ಲೆಕ್ಕ ತೆಗೆದು ನೋಡಿದರೆ 1990ರಲ್ಲಿ 62 ಸಿನಿಮಾಗಳು ಬಿಡುಗಡೆಯಾಗಿತ್ತು. ಈ ವರ್ಷ ಅದಕ್ಕಿಂತ ಏಳೆಂಟು ಸಂಖ್ಯೆ ಜಾಸ್ತಿಯಾಗಿರುವುದು ಬಿಟ್ಟರೆ ಅದನ್ನು ಗಣನೆಗೆ ತೆಗೆದುಕೊಳ್ಳುವ ಹಾಗಿಲ್ಲ. ಮತ್ತೆ ಮೂವತ್ತು ವರ್ಷಗಳಷ್ಟುಮುಂದಕ್ಕೆ ಹೋಗಬೇಕಾದರೆ ಚಿತ್ರರಂಗ ಮತ್ತೆ ಶ್ರಮಿಸಬೇಕು. ಒಂದು ಮಾಹಿತಿಯ ಪ್ರಕಾರ ಈಗಾಗಲೇ ಸೆನ್ಸಾರ್‌ ಆಗಿರುವ ಚಿತ್ರಗಳ ಸಂಖ್ಯೆ 300 ದಾಟಿದೆ. ಅವುಗಳೆಲ್ಲಾ ಥಿಯೇಟರ್‌ಗಳು ಬರುವ ಕಾಲ ಯಾವುದು ಎಂದು ಯೋಚಿಸಿದರೆ ಗಾಬರಿಯಾಗುತ್ತದೆ. ವಾರಕ್ಕೆ 5 ಸಿನಿಮಾ ಬಿಡುಗಡೆಯಾದರೂ 60 ವಾರಗಳು ಬೇಕು. ಅಲ್ಲಿಗೆ 2021 ಹಳೆಯ ಸಿನಿಮಾಗಳ ಸ್ಟಾಕ್‌ ಕ್ಲಿಯರೆನ್ಸ್‌ ವರ್ಷವಾಗಲಿದೆ. ಅದರಲ್ಲಿ ಕೆಲವು ವಾರಗಳು ಸ್ಟಾರ್‌ ಸಿನಿಮಾಗಳಿಗೆ ಮೀಸಲು. ಎಲ್ಲವೂ ಯೋಚಿಸಿದರೆ ಈ ವರ್ಷ ಸೆನ್ಸಾರ್‌ ಆಗಿರುವ ಬಹುತೇಕ ಸಿನಿಮಾಗಳು ಮುಂದಿನ ವರ್ಷ ರಿಲೀಸ್‌ ಆಗುವುದು ಕೂಡ ಡೌಟೇ. ಒಂದು ವೇಳೆ ರಿಲೀಸಾದರೂ ಪ್ರೇಕ್ಷಕನ ಕೃಪಾಕಟಾಕ್ಷ ಸಿಗುವುದು ಭಾರಿ ಕಷ್ಟವಿದೆ.

'ಮದಗಜ'ನಿಗೆ ಸಿಗ್ತು ಮೆಚ್ಚುಗೆ; ಟೀಸರ್‌ ಸಿಕ್ಕಾಪಟ್ಟೆ ವೈರಲ್!

ಇವಲ್ಲದೇ ಇನ್ನೂ ಸೆನ್ಸಾರ್‌ ಆಗಬೇಕಿರುವ ಸಿನಿಮಾಗಳೂ ಸಾಕಷ್ಟಿವೆ. ಅವುಗಳಲ್ಲಿ ಸೂಪರ್‌ಸ್ಟಾರ್‌ಗಳ ಬಿಗ್‌ ಬಜೆಟ್‌ ಸಿನಿಮಾಗಳ ಸಂಖ್ಯೆ ಹೆಚ್ಚಿದೆ. ಇವೆಲ್ಲದರ ಹೊರತಾಗಿ ಈಗ ಶೂಟಿಂಗ್‌ ಅಂಗಳಕ್ಕೆ ಇಳಿದಿರುವ ಚಿತ್ರಗಳ ಸಂಖ್ಯೆಯೂ ನೂರು ದಾಟಬಹುದೇನೋ. ಅಲ್ಲಿಗೆ 2021ರಲ್ಲಿ ಸಿನಿಮಾಗಳ ಅತಿವೃಷ್ಟಿಯಾದರೂ ಅಚ್ಚರಿ ಇಲ್ಲ. ಚಿತ್ರರಂಗಕ್ಕೆ ಸಿನಿಮಾಗಳೂ ಜಾಸ್ತಿಯಾದರೂ ಕಷ್ಟ, ಕಡಿಮೆಯಾದರೂ ನಷ್ಟ. ಇವೆಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರರಂಗದ ಹಿರಿಯರು ಯಾರಿಗೂ ತೊಂದರೆಯಾಗದಂತೆ ಮುಂದೆ ಹೆಜ್ಜೆ ಇಡುವ ತೀರ್ಮಾನ ತೆಗೆದುಕೊಳ್ಳುವುದು ಒಳಿತು. 2020 ಅಂತೂ ಹೋಯಿತು, 2021ರಲ್ಲಾದರೂ ಚಿತ್ರರಂಗ ಮೊದಲಿನ ವೈಭವಕ್ಕೆ ತರುವಂತೆ ಮಾಡುವುದು ಸದ್ಯದ ಮಟ್ಟಿಗೆ ಅವಶ್ಯ ಮತ್ತು ಅನಿವಾರ್ಯ.

ಮುರಗದಾಸ್‌ ಜೊತೆ ಕೈ ಜೋಡಿಸಿದ ವಿಜಯ್; 'ಹೊಂಬಾಳೆ' ದರ್ಬಾರ್! 

ಈ ವಾರ ನಾಲ್ಕು ಸಿನಿಮಾ

ಕಳೆದ ವರ್ಷ ಒಂದೇ ದಿನ 12 ಸಿನಿಮಾಗಳೂ ರಿಲೀಸ್‌ ಆದ ಉದಾಹರಣೆ ಇವೆ. ಆ ಡಜನ್‌ ಚಿತ್ರಗಳಲ್ಲಿ ಮರುವಾರಕ್ಕೆ ನಿಂತ ಸಿನಿಮಾಗಳ ಸಂಖ್ಯೆ ಕೇಳಬಾರದು. ಥಿಯೇಟರ್‌ಗಳಲ್ಲಿ ಶೇ.100 ಪ್ರೇಕ್ಷಕರು ಕೂರಬಹುದು ಎಂಬ ತೀರ್ಮಾನ ಬಂದರೆ ಮುಂದಿನವರ್ಷವೂ ಇಷ್ಟೇ ಸಂಖ್ಯೆಯ ಅಥವಾ ಇದಕ್ಕಿಂತ ಜಾಸ್ತಿ ಸಂಖ್ಯೆಯ ಸಿನಿಮಾಗಳು ರಿಲೀಸ್‌ ಆಗುತ್ತವೆ. ಅದಕ್ಕೆ ಮುನ್ನುಡಿ ಎಂಬಂತೆ ಈ ವಾರ ನಾನೊಂಥರ, ತನಿಖೆ, ಕಿಲಾಡಿಗಳು, ಆರ್‌ಎಚ್‌ 100 ಎಂಬ ನಾಲ್ಕು ಸಿನಿಮಾಗಳು ಬಿಡುಗಡೆಯಾಗಿವೆ. ಆ ನಿಟ್ಟಿನಲ್ಲಿ ಚಿತ್ರರಂಗ ಹಳೆಯ ವೈಭವಕ್ಕೆ ಮರಳುವ ಸೂಚನೆ ನೀಡಿದೆ. ಮುಂದಿನ ದಾರಿ ಕಠಿಣವಾಗಿದೆ. ಹುಷಾರಾಗಿ ನಡೆಯುವುದು ಎಲ್ಲರ ಒಳಿತಿಗೆ ಕಾರಣವಾಗಲಿದೆ.