ಮದುವೆಗಳಲ್ಲಿನ ನಕಾರಾತ್ಮಕತೆ, ಆರ್ಥಿಕ ಸ್ವಾವಲಂಬನೆ, ಹೆಚ್ಚುತ್ತಿರುವ ವಿಚ್ಛೇದನಗಳು ಮದುವೆ ಬೇಡ ಎಂಬ ಮನಸ್ಥಿತಿ ಹೆಚ್ಚಿಸಿವೆ. ದುಡಿಯುವ ಹೆಣ್ಣುಮಕ್ಕಳ ಆರ್ಥಿಕ ಅವಲಂಬನೆಯಿಂದಾಗಿ ಪೋಷಕರೇ ಮದುವೆಗೆ ಅಡ್ಡಿಯಾಗುತ್ತಿದ್ದಾರೆ. ಮಗಳ ಸಂಬಳ ಕಳೆದುಕೊಳ್ಳುವ ಭಯ, ಮಗನ ಆದಾಯ ಸೊಸೆಗೆ ಸೇರುವ ಆತಂಕ ಪೋಷಕರಲ್ಲಿ ಮದುವೆ ವಿರೋಧಿ ಧೋರಣೆಗೆ ಕಾರಣವಾಗಿದೆ.

ಇಂದು ಮದುವೆ ಎನ್ನುವ ಸಂಬಂಧವೇ ಡೋಲಾಯಮಾನ ಸ್ಥಿತಿಯಲ್ಲಿದೆ. ಎಷ್ಟೋ ಮಂದಿ ಈ ಸಂಬಂಧದ ಪರಿಕಲ್ಪನೆಯಿಂದ ಹೊರಕ್ಕೆ ಬಂದಿದ್ದಾರೆ. ಮದುವೆನೇ ಬೇಡ ಎನ್ನುವ ಸ್ಥಿತಿಗೆ ಹಲವರು ಬಂದಿದ್ದಾರೆ. ತಮ್ಮ ಸುತ್ತಲೂ ನಡೆಯುತ್ತಿರುವ ಭೀಕರ ಘಟನೆಗಳು, ಅಕ್ರಮ ಸಂಬಂಧ, ಗಂಡನಿಂದ ಹೆಂಡತಿಗೆ, ಹೆಂಡತಿಯಿಂದ ಗಂಡನಿಗೆ ದೌರ್ಜನ್ಯ, ಮದುವೆಯಾದ ಬಳಿಕ ಡಿವೋರ್ಸ್​ ಕೊಡುವ ಸಂಖ್ಯೆ ಹೆಚ್ಚುತ್ತಿರುವುದು, ಪತ್ನಿ ಕೇಳುವ ಲಕ್ಷ ಲಕ್ಷ ಪರಿಹಾರ, ಪತಿಯಿಂದ-ಆತನ ಮನೆಯವರಿಂದ ಅನುಭವಿಸುವ ಕಿರುಕುಳ, ಮಾನಸಿಕ ಹಿಂಸೆ... ಹೀಗೆ ಎಲ್ಲವೂ ಮದುವೆಯೆನ್ನುವುದೇ ನಕಾರಾತ್ಮಕ ಭಾವನೆಯನ್ನು ತುಂಬಿಬಿಟ್ಟಿದೆ. ಇದೇ ಕಾರಣಕ್ಕೆ ಇಂದು ವಯಸ್ಸು 40 ದಾಟಿದರೂ ಒಂಟಿಯಾಗಿದ್ದವರೇ ಹೆಚ್ಚು. ಸ್ವಲ್ಪ ಹೈಫೈ ಎನ್ನಿಸಿಕೊಂಡವರು ಲಿವ್​ ಇನ್​ ಸಂಬಂಧದಲ್ಲಿ ಇರುತ್ತಾರೆಯೇ ವಿನಾ, ಮದುವೆಯಾಗಲು ಒಲ್ಲರು.

ಇದು ಮದುವೆಯಾಗಲು ಇಚ್ಛೆ ಪಡೆದವರ ಮಾತಾಯಿತು. ಇನ್ನು ಕರಿಯರ್​ ನೆಪದಲ್ಲಿ ಬಹುತೇಕ ಮಂದಿ ಮದುವೆಯಾಗುತ್ತಿಲ್ಲ ಎನ್ನುವುದೂ ಅಷ್ಟೇ ಸತ್ಯ. ಹೆಣ್ಣುಮಕ್ಕಳು ದುಡಿಯುತ್ತಿರುವುದೇ ದೊಡ್ಡ ಸಮಸ್ಯೆಯಾಗಿದೆ, ಅವರು ಆರ್ಥಿಕವಾಗಿ ಸ್ವಾಲವಂಬಿಗಳಾಗಿರುವ ಕಾರಣ, ಅವರ ಡಿಮಾಂಡ್​ಗಳು ಜಾಸ್ತಿಯಾಗುತ್ತಿವೆ, ಅವುಗಳನ್ನು ಪೂರೈಸಲು ಗಂಡಿನ ಕಡೆಯವರಿಗೆ ಆಗುತ್ತಿಲ್ಲ ಎನ್ನುವ ಗಂಭೀರ ಆರೋಪಗಳೂ ಇವೆ. ಇವೆಲ್ಲವುಗಳ ಮಧ್ಯೆಯೇ, ಹೆಣ್ಣು ಒಪ್ಪಿದರೂ, ಆಕೆ ಯಾವುದೇ ಡಿಮಾಂಡ್​ ಮಾಡದಿದ್ದರೂ ಎಷ್ಟೋ ಮನೆಗಳಲ್ಲಿ ಅವಳಿಗೆ ಅಪ್ಪ-ಅಮ್ಮಂದಿರೇ ವಿಲನ್​ಗಳಾಗುತ್ತಿದ್ದಾರೆ ಎನ್ನುವ ಮಾತು ಇತ್ತೀಚಿನ ದಿನಗಳಲ್ಲಿ ಬಹಳವಾಗಿ ಕೇಳಿಬರುತ್ತಿದೆ. ಯಾವುದೇ ಹೆಣ್ಣುಮಕ್ಕಳು ಇದನ್ನು ಬಹಿರಂಗವಾಗಿ ಹೇಳದಿದ್ದರೂ, ಕೆಲವೊಂದು ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ದುಡಿಮೆಯೇ ಹೆಣ್ಣಿನ ಮದುವೆಯೆಂಬ ಕನಸಿಗೆ ವಿಲನ್​ ಆಗಿದೆ ಎನ್ನುವುದು ತಿಳಿಯುತ್ತದೆ.

 ಇದು ಕಹಿ ಎನ್ನಿಸುವ ಸತ್ಯ. ಕೋರ್ಟ್​ನಲ್ಲಿಯೂ ಕರ್ತವ್ಯ ನಿರ್ವಹಿಸಿರುವ ಕೃಷ್ಣಮೂರ್ತಿ ಅವರು ಈಗ ಆಗುತ್ತಿರುವ ಘಟನೆಗಳ ಬಗ್ಗೆ ಕರ್ನಾಟಕ ನ್ಯೂಸ್​ ಎಂಬ ಯೂಟ್ಯೂಬ್​ ಚಾನೆಲ್​ನಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಇದರಲ್ಲಿ ಅವರು ಹೆಣ್ಣು-ಗಂಡಿನ ಕರ್ತವ್ಯಗಳ ಬಗ್ಗೆ ಹೇಳಿದ್ದಾರೆ. ಆದರೆ ದುಡಿಯುವ ಹೆಣ್ಣುಮಕ್ಕಳ ಮದುವೆ ಯಾಕೆ ಆಗ್ತಿಲ್ಲ ಎನ್ನುವ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ. ಸಾಮಾನ್ಯವಾಗಿ ಹೆಣ್ಣುಮಕ್ಕಳು ದುಡಿಯಲು ಹೋದಾಗ, ಅವರೇ ಮನೆಯ ಆಧಾರಸ್ತಂಭವಾಗಿರುವಾಗಿ ಇದು ತುಂಬಾ ಮನೆಗಳಲ್ಲಿ ನಡೆಯುವ ವಿಷಯವಾಗಿದೆ. ಒಂದು ವೇಳೆ ಅಪ್ಪ ಕೆಲಸಕ್ಕೆ ಹೋಗುತ್ತಿದ್ದರೂ, ಮಗಳಿಗೆ ಹೆಚ್ಚಿನ ಸಂಬಳ ಸಿಗುವ ಕೆಲಸ ಸಿಕ್ಕರೆ ಅವರು ಕೆಲಸ ಬಿಡುತ್ತಾರೆ. ಹೇಗಿದ್ದರೂ ಮಗಳಿಗೆ ತುಂಬಾ ಸಂಬಳ ಬರುತ್ತದೆಯಲ್ಲ, ನಾವೇ ದುಡ್ಡು ಕೊಟ್ಟು ಕಷ್ಟಪಟ್ಟು ಕಲಿಸಿದ ಮೇಲೆ ಅವಳ ಹಣವೂ ನಮಗೇ ಅಲ್ಲವೇ ಎಂದುಕೊಳ್ಳುತ್ತಾರೆ. ಇಲ್ಲೇ ಸಮಸ್ಯೆ ಶುರುವಾಗುವುದು. 

ಗರ್ಭದಲ್ಲಿರೋ ಮಗುವಿನ ಚಲನಚಲನ ಪರೀಕ್ಷೆಗೆ ಕಿತ್ತಳೆ ಜ್ಯೂಸ್‌! ಖ್ಯಾತ ವೈದ್ಯರು ಹೇಳೋದೇನು ಕೇಳಿ..

ಮಗಳು ಅಷ್ಟು ದುಡಿಯುವ ಹೊತ್ತಿಗೆ ಮದುವೆಯ ವಯಸ್ಸಿಗೆ ಬಂದಿರುತ್ತಾಳೆ. ಆದರೆ ಸಂಬಳ ತಂದು ಅಪ್ಪ-ಅಮ್ಮನ ಕೈಗೆ ಕೊಡುತ್ತಿರುತ್ತಾಳೆ. ಆ ಹಣದಿಂದ ತಮಗೇನು ಬೇಕೋ ಅದನ್ನು ಮಾಡಿಕೊಳ್ಳುತ್ತಿರುತ್ತಾರೆ ಅಪ್ಪ-ಅಮ್ಮ. ಒಂದರ್ಥದಲ್ಲಿ ಮಗಳ ಸಂಬಳದ ಮೇಲೆ ಕುಟುಂಬ ನಡೆಯುತ್ತಿರುತ್ತದೆ. ಅಂಥ ಮಗಳು ಮದುವೆಯಾಗಿಬಿಟ್ಟರೆ ತೊಂದರೆ ಅನುಭವಿಸುವ ಸ್ಥಿತಿ ಅಪ್ಪ-ಅಮ್ಮಂದಿರದ್ದಾಗಿರುತ್ತದೆ! ಗಂಡು ಮಗನಾದರೆ ಮದುವೆಯಾದ ಮೇಲೂ ತಮಗೆ ದುಡ್ಡು ಕೊಡುತ್ತಾನೆ ಎನ್ನುವ ಭ್ರಮೆಯೂ ಒಂದಿದೆಯಲ್ಲ, ಆದರೆ ಹೆಣ್ಣುಮಗಳು ಕೊಟ್ಟ ಮೇಲೆ ಕುಲದಿಂದ ಹೊರಕ್ಕೆ, ಆಕೆಯ ಹಣ ಏನಿದ್ದರೂ ಗಂಡಿನ ಮನೆಗೆ. ಇಷ್ಟು ವರ್ಷ ಕಷ್ಟಪಟ್ಟು ದುಡಿದು ಆಕೆಗೆ ಓದಿಸಿದ್ದು ನಾವು, ಇನ್ನು ಹಣವನ್ನು ಗಂಡನ ಮನೆಗೆ ಕೊಡೋದಾ ಎನ್ನುವ ಮನಸ್ಥಿತಿ ಈ ಸಂದರ್ಭದಲ್ಲಿ ಪಾಲಕರನ್ನು ಕಾಡಲು ಶುರು ಮಾಡುತ್ತದೆ. ಇದೇ ಕಾರಣಕ್ಕೆ ಒಂದಲ್ಲ ಒಂದು ನೆಪ ಒಡ್ಡಿ ಮಗಳ ಮದುವೆಯನ್ನು ಮುಂದಕ್ಕೆ ಹಾಕುವ ಪ್ರಯತ್ನ ಮಾಡಲಾಗುತ್ತದೆ. ಈ ಉದಾಹರಣೆ ದಿನನಿತ್ಯವೂ ಕಾಣಸಿಕ್ಕರೂ ಆ ಬಗ್ಗೆ ಸೊಗಸಾಗಿ ಹೇಳಿದ್ದಾರೆ ಕೃಷ್ಣಮೂರ್ತಿ ಅವರು.

ಮಗಳಿಗೆ ಜಾತಕ ಬಂದಾಗ ಗಂಡಿನ ಮನೆ ದೂರ, ಅವರ ಮನೆಯ ದಾರಿ ಚಿಕ್ಕದು, ಕಾರು ನಿಲ್ಲಿಸಲು ಜಾಗವಿಲ್ಲ. ಅವರು ತಿಥಿಯ ಸಮಯದಲ್ಲಿ ನಾನ್​ವೆಜ್​ ಮಾಡುತ್ತಾರೆ.... ಹೀಗೆ ಇಲ್ಲಸಲ್ಲದ ನೆಪಗಳನ್ನು ಒಡ್ಡಿ ಮಗಳ ಮದುವೆಯನ್ನು ಮುಂದಕ್ಕೆ ಹಾಕುವುದನ್ನು ನಾನು ನೋಡಿದ್ದೇನೆ. ಆ ಮಗಳಿಗೆ ಮದುವೆಯ ಆಸೆಯಿದ್ದರೂ, ಬರುವ ಗಂಡನ್ನೇ ಮದುವೆಯಾಗಲು ಬಯಸಿದ್ದರೂ, ಅಲ್ಲಿರುವ ಎಲ್ಲಾ ವ್ಯವಸ್ಥೆಗಳಿಗೆ ಆಕೆ ಒಪ್ಪಿಕೊಂಡರೂ ಇತ್ತ ಮಗಳಿಗೆ ಸರಿಯಾದ ವ್ಯವಸ್ಥೆ ಇದ್ದರಷ್ಟೇ ಮದುವೆ ಮಾಡಿಸುವುದು ಎನ್ನುವ ನೆಪವೊಡ್ಡಿ ಹೆಣ್ಣುಮಕ್ಕಳಿಗೆ ಅಪ್ಪ-ಅಮ್ಮನೇ ವಿಲನ್​ ಆಗ್ತಿದ್ದಾರೆ, ಮಗಳಿನ ಮದುವೆಯ ಕನಸಿನ ಗೋಪುರವನ್ನು ಪಾಲಕರೇ ಛಿದ್ರ ಮಾಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಇವರು ಈ ವಿಷಯವನ್ನು ಹೇಳಿದ್ದಾರೆ. ಇನ್ನು ಮನಃಶಾಸ್ತ್ರಜ್ಞರು ಹೇಳುವುದು ಕೂಡ ಇದನ್ನೇ. ತಾವ್ಯಾಕೆ ಮಗಳ ಮದುವೆಯನ್ನು ಮುಂದೂಡುತ್ತಿದ್ದೇವೆ ಎನ್ನುವುದು ಎಷ್ಟೋ ಬಾರಿ ಅಪ್ಪ-ಅಮ್ಮನಿಗೆ ಗೊತ್ತಿರುವುದೇ ಇಲ್ಲ. ಆದರೆ ಕಾರಣ ಇರುವುದು ಇಲ್ಲೇ. ಅದು ಮಗಳ ಮೇಲಿನ ಮೋಹಕ್ಕೆ ಅಲ್ಲ, ಬದಲಿಗೆ ಅವಳು ಹೋದರೆ ತಮ್ಮ ಕುಟುಂಬಕ್ಕೆ ಆಧಾರ ಏನು ಎನ್ನುವ ಚಿಂತೆ ಅವರಲ್ಲಿ ಕಾಡುತ್ತಿರುತ್ತದೆ, ಇದೇ ಕಾರಣಕ್ಕೂ ಇಂದು ಹೆಣ್ಣುಮಕ್ಕಳಿಗೆ ಮದುವೆಯಾಗುತ್ತಲೇ ಇಲ್ಲ ಎನ್ನುತ್ತಾರೆ. ಇನ್ನು ಗಂಡುಮಕ್ಕಳ ವಿಷಯದಲ್ಲಿಯೂ ಹೀಗೆಯೇ ಆಗುವುದು ಇದೆ, ಸೊಸೆ ಬಂದರೆ, ಮಗ ದುಡಿಯುವ ದುಡ್ಡನ್ನು ಅವಳಿಗೇ ಕೊಟ್ಟುಬಿಟ್ಟರೆ ಎನ್ನುವ ಭಯದಲ್ಲಿ ಅಪ್ಪ-ಅಮ್ಮ ಇರುತ್ತಾರೆ ಎನ್ನುತ್ತಾರೆ ಮನಃಶಾಸ್ತ್ರಜ್ಞರು. 

ಮಿಡ್ಲ್‌ ಕ್ಲಾಸ್‌ ಜನರಿಗೆ ಗುಡ್‌ ನ್ಯೂಸ್‌: 'ಮೊದ್ಲು ಮದ್ವೆಯಾಗಿ, ಆಮೇಲೆ ಹಣ ಕೊಡಿ’ ಆಫರ್‌!

YouTube video player