Asianet Suvarna News Asianet Suvarna News

ಜಪಾನೀಯರು ಅಷ್ಟು ಹಣ ಉಳಿಸೋದು ಹೇಗೆ? ಇದೇ ʼಅರಿಗಾತೊʼ ಸೀಕ್ರೆಟ್!‌

ʼಅರಿಗಾತೊ' ಅಂದರೆ ಜಪಾನೀ ಭಾಷೆಯಲ್ಲಿ ಸಾಮಾನ್ಯ ಅರ್ಥ ʼಧನ್ಯವಾದ' ಎಂದು. ಜಪಾನೀಯರು ವಿವಿಧ ಜೀವನಶೈಲಿ ತತ್ವಗಳನ್ನು ಹೊಂದಿದ್ದಾರೆ. ಅದರಲ್ಲಿ ಇದೂ ಒಂದು.

Japanese techniques to save money what is arigato philosophy bni
Author
First Published Sep 22, 2023, 10:55 AM IST | Last Updated Sep 22, 2023, 10:55 AM IST

ಹಣಕಾಸಿನ ಸಮಸ್ಯೆಗಳು ಎಲ್ಲರಿಗೂ ಒತ್ತಡ ಮತ್ತು ಆತಂಕ ಉಂಟುಮಾಡುತ್ತವೆ. ಸಾಕಷ್ಟು ಗಳಿಸಿದರೂ ಕೆಲವೊಮ್ಮೆ ಉಳಿಸಿಡೋಕೆ ಸಾಧ್ಯವಾಗಲ್ಲ. ಅದಕ್ಕೆ ಅದರದೇ ಕಾರಣಗಳಿರಬಹುದು. ಬ್ರಿಟನ್‌ನ ಮಾನಸಿಕ ಆರೋಗ್ಯ ಸಂಸ್ಥೆಯ ಪ್ರಕಾರ, ಇಂಗ್ಲೆಂಡ್‌ನಲ್ಲಿಯೇ 15 ಲಕ್ಷಕ್ಕಿಂತಲೂ ಹೆಚ್ಚು ಜನ ಗಂಭೀರ ಸಾಲ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. CNBC ಸಮೀಕ್ಷೆಯ ಪ್ರಕಾರ 70 ಪ್ರತಿಶತ ಅಮೆರಿಕ ನಾಗರಿಕರಿಗೆ ಹಣದ ಸಮಸ್ಯೆಗಳಿವೆಯಂತೆ. ಹಾಗಾದರೆ ಈ ಗಳಿಸಿದರೂ ಉಳಿಸಲಾಗದ ಒತ್ತಡದಿಂದ ಬಚಾವಾಗುವುದು ಹೇಗೆ?

ಕೆನ್ ಹೋಂಡಾ ಎಂಬ ಹಣಕಾಸು ತಜ್ಞರು ʼಹ್ಯಾಪಿ ಮನಿ: ದಿ ಜಪಾನೀಸ್ ಆರ್ಟ್ ಆಫ್ ಮೇಕಿಂಗ್ ಪೀಸ್ ವಿತ್ ಯುವರ್ ಮನಿʼ ಎಂಬ ಪುಸ್ತಕ ಬರೆದಿದ್ದಾರೆ. ಅದರಲ್ಲಿ ನಿಮ್ಮ ಹಣಕಾಸನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಅವರು ʼಅರಿಗಾತೊʼ ಎಂಬ ಜಪಾನೀ ಪರಿಕಲ್ಪನೆಯನ್ನು ಪರಿಚಯಿಸಿದ್ದಾರೆ. ನಮ್ಮ ಜೀವನದುದ್ದಕ್ಕೂ ನಾವು ಹಣವನ್ನು ಗಳಿಸುತ್ತೇವೆ ಮತ್ತು ಖರ್ಚು ಮಾಡುತ್ತೇವೆ. ʼಅರಿಗಾತೊʼ ಎಂಬುದು ನಮ್ಮ ಹಣಕಾಸಿನ ಚಟುವಟಿಕೆಯ ಮೇಲೆ ವಿಶಿಷ್ಟವಾಗಿ ದೃಷ್ಟಿ ಹರಿಸಿ ಅದರ ಮೂಲಕ ಸ್ಥಿರವಾದ ಆರ್ಥಿಕ ಯಶಸ್ಸನ್ನು ಸಾಧಿಸುವ ಪ್ರಸಿದ್ಧ ಜಪಾನೀಸ್ ಟ್ರಿಕ್.

ʼಅರಿಗಾತೊ' ಅಂದರೆ ಜಪಾನೀ ಭಾಷೆಯಲ್ಲಿ ಸಾಮಾನ್ಯ ಅರ್ಥ ʼಧನ್ಯವಾದ' ಎಂದು. ಜಪಾನೀಯರು ವಿವಿಧ ಜೀವನಶೈಲಿ ತತ್ವಗಳನ್ನು ಹೊಂದಿದ್ದಾರೆ. ಅದರಲ್ಲಿ ಇದೂ ಒಂದು. ಕೃತಜ್ಞತೆಯು ಜಪಾನೀಸ್ ಸಂಸ್ಕೃತಿಯ ಪ್ರಮುಖ ಭಾಗ. ಅದು ಆಹಾರಕ್ಕೂ, ಆಯುಷ್ಯಕ್ಕೂ ಜತೆಗೆ ಹಣಕ್ಕೂ ವಿಸ್ತರಿಸುತ್ತದೆ. ಹೋಂಡಾ ಎಂಬ ಜಪಾನೀ ಉದ್ಯಮಿ (ಹೀರೋ ಹೋಂಡಾ) ಈ ಸಿದ್ಧಾಂತವನ್ನು ನೇರವಾಗಿ ಪ್ರತಿಪಾದಿಸುತ್ತಾರೆ- ʼʼಅರಿಗಾಟೊ ಇನ್, ಅರಿಗಾತೊ ಔಟ್ʼʼ ಎನ್ನುತ್ತಾರೆ. ಸರಳವಾಗಿ ಹೇಳುವುದಾದರೆ, ನಿಮ್ಮ ಜೀವನದಲ್ಲಿ ಹಣದ ಒಳಹರಿವು ಮತ್ತು ಹೊರಹರಿವು ಎರಡನ್ನೂ ನೀವು ಗೌರವಿಸಬೇಕು ಎಂದರ್ಥ.

ಅದು ಹೇಗೆ? ಈ ಕೆಳಗಿನಂತೆ ಪ್ರಾಕ್ಟೀಸ್‌ ಮಾಡಬೇಕು.

1. ನೀವು ಎಷ್ಟೇ ಕಡಿಮೆ ಅಥವಾ ಹೆಚ್ಚಿನ ಹಣವನ್ನು ಸ್ವೀಕರಿಸಿದರೂ, ಅದನ್ನು ಯಾವಾಗಲೂ ಪ್ರೀತಿ ಮತ್ತು ಕೃತಜ್ಞತೆಯಿಂದ ಸ್ವೀಕರಿಸಬೇಕು. ಹಣವನ್ನು ಖರ್ಚು ಮಾಡುವಾಗ ಕೃತಜ್ಞರಾಗಿರಬೇಕು ಮತ್ತು ತೆರೆದ ಹೃದಯದಿಂದ ಅದನ್ನು ಮಾಡಬೇಕು. ಹಣದ ಹೊರಹರಿವು ಮತ್ತು ಒಳಹರಿವಿಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

2. ನಿಮ್ಮ ಹಣ ನಿಮ್ಮ ಆಸ್ತಿ. ಅದನ್ನು ಆಚೆ ಕಳಿಸುವಾಗ ಅದು ತಂದುಕೊಡುತ್ತಿರುವ ಸುಖಕ್ಕಾಗಿ ಅದನ್ನು ಪ್ರಶಂಸಿಸುವುದು ಜಪಾನೀಯರಲ್ಲಿ ಸಾಮಾನ್ಯ, ಹಾಗೇ ಅಸಾಮಾನ್ಯ ಸಂಗತಿ. ಇದು ಕೃತಜ್ಞತೆಯ ಮನಸ್ಥಿತಿಯನ್ನು ಬೆಳೆಸಲು ನಿಮಗೆ ಅನುವು ಮಾಡಿಕೊಡುತ್ತದೆ. ಅದು ನಿಮ್ಮ ಆನಂದಕ್ಕೆ ಮೂಲ. ಉದಾಹರಣೆಗೆ, ನಿಮ್ಮ ಫೋನ್ ಬಿಲ್ ಅನ್ನು ಪಾವತಿಸುವಾಗ, ನೀವು ಅದರ ಬಗ್ಗೆ ಟೀಕಿಸುವ ಅಥವಾ ಚಿಂತಿಸುವ ಬದಲು, ಹೊರಗಿನ ಪ್ರಪಂಚವನ್ನು ಸಂಪರ್ಕಿಸಲು ಅದು ಮಾಡಿಕೊಟ್ಟ ಅನುಕೂಲಕ್ಕಾಗಿ ಕೃತಜ್ಞರಾಗಿರಿ. ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸುವ ಯಾವುದಕ್ಕೇ ಆದರೂ ನೀವು ಹಣ ಖರ್ಚು ಮಾಡಿದಾಗ, ನೀವು ಅದಕ್ಕಾಗಿ ಕೃತಜ್ಞರಾಗಿರಬೇಕು.

3. ಈ ವಿಧಾನವು ʼಝೆನ್' ಜೀವನ ವಿಧಾನವನ್ನು ಪ್ರೋತ್ಸಾಹಿಸುತ್ತದೆ. ಸರಳವಾಗಿ ಹೇಳುವುದಾದರೆ, ಝೆನ್ ತತ್ವವು ವರ್ತಮಾನದಲ್ಲಿ ಬದುಕಲು ಜನರನ್ನು ಪ್ರೋತ್ಸಾಹಿಸುತ್ತದೆ. ನಕಾರಾತ್ಮಕವಾಗಿ ಯೋಚಿಸುವುದರಿಂದ ಅಥವಾ ಭವಿಷ್ಯದ ಬಗ್ಗೆ ಚಿಂತಿಸುವುದರಿಂದ ನಿಮ್ಮನ್ನು ಅದು ತಡೆಯುತ್ತದೆ.

4. ನೀವು ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡದಂತೆಯೂ ಇದು ತಡೆಯುತ್ತದೆ. ನಿಮ್ಮ ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಲು ಇದು ಪ್ರೋತ್ಸಾಹಿಸುತ್ತದೆ. ಈ ವಿಧಾನವು ನಿಜವಾಗಿಯೂ ಮೌಲ್ಯಯುತವಾದ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡಲು ನಿಮ್ಮನ್ನು ಪ್ರೋತ್ಸಾಹಿಸುತ್ತದೆ. ಬುದ್ಧಿವಂತ ಗಳಿಕೆಯಂತೆಯೇ ಬುದ್ಧಿವಂತ ಖರ್ಚು ಕೂಡ ಸ್ವಾಗತಾರ್ಹ ಎಂಬ ಕಲ್ಪನೆಯಿದು.

5. ಮಾನಸಿಕ ಆರೋಗ್ಯ ತಜ್ಞರು ಹೇಳುವಂತೆ, ನಿಮ್ಮ ಜೀವನ ಮತ್ತು ಹಣಕ್ಕೆ ಕೃತಜ್ಞತೆಯನ್ನು ಸಲ್ಲಿಸುವುದರಿಂದ ಹಲವಾರು ಸಕಾರಾತ್ಮಕ ಪರಿಣಾಮಗಳನ್ನು ಕಾಣಬಹುದು. ಅದನ್ನು ಈ ಕೆಳಗಿನಂತೆ ಮಾಡಬಹುದು.

ಎ. ಕೃತಜ್ಞತೆಯ ಡೈರಿ: ಹಣಕಾಸೂ ಒಳಗೊಂಡಂತೆ ನೀವು ಕೃತಜ್ಞರಾಗಿರುವ ವಿಷಯಗಳನ್ನು ನಿಯಮಿತವಾಗಿ ಬರೆಯಿರಿ. ಕೃತಜ್ಞತೆಯ ಡೈರಿ ಒಟ್ಟುಕೊಳ್ಳಿ. ಇದು ನಿಮ್ಮ ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.

ಬಿ. ಬಜೆಟ್ ಅನ್ನು ರಚಿಸುವಾಗ, ನಿಮಗೆ ಸಂತೋಷ ಆನಂದ ತರುವ ವಿಷಯಗಳಿಗೆ ಹಣವನ್ನು ನಿಯೋಜಿಸುವುದರ ಮೇಲೆ ಕೇಂದ್ರೀಕರಿಸಿ. ಇದರಿಂದ ನಿಮ್ಮ ಹಣ ನಿಮ್ಮ ಮೌಲ್ಯಗಳು ಮತ್ತು ಆದ್ಯತೆಗಳೊಂದಿಗೆ ಹೊಂದಿಕೆಯಾಗುವಂತೆ ಖಚಿತಪಡಿಸಿಕೊಳ್ಳಬಹುದು.

700 ಕೋಟಿ ಆಸ್ತಿ ಒಡತಿಯಾಗಿದ್ರೂ ಸುಧಾಮೂರ್ತಿ, 24 ವರ್ಷದಿಂದ ಒಂದೇ ಒಂದು ಸೀರೆ ಖರೀದಿಸಿಲ್ವಂತೆ!

ಸಿ. ನಿಮ್ಮ ಖರ್ಚಿನ ಬಗ್ಗೆ ಗಮನಹರಿಸುವುದು ಮತ್ತು ನಿಮ್ಮ ಹಣ ನಿಮಗೆ ಏನನ್ನು ಮಾಡಲು ಅವಕಾಶ ಮಾಡಿಕೊಡುತ್ತದೆ ಎಂಬುದನ್ನು ಶ್ಲಾಘಿಸುವುದು ಹೆಚ್ಚು ಪ್ರಜ್ಞಾಪೂರ್ವಕ ಹಣಕಾಸಿನ ನಿರ್ಧಾರಗಳನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ.

ಡಿ. ಮರಳಿ ಕೊಡುವುದು: ಉದಾರತೆ, ದಾನವನ್ನು ಅಭ್ಯಾಸ ಮಾಡುವುದು ಒಳ್ಳೆಯದು. ನೀವು ಕಾಳಜಿವಹಿಸುವ ವಿಚಾರಗಳಿಗಾಗಿ ದಾನ ಮಾಡುವುದು ನಿಮ್ಮ ಆರ್ಥಿಕ ಸ್ಥಿರತೆಗೆ ಕೃತಜ್ಞತೆ ವ್ಯಕ್ತಪಡಿಸುವ ಮಾರ್ಗ.

ಇ. ಹೋಲಿಕೆ ತಪ್ಪಿಸುವುದು: ಕೃತಜ್ಞತೆಯ ಮೂಲಕ ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಇತರರೊಂದಿಗೆ ನಿರಂತರವಾಗಿ ಹೋಲಿಸುವ ಅಭ್ಯಾಸವನ್ನು ಕಡಿಮೆ ಮಾಡಬಹುದಾಗಿದೆ.

ಎಫ್.‌ ನೀವು ಹಣದೊಂದಿಗೆ ಹೆಚ್ಚು ಧನಾತ್ಮಕ, ಮಾನಸಿಕವಾಗಿ ಆರೋಗ್ಯಕರ ಸಂಬಂಧವನ್ನು ಬೆಳೆಸಿಕೊಳ್ಳಬಹುದು. ನಿಮ್ಮ ಹಣದ ನಿರ್ವಹಣೆಗೆ ವೈಯಕ್ತಿಕ ಮಾರ್ಗದರ್ಶನಕ್ಕಾಗಿ ಸಲಹೆಗಾರರನ್ನು ಸಂಪರ್ಕಿಸುವುದು ಯಾವಾಗಲೂ ಒಳ್ಳೆಯದು.

ಅಚ್ಚರಿಯಾದ್ರೂ ಸತ್ಯ, ಈ ರಾಶಿಯವರು ಹುಟ್ಟುತ್ತಲೇ ಪ್ರಬುದ್ಧರಾಗಿರುತ್ತಾರೆ!
 

Latest Videos
Follow Us:
Download App:
  • android
  • ios