ಸಾಮಾನ್ಯವಾಗಿ ನಟನೆ ಎಂಬುದು ಯಾವುದೇ ಕಲಾವಿದನಲ್ಲಿ ಕಾಲದಿಂದ ಕಾಲಕ್ಕೆ ಮಾಗುತ್ತಾ ಬರುತ್ತದೆ. ಆದರೆ ನಮ್ಮ ರಾಜ್‌ರಲ್ಲಿನ ನಟನೆಯಲ್ಲಿ ಆರಂಭದಿಂದ ಇಂದಿನವರೆಗೆ ಒಂದು ತಪ್ಪನ್ನೂ ಕಂಡು ಹಿಡಿಯಲು ಸಾಧ್ಯವೇ ಇಲ್ಲ. ಅವರ ಯಾವುದೇ ಸಿನಿಮಾ ನೋಡಿ ಶೇಕಡಾ ನೂರಕ್ಕೆ ನೂರು ಪರಿಪೂರ್ಣತೆಯನ್ನು ನೀಡಿದ್ದಾರೆಯೇ ಹೊರತು ಒಂದಶದಲ್ಲಿಯೂ ಕೊರತೆ ಕಾಣಲು ಸಾಧ್ಯವೇ ಇಲ್ಲ. ನೀವೂ ನೋಡಲೇಬೇಕಾದ ಅವರ 5 ಸೂಪರ್ ಹಿಟ್ ಚಿತ್ರಗಳು ಇಲ್ಲಿವೆ ನೋಡಿ. 

ಭಾಗ್ಯವಂತರು

ಭಾಗ್ಯವಂತರು ನಾವೇ ಭಾಗ್ಯವಂತರು ಎಂದು ಹಾಡುತ್ತಾ ಕೌಟುಂಬಿಕ ಮೌಲ್ಯಗಳನ್ನು ಬಿತ್ತಿದ ಸಿನಿಮಾ. ಈ ಚಿತ್ರ ನೋಡಿದ ನಂತರ ಎಷ್ಟೋ ಕುಟುಂಬಗಳು ಒಂದಾದ ಪ್ರಸಂಗಗಳಿವೆ. ರಾಜ್ ಯಾವತ್ತೂ ಇಂಥ ಮೌಲ್ಯಗಳನ್ನು ಮೆಚ್ಚುತ್ತಿದ್ದವರು.

ಬಂಗಾರದ ಮನುಷ್ಯ

ಗ್ರಾಮಜೀವನ ಮತ್ತು ಕೃಷಿ ಅವರ ಮೆಚ್ಚಿನ ಕ್ಷೇತ್ರಗಳು. ಮೇರು ನಟ ಆದ ನಂತರವೂ ಅವರು ತಮ್ಮ ಹುಟ್ಟೂರಾದ ಗಾಜನೂರಿಗೆ ಹೋಗುತ್ತಿದ್ದರು. ತೋಟದಲ್ಲಿ ಅಡ್ಡಾಡುತ್ತಿದ್ದರು. ಪ್ರಕೃತಿಯ ಜೊತೆಗೆ ಕಾಲ ಕಳೆಯುತ್ತಿದ್ದರು.

ಜೀವನ ಚೈತ್ರ

ಸಾಂಸಾರಿಕ ಒಗ್ಗಟ್ಟು ಮತ್ತು ನಾವು ಸಮಾಜಕ್ಕೆ ತೀರಿಸಬೇಕಾದ ಋಣದ ಕುರಿತ ಚಿತ್ರ. ಇಲ್ಲಿ ನಾಯಕ ಮದ್ಯಪಾನದ ವಿರುದ್ಧ ಹೋರಾಡುವುದು, ಮಕ್ಕಳ ವಿರುದ್ಧವೇ ನಿಂತು ಸಾಮಾಜಿಕ ಮೌಲ್ಯವನ್ನು ಪ್ರತಿಪಾದಿಸುವುದು, ತತ್ವಜ್ಞಾನಿಯಾಗುವುದು ಇವೆಲ್ಲ ಎಲ್ಲರಿಗೂ ಮೆಚ್ಚುಗೆಯಾಗಿದ್ದವು.

ಒಡಹುಟ್ಟಿದವರು

ಅಣ್ಣ ತಮ್ಮಂದಿರ ಸಂಬಂಧ ಹೇಗಿರಬೇಕು ಅನ್ನುವುದನ್ನು ಈ ಚಿತ್ರ ಎತ್ತಿಹಿಡಿಯಿತು. ಹುಟ್ಟುತ್ತಾ ಅಣ್ತಮ್ಮ ಬೆಳೀತಾ ದಾಯಾದಿ ಎಂಬ ಮಾತನ್ನು ಸುಳ್ಳು ಮಾಡಿದಾಗಲೇ ಈ ಜಗತ್ತಿನಲ್ಲಿ ಬಾಳಲು ಸಾಧ್ಯ ಅನ್ನುವುದನ್ನು ಈ ಸಿನಿಮಾದಲ್ಲಿ ರಾಜ್ ತೋರಿಸಿಕೊಟ್ಟರು.

ಕಸ್ತೂರಿ ನಿವಾಸ

ಕೊಡುವುದರ ಮಹತ್ವವನ್ನು ಮತ್ತು ಸಂತೋಷವನ್ನು ಈ ಚಿತ್ರ ತೋರಿಸಿಕೊಟ್ಟಿತು. ಆಡಿಸಿನೋಡು ಬೀಳಿಸಿನೋಡು ಉರುಳಿಹೋಗದು ಎನ್ನುತ್ತಾ ಜೀವನದ ನಶ್ವರತೆ ಮತ್ತು ಒಳ್ಳೆಯತನದ ಮಹತ್ವವನ್ನು ಈ ಕತೆ ಸಾರಿತು.