ಹೆಂಡ್ತಿ ಹೈ ಹೀಲ್ಸ್ ವಿಚಾರದಲ್ಲಿ ಜಗಳ ಶುರುವಾಗಿದೆ. ಹೈ ಹೀಲ್ಸ್ ಬೇಡ ಎಂದು ಗಂಡ ಹೇಳಿದರೆ, ಬೇಕೆ ಬೇಕು ಎಂದು ಹೆಂಡ್ತಿ ಪಟ್ಟು ಹಿಡಿದಿದ್ದಾಳೆ. ಈ ಜಗಳ ಇಲ್ಲಿಗೆ ಮುಗಿದಿಲ್ಲ, ಹೀಲ್ಸ್ ಕೊಡಿಸದ ಗಂಡನ ವಿರುದ್ದ ಪೊಲೀಸ್ ಠಾಣೆ ಮೆಟ್ಟೇಲೇರಿದ್ದಾಳೆ.
ಆಗ್ರಾ(ಫೆ.02) ಪತ್ನಿ ಬೇಡಿಕೆಯನ್ನು ನಿರ್ಲಕ್ಷಿಸಿದರೆ ಅಪಾಯ ತಪ್ಪಿದ್ದಲ್ಲ. ಇದೀಗ ಈ ಸಾಲಿಗೆ ಹೊಸ ಪ್ರಕರಣವೊಂದು ಸೇರಿಕೊಂಡಿದೆ. ಇಲ್ಲಿ ಪತ್ನಿ ಹೈ ಹೀಲ್ಸ್ ಕೊಡಿಸುವಂತೆ ಕೇಳಿದ್ದಾಳೆ. ಇರುವ ಹೀಲ್ಸ್ ಚಪ್ಪಲಿಯನ್ನು ಹಾಕಲು ಅವಕಾಶ ನೀಡಿಲ್ಲ. ಇಷ್ಟೇ ನೋಡಿ. ಪತಿ ಹಾಗೂ ಪತ್ನಿ ನಡುವೆ ಜಗಳ ಶುರುವಾಗಿದೆ. ನೇರವಾಗಿ ಪೊಲೀಸ್ ಠಾಣೆ ಮೆಟ್ಟೆಲೇರಿದ ಮಹಿಳೆ ಗಂಡನ ವಿರುದ್ದ ದೂರು ನೀಡಿದ್ದಾಳೆ. ಪತಿ ಹೈ ಹೀಲ್ಸ್ ಕೊಡಿಸುತ್ತಿಲ್ಲ, ಹೀಲ್ಸ್ ಹಾಕಲು ಅವಕಾಶ ನೀಡುತ್ತಿಲ್ಲ ಎಂದು ದೂರು ನೀಡಿದ್ದಾಳೆ. ಪತಿ ಪತ್ನಿಯ ಜಗಳ ಪೊಲೀಸರ ತಲೆನೋವು ಹೆಚ್ಚಿಸಿದ ಘಟನೆ ಆಗ್ರಾದಲ್ಲಿ ನಡೆದಿದೆ.
2024ರಲ್ಲಿ ಇವರಿಬ್ಬರಿಗೂ ಮದುವೆ ಆಗಿದೆ. ಕಳೆದ ಒಂದು ವರ್ಷದಿಂದ ಜೊತೆಯಾಗಿ ಸಂಸಾರ ಸಾಗಿಸುತ್ತಿದ್ದಾರೆ. ಇದರ ನಡುವೆ ಸಣ್ಣ ಪುಟ್ಟ ಜಗಳ ಮನಸ್ತಾಪಗಳು ಬಂದಿದೆ. ಅವೆಲ್ಲವನ್ನು ನಿವಾರಿಸಿಕೊಂಡು ಸಾಗಿದ್ದಾರೆ. ಆದರೆ ಹೈ ಹೀಲ್ಸ್ ವಿಚಾರ ಮಾತ್ರ ಅಂತಾರಾಷ್ಟ್ರೀಯ ಗಡಿ ಸಮಸ್ಯೆಗಿಂತ ಬಿಗಡಾಯಿಸಿದೆ. ಸಂಬಂಧ ಹಳಸಿದೆ, ಮಾತುಗಳು ರಾಜಕೀಯ ನಾಯಕರಿಗಿಂತ ಪ್ರಖರವಾಗಿದೆ. ಏಟಿಗೆ ಏದಿರೇಟು, ತಿರುಗೇಟು, ಹಳೇ ಘಟನೆಗಳ ಮೆಲುಕು, ಪ್ರತ್ಯುತ್ತರ ಹೆಚ್ಚಾಗಿದೆ. ಪರಿಣಾಮ ಗಂಡ ಹೆಂಡತಿ ಹಾವು ಮುಂಗುಸಿ ರೀತಿ ಆಗಿದ್ದಾರೆ. ಪ್ರಕರಣ ಪೊಲೀಸ್ ಠಾಣೆಯಿಂದ ಇದೀಗ ಕೌಟುಂಬಿಕ ಕೌನ್ಸಿಲಿಂಗ್ ಸೆಂಟರ್‌ಗೆ ವರ್ಗಾವಣೆ ಆಗಿದೆ.
ಕೋವಿಡ್ ಬಳಿಕ ಮಹಿಳೆಯರಿಗೆ ಬೇಡವಾಯ್ತು ಹೈ ಹೀಲ್ಸ್ ಫ್ಯಾಶನ್, ಕಾರಣ ಬಿಚ್ಚಿಟ್ಟ ಅಧ್ಯಯನ!
ಏನಿದು ಹೈ ಹೀಲ್ಸ್ ಜಗಳ?
ಮಹಿಳೆ ಚಿಕ್ಂದಿನಿಂದಲೂ ಹೈ ಹೀಲ್ಸ್ ಹಾಕುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಪೋಷಕರು ತನಗೆ ಹೈ ಹೀಲ್ಸ್ ನಿರಾಕರಿಸಿಲ್ಲ. ಆದರೆ ಮದುವೆ ಬಳಿಕ ಗಂಡನ ಹೀಲ್ಸ್ ನಿರಾಕರಿಸಿದ್ದಾನೆ ಎಂದು ದೂರು ನೀಡಿದ್ದಾಳೆ. ಆದರೆ ಗಂಡನ ವರ್ಶನ್‌ನಲ್ಲಿ ಸಂಪೂರ್ಣ ಚಿತ್ರಣ ಬಯಲಾಗುತ್ತಿದೆ. ಮದುವೆ ಬಳಿಕ ಹೈ ಹೀಲ್ಸ್ ಕೊಡಿಸಲು ಹೆಂಡತಿ ಸೂಚಿಸಿದ್ದಾಳೆ. ಹೆಂಡತಿ ಬೇಡಿಕೆಯನ್ನು ಆರಂಭದಲ್ಲಿ ಪತಿ ನಿರ್ಲಕ್ಷಿಸಿದ್ದಾನೆ. ಆದರೆ ಇದೇ ವಿಚಾರವಾಗಿ ಪತ್ನಿ ಕೋಪಗೊಂಡ ಕಾರಣ, ಮರು ಮಾತನಾಡದೇ ಕೆಲ ದಿನಗಳಲ್ಲಿ ಹೈ ಹೀಲ್ಸ್ ಕೊಡಿಸಿದ್ದಾನೆ.
ಪತ್ನಿಗೆ ಹೈ ಹೀಲ್ಸ್ ಕೊಡಿಸಿದ ಪತಿ ಕೂಡ ನಿರಾಳರಾಗಿದ್ದಾನೆ. ಇತ್ತ ಪತ್ನಿ ಹೀಲ್ಸ್ ಸಿಕ್ಕ ಖುಷಿಯಲ್ಲಿ ತೇಲಾಡಿದ್ದಾಳೆ. ಆದರೆ ಹೈ ಹೀಲ್ಸ್ ಧರಿಸಿ ನಡೆಯುವಾಗ ಪತ್ನಿ ದೊಪ್ಪನೆ ಬಿದ್ದಿದ್ದಾಳೆ. ಇದರಿಂದ ಕೈಗೆ ಗಾಯವಾಗಿತ್ತು. ಕೈಗಳ ಎಲುಬಿಗೆ ಗಾಯವಾಗಿದ್ದ ಕಾರಣ ಕೆಲ ದಿನಗಳ ವಿಶ್ರಾಂತಿ ಪಡೆಯಬೇಕಾಗಿ ಬಂದಿತ್ತು. ಒಂದೂವರೆ ತಿಂಗಳು ವಿಶ್ರಾಂತಿಗೆ ಜಾರಿದ ಬಳಿಕ ಅಸಲಿ ಹೈ ಹೀಲ್ಸ್ ಕತೆ ಆರಂಭಗೊಳ್ಳುತ್ತದೆ.
ಸಂಪೂರ್ಣ ಚೇತರಿಸಿಕೊಂಡ ಪತ್ನಿಗೆ ಗಂಡ ಖಡಕ್ ಸೂಚನೆ ನೀಡಿದ್ದಾನೆ. ಹೈ ಹೀಲ್ಸ್ ಧರಿಸಲು ನಿರಾಕರಿಸಿದ್ದಾನೆ. ಹೈ ಹೀಲ್ಸ್ ಧರಿಸಿ ನಡೆಯುವಾಗ ಮತ್ತೆ ಬಿದ್ದರೆ ಸಮಸ್ಯೆಗಳು ಹೆಚ್ಚಾಗಲಿದೆ. ಹೀಗಾಗಿ ಹೀಲ್ಸ್ ಬೇಡ ಎಂದಿದ್ದಾನೆ. ಇತ್ತ ಪತ್ನಿ ಖರೀದಿಸಿರುವ ಹೀಲ್ಸ್ ಸರಿಯಾಗಿಲ್ಲ, ಬೇರೆ ಹೀಲ್ಸ್ ಕೊಡಿಸುವಂತೆ ಸೂಚಿಸಿದ್ದಾಳೆ. ಹೀಲ್ಸ್ ಉತ್ತಮ ಗುಣಮಟ್ಟದಲ್ಲ, ಹೀಗಾಗಿ ಬಿದ್ದಿದ್ದೇನೆ. ಇದರ ಹೀಲ್ಸ್ ಸ್ವಲ್ಪ ಕಿತ್ತು ಹೋಗಿದೆ ಎಂದು ಗಂಡನ ಮುಂದೆ ಬೇಡಿಕೆ ಇಟ್ಟಿದ್ದಾಳೆ. ಆದರೆ ಒಮ್ಮೆ ಬಿದ್ದು ಸಂಕಷ್ಟ ಅನುಭವಿಸಿ ಆಗಿದೆ. ಹೀಗಾಗಿ ಹೀಲ್ಸ್ ಬೇಡ ಎಂದು ಖಡಾಖಂಡಿತವಾಗಿ ಹೇಳಿದ್ದಾನೆ.
ಗಂಡನ ಈ ಮಾತಿಗೆ ಜಗಳ ಆರಂಭಗೊಂಡಿದೆ. ಹೈ ಹೀಲ್ಸ್ ವಿಚಾರದಲ್ಲಿ ಇಬ್ಬರು ಜಗಳವಾಡಿದ್ದಾರೆ. ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ ಪತ್ನಿ ಗಂಡನ ವಿರುದ್ದ ದೂರು ನೀಡಿದ್ದಾಳೆ. ನಾನು ಹೈ ಹೀಲ್ ಸ್ಯಾಂಡಲ್ ಕೇಳಿದ್ದೆ. ಆದರೆ ಗಂಡ ‘ದುಡ್ಡು ಬಂದಾಗ ತರ್ತೀನಿ’ ಅಂತ ಹೇಳಿ ತಪ್ಪಿಸಿಕೊಂಡ. ಎಂಟು ತಿಂಗಳು ಆಗಿದೆ, ಸ್ಯಾಂಡಲ್ ತಂದಿಲ್ಲ. ಪದೇ ಪದೇ ಕೇಳಿದ್ದಕ್ಕೆ ಜಗಳ ಮಾಡಿ ಹೊಡೆದ ಎಂದು ಪತ್ನಿ ದೂರಿದ್ದಾಳೆ. ಈ ಘಟನೆಯಿಂದ ಒಂದು ತಿಂಗಳಿನಿಂದ ತವರು ಮನೆಯಲ್ಲಿದ್ದೇನೆ ಅಂತ ಹೇಳಿದ್ದಾಳೆ. ಇತ್ತ ಪೊಲೀಸರರು ಕೌಟುಂಬಿಕ ಕೌನ್ಸಲಿಂಗ್ ಕೇಂದ್ರಕ್ಕೆ ಈ ಪ್ರಕರಣ ಕಳುಹಿಸಿದ್ದಾರೆ. ಕೌನ್ಸಿಲರ್ ಡಾ. ಸತೀಶ್ ಖಿರ್ವಾರ್ ಇಬ್ಬರನ್ನೂ ಸಮಾಧಾನ ಮಾಡಿ ರಾಜಿ ಮಾಡಿಸಿದ್ದಾರೆ. ಆದರೆ ಮತ್ತೆ ಹೀಲ್ಸ್ ಜಗಳ ಶುರುವಾದರೂ ಅಚ್ಚರಿ ಇಲ್ಲ.
ಅಯ್ಯಯ್ಯೋ ಕಾಲ್ತಪ್ಪಿದ ಹೈಹೀಲ್ಡ್ ಬ್ಯಾಲೆನ್ಸ್ : ಆಸ್ಕರ್ ಸಮಾರಂಭದ ರತ್ನಗಂಬಳಿ ಮೇಲೆಯೇ ಮಗುಚಿ ಬಿದ್ದ ನಟಿ
