ಕನ್ನಡದಲ್ಲೇ ಮಾತಾಡುವಂತೆ ಕಿರುಕುಳ; ಬೆಂಗಳೂರು ವಿಮಾನ ನಿಲ್ದಾಣ ಅಧಿಕಾರಿ ವಿರುದ್ಧ ಕರ್ನಾಟಕ ಮೂಲದ ನಟನ ಆಕ್ರೋಶ
ಕನ್ನಡದಲ್ಲೇ ಮಾತಾಡುವಂತೆ ಕಿರುಕುಳ; ಬೆಂಗಳೂರು ವಿಮಾನ ನಿಲ್ದಾಣ ಅಧಿಕಾರಿ ವಿರುದ್ಧ ಕರ್ನಾಟಕ ಮೂಲದ ನಟ ಸಲ್ಮಾನ್ ಯೂಸುಫ್ ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ಕೂಲ್ ಡ್ಯಾನ್ಸ್ ಸ್ಟೈಲ್ ನಿಂದನೇ ಎಲ್ಲರ ಮನಗೆದ್ದಿರುವ ಡ್ಯಾನ್ಸರ್ ಮತ್ತು ಕೊರಿಯೋಗ್ರಾಫರ್ ಸಲ್ಮಾನ್ ಯೂಸುಫ್ ಖಾನ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ಅಹಿತಕರ ಘಟನೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಕನ್ನಡ ಮಾತನಾಡುವಂತೆ ಒತ್ತಾಯಿಸಿ ವಿಮಾನ ನಿಲ್ದಾಣ ಸಿಬ್ಬಂದಿಯೊಬ್ಬರು ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಲ್ಮಾನ್ ಯೂಸುಫ್ ಇಂದು ಬೆಳ್ಳಂಬೆಳಗ್ಗೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬಹಿರಂಗ ಪಡಿಸಿದ್ದಾರೆ. ಈ ಘಟನೆ ಬಗ್ಗೆ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ತಿಳಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ಈ ವಿಡಿಯೋ ಶೇರ್ ಮಾಡಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಟ್ಯಾಗ್ ಮಾಡಿದ್ದಾರೆ.
'ನಾನು ದುಬೈಗೆ ಹೋಗುತ್ತಿರುವಾಗ ನನ್ನೊಂದಿಗೆ ಕನ್ನಡ ಮಾತನಾಡುವ ಈ ಅಧಿಕಾರಿಯನ್ನು ಭೇಟಿಯಾದೆ. ನನ್ನ ಅರೆಬರೆ ಕನ್ನಡದಲ್ಲಿ ನಾನು ಭಾಷೆ ಅರ್ಥ ಮಾಡಿಕೊಂಡಿದ್ದೇನೆ ಆದರೆ ಮಾತನಾಡಲು ಬರಲ್ಲ ಎಂದು ನಾನು ಹೇಳಲು ಪ್ರಯತ್ನಿಸಿದೆ. ಆದರೆ ಅವರು ಕನ್ನಡದಲ್ಲಿ ಮಾತನ್ನು ಮುಂದುವರೆಸಿದರು. ನನ್ನ ಪಾಸ್‌ಪೋರ್ಟ್ ತೋರಿಸಿದೆ ಅದರಲ್ಲಿ ನನ್ನ ಹೆಸರು ಮತ್ತು ಜನ್ಮಸ್ಥಳ ಹಾಗೂ ನನ್ನ ತಂದೆ ಹೆಸರು ನೋಡಿದರು. ನೀವು ನಿಮ್ಮ ತಂದೆ ಬೆಂಗಳೂರಿನಲ್ಲೇ ಹುಟ್ಟಿದ್ದೀರಿ ಆದರೆ ನಿಮಗೆ ಕನ್ನಡ ಮಾತನಾಡಲು ಬರುವುದಿಲ್ವಾ ಎಂದರು. ಅದಿಕ್ಕೆ ನಾನು ಬೆಂಗಳೂರಿನಲ್ಲಿ ಹುಟ್ಟಿದೆ ಎಂದರೆ ನಾನು ಭಾಷೆಯೊಂದಿಗೆ ಹುಟ್ಟಿದ್ದೇನೆ ಎಂದರ್ಥವಲ್ಲ. ನಾನು ಬೆಂಗಳೂರಿನಲ್ಲಿ ಹುಟ್ಟಿರಬಹುದು ಆದರೆ ನಾನು ಯಾವಾಗಲೂ ಸೌದಿ ಹುಡುಗ, ಅಲ್ಲೇ ಬೆಳೆದಿದ್ದು. ನನ್ನ ಶಾಲಾ ಸಮಯದಿಂದನೂ ನಾನು ಇಲ್ಲಿ ಇಲ್ಲ. ಕನ್ನಡ ಯಾವಗಲೂ ನನ್ನ ಭಾಷೆಯಾಗಿಲ್ಲ. ನನಗೆ ತಿಳಿದಿರುವ ಅಲ್ಪಸ್ವಲ್ಪ ಕನ್ನಡ ನನ್ನ ಸ್ನೇಹಿತರಿಂದ. ಅವರು ಎಷ್ಟರ ಮಟ್ಟಿಗೆ ಮಾತನಾಡಿದರು ಎಂದರೆ ಕನ್ನಡ ಬಂದಿಲ್ಲ ಎಂದರೆ ಅನುಮಾನದಿಂದ ನೋಡಬಹುದು ಎನ್ನಪವ ಮಟ್ಟಕ್ಕೆ' ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ಘಟನೆ ಬಗ್ಗೆ ವರದಿ ಮಾಡಲು ಬಯಸಿದಾಗ ಹೇಗೆ ಮಾಡಬೇಕೆಂಬುದರ ಬಗ್ಗೆ ತನಗೆ ಯಾವುದೇ ಸಹಾಯ ಸಿಗಲಿಲ್ಲ ಎಂದು ಸಲ್ಮಾನ್ ಹೇಳಿದ್ದಾರೆ. 'ಬೆಂಗಳೂರಿಗರು ಎಂದು ಹೆಮ್ಮೆ ಪಡುತ್ತಿರುವಾಗ, ಸ್ಥಳೀಯ ಭಾಷೆ ಸರಿಯಾಗಿ ತಿಳಿದಿಲ್ಲದ ಕಾರಣದಿಂದ ಅವಮಾನಿಸುವುದು ಸರಿಯಲ್ಲ' ಎಂದು ಹೇಳಿದ್ದಾರೆ.
ಸಲ್ಮಾನ್ ಯೂಸುಫ್ ಖಾನ್ 2009 ರಲ್ಲಿ ರಿಯಾಲಿಟಿ ಶೋ ಡಾನ್ಸ್ ಇಂಡಿಯಾ ಡ್ಯಾನ್ಸ್‌ನ ಮೊದಲ ವಿಜೇತರಾಗಿದ್ದರು. ಅಂದಿನಿಂದ ಸಲ್ಮಾನ್ ಹಲವಾರು ಟಿವಿ ಡಾನ್ಸ್ ಕಾರ್ಯಕ್ರಮಗಳಲ್ಲಿ ನೃತ್ಯ ಸಂಯೋಜಕ ಮತ್ತು ಡಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ವಾಂಟೆಡ್ (2009), ಎಬಿಸಿಡಿ: ಎನಿಬಡಿ ಕ್ಯನ್ ಡ್ಯಾನ್ಸ್ (2013) ಮತ್ತು ಸ್ಟ್ರೀಟ್ ಡ್ಯಾನ್ಸರ್ 3D (2020) ಸೇರಿದಂತೆ ಕೆಲವು ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದಾರೆ.