ಇದೇ 18ರಂದು ಬಿಡುಗಡೆಗೆ ಸಜ್ಜಾಗಿರುವ ಬ್ಯಾಂಗ್​ ಚಿತ್ರದ ಬೆನ್ನಲ್ಲೇ ಆ್ಯಂಕರ್​ ಅನುಶ್ರೀ, ನಟರಾದ ಶಾನ್ವಿ ಶ್ರೀವಾಸ್ತವ್ ಹಾಗೂ ರಘು ದೀಕ್ಷಿತ್ ಅವರ ಕುತೂಹಲದ ವಿಡಿಯೋ ವೈರಲ್​ ಆಗಿದೆ. ಏನದು? 

ಗಣೇಶ್ ಪರಶುರಾಮ್ ನಿರ್ದೇಶಿಸಿರುವ ಡಾರ್ಕ್ ಕಾಮಿಡಿ ಆ್ಯಕ್ಷನ್ ಚಿತ್ರ ‘ಬ್ಯಾಂಗ್’. ಶಾನ್ವಿ ಶ್ರೀವಾಸ್ತವ್ ಹಾಗೂ ರಘು ದೀಕ್ಷಿತ್ ನಟನೆಯ ಈ ಚಿತ್ರ ಇದೇ 18ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ನಟಿ ಶಾನ್ವಿ ಶ್ರೀವಾಸ್ತವ್ ಗ್ಯಾಂಗ್‌ಸ್ಟರ್ ಲಿಯೋನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಘು ದೀಕ್ಷಿತ್​ ಅವರು ಲಿಯೋನಾ ತಂದೆಯಾಗಿ ಆ್ಯಕ್ಟ್​ ಮಾಡಿದ್ದಾರೆ. ಇದು ಭೂಗತ ಜಗತ್ತಿನೊಂದಿಗೆ ಥಳುಕು ಹಾಕಿಕೊಂಡಿರುವ ಪಾತ್ರವಾಗಿದೆ. ಜನರು ನನ್ನ ಗ್ಯಾಂಗ್‌ಸ್ಟರ್ ವ್ಯಕ್ತಿತ್ವವನ್ನು 'ಡ್ಯಾಡಿ' ಎಂದು ಕರೆಯುತ್ತಾರೆ ಮತ್ತು ನಾನು ಆಧುನಿಕ ಯುಗದ ರಾಬಿನ್ ಹುಡ್‌ನ ಛಾಯೆಯಲ್ಲಿ ಕಾಣಿಸಿಕೊಂಡಿದ್ದೇನೆ' ಎಂದು ಸಂದರ್ಶನವೊಂದರಲ್ಲಿ ರಘು ದೀಕ್ಷಿತ್​ (Raghu Dixit) ಹೇಳಿದ್ದರು. ಅಂದಹಾಗೆ ರಘು ದೀಕ್ಷಿತ್​ ಗಾಯಕರಾಗಿದ್ದು, ಈ ಹಿಂದೆ ಕೆಲವೊಂದು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರೆ ಇದೇ ಮೊದಲ ಬಾರಿಗೆ ತೆರೆ ಮೇಲೆ ಹೆಚ್ಚಿನ ಸಮಯ ಹಾಗೂ ಸ್ಕೋಪ್ ಹೊಂದಿರುವ ಪಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ವೇದಿಕೆ ಮೇಲೆ ಪಂಚೆ ತೊಟ್ಟು ಬಂದ ಗಾಯಕ ಗ್ಯಾಂಗ್‌ಸ್ಟರ್ ಆಗಿ ಹೇಗೆ ಬರಲಿದ್ದಾರೋ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಕಳೆದ ವಾರ ಈ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿತ್ತು. ಇದಕ್ಕೆ ಸಕತ್​ ಒಳ್ಳೆಯ ರೆಸ್ಪಾನ್ಸ್​ ಸಿಗುತ್ತಿದೆ. ಚಿತ್ರಕ್ಕೆ ಕಿಚ್ಚ ಸುದೀಪ್ ಧ್ವನಿ ನೀಡಿದ್ದಾರೆ.

ಇದೀಗ ಬ್ಯಾಂಗ್​ ಚಿತ್ರದ ಬಿಡುಗಡೆಗೆ ಸಿನಿ ಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಡಾರ್ಕ್ ಕಾಮಿಡಿ ಥ್ರಿಲ್ಲರ್‌ ಜಾನರ್‌ನ ಚಿತ್ರವಾಗಿರುವುದು ಇದಾಗಲೇ ಗೊತ್ತಾಗಿದೆ. ಈ ಚಿತ್ರದ ಬಗ್ಗೆ ಹೊಸ ರೀತಿಯಲ್ಲಿ ಪ್ರಚಾರ ಮಾಡಿದ್ದಾರೆ ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್‌ ನಟಿ (Sandalwood star) ಅನುಶ್ರೀ. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಅವರು ಆಗಾಗ್ಗೆ ಇನ್​ಸ್ಟಾಗ್ರಾಮ್​ (Instagram) ಲೈವ್​ಗೆ ಬಂದು ತಮ್ಮ ಫ್ಯಾನ್ಸ್ ಜೊತೆ ಮಾತನಾಡುತ್ತಾ ಇರುತ್ತಾರೆ. ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುವ ನಟಿ ಈಗ ಬ್ಯಾಂಗ್​ ಚಿತ್ರದ ರಿಲೀಸ್​ಗೂ ಮುನ್ನ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಇದರ ಪ್ರಚಾರ ಮಾಡಿದ್ದಾರೆ. ಇದರ ವಿಡಿಯೋ ಅನ್ನು ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಆ್ಯಂಕರ್ ಅನುಶ್ರೀಗೆ ಇಷ್ಟು ದಿನ ಮದುವೆ ಯಾವಾಗ ಅಂತಿದ್ದ ಫ್ಯಾನ್ಸ್​ , ಈಗ ಸಿನಿಮಾ ಯಾವಾಗ ಕೇಳ್ತಿದ್ದಾರೆ!

ನೀವು ಹೇಳಿ ಯಾರನ್ನು kidnap ಮಾಡಬೇಕು ಎನ್ನುವ ಶೀರ್ಷಿಕೆಯೊಂದಿಗೆ ಈ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಅನುಶ್ರೀ ಅವರ ಜೊತೆಗೆ ಬ್ಯಾಂಗ್​ ಚಿತ್ರದ ನಾಯಕಿ ಶಾನ್ವಿ ಹಾಗೂ ನಟ ರಘು ದೀಕ್ಷಿತ್ ಅವರನ್ನು ನೋಡಬಹುದು. ರಘು ದೀಕ್ಷಿತ್‌ ಅವರು ಮಲತಂದೆಯಾಗಿ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅನುಶ್ರೀ ಅವರು ಅಪಹರಣದ ಸನ್ನಿವೇಶವನ್ನು ವಿಶಿಷ್ಟವಾಗಿ ವಿವರಿಸುತ್ತಿದ್ದಾರೆ. ಯಾರದ್ದೋ ಅಪಹರಣ ಮಾಡುವ ಬಗ್ಗೆ ಅವರು ಮಾತನಾಡುತ್ತಿರುವುದನ್ನು ನೋಡಬಹುದು. ಎಷ್ಟು ಗಂಟೆಗೆ ಮನೆಯಿಂದ ಹೊರಡಬೇಕು, ಎಷ್ಟು ಗಂಟೆಗೆ ಕಿಡ್ನಾಪ್​ ಸ್ಪಾಟ್​ನಲ್ಲಿ ಇರಬೇಕು, ಕಾರಿನಲ್ಲಿ ಹೋಗಿ ಹೇಗೆ ಅಪಹರಣ ಮಾಡಬೇಕು ಇತ್ಯಾದಿಗಳ ಕುರಿತು ತನ್ನ ಎಂದಿನ ಜಾಣ್ಮೆಯ ಮಾತಿನ ಧಾಟಿಯಲ್ಲಿ ವರ್ಣಿಸಿದ್ದಾರೆ. ಅಪಹರಣಕ್ಕೆ ಟಿಪ್ಸ್​ ಕೊಡುವಲ್ಲಿ ರಘು ಅವರು ಸಾಥ್​ ಕೊಟ್ಟಿದ್ದಾರೆ. ಕೊನೆಗೆ 21 ಕೋಟಿ ರೂಪಾಯಿ ಬೇಡಿಕೆ ಇಟ್ಟು ಅಪಹರಣ ಮಾಡುವ ಬಗ್ಗೆ ಮಾತನಾಡಲಾಗುತ್ತದೆ. 

ಕೊನೆಗೆ ಯಾರನ್ನು ಅಪಹರಣ ಮಾಡಬೇಕು ಎಂಬ ವಿಷಯ ಬಂದಾಗ, ರಘು ಅವರು ಎಲ್ಲರಿಗಿಂತಲೂ ಸದ್ಯ ಶ್ರೀಮಂತರಾಗಿರುವವರು ಅನುಶ್ರೀಯವರೇ ಆಗಿರುವ ಕಾರಣ, ಅವರನ್ನೇ ಕಿಡ್ನಾಪ್​ ಮಾಡುವುದು ಎಂದಾಗುತ್ತದೆ. ಈ ರೀತಿ ಹಾಸ್ಯದ ತುಣುಕನ್ನು ವಿಶಿಷ್ಟ ರೀತಿಯಲ್ಲಿ ತಿಳಿಸಿ, ಬ್ಯಾಂಗ್​ ಚಿತ್ರದ ಪ್ರಮೋಷನ್​ (Promotion) ಮಾಡಲಾಗಿದೆ. 

View post on Instagram