ಇತ್ತೀಚೆಗೊಂದು ಸುದ್ದಿ ಓದಿದೆ. ಅದರಂತೆ ಪತಿಯ ಉದ್ಯೋಗಕ್ಕೂ ವಿವಾಹದ ಆರೋಗ್ಯಕ್ಕೂ ಸಂಬಂಧವಿದೆ ಎನ್ನುತ್ತಿದೆ ಹೊಸ ಹಾರ್ವರ್ಡ್ ಅಧ್ಯಯನ. ಸುಮಾರು 6300 ಜೋಡಿಗಳನ್ನು ಅಧ್ಯಯನಕ್ಕೊಳಪಡಿಸಿದ ಬಳಿಕ ಹಾರ್ವರ್ಡ್‌ನ ದೊಡ್ಡ ದೊಡ್ಡ ಸಂಶೋಧಕರು ಕಂಡುಕೊಂಡಿದ್ದೆಂದರೆ ಕೆಲಸವಿಲ್ಲದ ಪುರುಷರ ವೈವಾಹಿಕ ಜೀವನ ಉದ್ಯೋಗಿಗಳಿಗಿಂತ ಹೆಚ್ಚು ವಿಚ್ಚೇದನದಲ್ಲಿ ಕೊನೆಗಾಣುತ್ತದೆ ಎಂಬುದು. ಜೊತೆಗೆ ಹೆಚ್ಚು ಸಬಲವಲ್ಲದ ಉದ್ಯೋಗ, ಪಾರ್ಟ್ ಟೈಂ ಉದ್ಯೋಗ ಹೊಂದಿರುವ ಪುರುಷರ ವೈವಾಹಿಕ ಜೀವನ ಕೂಡಾ ಸಂಘರ್ಷಗಳಿಂದ ಕೂಡಿರುತ್ತದೆ ಎಂದು ಅಧ್ಯಯನ ತಿಳಿಸಿದೆ. 

ಅಷ್ಟೇ ಅಲ್ಲ, ನೀವು ಸಿಂಗಲ್ ಆಗಿದ್ದು ಕೈಲಿ ಉತ್ತಮ ಉದ್ಯೋಗವಿದೆ ಎಂದಾದರೆ ಡೇಟ್ ಸಿಗುವುದು ಕಷ್ಟದ ಮಾತೇನಲ್ಲ ಎಂದು ಕೂಡಾ ಅಧ್ಯಯನ ಹೇಳಿದೆ. ಅಲ್ಲಾ ಸ್ವಾಮಿ, ಇಂಥ ವಿಷಯಕ್ಕೆಲ್ಲ ಅಧ್ಯಯನ ಎಂದು ಈ ಹಾರ್ವರ್ಡ್‌ನಂಥ ಹಾರ್ವರ್ಡ್ ಪ್ರೊಫೆಸರ್‌ಗಳು ಅದೇಕೆ ಸಮಯ ವ್ಯರ್ಥ ಮಾಡುತ್ತಾರೋ ಗೊತ್ತಿಲ್ಲ. ಈ ವಿಷಯವನ್ನು ಭಾರತದ ಯಾವುದೇ ಅಂಟಿ ಅಂಕಲ್, ಯುವಕ, ಯುವತಿ, ಅಜ್ಜ ಅಜ್ಜಿ, ವಿದ್ಯಾವಂತರು, ಅವಿದ್ಯಾವಂತರು, ಅಷ್ಟೇ ಏಕೆ, ಚಿಕ್ಕ ಮಕ್ಕಳಿಗೆ ಕೇಳಿದರೂ ಅಧ್ಯಯನವೇ ಇಲ್ಲದೆ ಹೇಳುತ್ತಿದ್ದರು. 

ಉದ್ಯೋಗಂ ಪುರುಷ ಲಕ್ಷಣಂ
ವಿವಾಹಕ್ಕೂ, ವರನ ಆರ್ಥಿಕ ಬಲಕ್ಕೂ ಅದೆಂಥಾ ಸಂಬಂಧ ಇದೆ ಎಂಬುದು ಭಾರತದ 130 ಕೋಟಿ ಜನರಿಗೂ ಗೊತ್ತು! ಯಾರಾದರೂ ಅಪ್ಪಿತಪ್ಪಿಯಾದರೂ ಕೆಲಸವಿಲ್ಲದ ಯುವಕನಿಗೆ ತಮ್ಮ ಮಗಳನ್ನು ಕೊಡುತ್ತಾರೆಯೇ? ಅಥವಾ ಮಗಳು ಏನೋ ತಿಳಿಯದೆ ವಯಸ್ಸಿನ ಹುರುಪಿನಲ್ಲಿ ಕೆಲಸವಿಲ್ಲದ ಹುಡುಗನೊಬ್ಬನನ್ನು ಇಷ್ಟಪಟ್ಟಳು ಎಂದುಕೊಳ್ಳಿ- ಯಾವ ತಂದೆತಾಯಿಯಾದರೂ ಮಗಳ ಈ ಪ್ರೇಮಿಯನ್ನು ಒಪ್ಪುತ್ತಾರೆಯೇ? ಖಂಡಿತಾ ಇಲ್ಲ. ಒಂದೇ ಆ ಪ್ರೇಮಕ್ಕೆ ಫುಲ್‌ಸ್ಟಾಪ್ ಹಾಕಲು ಸಾಧ್ಯವಾದ ಎಲ್ಲ ತಂತ್ರಗಳನ್ನೂ ಪ್ರಯೋಗಿಸಿ, ಕಡೆಗೆ ಲಕ್ಷಗಟ್ಟಲೆ ಸಂಬಳ ತರುವ ಹುಡುಗನನ್ನು ತೋರಿಸಿ ಯುವತಿಗೆ ಆಮಿಷವೊಡ್ಡಿ ಮದುವೆ ಮುರಿಯುತ್ತಾರೆ. ಇಲ್ಲವೇ, ಮಗಳು ಪ್ರೀತಿಸಿದ ಹುಡುಗ ಒಳ್ಳೆಯ ಕೆಲಸ ಹಿಡಿದು ಜೀವನದಲ್ಲಿ ಆರ್ಥಿಕವಾಗಿ ಸಬಲನಾಗುವವರೆಗೂ ಕಾದು ಮದುವೆ ಮಾಡಿಕೊಡುತ್ತಾರೆ. 

ಗಂಡಂಗೆ ಮೋಸ ಮಾಡೋದ್ರಲ್ಲಿ ಬೆಂಗಳೂರಿಗರು ನಂ.1: ಸರ್ವೆ

ಆರಂಕೆಯ ಸಂಬಳ ತರುವ ಹುಡುಗ ಯಾವ ಹುಡುಗಿಯ ಅಪ್ಪ ಅಮ್ಮನಿಗಾದರೂ ಪ್ರೀತಿಪಾತ್ರನೇ. ಉದ್ಯೋಗಂ ಪುರುಷ ಲಕ್ಷಣಂ ಎಂದು ಆತ ಡುಮ್ಮುಕಿರಲಿ, ಕುಳ್ಳಗಿರಲಿ, ಕಪ್ಪಗಿರಲಿ, ಬೆಳ್ಳಗಿರಲಿ- ಒಳ್ಳೆ ಮನೆತನದ ಬಿಳಿ ಬಣ್ಣದ ಸುಂದರವಾದ ವಧುವನ್ನು ಅರಸುವುದರಲ್ಲಿ ಯಾರಿಗೂ ಯಾವ ತಪ್ಪೂ ಕಾಣುವುದಿಲ್ಲ. ಅದೇ ಹುಡುಗ- ಆದರೆ ಉದ್ಯೋಗವೊಂದನ್ನು ಮೈನಸ್ ಮಾಡೋಣ, ಅಥವಾ ಹತ್ತೋ ಇಪ್ಪತ್ತೋ ಸಾವಿರದ ಸಂಬಳ ಪಡೆಯುತ್ತಾನೆಂದುಕೊಳ್ಳೋಣ- ಆಗ?!!

ಆಗ ಆತ ತೆಳ್ಳಗಿನ ಬೆಳ್ಳಗಿನ ಸುಂದರ ಹುಡುಗಿಯೇ ಬೇಕೆಂದರೆ- ಉದ್ಯೋಗವಿಲ್ಲದವನ ಬರಿ ಮುಖ ಹಾಳೂರ ಹದ್ದಿನಂತಿಕ್ಕು ಎಂದು- ಇವ್ನ ಮೂತಿಗೆ ಚೆಂದದ ಹುಡುಗಿ ಬೇಕಂತೆ ಎಂದು ಆಡಿಕೊಳ್ಳದೇ ಇರುವರೇ?  ಅಲ್ಲಿಗೆ ಉದ್ಯೋಗ ಹಾಗೂ ಸಂಬಳವೇ ಪುರುಷನ ವಿವಾಹ ಜೀವನವನ್ನು ನಿರ್ಧರಿಸುವುದು ಎಂದಾಯಿತು. 

ಸಿನಿಮಾ, ಕತೆಗಳು ಹೇಳುವುದೂ ಇದೇ!
ಭಾರತದ ಸಿನಿಮಾಗಳು, ಕಾದಂಬರಿಗಳು, ಅಕ್ಕಪ್ಕದವರ ಮನೆ ಕತೆಗಳು, ಅನುಭವಗಳು ಎಲ್ಲವೂ ಈ ಉದ್ಯೋಗ ಹಾಗೂ ವಿವಾಹ ನಡುವಿನ ಸಂಬಂಧವನ್ನು ಸಾರಿ ಸಾರಿ ಹೇಳುತ್ತವೆ. ಇನ್ನು ವಿವಾಹವಾದ ಮೇಲೆ ವರನ ಕೆಲಸ ಹೋಯಿತೆಂದುಕೊಳ್ಳಿ. ಮನೆ ಮರ್ಯಾದಿಯೇ ಬಿದ್ದಿತೆಂದು ಕೊರಗುತ್ತಾರೆ ಹುಡುಗಿಯ ಪೋಷಕರು. ಅಲ್ಲಿಯವರೆಗೂ ಯಾವುದೇ ಸಮಸ್ಯೆಯಿಲ್ಲದೆ ಮನೆ, ಅಡುಗೆ, ಮಕ್ಕಳ ಕೆಲಸ ನೋಡಿಕೊಳ್ಳುತ್ತಿದ್ದ ಪತ್ನಿ ಈಗ ಪತಿಯ ಮೇಲೆ ಅಧಿಕಾರ ಚಲಾಯಿಸಲು ಆರಂಭಿಸುತ್ತಾಳೆ. ಕೆಲಸವಿಲ್ಲದ ಪುರುಷನನ್ನು ನೋಡುವುದು ಯಾರಿಗೂ ಇಷ್ಟವಾಗುವುದಿಲ್ಲ. ವಿಪರ್ಯಾಸ ನೋಡಿ, ಪತ್ನಿ ಹಾಗೂ ಮಕ್ಕಳು ಆರಾಮಾಗಿ ಸೋಫಾ ಮೇಲೆ ಮಲಗಿ ಟಿವಿ ನೋಡಲಿ ಎಂದು ಕಷ್ಟಪಟ್ಟು ದುಡಿಯುತ್ತಿದ್ದ ಆತ ಈಗ ಸೋಫಾ ಮೇಲೆ ಮಲಗಿ ಟಿವಿ ಚಾನೆಲ್ ಬದಲಾಯಿಸುತ್ತಿದ್ದರೆ, ಮನೆಗೆ ಶನಿ ಒಕ್ಕರಿಸಿಕೊಂಡಂಥ ಭಾವ ಆತನ ಸುತ್ತಮುತ್ತಲಿರುವವರಿಗೆ. 

ಆಕೆಯ ಕಡೆಗಣಿಸಿ ಪಡೆಯೋದು ಇಷ್ಟೇ, ನೀನಿಲ್ಲದೆ ಬದುಕೋದು ಕಲಿಸುವಿರಷ್ಟೇ...


ಮಹಿಳೆಗೂ ಬೇಕು ಉದ್ಯೋಗ
ಕಾಲ ಬದಲಾಗಿದೆ. ಮಹಿಳೆಯರಿಗೂ ಉದ್ಯೋಗ ಅತ್ಯಗತ್ಯವಾಗಿದೆ. ಮನೆಗೆಲಸ, ಮಕ್ಕಳ ಕೆಲಸದಿಂದ ಮುಕ್ತಿ ಸಿಕ್ಕಿಲ್ಲವಾದರೂ, ಅದರೊಂದಿಗೆಯೇ ಆರ್ಥಿಕ ಸಬಲತೆ ಸಾಧಿಸಲು, ಸ್ವಾವಲಂಬಿ ಜೀವನ ಸಾಗಿಸಲು ಮಹಿಳೆಯರು ಉದ್ಯೋಗ ಕ್ಷೇತ್ರಕ್ಕೆ ಮುನ್ನಡಿ ಇಡುತ್ತಿದ್ದಾರೆ. ಉದ್ಯೋಗಸ್ಥೆ ಯುವತಿಯನ್ನು ಎಲ್ಲರೂ ಹೆಮ್ಮೆಯಿಂದ ನೋಡುವಂತಾಗಿದೆ. ಆದರೆ, ಆಕೆಯ ಉದ್ಯೋಗ ಹಾಗೂ ವಿವಾಹ ವಿಚ್ಚೇದನದ ನಡುವೆ ಅಂಥ ಸಂಬಂಧವೇನೂ ಕಂಡುಬಂದಿಲ್ಲ. ಹಾರ್ವರ್ಡ್ ಅಧ್ಯಯನ ಕೂಡಾ ಮಹಿಳೆಯ ಜಾಬ್ ಸ್ಟೇಟಸ್ ಹಾಗೂ ವಿಚ್ಚೇದನಕ್ಕೆ ಸಂಬಂಧವಿಲ್ಲ ಎಂದೇ  ಹೇಳಿದೆ. ಅಂದರೆ, ಮಹಿಳೆಯ ಉದ್ಯೋಗ ಇಂದಿನ ಜೀವನಶೈಲಿಗೆ, ಖರ್ಚಿಗೆ ಪ್ಲಸ್ ಪಾಯಿಂಟ್ ಆಗುತ್ತದೆ. ಹಾಗಂಥ ಆಕೆ ಕೆಲಸ ಕಳೆದುಕೊಂಡರೆ ಅದರಿಂದ ಮನೆ ನಡೆಸಲೇನೂ ತೊಂದರೆ ಇಲ್ಲ. ಏಕೆಂದರೆ ಆಕೆಯ ದುಡಿಮೆಯನ್ನು ಹೆಚ್ಚುವರಿ ಆದಾಯ ಎಂದು ಪರಿಗಣಿಸಲಾಗುತ್ತದೆಯೇ ಹೊರತು ಅನಿವಾರ್ಯ ಆದಾಯ ಎಂದಲ್ಲ. ಆದ್ದರಿಂದಲೇ ಕೆಲಸವಿಲ್ಲದ ಯುವತಿಯರನ್ನು ಯುವಕರು ವಿವಾಹವಾಗುತ್ತಾರೆ. ಆದರೆ, ಕೆಲಸವಿಲ್ಲದ ಯುವಕರನ್ನು ದೊಡ್ಡ ಸಂಬಳ ತರುವ ಯುವತಿ ಕೂಡಾ ವಿವಾಹವಾಗಲು ಒಪ್ಪುವುದಿಲ್ಲ. ಆತ ಮನೆಮಕ್ಕಳನ್ನು ನೋಡಿಕೊಂಡಿರಲಿ ಎಂದು ಭಾವಿಸುವುದಿಲ್ಲ.