ಕೆಲಸ ಮಾಡುವಾಗ ಎಲ್ಲರಿಗೂ ಈಗ ಸ್ಟ್ರೆಸ್. ಕೂಲ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಕಚೇರಿ ಇರಲಿ, ಸ್ವಂತ ಉದ್ಯೋಗವಿರಲಿ ಸವಾಲು ಸಾಮಾನ್ಯ. ಅದನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನಮಗಿರಬೇಕು. ಕಚೇರಿಯಲ್ಲಿ ಕಾಡುವ ಸಮಸ್ಯೆಗಳಿಗೆ ಪರಿಹಾರ ನಮ್ಮಲ್ಲಿಯೇ ಇದೆ ಎಂಬ ಸತ್ಯ ನಮಗೆ ಗೊತ್ತಿರಬೇಕು.
ಜೀವನದಲ್ಲಿ ಸವಾಲುಗಳು ಸಾಮಾನ್ಯ. ಸೋಲು – ಗೆಲುವು ಎರಡನ್ನೂ ನೀವು ಎದುರಿಸಬೇಕಾಗುತ್ತದೆ. ಎಲ್ಲ ವೃತ್ತಿಯಲ್ಲೂ ಸಮಸ್ಯೆಗಳು ಇದ್ದೇ ಇರುತ್ವೆ. ಈ ವೃತ್ತಿ ಜೀವನದಲ್ಲಿ ಸವಾಲಿದೆ ಎಂದು ನೀವು ಇನ್ನೊಂದಕ್ಕೆ ಧುಮುಕಿದ್ರೆ ಅಲ್ಲಿ ಕೂಡ ಇನ್ನೊಂದು ಸಮಸ್ಯೆ ನಿಮ್ಮನ್ನು ಕಾಡುತ್ತದೆ. ನೀವು ಮಾಡುವ ಕೆಲಸವನ್ನು ನೀವು ಪ್ರೀತಿಸುವುದರ ಜೊತೆಗೆ ಕೆಲಸದ ಸ್ಥಳದಲ್ಲಿ ಕಾಡುವ ಕಷ್ಟಗಳನ್ನು ನಿಭಾಯಿಸಲು ಕಲಿತರೆ ನಿಮ್ಮ ದಾರಿಗೆ ಯಾವುದೇ ಅಡೆತಡೆಯುಂಟಾಗುವುದಿಲ್ಲ.
ಒಳ್ಳೆಯ ಕಂಪನಿ (Company) ಯಲ್ಲಿ ಉತ್ತಮ ಸಂಬಳ (Salary) ಪಡೆಯಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಹಾಗೆಯೇ ಕೆಲಸ ಮಾಡು ಕಂಪನಿಯಲ್ಲಿ ಉನ್ನತ ಹುದ್ದೆಗೇರುವ ಆಸೆ ಅನೇಕರಿಗಿರುತ್ತದೆ. ಇದು ಹೇಳುವಷ್ಟು ಸುಲಭವಲ್ಲವಾದ್ರೂ ಸಾಧ್ಯವಿಲ್ಲ ಎನ್ನುವಷ್ಟು ಕಷ್ಟವಲ್ಲ. ನಮ್ಮ ಆಲೋಚನೆಗಳನ್ನು, ವರ್ತನೆಗಳನ್ನು ಬದಲಿಸಿಕೊಂಡ್ರೆ ನಮ್ಮ ವೃತ್ತಿ (Career) ಜೀವನದಲ್ಲಿ ಯಶಸ್ಸು ಖಂಡಿತ ಸಾಧ್ಯ. ಕಚೇರಿ (Office) ಯಲ್ಲಿ ಬಾಸ್ ಕೈ ಕೆಳಗೆ ಕೆಲಸ ಮಾಡುವಾಗ ಅನೇಕ ಸಮಸ್ಯೆಗಳು ನಮಗೆ ಎದುರಾಗುತ್ತವೆ. ಕೆಲವೊಮ್ಮೆ ಅನಾವಶ್ಯಕವಾಗಿ ನಾವು ಬೈಸಿಕೊಳ್ಳಬೇಕಾಗುತ್ತದೆ. ಸಣ್ಣ ಸಮಯದಲ್ಲಿ ಗುರಿ ಮುಟ್ಟಲು ಹಗಲಿರುಳು ಶ್ರಮಿಸಬೇಕಾಗುತ್ತದೆ. ಸಹೋದ್ಯೋಗಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಬೇಕಾಗುತ್ತದೆ. ಕೆಲಸದ ವೇಳೆ ಜಗಳ, ನಿಂದನೆಗಳನ್ನು ಕೇಳಬೇಕಾಗುತ್ತದೆ. ಕೆಲವರ ಮನಸ್ಸಿಗೆ ನೋವುಂಟು ಮಾಡಬೇಕಾಗುತ್ತದೆ. ನಮ್ಮ ಮೇಲೆ ಕೆಲಸದ ಒತ್ತಡ ಹೆಚ್ಚಾದಾಗ ಕೋಪ ನೆತ್ತಿಗೇರುತ್ತದೆ. ಇದ್ರಿಂದ ನಾವು ಅನಾವಶ್ಯಕವಾಗಿ ಎಲ್ಲರ ಮೇಲೆ ಕೂಗಾಟ ಶುರು ಮಾಡ್ತೇವೆ. ಇದ್ರಿಂದ ಕಚೇರಿಯಲ್ಲಿ ನಮ್ಮ ಇಮೇಜ್ ಹಾಳಾಗುತ್ತದೆ. ಇದು ಕೆಲಸ ಮೇಲೆ ಪ್ರಭಾವ ಬೀರಬಹುದು. ನೀವು ಉದ್ಯೋಗ ಕಳೆದುಕೊಳ್ಳುವ ಹಂತಕ್ಕೆ ನಿಮ್ಮನ್ನು ತಂದು ನಿಲ್ಲಿಸಬಹುದು. ಹಾಗಾಗಿ ಕಚೇರಿಯಲ್ಲಿ ಎಲ್ಲರ ಜೊತೆ ಬೆರೆತು, ಯಾವುದೇ ಟೆನ್ಷನ್ ಇಲ್ಲದೆ, ಆರಾಮವಾಗಿ ಕೆಲಸ ಮಾಡುವುದು ಮುಖ್ಯ. ಅದಕ್ಕೆ ಕೆಲ ಟ್ರಿಕ್ಸ್ ಫಾಲೋ ಮಾಡ್ಬೇಕಾಗುತ್ತದೆ.
ಯಾರು ನೋಡಲಿ ಸರಿಯಾಗಿ ನಿದ್ರೆ ಬರೋಲ್ಲ ಅಂತಾರೆ, ಅದಕ್ಕೆ ಈ ಟೀ ಬೆಸ್ಟ್!
ನಿಮ್ಮ ಕೆಲಸದ ಕ್ರೆಡಿಟ್ ಬೇರೆಯವರಿಗೆ ಹೋದಾಗ ಏನು ಮಾಡ್ಬೇಕು? : ರಾಜಕೀಯ ಎಲ್ಲ ಕಡೆ ಇರುತ್ತೆ. ಕಚೇರಿಯಲ್ಲೂ ಇದು ಕಾಮನ್. ಅನೇಕ ಬಾರಿ ನೀವು ಕಷ್ಟಪಟ್ಟು ಮಾಡಿದ ಕೆಲಸದ ಕ್ರೆಡಿಟ್ ಬೇರೆಯವರಿಗೆ ಹೋಗಿರುತ್ತದೆ. ನಾನೇ ಮಾಡಿದ್ದೇನೆ ಎಂದು ಇನ್ನೊಬ್ಬರು ಬಾಸ್ ಮುಂದೆ ಹೇಳಿರ್ತಾರೆ. ಆಗ ನಿಮಗೆ ಕೋಪ ಬರೋದು ಸಹಜ. ಈ ಸಂದರ್ಭದಲ್ಲಿ ನೀವು ಆ ವ್ಯಕ್ತಿ ಜೊತೆ ಮಾತನಾಡಬೇಕು. ನಿಮ್ಮ ವರ್ತನೆ ನನಗೆ ಇಷ್ಟವಾಗಿಲ್ಲವೆಂದು ಅವರಿಗೆ ಹೇಳಬೇಕು. ಕೂಗಾಡಿ ಹೇಳುವ ಬದಲು ನಿಧಾನವಾಗಿ ಅವರಿಗೆ ವಿಷ್ಯ ಮನವರಿಕೆ ಮಾಡಿ. ಒಂದ್ವೇಳೆ ಅವರು ಒಪ್ಪದೆ ಹೋದ್ರೆ ಅವರಿಗಿಂತ ನೀವೆಷ್ಟು ಆ ಪ್ರಾಜೆಕ್ಟ್ ಬಗ್ಗೆ ತಿಳಿದಿದ್ದೀರಿ ಎಂಬುದನ್ನು ಹೇಳುವ ಮೂಲಕ ನಿಮ್ಮನ್ನು ನೀವು ಸಾಭೀತುಪಡಿಸಿಕೊಳ್ಳಿ.
ಸಮಯ ಮುಗಿದ್ಮೇಲೆ ಕೆಲಸ ಬಂದ್ರೆ? : ಕಚೇರಿ ಕೆಲಸ ಮುಗಿಸಿ ಮನೆಗೆ ಹೊರಡುವಾಗ ಬಾಸ್ ನಿಮಗೊಂದು ಕೆಲಸ ನೀಡ್ತಾರೆ. ಇಲ್ಲವೆ ರಜೆಯಲ್ಲಿ ಆರಾಮವಾಗಿ ಮನೆಯಲ್ಲಿರುವಾಗ ಕೆಲಸ ಮೈಮೇಲೆ ಬರುತ್ತದೆ. ಈ ಸಂದರ್ಭದಲ್ಲಿ ನೀವು ಕಿರಿಕಿರಿ ಅನುಭವಿಸಿ, ನೇರಾನೇರವಾಗಿ ಕೆಲಸವನ್ನು ತಿರಸ್ಕರಿಸುವ ಬದಲು, ನಿಮಗೆ ಬೇರೆ ಕಮಿಟ್ಮೆಂಟ್ ಇದೆ. ಹಾಗಾಗಿ ಈ ಕೆಲಸ ಮಾಡಲು ಸಾಧ್ಯವಾಗ್ತಿಲ್ಲವೆಂದು ಸಮಾಧಾನದಿಂದ ಹೇಳಿದ್ರೆ ಮುಂದಿರುವ ವ್ಯಕ್ತಿ ನಿಮ್ಮ ಸಮಸ್ಯೆ ಅರ್ಥಮಾಡಿಕೊಳ್ಳುತ್ತಾನೆ.
ಹೈಪರ್‌ಟೆನ್ಷನ್ ಕಡಿಮೆ ಮಾಡಲು ಯೋಗ ಮಾಡಿ
ಇಲ್ಲ ಎನ್ನುವ ಮೊದಲು : ಎಲ್ಲ ಕೆಲಸವನ್ನು ನೀವೇ ಮಾಡುವುದು ಸೂಕ್ತವಲ್ಲ. ಕೆಲ ಸಂದರ್ಭದಲ್ಲಿ ನನ್ನಿಂದ ಸಾಧ್ಯವಿಲ್ಲ ಎಂದು ಹೇಳುವ ಅನಿವಾರ್ಯತೆ ಎದುರಾಗುತ್ತದೆ. ಆಗ ನೀವು ಒರಟಾಗಿ ಇಲ್ಲ ಎನ್ನುವ ಬದಲು ನಮ್ರತೆಯನ್ನು ರೂಢಿಸಿಕೊಳ್ಳಬೇಕು. ಇಲ್ಲಿ ಮಾತಿನ ರಾಜತಾಂತ್ರಿಕತೆ ನಿಮಗೆ ತಿಳಿದಿರಬೇಕು.
ಕ್ಷಮೆ ಹಾಗೂ ತಪ್ಪೊಪ್ಪಿಗೆ ಮುಖ್ಯ : ತಪ್ಪುಗಳನ್ನು ಪ್ರತಿಯೊಬ್ಬರೂ ಮಾಡ್ತಾರೆ. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದು ಮುಖ್ಯ. ನಿಮ್ಮಿಂದ ಆದ ತಪ್ಪನ್ನು ನೀವು ಮುಚ್ಚಿಟ್ಟು ಅದು ನಿಮ್ಮ ತಂಡದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದ್ರೆ ಆಗ ಸಮಸ್ಯೆ ದೊಡ್ಡದೆನಿಸುತ್ತದೆ. ಅದ್ರ ಬದಲು ಮಾಡಿದ ತಪ್ಪನ್ನು ನೀವು ಒಪ್ಪಿಕೊಂಡು ಕ್ಷಮೆ ಕೇಳಿದ್ರೆ ಒಳ್ಳೆಯದು. ಇದ್ರಿಂದ ನಿಮ್ಮ ಇಮೇಜ್ ಹಾಳಾಗುವುದಿಲ್ಲ.