Asianet Suvarna News Asianet Suvarna News

ಸಾಮಾಜಿಕ ಜಾಲತಾಣದಲ್ಲಿ 'ಪುಕ್ಲ ಪುಕ್ಲ' ವೈರಲ್; ಹಂಸಲೇಖ ಪುತ್ರಿ ಜಾದೂ!

ಸಾಮಾಜಿಕ ಜಾಲತಾಣಗಳಲ್ಲೀಗ ನಾದಬ್ರಹ್ಮ ಹಂಸಲೇಖ ಪುತ್ರಿ ನಂದಿನಿ ಹಂಸಲೇಖ ಅವರದ್ದೇ ಸುದ್ದಿ. ಪ್ರೇಮಿಗಳ ದಿನಾಚರಣೆಗಾಗಿ ನಂದಿನಿ ಹಂಸಲೇಖ ಹೊರತಂದಿದ್ದ ‘ಪುಕ್ಲ...ಪುಕ್ಲ ’ ಆಲ್ಬಮ್‌ ಸಾಂಗ್‌ ಈಗ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

About music composer Hamsalekha daughter Nandini
Author
Bangalore, First Published Mar 21, 2020, 9:42 AM IST

ದೇಶಾದ್ರಿ ಹೊಸ್ಮನೆ

ನಂದಿನಿ ಅವರೇ ಇದರಲ್ಲಿ ಹಾಡಿ, ಅಭಿನಯಿಸಿದ್ದಾರೆ. ಸೆಂದಿಲ್‌ ಸಾಹಿತ್ಯಕ್ಕೆ ಹಂಸಲೇಖ ಸಂಗೀತ ನೀಡಿದ್ದರೆ, ನಂದಿನಿ ‘ಪುಕ್ಲ... ಪುಕ್ಲ ’ ಅಂತ ಭರ್ಜರಿಯಾಗಿಯೇ ಕುಣಿದಿದ್ದಾರೆ. ಇದಕ್ಕೆ ಅಪಾರ ಮೆಚ್ಚುಗೆಯೂ ಸಿಕ್ಕಿದ್ದು, ಲೈಕ್ಸ್‌, ಕಾಮೆಂಟ್‌ಗಳಲ್ಲಿ ಸಾಂಗ್‌ ದಾಖಲೆ ಸೃಷ್ಟಿಸಿರುವುದು ನಂದಿನಿ ಮುದ್ದು ಮುಖದಲ್ಲಿ ಮಂದಹಾಸ ಮೂಡಿಸಿದೆ.

ಒಂಥರ ಥ್ರಿಲ್‌, ಜನರಿಗೆ ತಲುಪಿದ ಖುಷಿ..

‘ನಿಜಕ್ಕೂ ಖುಷಿ ಆಗುತ್ತಿದೆ. ಲಕ್ಷಕ್ಕೂ ಅಧಿಕ ಜನರಿಗೆ ಅದು ತಲುಪಿದೆ ಎನ್ನುವುದೇ ಒಂಥರ ಥ್ರಿಲ್‌’ ಎನ್ನುವ ಮೂಲಕ ‘ಪುಕ್ಲ..ಪುಕ್ಲ ’ ಆಲ್ಬಮ್‌ನ ಸಂಭ್ರಮದ ಮಾತು

ವಿಸ್ತರಿಸುತ್ತಾರೆ ನಂದಿನಿ ಹಂಸಲೇಖ. ‘ಇದಕ್ಕೆ ಸಂಗೀತ ಅಪ್ಪನದೇ. ಜತೆಗೆ ಹಾಗಲ್ಲ, ಇದು ಹೀಗಿರಲಿ ಅಂತ ಮಾರ್ಗದರ್ಶನ ಮಾಡಿದ್ದು ಕೂಡ ಅವರೇ. ಹಾಗಾಗಿ ಇದಕ್ಕೆ ಒಂದಷ್ಟುರೆಸ್ಪಾನ್ಸ್‌ ಸಿಕ್ಕೇ ಸಿಗುತ್ತೆ ಎನ್ನುವ ನಿರೀಕ್ಷೆ ಇತ್ತು. ಆದರೆ ಈ ಮಟ್ಟಕ್ಕೆ ಜನರಿಗೆ ತಲುಪುತ್ತದೆ ಅಂತ ಊಹಿಸಿರಲಿಲ್ಲ. ಎಲ್ಲವೂ ಜನರ ಆಶೀರ್ವಾದ’ ಎನ್ನುವುದು ನಂದಿನಿ ಹಂಸಲೇಖ ಮಾತು.

ಮನೆಯೇ ನನಗೆ ಗುರುಕುಲ..

ಹಂಸಲೇಖ ಅವರ ಕಿರಿಯ ಮಗಳು ನಂದಿನಿ ಬೆಂಗಳೂರಿನಲ್ಲೇ ಪ್ರತಿಷ್ಟಿತ ಬ್ಯಾಂಕ್‌ವೊಂದರ ಉದ್ಯೋಗಿ. ಸಂಗೀತ, ನೃತ್ಯದಲ್ಲೂ ತಮ್ಮದೇ ಛಾಪು ಮೂಡಿಸುವ ತವಕ. ಇದೆಲ್ಲ ಹೇಗೆ, ಯಾಕೆ ಎನ್ನುವ ಕುತೂಹಲದ ಪ್ರಶ್ನೆಗೆ ಹಂಸಲೇಖ ಅವರೇ ಕಾರಣ ಎನ್ನುತ್ತಾರೆ ನಂದಿನಿ. ‘ನಮ್ಮ ಮನೆಯೇ ನನಗೆ ಗುರುಕುಲ. ಅಪ್ಪ, ಅಮ್ಮ ಜತೆಗೆ ಅಣ್ಣ ಹಾಗೂ ಅಕ್ಕ ಕೂಡ ಗಾಯಕರು. ಸಂಗೀತ ಕಲಿತವರು. ಅವರ ನಡುವೆಯೇ ಬೆಳೆದ ನನಗೆ ಸಂಗೀತ ರಕ್ತಗತವಾಗಿಯೇ ಬಂದಿತು. ನಾನು ನಾಲ್ಕನೇ ವರ್ಷ ವಯಸ್ಸಿನಲ್ಲಿರುವಾಗಲೇ ಶೇಷಾದ್ರಿ ಗವಾಯಿಗಳ ಬಳಿ ಹಿಂದೂಸ್ಥಾನಿ ಸಂಗೀತ ಕಲಿಯಲು ಆರಂಭಿಸಿದ್ದೆ. ಬಳಿಕ ಹಿಂದೂಸ್ತಾನಿ ಸಂಗೀತದ ಮಹತ್ವದ ಗಾಯಕ ಫಯಾಜ್‌ ಖಾನ್‌ ಅವರ ಬಳಿ ಪ್ಲೇಬ್ಯಾಕ್‌ ಸಂಗೀತ ಕಲಿತೆ. ಪ್ರಸ್ತುತ ತಂದೆಯವರ ಬಳಿಯಲ್ಲೇ ಸಂಗೀತ ಕಲಿಯುತ್ತಿದ್ದೇನೆ. ಯಾಕೆಂದರೆ ಅವರಿಗಿಂತ ಬೇರೆ ಗುರು ಇಲ್ಲ ಎನ್ನುವುದು ನನ್ನ ಅನಿಸಿಕೆ.’ ಎನ್ನುವ ಮೂಲಕ ತಮ್ಮ ಸಂಗೀತಾಭ್ಯಾಸದ ವಿವರ ನೀಡುತ್ತಾರೆ.

ವೃತ್ತಿಪರ ಗಾಯಕಿ, ಹೊಸತನದ ಸಾಧಕಿ

ಅಪ್ಪ- ಅಮ್ಮನ ಹಾಗೆ ನಂದಿನಿ ಅವರು ಕೂಡ ಸಿನಿಮಾ ಜಗತ್ತಿಗೆ ಬಂದು ಹಲವು ವರ್ಷಗಳೇ ಆಗಿವೆ. ಅವರೀಗ ಸಿನಿಮಾ ಜಗತ್ತಿನಲ್ಲಿ ವೃತ್ತಿಪರ ಗಾಯಕಿ. 2006 ರಲ್ಲಿಯೇ ಪ್ರಜ್ವಲ್‌ ದೇವರಾಜ್‌ ಅಭಿನಯದ ‘ಸಿಕ್ಸರ್‌’ನಲ್ಲಿ ಒಂದು ಐಟಂ ಸಾಂಗ್‌ ಹಾಡಿದ್ದರು. ಅದಾದ ಬಳಿಕ ‘ನಾನು ನನ್ನ ಕನಸು’, ‘ನವಶಕ್ತಿ ವೈಭವ’, ‘ಅಪ್ಪು ಪಪ್ಪು’ ಸೇರಿದಂತೆ ಸುಮಾರು ಹತ್ತು ಸಿನಿಮಾಗಳಿಗೆ ಹಿನ್ನೆಲೆ ಗಾಯಕಿಯಾದ ಹೆಗ್ಗಳಿಕೆ ಅವರಿಗಿದೆ. ಇಷ್ಟಾಗಿಯೂ ಈಗ ಅವರು ಪ್ರೇಮಿಗಳ ದಿನಾಚರಣೆ ನೆಪದಲ್ಲಿ ಪುಕ್ಲ...ಪುಕ್ಲ ಹೆಸರಿನ ಆಲ್ಬಮ್‌ ಸಾಂಗ್‌ ಹಾಡಿ, ಅದರಲ್ಲಿ ತಾವೇ ಅಭಿನಯಿಸಿದ್ದಾರೆ. ಇಂಥಾ ಪ್ರಯೋಗ ಇದೇ ಮೊದಲು. ಈಗ ಯಾಕೆ ಈ ಪ್ರಯತ್ನ ಎನ್ನುವ ಪ್ರಶ್ನೆಗೆ ಅವರು ನೀಡುವ ಉತ್ತರ ‘ಹೊಸತನ’.

ಅಪ್ಪ ನನ್ನ ಸಾಹಸದ ಬೆನ್ನೆಲಬು

‘ಇದಕ್ಕೆ ಕಾರಣ ಅಪ್ಪ. ಪ್ರೇಮಿಗಳ ದಿನಕ್ಕೆ ಹೊಸತನದಲ್ಲಿ ಏನಾದರೂ ಮಾಡ್ಬೇಕು ಎನ್ನುವ ಆಲೋಚನೆ ಇಬ್ಬರಲ್ಲೂ ಇತ್ತು. ಮೊದಲಿಗೆ ಹಾಡು ಸಾಕು ಎಂದಷ್ಟೇ ಯೋಚಿಸಿದ್ದೆವು. ಸಾಹಿತ್ಯ ಬರೆದು ಸಂಗೀತ ನೀಡುತ್ತಿದ್ದ ಅಪ್ಪ, ಚೇಂಜ ಇರಲಿ ಅಂತ ಸೆಂದಿಲ್‌ ಬಳಿ ಸಾಹಿತ್ಯ ಬರೆಸಿದರು. ವ್ಯಾಲಂಟೈನ್‌ ಡೇ ಎಂದೊಡನೆ ರೊಮ್ಯಾಂಟಿಕ್‌ ಹಾಡುಗಳು, ಹುಡುಗರು ಹುಡುಗೀರನ್ನು ರೇಗಿಸುವ ಹಾಡುಗಳು ಸಹಜ. ಆದರೆ ನಾವು ಆ ಟ್ರೆಂಡ್‌ ಬದಲಿಸೋಣ ಎನ್ನುವ ದೃಷ್ಟಿಯಲ್ಲಿ ಹುಡುಗಿಯೇ ಹುಡುಗನಿಗಾಗಿ ಕಾದು ಆತನನ್ನು ‘ಪುಕ್ಲ’ ಎಂದು ಛೇಡಿಸುವ ಹಾಡು ಇದಾಗಿತ್ತು. ನಾನು ಹಾಡಿದೆ. ಚೆನ್ನಾಗಿದೆ ಅಂದರು. ಆಮೇಲೆ ಇದನ್ನೇ ವಿಡಿಯೋ ಮಾಡಿದರೆ ಹೇಗೆ ಅಂತ ಚರ್ಚೆ ಶುರುವಾಯಿತು. ನಯಾಜ್‌ ಅಂತ ಕೊರಿಯೋಗ್ರಾಫರ್‌ ಬಂದರು. ಅವರು ಡಾನ್ಸ್‌ ಹೇಳಿಕೊಟ್ಟರು. ಹಾಗಾಗಿ ಅದೊಂದು ವಿಡಿಯೋ ಆಲ್ಬಮ್‌ ಆಗಿ ಹೊರಬಂತು ’ ಎನ್ನುವುದು ನಂದಿನಿ ಹಂಸಲೇಖ ಅವರ ಮಾತು.

ಅಪ್ಪ, ಅಮ್ಮನ ಗೌರವ ಹೆಚ್ಚಿಸುವಾಸೆ...

ಯುಟ್ಯೂಬ್‌ನಲ್ಲೀಗ ದಾಖಲೆ ಮಟ್ಟದ ವೀಕ್ಷಣೆ ಪಡೆದಿರುವ ಈ ಹಾಡು ಸಾಕಷ್ಟುಹೊಸತನದಿಂದ ಕೂಡಿದೆ. ನಾದಬ್ರಹ್ಮ ಹಂಸಲೇಖ ವಿಭಿನ್ನವಾದ ಸಂಗೀತ ನೀಡಿದ್ದಾರೆ. ನಂದಿನಿ ಅವರು ಮಾಧುರ್ಯ ತುಂಬಿದ ಕಂಠ ಮತ್ತು ರಾರ‍ಯಪ್‌ ರೀತಿಯ ನೃತ್ಯದಲ್ಲೂ ಗಮನ ಬೆಳೆಯುತ್ತಾರೆ. ಅದರೊಂದಿಗೆ ಈಗ ಸಾಕಷ್ಟುಸುದ್ದಿಯಲ್ಲಿರುವ ನಂದಿನಿ ಹಂಸಲೇಖ ಅವರಿಗೆ ಸಂಗೀತದಲ್ಲಿ ಇರುವ ಆಸೆಯೊಂದೇ, ಅದು ನಂದಿನಿ ಅಂದ್ರೆ ಹಂಸಲೇಖ ಮಗಳು ಎಂದೆನಿಸಿಕೊಳ್ಳುವ ಬದಲಿಗೆ ನಂದಿನಿ ತಂದೆ ಹಂಸಲೇಖ ಅಂತ ಜನ ಹೇಳ್ಬೇಕು ಅನ್ನುವ ಆಸೆ.

‘ಸಂಗೀತ ಕ್ಷೇತ್ರದಲ್ಲಿ ನಾನೇನೇ ಸಾಧಿಸಿದರೂ, ಜನ ನನ್ನನ್ನು ಹಂಸಲೇಖ ಅವರ ಮಗಳು ಎಂದೇ ಗುರುತಿಸುತ್ತಾರೆ. ಆದರೆ ನನಗೆ ನಂದಿನಿಯ ತಂದೆ ಹಂಸಲೇಖ ಎಂದು ಗುರುತಿಸಿಕೊಳ್ಳುವಂತಾಗಬೇಕು. ಹಾಗಂತ ಇದು ಅಹಂಕಾರ ಅಲ್ಲ. ಹಂಸಲೇಖ ಅವರ ಮಗಳಾಗಿ ನಾನು ಅವರಿಗೆ ಗೌರವ ತರಬೇಕು ಎನ್ನುವ ಆಸೆ’ ಎನ್ನುತ್ತಾರೆ ನಂದಿನಿ ಹಂಸಲೇಖ. ಸಂಗೀತದ ಜತೆಗೆ ಬಾಲ್ಯದಿಂದಲೇ ನಟನೆಯಲ್ಲೂ ಸೈ ಎನಿಸಿಕೊಂಡ ಬಹುಮುಖ ಪ್ರತಿಭೆ ನಂದಿನಿ.

Follow Us:
Download App:
  • android
  • ios