ಶಿರಸಿ: ಗಂಧದ ಗುಡಿಗೆ ಬೆಚ್ಚನೆ ಅಪ್ಪುಗೆ; ಥಿಯೇಟರ್ ಹೌಸ್‌ಫುಲ್!
ಪುನೀತ್ ಅಭಿಮಾನಿಗಳು ಚಿತ್ರಮಂದಿರದ ಹೊರಗೆ ಗಂಧದಗುಡಿಯ ಪುನೀತ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಂಭ್ರಮ ಆಚರಿಸುವ ಜತೆಗೆ ಶ್ರದ್ಧಾಂಜಲಿ ಅರ್ಪಿಸಿದರು
ಶಿರಸಿ (ಅ.29) : ಡಾ.ಪುನೀತ್ ರಾಜಕುಮಾರ ಅಭಿನಯದ ಗಂಧದಗುಡಿ ಚಲನಚಿತ್ರ ನಗರದ ನಟರಾಜ ಚಿತ್ರಮಂದಿರದಲ್ಲಿ ಶುಕ್ರವಾರ ತೆರೆಕಂಡಿತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈಗಾಗಲೇ ಕಾಂತಾರ ಚಿತ್ರ ಪ್ರದರ್ಶನ ನಡೆಯುತ್ತಿತ್ತು. ಶುಕ್ರವಾರದಿಂದ ಬೆಳಗಿನ ಎರಡು ಆಟಗಳನ್ನು ಗಂಧದಗುಡಿ ಚಿತ್ರಕ್ಕಾಗಿ ನೀಡಲಾಗಿದೆ. ಒಂದು ಕಡೆ ಪುನೀತ್ ರಾಜಕುಮಾರ ಅವರ ಪ್ರಥಮ ಪುಣ್ಯಸ್ಮರಣೆ ದಿನವಾದರೆ, ಇನ್ನೊಂದು ಕಡೆ ಪುನಿತ್ ಮಹತ್ವಾಕಾಂಕ್ಷೆಯ ಗಂಧದಗುಡಿ ಬಿಡುಗಡೆಯಾದ ದಿನ. ಇವೆರಡನ್ನು ಶಿರಸಿಯ ಪುನೀತ್ ಅಭಿಮಾನಿ ಬಳಗದವರು ಸಮನಾಗಿ ಸ್ವೀಕರಿಸಿ ಆಚರಣೆ ಮಾಡಿದರು.
ದೀಪಾವಳಿ ಬೆನ್ನಲ್ಲೇ ಪುನೀತ್ ‘ಗಂಧದ ಗುಡಿ’ ಹಬ್ಬ; ಎಲ್ಲಾ ಟಿಕೆಟ್ ಸೋಲ್ಡ್ ಔಟ್!
ಪುನೀತ್ ಅಭಿಮಾನಿಗಳು ಚಿತ್ರಮಂದಿರದ ಹೊರಗೆ ಗಂಧದಗುಡಿಯ ಪುನೀತ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಂಭ್ರಮ ಆಚರಿಸುವ ಜತೆಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ್ ನಾಯ್ಕ, ದೀಪಕ್ ದೊಡ್ಡೂರು, ಪ್ರಸನ್ನ ಶೆಟ್ಟಿ, ಮಹೇಶ ನಾಯ್ಕ, ಸತೀಶ ನಾಯ್ಕ, ಸುಶಾಂತ್ ನಾಯ್ಕ, ನಾಗರಾಜ್ ನಾಯ್ಕ ಮುಂತಾದವರು ಇದ್ದರು.
ಚಿತ್ರಮಂದಿರ ಎದುರು ಆಕ್ರೋಶ
ಡಾ.ಪುನೀತ್ ರಾಜಕುಮಾರ ಅಭಿನಯದ ಗಂಧದಗುಡಿ ಚಿತ್ರ ಪ್ರದರ್ಶನ ಮಾಡದೇ ಇರುವುದಕ್ಕೆ ಕನ್ನಡಪರ ಸಂಘಟನೆಗಳ ಸದಸ್ಯರು ಆಕ್ರೋಶ ಹೊರಹಾಕಿದರು. ನಗರದ ಅರ್ಜುನ ಚಿತ್ರಮಂದಿರದ ಎದುರು ಶುಕ್ರವಾರ ಸೇರಿದ ಕನ್ನಡಪರ ಸಂಘಟನೆ ಕಾರ್ಯಕರ್ತರು ಪುನೀತ್ ಅಭಿನಯದ ಕೊನೆಯ ಚಿತ್ರ ಪ್ರದರ್ಶಿಸದ ಕಾರಣ ಅಸಮಾಧಾನ ಹೊರಹಾಕಿದರು. ಚಿತ್ರದ ಒಂದೇ ಒಂದು ಪೋಸ್ಟರ್ ಸಹ ಹಚ್ಚದೇ ಇರುವುದಕ್ಕೆ ತರಾಟೆಗೆ ತೆಗೆದುಕೊಂಡರು. ವ್ಯವಸ್ಥಾಪಕರೊಂದಿಗೆ, ಮಾಲೀಕರೊಂದಿಗೆ ಮಾತುಕತೆ ನಡೆಸಿದರು. ಶನಿವಾರದಿಂದ ಪ್ರತಿನಿತ್ಯ ಎರಡು ಶೋ ನಡೆಸುವುದಾಗಿ ಮಾಲಿಕರು ಭರವಸೆ ನೀಡಿದ ಬಳಿಕ ಕಾರ್ಯಕರ್ತರು ಅಸಮಾಧಾನಗೊಂಡು ಅಲ್ಲಿಂದ ತೆರಳಿದರು.
ಆಸ್ಪತ್ರೆ ಬಿಲ್ ಕಟ್ಟಿದ ಅಪ್ಪು ಅಭಿಮಾನಿಗಳು
ಚಿತ್ರಮಂದಿರದ ಕಾರ್ಮಿಕನ ಗರ್ಭಿಣಿ ಪತ್ನಿ ಆಸ್ಪತ್ರೆಯಲ್ಲಿ ಮೃತಪಟ್ಟವಿಷಯ ಕೇಳಿ ಪುನೀತ್ ರಾಜ್‌ಕುಮಾರ ಅಭಿಮಾನಿಗಳೇ ಸಾರ್ವಜನಿಕರಿಂದ ಮತ್ತು ಕೈಲಿದ್ದಷ್ಟುಹಣ ನೀಡಿ ಆಸ್ಪತ್ರೆ ಬಿಲ್ ತುಂಬಿ ಮಾನವೀಯತೆ ಮೆರೆದ ಘಟನೆ ಶುಕ್ರವಾರ ನಗರದಲ್ಲಿ ನಡೆಯಿತು. ಇಲ್ಲಿಯ ನಟರಾಜ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ ಪರಶುರಾಮ ಚಲುವಾದಿ ಸಂತ್ರಸ್ತ ಕಾರ್ಮಿಕ. ಅನಾರೋಗ್ಯಪೀಡಿತಳಾಗಿದ್ದ ಪತ್ನಿ ವನಜಾ, ನವಜಾತ ಶಿಶು ಮೃತಪಟ್ಟಿದ್ದರು.
Gandhada Gudi ಗಂಧದ ಗುಡಿ ಒಂದು ಅನುಭೂತಿ: ಅಭಿಮಾನಿಗಳಿಗೆ ಅಪ್ಪು ಕೊಟ್ಟ ಸಂದೇಶವೇನು?
ನಟರಾಜ ಚಿತ್ರಮಂದಿರದಲ್ಲಿ ಪುನೀತ್ ರಾಜ್‌ಕುಮಾರ ಅಭಿನಯದ ಗಂಧದಗುಡಿ ಪ್ರದರ್ಶನ ನಡೆಯುತ್ತಿತ್ತು. ಈ ವೇಳೆ ಪರಶುರಾಮ ಚಲುವಾದಿ ಆಸ್ಪತ್ರೆಯ ಬಿಲ್ ತುಂಬಲು ಹಣ ಕೇಳಿ ಚಿತ್ರಮಂದಿರ ಮಾಲೀಕರಲ್ಲಿ ಬಂದಿದ್ದ. ಬಡ ಕುಟುಂಬವಾಗಿದ್ದರಿಂದ ಚಿಕಿತ್ಸೆ ಖರ್ಚು ಭರಿಸಲು ಮೃತಳ ಪತಿ ಬಳಿ ಹಣ ಇರಲಿಲ್ಲ ಎನ್ನಲಾಗಿದೆ. ಇದನ್ನು ನೋಡಿದ ಪುನೀತ್ ರಾಜಕುಮಾರ ಅಭಿಮಾನಿ ಬಳಗದವರು ತಾವು ಪುನೀತ್ ರಾಜಕುಮಾರ ಹಾಕಿಕೊಟ್ಟಮಾರ್ಗದಲ್ಲಿ ನಡೆಯಬೇಕೆಂದು, ತಾವೇ ಹಣ ಸಂಗ್ರಹಿಸಿ ಚಿಕಿತ್ಸೆಯ ಖರ್ಚಿನ ಹಣವನ್ನು ಪರಶುರಾಮನಿಗೆ ನೀಡುವ ಮೂಲಕ ಮಾನವೀಯತೆ ಮೆರೆದರು. ಈ ಸಂದರ್ಭದಲ್ಲಿ ಪುನಿತ್ ಅಭಿಮಾನಿಗಳಾದ ಪ್ರಸನ್ ಶೆಟ್ಟಿ, ದೀಪಕ್ ದೊಡ್ಡೂರ, ಶ್ರೀನಿವಾಸ್ ನಾಯ್ಕ, ಮಹೇಶ ನಾಯ್ಕ ಮುಂತಾದವರು ಇದ್ದರು.