರ, ಹೊಸಪೇಟೆಯ ಮಾರ್ಗವಾಗಿ ಮಂತ್ರಾಲಯವನ್ನು ತಲುಪಿ ಮುಂದೆ ಕೃಷ್ಣಾ ನದಿಯನ್ನು ಸೇರುವ, ನಮ್ಮ ನಾಡಿನ ಪವಿತ್ರವಾದ ತುಂಗೆಯ ಜಲವು ಸ್ವಚ್ಛತೆ, ಪಾವಿತ್ರ್ಯತೆಯ ಜೊತೆಗೆ ಆಮ್ಲಜನಕದ ಕೊರತೆಯಿಂದ ಇದೀಗ ಸಂಪೂರ್ಣವಾಗಿ ಕಲುಷಿತವಾಗಿದೆ. ಅಶುದ್ಧತೆಯಿಂದಾಗಿ, ಬಳಸಲು ಯೋಗ್ಯವಲ್ಲದಂತಹ ದಯನೀಯ ಸ್ಥಿತಿಗೆ ತಲುಪಿದೆ. ನಾವು ತಾಯಿಯಂತೆ ಪೂಜಿಸುವ, ತನ್ನದೇ ಆದ ಭವ್ಯ ಇತಿಹಾಸವನ್ನು ಹೊಂದಿರುವಂತಹ ಪ್ರಕೃತಿ ಮಾತೆಯ ಕೊಡುಗೆಯಾದ ನಮ್ಮ ನಾಡಿನ ಪುಣ್ಯ ನದಿ ತುಂಗಭದ್ರೆಯು, ಈಗ ತನ್ನ ಶುಚಿತ್ವವನ್ನು ಕಳೆದುಕೊಂಡು, ಸಂಪೂರ್ಣ ಕಲುಷಿತವಾಗಿ ಇನ್ನು ಮುಂದೆ ಬಳಕೆಗೆ ಯೋಗ್ಯವಲ್ಲದಂತಹ ಶೋಚನೀಯ ಸ್ಥಿತಿ ತಲುಪಿರುವುದನ್ನು ನೋಡಿದಾಗ ಕನ್ನಡಿಗರಾದ ನಮಗೆ ನಿಜಕ್ಕೂ ದಿಗ್ಧಮೆಯಾಗುತ್ತೆ. ಮನಸ್ಸಿಗೆ ನೋವಾಗುತ್ತದೆ. ಈ ನಿಟ್ಟಿನಲ್ಲಿ ಕೂಡಲೇ ಸೂಕ್ತ ಕ್ರಮ ವಹಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ.
ಸೀಕ್ರೆಟ್ ಬಿಚ್ಚಿಟ್ಟರು ಸ್ನೇಹಿತ ಅಣಜಿ ನಾಗರಾಜ್, ಕೊಲೆ ಕೇಸಿನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದು ಹೇಗೆ?
ತುಂಗಭದ್ರಾ ನದಿಗೆ ಈಗ ಶಿವಮೊಗ್ಗ ನಗರದಲ್ಲಿ ಕಾಲುವೆಯ ಮೂಲಕ ಕೊಳಚೆ ನೀರು ಅವ್ಯಾಹತವಾಗಿ ಹರಿದು ಬರುತ್ತಿದ್ದು, ಇಡೀ ವಾತಾವರಣವೇ ಮಲಿನವಾಗಿದೆ. ದುರ್ವಾಸನೆ ಆವರಿಸಿದೆ. ಎಲ್ಲೆಲ್ಲೂ ದಟ್ಟವಾದ ಕಳೆ ವ್ಯಾಪಿಸಿಕೊಂಡು ಸ್ವಚ್ಛತೆ ಮಾಯವಾಗಿದೆ. ವಿಶೇಷವಾಗಿ ಅಮೋನಿಯಾ ಮತ್ತು ಫಾಸ್ಪೇಟ್ ರಾಸಾಯನಿಕ ಅಂಶಗಳನ್ನು ಹೊಂದಿದ ಸಂಸ್ಕರಿಸದ ಕೊಳಚೆ ನೀರು ನದಿಯ ಒಡಲು ಸೇರುತ್ತಿದೆ. ಈ ಕಲುಷಿತ ನೀಡು ಕಳೆ ಗಿಡಗಳು ಬೆಳೆಯಲು ಕಾರಣವಾಗಿದೆ. ಕಳೆಗಳಿಂದಾಗಿ ನದಿಯಲ್ಲಿನ ಆಮ್ಲಜನಕದ ಮಟ್ಟವು ಶೂನ್ಯವಾಗುತ್ತದೆ. ಜಲಚರಗಳು ಜೀವಿಸುವುದಕ್ಕೂ ಯಾವುದೇ ಸಾಧ್ಯತೆಯಿರುವುದಿಲ್ಲ. ನಾವು ಕೆಲವು ಮೀನುಗಳನ್ನು ಮಾತ್ರ ನೋಡಬಹುದು. ಇದು ಖಂಡಿತವಾಗಿಯೂ ನದಿಯ ವಿಷಾದನೀಯ ಸ್ಥಿತಿ. ನಿಜಕ್ಕೂ ಇದೊಂದು ದುರಂತ ಮತ್ತು ದುರದೃಷ್ಟಕರ ಎಂದು ಮರುಕ ವ್ಯಕ್ತಪಡಿಸಿದ್ದಾರೆ.
ಹೋಟೆಲ್‌ಗಳಲ್ಲಿ ರೂಮ್ ಬುಕ್ ಮಾಡುವ ವಿಐಪಿಗಳ ಹನಿಟ್ರ್ಯಾಪ್ ಗ್ಯಾಂಗ್ ಅರೆಸ್ಟ್; ಯಾರೀ ಯುವತಿ?
ನದಿಯ ಸ್ವಚ್ಛತೆ ಬಗ್ಗೆ ನಾವು ಜಾಗೃತಿ ಮೂಡಿಸಲೇಬೇಕಿದೆ. ಈ ಮಾಲಿನ್ಯಯವನ್ನು ಈಗಲೇ ತಡೆಗಟ್ಟುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಲ್ಲಿ ಮಳೆಯಿಂದ ಸಂಗ್ರಹವಾಗುವ ನೀರು ನದಿಗೆ ಸೇರಲು ಅವಕಾಶವೇ ಇಲ್ಲದಂತಾಗಿದೆ. ಬದಲಾಗಿ, ಮಳೆ ಬಂದಾಗ ಈ ಕೊಳಚೆ ಮಿಶ್ರಿತ ನದಿಯ ನೀರು, ಹೊರಕ್ಕೆ ಹರಿದು ಬಂದು ಜನ ಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಹೆಚ್ಚಾಗಿದೆ. ಇಲ್ಲಿ ಯಾರನ್ನೂ ಹೊಣೆ ಮಾಡುವ, ಆರೋಪ ಹೊರಿಸುವ ಉದ್ದೇಶವಿಲ್ಲ. ನಾವೆಲ್ಲರೂ ಸೇರಿ ನಾವು ಪೂಜಿಸುವ ತುಂಗೆಯನ್ನು ಕಾಪಾಡಬೇಕಿದೆ. ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಇದನ್ನು ಕಾರ್ಯರೂಪಕ್ಕೆ ತರಬೇಕಿದೆ. ಈ ಮೂಲಕ ನಿಜ ಜೀವನದಲ್ಲೂ ನಾವು ತಾಯಿಯಂತೆ ತುಂಗಾ ನದಿಯನ್ನು ಗೌರವಿಸೋಣ ಎನ್ನುವುದೇ ನನ್ನ ಮನೋಭಿಲಾಷೆ. ಈ ದೃಷ್ಟಿಯಿಂದ ನಾನು ಪವಿತ್ರವಾದ ತುಂಗಾ ನದಿಯ ಸ್ವಚ್ಛತೆಯ ಅಭಿಯಾನವನ್ನು ಹಮ್ಮಿಕೊಂಡಿದ್ದೇನೆ. ಈ ನಿಟ್ಟಿನಲ್ಲಿ ಕಲುಷಿತ ನೀರು ಸೇರ್ಪಡೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳುವಿರೆಂದು ನಂಬಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.