ಚೌಲ್ಟ್ರಿಯಲ್ಲಿ ಎಲ್ಲರೂ ಸೇರಿದ್ದಾರೆ. ವರ ಹಾೂ ವಧು ಕೂಡ ಮಂಟಪದಲ್ಲಿ ನಿಂತಿದ್ದಾರೆ. ಆದರೆ ಮದುವೆ ಮಾತ್ರ ಮಂಟಪದಲ್ಲಿ ನಡೆಯಲಿಲ್ಲ. ನಡೆದಿದ್ದು ಪೊಲೀಸ್ ಠಾಣೆಯಲ್ಲಿ. ಏನಿದು ಟ್ವಿಸ್ಟ್? 

ಸೂರತ್(ಫೆ.03) ಮದುವೆ ಚೌಲ್ಟ್ರಿ ಸಿಂಗಾರಗೊಂಡಿದೆ. ವಧುವಿನ ತಂದೆ ಎಲ್ಲಾ ತಯಾರಿ ಮಾಡಿದ್ದಾರೆ. ಸಂಪ್ರದಾಯ ಪ್ರಕಾರ ಮದುವೆ ಮಹೋತ್ಸವ ಆರಂಭಗೊಂಡಿದೆ. ವಧು ಹಾಗೂ ವರ ಇಬ್ಬರೂ ವೇದಿಕೆಯಲ್ಲಿ ನಿಂತಿದ್ದಾರೆ. ಆಪ್ತರು ಕುಟುಂಬಸ್ಥರು ಚೌಲ್ಟ್ರಿಗೆ ಆಗಮಿಸಿದ್ದಾರೆ.ಮದುವೆ ಹಾಲ್ ತುಂಬಿದೆ. ಚೌಲ್ಟ್ರಿಯಲ್ಲಿ ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆ ಪೊಲೀಸ್ ಠಾಣೆಗೆ ಶಿಫ್ಟ್ ಆಗಿದೆ. ಕೊನೆಗೆ ವಧು ಹಾಗೂ ವರ ಪೊಲೀಸರು ಹಾಗೂ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಪೊಲೀಸ್ ಠಾಣೆಯಲ್ಲಿ ಮದುವೆಯಾದ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ.

ಇತ್ತೀಚೆಗೆ ಮದುವೆಗಳಲ್ಲಿ ನಡೆಯುವ ಜಟಾಪಟಿ ರೀತಿಯಲ್ಲೇ ಇಲ್ಲೊಂದು ಸಮಸ್ಯೆ ಎದುರಾಗಿತ್ತು. ಈ ಸಮಸ್ಸೆಯಿಂದ ಮದುವೆ ಚೌಲ್ಟ್ರಿ ಬದಲು ಪೊಲೀಸ್ ಠಾಣೆಯಲ್ಲಿ ನಡೆದಿದೆ. ರಾಹುಲ್ ಪ್ರಮೋದ್ ಮಹಾಂತೋ ಹಾಗೂ ಅಂಜಲಿ ಕುಮಾರಿ ನಡುವಿನ ಮದುವೆ ನಿಶ್ಚಯವಾಗಿತ್ತು. ಮದುವೆ ಜವಾಬ್ದಾರಿ ವಧುವಿನ ಪೋಷಕರದ್ದು. ಹೀಗಾಗಿ ಕಳೆದ ಹಲವು ತಿಂಗಳಿನಿಂದ ಮಗಳ ವಿವಾಹಕ್ಕೆ ವಧುವಿನ ತಂದೆ ತಯಾರಿ ಮಾಡಲು ಆರಂಭಿಸಿದ್ದಾರೆ. ಆಮಂತ್ರಣ ಪತ್ರಿಕೆ ಹಂಚುವಿಕೆ ಸೇರಿದಂತೆ ಎಲ್ಲಾ ತಯಾರಿಗಳನ್ನು ಶುರು ಮಾಡಿದ್ದಾರೆ. 

ಕೂಲರ್‌ನಿಂದ ಮದುವೆ ಮಂಟಪ ಕೂಲ್ ಕೂಲ್ ಆದರೆ ಮದುವೆ ಕ್ಯಾನ್ಸಲ್!

ಕೊನೆಗೂ ಮದುವೆ ದಿನ ಬಂದಿದೆ. ಆಹ್ವಾನಿತರಿಗೆ ಊಟ, ವಿವಿಧ ಖಾದ್ಯ, ತಿನಿಸು ಸೇರಿದಂತೆ ಎಲ್ಲವೂ ರೆಡಿಯಾಗಿದೆ. ಒಂದೆಡೆ ವೇದಿಕೆಯಲ್ಲಿ ವರ ಹಾಗೂ ವಧು ಕುಳಿತಿದ್ದಾರೆ. ಹಿಂದೂ ಸಂಪ್ರದಾಯದಂತೆ ಮದುವೆ ಕಾರ್ಯಗಳು ಆರಂಭಗೊಂಡಿದೆ. ಮತ್ತೊಂದೆಡೆ ಊಟಕ್ಕೆ ಅನುವು ಮಾಡಿಕೊಡಲಾಗಿದೆ. ವರ ಕಡೆಯವರ ಬಳಿ ಮೊದಲೇ ಎಷ್ಟು ಮಂದಿ ಮದುವೆಗೆ ಆಗಮಿಸುತ್ತಾರೆ ಅನ್ನೋ ಲೆಕ್ಕ ಕೇಳಲಾಗಿತ್ತು. ಊಟದ ವ್ಯವಸ್ಥೆಗೆ ಅನುಕೂಲವಾಗುವಂತೆ ಈ ಲೆಕ್ಕ ಕೇಳಲಾಗಿತ್ತು. ಈ ವೇಳೆ ಇಂತಿಷ್ಟು ಮಂದಿಯ ಲೆಕ್ಕ ನೀಡಿದ್ದರು. ಆದರೆ ಮದುವೆಗೆ ಮೂರು ಪಟ್ಟು ಹೆಚ್ಚು ಜನ ವರನ ಕಡೆಯಿಂದ ಬಂದಿದ್ದಾರೆ. ಇದರಿಂದ ಊಟದ ಅಭಾವ ಉಂಟಾಗಿದೆ.

ಇದು ವರನ ಕಡೆಯವರನ್ನು ರೊಚ್ಚಿಗೆಬ್ಬಿಸಿದೆ. ವರನ ಕುಟುಂಬಸ್ಥರು ಊಟ ಕೊರತೆಯನ್ನು ರಂಪಾಟ ಮಾಡಿದ್ದಾರೆ. ಇತ್ತ ವರ ಕೂಡ ಜಗಳಕ್ಕೆ ನಿಂತಿದ್ದಾನೆ. ಊಟ ನೀಡದೇ ಅವಮಾನಿಸಲಾಗಿದೆ ಎಂದು ವರ ಮಂಟಪದಿಂದ ಹೊರನಡೆದಿದ್ದಾನೆ. ಬಳಿಕ ವರನ ಕುಟುಂಬಸ್ಥರ ಜೊತೆ ವಾಪಾಸ್ ಮನೆಗೆ ತೆರಳಿದ್ದಾನೆ. ಇತ್ತ ಹುಡುಗಿ, ಪೋಷಕರು ಹಾಗೂ ಆಪ್ತರು ಕಂಗಲಾಗಿದ್ದಾರೆ. ಇಷ್ಟೆಲ್ಲಾ ಮಾಡಿ ಮದುವೆ ಹೀಗಾಯ್ತಲ್ಲ ಅನ್ನೋ ನೋವಿನಲ್ಲಿ ಗಳಗಳನೇ ಅತ್ತಿದ್ದಾರೆ.

Scroll to load tweet…

ವರ ಹಾಗೂ ಆತನ ಕುಟುಂಬಸ್ಥರ ರಂಪಾಟ ನೋಡಿ ದೃತಿಗೆಡದ ವಧು, ನೇರವಾಗಿ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾಳೆ. ತಕ್ಷಣವೇ ಪೊಲೀಸರ ತಂಡ ಚೌಲ್ಟ್ರಿಗೆ ಆಗಮಿಸಿದೆ. ಮಾಹಿತಿ ಪಡೆದುಕೊಂಡು ನೇರವಾಗಿ ವರ ಮನೆಗೆ ತೆರಳಿದೆ. ಬಳಿಕ ವರ ಹಾಗೂ ಕುಟುಂಬಸ್ಥರ ಜೊತೆ ಪೊಲೀಸರು ಮಾತುಕತೆ ನಡೆಸಿದ್ದಾರೆ. ಪರಿಸ್ಥಿತಿ ವಿವರಿಸಿ ಮನ ಒಲಿಸಿದ್ದಾರೆ. ಅಷ್ಟೊತ್ತಿಗೆ ಸಂಜೆಯಾಗಿದೆ. ಬಳಿಕ ಎರಡು ಕುಟುಂಬಸ್ಥರು ಹಾಗು ನವಜೋಡಿಯನ್ನು ಪೊಲೀಸ್ ಠಾಣೆಗೆ ಕರೆಯಿಸಿದ್ದಾರೆ.

ಪೊಲೀಸರ ಸಮ್ಮುಖದಲ್ಲಿ, ಪೊಲೀಸ್ ಠಾಣೆಯಲ್ಲಿ ಮದುವೆ ಮಾಡಲಾಗಿದೆ. ವರ ಹಾಗೂ ವಧು ಹಾರ ಬದಲಾಯಿಸಿದ್ದಾರೆ. ಹೂವುಗಳ ಮೂಲಕ, ಚಪ್ಪಾಳೆ ಮೂಲಕ ನವ ಜೋಡಿಗೆ ಶುಭಾಶಯ ಕೋರಲಾಗಿದೆ. ಚೌಲ್ಟ್ರಿಯಲ್ಲಿ ನಡೆಯಬೇಕಿದ್ದ ಮದುವೆ ಕೊನೆಗೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಈ ಮೂಲಕ ಪೊಲೀಸರು ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ. ಇತ್ತ ಮದುವೆ ಹಾಲ್‌ನಲ್ಲಿ ಕಾಯುತ್ತಿದ್ದ ಮಂದಿಗೆ ಶಾಕ್ ಆಗಿದೆ. ಮದುವೆ ಹಾಲ್ ಬುಕ್ ಮಾಡಿ ಕೊನೆಗೆ ಪೊಲೀಸ್ ಠಾಣೆಯಲ್ಲಿ ಮದುವೆಯಾದ ಘಟನೆ ಇದೀಗ ಸೂರತ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.

ಮಟನ್ ಸಾರು ಕೊಟ್ಟಿಲ್ಲ, ಉಂಗುರ ಬದಲಾಯಿಸಿದ ಬೆನ್ನಲ್ಲೇ ವರನ ಕುಟುಂಬದಿಂದ ಮದುವೆ ರದ್ದು!