ಕೃಷ್ಣನ ಭಕ್ತ ಅಜಯ್ ರಾವ್, ತಮ್ಮ ಜೀವನದಲ್ಲಿ ಮುಹೂರ್ತಗಳ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಮದುವೆ ಹಾಗೂ ಯುದ್ಧಕಾಂಡ ಚಿತ್ರದ ಮುಹೂರ್ತಗಳು ಅಶುಭವಾಗಿದ್ದರೂ, ಕೃಷ್ಣನ ಕೃಪೆಯಿಂದ ಯಶಸ್ಸು ಸಿಕ್ಕಿತು ಎಂದಿದ್ದಾರೆ. ಅಲ್ಲದೆ, ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಾಗ ಕಷ್ಟದ ದಿನಗಳನ್ನು ಎದುರಿಸಿದ್ದನ್ನೂ, ಸಾಲದ ಬಗ್ಗೆಯೂ ಅವರು ಹಂಚಿಕೊಂಡಿದ್ದಾರೆ. ಜೀವನದಲ್ಲಿ ಸಕಾರಾತ್ಮಕವಾಗಿ ಯೋಚಿಸುವಂತೆ ಸಲಹೆ ನೀಡಿದ್ದಾರೆ.
ಯುದ್ಧಕಾಂಡ, ತಾಜ ಮಹಲ್, ಪ್ರೇಮ್ ಕಹಾನಿ, ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ರುಕ್ಕು, ಕೃಷ್ಣ ಲೀಲಾ ಸೇರಿದಂತೆ ಹಲವು ಬ್ಲಾಕ್ಬಸ್ಟರ್ ಚಿತ್ರಗಳನ್ನು ಕೊಟ್ಟಿರುವ ಅಪ್ಪಟ ಕೃಷ್ಣನ ಪ್ರೇಮಿಯಾಗಿರುವ ಅಜಯ್ ರಾವ್ ಅವರು ತಮ್ಮ ಜೀವನದಲ್ಲಿ ಮುಹೂರ್ತ ಎನ್ನುವುದು ಹೇಗೆಲ್ಲಾ ಕೆಲಸ ಮಾಡಿದೆ ಎನ್ನುವ ಬಗ್ಗೆ ಕುತೂಹಲದ ಮಾಹಿತಿಯನ್ನು ತೆರೆದಿಟ್ಟಿದ್ದಾರೆ. ನಾವು ಸ್ಮಾರ್ತರು, ಪೂಜಿಸೋದು ಶಿವನನ್ನು, ನಾನು ವೈಯಕ್ತಿಕವಾಗಿ ಪ್ರೀತಿಸೋದು ಕೃಷ್ಣನನ್ನು ಎನ್ನುತ್ತಲೇ ತಮ್ಮ ಚಿತ್ರದ ಬಹುತೇಕ ಶೀರ್ಷಿಕೆಗಳಲ್ಲಿ ಕೃಷ್ಣ ಎನ್ನುವುದೇ ಏಕೆ ಇದೆ ಎನ್ನುವ ಬಗ್ಗೆಯೂ ಸೂಚಿಸಿದ್ದಾರೆ. ಇದರಲ್ಲಿ ಇವರು ಕುತೂಹಲವಾಗಿ ಹಂಚಿಕೊಂಡಿರುವ ವಿಷಯ ತಮ್ಮ ಮದುವೆ ಮತ್ತು ತಾವು ಕೊಟ್ಟಿರುವ ಬ್ಲಾಕ್ಬಸ್ಟರ್ ಚಿತ್ರಗಳ ಕುರಿತಾಗಿ.
ರ‍್ಯಾಪಿಡ್ ರಶ್ಮಿ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ, ಅಜಯ್ ರಾವ್ ಅವರು, ನನ್ನ ಮದುವೆಯಾದ ಮುಹೂರ್ತ ಚೆನ್ನಾಗಿರಲಿಲ್ಲ. ಆದರೆ ಆಗ ನನಗೆ ಅದು ಗೊತ್ತೇ ಆಗಿರಲಿಲ್ಲ. ನನಗೂ ಅಲ್ಪ ಸ್ವಲ್ಪ ಇವೆಲ್ಲಾ ನೋಡಲು ಬರುತ್ತದೆ. ಆಮೇಲೆ ನಾನು ಮದುವೆಯಾದ ಗಳಿಗೆಯನ್ನು ನೋಡಿದಾಗ ನನಗೂ ಶಾಕ್ ಆಗಿತ್ತು. ಅದು ಶುಭ ಮುಹೂರ್ತ ಅಲ್ಲವಾಗಿತ್ತು. ಕೊನೆಗೆ ಅಶುಭ ಮುಹೂರ್ತದಲ್ಲಿ ಮದ್ವೆಯಾಗಿರೋದ್ರಿಂದ ಡಿವೋರ್ಸ್ ಪಕ್ಕಾ ಎಂದುಬಿಟ್ಟರು. ಮದುವೆಯಾಗಿಯಾಗಿತ್ತು. ಎಲ್ಲವೂ ಕೃಷ್ಣಾರ್ಪಣ ಮಸ್ತು ಎಂದುಕೊಂಡೆ. ಆದರೆ ಇದುವರೆಗೂ ನಾವು ತುಂಬಾ ಚೆನ್ನಾಗಿಯೇ ಇದ್ದೇವೆ, ಎಲ್ಲವೂ ಕೃಷ್ಣನ ಲೀಲೆ ಎಂದಿದ್ದಾರೆ. ಇದೇ ವೇಳೆ, ಯುದ್ಧಕಾಂಡ ಸಿನಿಮಾದ ಮುಹೂರ್ತದ ಬಗ್ಗೆಯೂ ಮಾತನಾಡಿರುವ ಅವರು, ಈ ಚಿತ್ರ ಕೂಡ ಅಶುಭ ಮುಹೂರ್ತದಲ್ಲಿ ಆರಂಭಿಸಿರುವುದು ಕೊನೆಗೆ ತಿಳಿಯಿತು. ಆದರೆ, ಆಗ ಎಲ್ಲವನ್ನೂ ಸ್ವೀಕರಿಸಿಬಿಟ್ಟೆ. ಎಲ್ಲವೂ ಕೃಷ್ಣನ ಮೇಲೆ ಬಿಟ್ಟೆ. ಕೃಷ್ಣನೇ ಹೇಳಿರುವಂತೆ ಕರ್ಮ ನನ್ನದು, ಫಲ ನಿನ್ನದು ಎನ್ನುವಂತೆ ಎಲ್ಲವನ್ನೂ ಒಳ್ಳೆಯ ರೀತಿಯಲ್ಲಿ ಸ್ವೀಕರಿಸಿದೆ. ಸಿನಿಮಾ ಬ್ಲಾಕ್ಬಸ್ಟರ್ ಆಯಿತು ಎಂದಿದ್ದಾರೆ.
ದುನಿಯಾ ವಿಜಯ್ಗೆ 'ದೇವತೆ' ತಂದ ಸಂಕಷ್ಟ! ತಮಿಳಿನ ಚೊಚ್ಚಲ ಚಿತ್ರದಲ್ಲೇ ಕಿರಿಕ್- ಶೂಟಿಂಗ್ ಕ್ಯಾನ್ಸಲ್...
ಈ ಮೂಲಕ, ಅದೃಷ್ಟ ನೆಟ್ಟಗಿದ್ದರೆ ಜೊತೆಗೆ ಆ ದೇವರ ಕೃಪೆಯಿದ್ದರೆ ಶುಭ-ಅಶುಭ ಯಾವುದೂ ಮಧ್ಯೆ ಬರುವುದಿಲ್ಲ ಎಂದಿದ್ದಾರೆ. ನಾನು ಕೃಷ್ಣನನ್ನು ತುಂಬಾ ಪ್ರೀತಿಸುತ್ತೇನೆ, ಕೃಷ್ಣನನ್ನು ನಂಬಿದವನು. ಆದ್ದರಿಂದ ಯಾವುದೇ ಕಾರ್ಯವನ್ನು ಆರಂಭಿಸುವ ಪೂರ್ವದಲ್ಲಿ ಕೃಷ್ಣನಿಗೆ ದೀಪ ಹಚ್ಚಿ, ಎಲ್ಲವೂ ಕೃಷ್ಣಾರ್ಪಣ ಮಸ್ತು ಎಂದು ಒಪ್ಪಿಸಿಬಿಡುತ್ತೇನೆ. ನನ್ನ ಶುಭ ಮುಹೂರ್ತದ ವಿಷಯಕ್ಕೆ ಬರುವುದಾದರೆ ಕೆಲವು ಬ್ಲಾಕ್ಬಸ್ಟರ್ ಚಿತ್ರಗಳಲ್ಲಿಯೂ ಹೀಗೆಯೇ ಆಗಿದೆ. ಆದರೆ, ಎಲ್ಲವೂ ಒಳ್ಳೆಯ ಫಲಗಳನ್ನೇ ಕೊಟ್ಟಿದೆ ಎಂದಿದ್ದಾರೆ ಅಜಯ್.
ಇದೇ ವೇಳೆ, ಜೀವನದ ಇನ್ನೂ ಹಲವು ವಿಷಯಗಳನ್ನು ಶೇರ್ ಮಾಡಿಕೊಂಡಿರುವ ನಟ, ಕೋಟಿಗಟ್ಟಲೆ ಸಾಲ ಇರುವ ವಿಷಯವನ್ನೂ ಬಹಿರಂಗವಾಗಿ ತೆರೆದಿಟ್ಟಿದ್ದಾರೆ. ಉದ್ಯೋಗ ಅರಸಿ ಬೆಂಗಳೂರಿಗೆ ಕಾಲಿಟ್ಟಾಗ ನನ್ನ ಪರಿಸ್ಥಿತಿ ಶೋಚನೀಯವಾಗಿತ್ತು. ಅಣ್ಣ ನೂರು ರೂಪಾಯಿ ಕೊಟ್ಟರೆ ಅವತ್ತಿನ ದಿನದ ಜೀವನ ನಡೆಯುತ್ತಿತ್ತು. ಜೇಬಿನಲ್ಲಿ ಹಣ ಇರದ ಕಾರಣ ಕಿಲೋಮೀಟರ್ಗಟ್ಟಲೆ ನಡೆದು ಹೋಗುತ್ತಿದ್ದೆ. ಆದರೆ ಹಂತಹಂತವಾಗಿ ಮೇಲೆ ಬಂದೆ. ಕೆಲವು ಕಾರಣಗಳಿಂದ ಸಾಲ ಹೆಚ್ಚಿರುವುದು ನಿಜ. ಆದರೆ ಇದನ್ನೂ ನಾನು ಪಾಸಿಟಿವ್ ಆಗಿ ತೆಗೆದುಕೊಂಡಿದ್ದೇನೆ. ಇಷ್ಟು ಸಾಲ ಪಡೆಯುವ ಅರ್ಹತೆ ನನಗೆ ಇದೆ ಎನ್ನುವುದೇ ಖುಷಿ ಎಂದಿರುವ ನಟ, ಜೀವನದಲ್ಲಿ ಏನೇ ಬಂದರೂ ಅದನ್ನು ಅದರ ಹಾಗೆಯೇ ಸ್ವೀಕರಿಸಿ, ಪಾಸಿಟಿವ್ ಯೋಚನೆ ಮಾಡಿದರೆ ಜೀವನವನ್ನು ಸುಲಭದಲ್ಲಿ ಜಯಿಸಬಹುದು ಎಂಬ ಪಾಠ ಹೇಳಿದ್ದಾರೆ.
ಮಗನ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ವಿಜಯ ರಾಘವೇಂದ್ರ: ಸ್ಪಂದನಾ ಫೋಟೋಗೆ ಅಭಿಮಾನಿಗಳ ಕಣ್ಣೀರು!

