Asianet Suvarna News Asianet Suvarna News

ಪ್ರಣಯಕ್ಕೆ ತೊಂದರೆಯಾಗುತ್ತೆ ಅನ್ನೋ ಕಾರಣಕ್ಕೆ ಮಕ್ಕಳು ಬೇಡ ಅಂತಾರಂತೆ ಈ ಜನರೇಷನ್ ಜೋಡಿ!

ಈ ಜಮಾನಾದ ಜೋಡಿಗಳು ಮಕ್ಕಳು ಬೇಡವೆಂದೇ ಹೇಳುತ್ತಾರೆ. ಮಕ್ಕಳು ಯಾಕೆ ಬೇಕು ಅನ್ನುವುದಕ್ಕೆ ಸಾಕಷ್ಟು ಉತ್ತಮ ಕಾರಣಗಳಿವೆ ನಿಜ; ಆದ್ರೆ ಮಕ್ಕಳು ಮಾಡಿಕೊಳ್ಳದಿರಲೂ ಹಲವು ಸಕಾರಣಗಳಿವೆ. ಅವುಗಳಲ್ಲಿ 16 ಇಲ್ಲಿವೆ.

Current generation giving 16 reason for not having kids though married
Author
First Published Sep 28, 2023, 12:25 PM IST

ಮದುವೆಯಾದ ಜೋಡಿಗೆ ಮಗು ಮಾಡಬೇಕೋ ಬೇಡವೋ, ಬೇಕಾದ್ರೆ ಯಾವಾಗ, ಬೇಡವಾದರೆ ಯಾಕೆ ಬೇಡ ಅನ್ನೋದೆಲ್ಲಾ ಜೀವನ್ಮರಣದಷ್ಟೇ ಗಂಭೀರವಾದ ಪ್ರಶ್ನೆಗಳು. ಅದರಲ್ಲೂ ಈ ಜಮಾನಾದ ಜೋಡಿಗಳು ಮಕ್ಕಳು ಬೇಡವೆಂದೇ ಹೇಳುತ್ತಾರೆ. ಮಕ್ಕಳು ಯಾಕೆ ಬೇಕು ಅನ್ನುವುದಕ್ಕೆ ಸಾಕಷ್ಟು ಉತ್ತಮ ಕಾರಣಗಳಿವೆ ನಿಜ; ಆದ್ರೆ ಮಕ್ಕಳು ಮಾಡಿಕೊಳ್ಳದಿರಲೂ ಹಲವು ಸಕಾರಣಗಳಿವೆ. ಅವುಗಳಲ್ಲಿ 16 ಇಲ್ಲಿವೆ.

1. ಮಕ್ಕಳಿಗೆ ಸಾಕಷ್ಟು ಹಣ ಖರ್ಚಾಗುತ್ತದೆ: ಮಕ್ಕಳನ್ನು ಬೆಳೆಸುವುದು ಅಗ್ಗವಲ್ಲ. ವಿಶೇಷವಾಗಿ ನಮ್ಮ ಆಧುನಿಕ, ಅಭಿವೃದ್ಧಿ ಹೊಂದಿದ ಜಗತ್ತಿನಲ್ಲಿ. ಅನೇಕರಿಗೆ, ಮಗುವನ್ನು ಹೊಂದುವುದರಿಂದ ಆಗುವ ಭಯಂಕರ ಖರ್ಚೇ ಅದನ್ನು ತಡೆಗಟ್ಟಲು ಪ್ರಮುಖ ಕಾರಣವಾಗಿದೆ. ಎರಡು ಮಕ್ಕಳನ್ನು ಹೊಂದಿರುವ ಸರಾಸರಿ ಮಧ್ಯಮ ಆದಾಯದ ಕುಟುಂಬವು ಹುಟ್ಟಿನಿಂದ 17 ವರ್ಷದವರೆಗೆ ಮಗುವಿಗಾಗಿ ಸರಾಸರಿ 2.6 ಕೋಟಿ ರೂ. ಖರ್ಚು ಮಾಡುತ್ತದೆ.

2. ಮಕ್ಕಳು ನಿಮ್ಮನ್ನು ನಿದ್ರಾಹೀನರನ್ನಾಗಿ ಮಾಡುತ್ತಾರೆ: ಮಕ್ಕಳು, ವಿಶೇಷವಾಗಿ ನವಜಾತ ಶಿಶುಗಳು, ರಾತ್ರಿಯಲ್ಲಿ ನಿಮ್ಮನ್ನು ಎಚ್ಚರವಾಗಿರಿಸುತ್ತವೆ. ಕೇವಲ ನವಜಾತ ಶಿಶುಗಳಲ್ಲ. ದೊಡ್ಡ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ದುಃಸ್ವಪ್ನಗಳು, ಬಾತ್ರೂಮ್‌ಗೆ ಹೋಗಬೇಕು. ಸಂಶೋಧಕರ ಪ್ರಕಾರ ಹೆತ್ತವರು ಆರು ವರ್ಷಗಳವರೆಗೆ ನಿದ್ರಾಹೀನತೆಯನ್ನು ಎದುರಿಸುತ್ತಾರೆ.

3. ನಿಮ್ಮ ಪ್ರಣಯ ಸಂಬಂಧಕ್ಕೆ ಹಾನಿ: ಮಕ್ಕಳನ್ನು ಹೊಂದಿದ ನಂತರ ನಿಮ್ಮ ಪ್ರಣಯ ಸಂಬಂಧಕ್ಕೆ ಹಾನಿಯಾಗುತ್ತದೆ. "ಸಂಬಂಧ ತೃಪ್ತಿಯಲ್ಲಿನ ಕುಸಿತದ ದರವು ಮಕ್ಕಳಿಲ್ಲದ ದಂಪತಿಗಳಿಗಿಂತ ಮಕ್ಕಳನ್ನು ಹೊಂದಿರುವ ದಂಪತಿಗಳಿಗೆ ಸುಮಾರು ಎರಡು ಪಟ್ಟು ಹೆಚ್ಚು" ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಕಾರಣ? ಪ್ರೇಮಿಗಳಾಗುವ ಬದಲು, ನೀವು ಈಗ ಪೋಷಕರಾಗಿದ್ದೀರಿ ಮತ್ತು ನಿಮ್ಮ ಗಮನ ನಿಮ್ಮ ಮಕ್ಕಳ ಮೇಲೆ ಇರುತ್ತದೆ; ನಿಮ್ಮ ಸಂಗಾತಿಯ ಮೇಲೆ ಅಲ್ಲ.

4. ನಿಮ್ಮ ಲೈಂಗಿಕ ಜೀವನಕ್ಕೆ ಹಾನಿ: ನೀವು ಮಗುವನ್ನು ಪಡೆದ ನಂತರ ಲೈಂಗಿಕ ಅನ್ಯೋನ್ಯತೆಯು ಕಡಿಮೆಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಮೊದಲನೆಯದಾಗಿ, ಹೆರಿಗೆಯ ನಂತರ ನಾಲ್ಕರಿಂದ ಆರು ವಾರಗಳವರೆಗೆ ಮಹಿಳೆಯರು ಸಂಭೋಗದಿಂದ ದೂರವಿರಬೇಕು ಎಂದು ವೈದ್ಯರು ಸೂಚಿಸುತ್ತಾರೆ. ನಂತರವೂ, ಮಹಿಳೆಯರು ಲೈಂಗಿಕ ಸಮಯದಲ್ಲಿ ನೋವು ಅನುಭವಿಸಬಹುದು. ಆಯಾಸ, ಒತ್ತಡ ಮತ್ತು ಋಣಾತ್ಮಕ ದೇಹದ ಚಿತ್ರಣದಿಂದಾಗಿ ಬಯಕೆ ಕಡಿಮೆಯಾಗಬಹುದು.

5. ಮಕ್ಕಳು ಪರಿಸರಕ್ಕೆ ಅಪಾಯಕಾರಿ: ಒಂದು ಅಧ್ಯಯನದ ಪ್ರಕಾರ "ಮಕ್ಕಳನ್ನು ಹೊಂದುವುದು ಒಬ್ಬ ವ್ಯಕ್ತಿಯು ಪರಿಸರಕ್ಕೆ ಮಾಡಬಹುದಾದ ಅತ್ಯಂತ ವಿನಾಶಕಾರಿ ಸಂಗತಿ!" ಸ್ವೀಡನ್‌ನ ಸಂಶೋಧಕರ ಪ್ರಕಾರ, ಪ್ರತಿ ಮಗುವಿಗೆ ನೀವು ವರ್ಷಕ್ಕೆ 58.6 ಟನ್‌ಗಳಷ್ಟು ಕಾರ್ಬನ್‌ ಹೊರಸೂಸುವಿಕೆ ಮಾಡುತ್ತೀರಿ. ನಿಮ್ಮ ಕಾರಿನಿಂದ ವರ್ಷಕ್ಕೆ ಕೇವಲ 2.4 ಟನ್‌ ಕಾರ್ಬನ್‌ ಸೂಸುತ್ತದೆ!

6. ಮಕ್ಕಳು ಬಹಳಷ್ಟು ಕಸ ಸೃಷ್ಟಿಸುತ್ತಾರೆ: ಪ್ರತಿ ವರ್ಷ, ಉತ್ತರ ಅಮೆರಿಕಾದಲ್ಲಿನ ಶಿಶುಗಳು 30ರಿಂದ 40 ಶತಕೋಟಿ ಬಿಸಾಡಬಹುದಾದ ಡೈಪರ್‌ಗಳನ್ನು ಬಳಸುತ್ತಾರೆ. ಅದು ನೆಲವನ್ನು ತುಂಬುತ್ತದೆ. ಬ್ರಿಟನ್‌ನಲ್ಲಿ ಅಂದಾಜು ಮೂರು ಶತಕೋಟಿ ಡೈಪರ್‌ಗಳನ್ನು ಪ್ರತಿ ವರ್ಷ ಎಸೆಯಲಾಗುತ್ತದೆ.

7. ಮಕ್ಕಳು ನಿಮ್ಮ ಗಳಿಕೆಯ ಶಕ್ತಿಯನ್ನು ಘಾಸಿಗೊಳಿಸಬಹುದು: ಮಕ್ಕಳನ್ನು ಹೊಂದಿರುವ ಪೋಷಕರ- ವಿಶೇಷವಾಗಿ ಮಹಿಳೆಯರ- ಕೆಲಸ, ಆದಾಯಕ್ಕೆ ಋಣಾತ್ಮಕವಾಗಿ ಪರಿಣಾಮ ಬೀರಬಹುದು. US ಸೆನ್ಸಸ್ ಬ್ಯೂರೋ ಪ್ರಕಾರ, 25ರಿಂದ 35 ವರ್ಷದೊಳಗಿನ, ಮಕ್ಕಳನ್ನು ಹೊಂದಿರುವ ಮಹಿಳೆಯರು ವೇತನದಲ್ಲಿ ಲಿಂಗ ಅಂತರಕ್ಕೊಳಗಾಗುತ್ತಾರೆ.

8. ಸ್ನೇಹಿತರನ್ನು ಕಳೆದುಕೊಳ್ಳುವಿರಿ: ಸಮಯದ ಕೊರತೆ, ಬಿಡುವಿಲ್ಲದ ವೇಳಾಪಟ್ಟಿಗಳು ಮತ್ತು ಬದಲಾಗುತ್ತಿರುವ ಆದ್ಯತೆಗಳ ಕಾರಣದಿಂದಾಗಿ, ಮಕ್ಕಳು ನಿಮ್ಮ ಹತ್ತಿರದ ಸ್ನೇಹದ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರಬಹುದು. ಇದರಿಂದಾಗಿ ನಿಮ್ಮ ಸ್ನೇಹವಲಯ ಬದಲಾಯಿಸಲು ಅಥವಾ ಸಂಪೂರ್ಣವಾಗಿ ಕರಗಲು ಕಾರಣವಾಗಬಹುದು.

9. ನಿಮ್ಮ ಆರೋಗ್ಯಕ್ಕೆ ಧಕ್ಕೆ: ಮಿನ್ನೇಸೋಟ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ ಮಕ್ಕಳಿಲ್ಲದ ಮಹಿಳೆಯರಿಗಿಂತ ತಾಯಂದಿರು ಹೆಚ್ಚು ಕ್ಯಾಲೊರಿಗಳನ್ನು ಸೇವಿಸುತ್ತಾರೆ ಮತ್ತು ಕಡಿಮೆ ದೈಹಿಕ ಚಟುವಟಿಕೆ ಮಾಡುತ್ತಾರೆ. ತಂದೆಯಾದ ನಂತರ ಪುರುಷರು ಸಹ ನಕಾರಾತ್ಮಕ ಫಲಿತಾಂಶ ಹೊಂದಿದ್ದಾರೆ. ಹೆಚ್ಚಿನ BMI ಹೊಂದಿರುವ, ಕಡಿಮೆ ಆರೋಗ್ಯಕರ ಆಹಾರವನ್ನು ಸೇವಿಸಿದ ಮತ್ತು ಹೆಚ್ಚು ಸಕ್ಕರೆ ಪಾನೀಯಗಳು, ಕ್ಯಾಲೋರಿಗಳು ಮತ್ತು ಸ್ಯಾಚುರೇಟೆಡ್ ಕೊಬ್ಬನ್ನು ಸೇವಿಸುವ ತಾಯಂದಿರಿಗೆ ಇದು ಚಿಂತಾಜನಕ ವಿಷಯ. ಇಬ್ಬರೂ ಪೋಷಕರು ಮಕ್ಕಳಿಲ್ಲದ ದಂಪತಿಗಿಂತ ಕಡಿಮೆ ವ್ಯಾಯಾಮ ಮಾಡುತ್ತಾರೆ.

10. ಮಾನಸಿಕ ಆರೋಗ್ಯಕ್ಕೆ ಹಾನಿ: ಹಲವಾರು ಅಧ್ಯಯನಗಳ ಪ್ರಕಾರ, ಪೋಷಕರು ಖಿನ್ನತೆಗೆ ಒಳಗಾಗುವ ಅಪಾಯವನ್ನು ಹೊಂದಿರುತ್ತಾರೆ. ಖಿನ್ನತೆಯು ಮಕ್ಕಳನ್ನು ಹೊಂದುವುದರ ಸಾಮಾನ್ಯ ಅಡ್ಡ ಪರಿಣಾಮವಾಗಿದೆ!

11. ಮಕ್ಕಳು ಒತ್ತಡ ಹೇರಬಹುದು: ನಿಮ್ಮ ಸಮಯ ಮತ್ತು ಗಮನವನ್ನು ಬೇಡುವುದರಿಂದ ಹಿಡಿದು ನಿಮ್ಮ ಪರ್ಸ್‌ನ ಮೇಲೆ ಒತ್ತಡ ಹೇರುವವರೆಗೆ ಮಕ್ಕಳು ನಿಜವಾಗಿಯೂ ತಮ್ಮ ಪೋಷಕರಿಗೆ ಒತ್ತಡವನ್ನು ಉಂಟುಮಾಡಬಹುದು. ಪೋಷಕರ ದೈನಂದಿನ ಒತ್ತಡವು ದೀರ್ಘಕಾಲದಲ್ಲಿ ಭಯಂಕರವಾಗಬಹುದು.

12. ಸಾಮಾಜಿಕ ಜೀವನ ಹಾಳಾಗಬಹುದು: ಮಕ್ಕಳು ಸಾಮಾಜಿಕ ಜೀವನವನ್ನು ಹಲವು ವಿಧಗಳಲ್ಲಿ ಕಠಿಣಗೊಳಿಸಬಹುದು. ಹೊರಗೆ ಹೋಗಲು ಸಾಧ್ಯವಾಗದಂತೆ ನೀವು ದಣಿದಿರಬಹುದು. ಶಿಶುಪಾಲಕರು ಸಿಗಲಿಕ್ಕಿಲ್ಲ. ಸೋಶಿಯಲ್‌ ಡ್ರಿಂಕಿಂಗ್‌ ಹ್ಯಾಂಗೋವರ್ ಹೊಂದಲು ಸಾಧ್ಯವಿಲ್ಲ. ಏಕೆಂದರೆ ಮರುದಿನ ಬೆಳಗಿನ ಜಾವ ಏಳಬೇಕಾಗುತ್ತದೆ.

ಮಕ್ಕಳ ಪಾಲನೆ ಅಂತ ಪೋಷಕರು ಎಲ್ಲವನ್ನೂ ತ್ಯಾಗ ಮಾಡಿದ್ರೆ ಏನು ಚೆಂದ?

13. ಮಕ್ಕಳು ವಿಚ್ಛೇದನಕ್ಕೆ ಕಾರಣವಾಗಬಹುದು: ಮಕ್ಕಳನ್ನು ಹೊಂದಿದ ನಂತರ ನಿಮ್ಮ ಪ್ರಣಯ ಸಂಬಂಧ ತೊಂದರೆಗೊಳಗಾದರೆ, ಅದನ್ನು ಸರಿಪಡಿಸದೆ ಬಿಟ್ಟರೆ, ಅದು ಅಂತಿಮವಾಗಿ ವಿಚ್ಛೇದನಕ್ಕೆ ಕಾರಣವಾಗಬಹುದು. ಆದರೆ ಇದು ಪೂರ್ತಿ ನಿಜವೂ ಅಲ್ಲ. ನಿಜವಾಗಿ ವಿಚ್ಛೇದನ ಪಡೆಯುವ ಸಾಧ್ಯತೆ ಕಡಿಮೆ. ಯಾಕೆಂದರೆ, ಅತೃಪ್ತರಾಗಿದ್ದರೂ ಮಕ್ಕಳಿಗಾಗಿ ಒಟ್ಟಿಗೆ ಇರಬೇಕೆಂದು ಅವರು ಭಾವಿಸುತ್ತಾರೆ.

14. ಮಕ್ಕಳು ನಿಮ್ಮ ಸಮಯ ಕೊಲ್ಲುತ್ತಾರೆ: ಡೈಲಿ ಮೇಲ್‌ನಲ್ಲಿ ವರದಿಯಾದ ಅಧ್ಯಯನದ ಪ್ರಕಾರ, ಒಬ್ಬ ಸರಾಸರಿ ತಾಯಿ ದಿನಕ್ಕೆ ಕೇವಲ 17 ನಿಮಿಷ ವೈಯಕ್ತಿಕ ಸಮಯ ಹೊಂದಿರುತ್ತಾಳೆ. ಪೂರ್ಣ ಅರ್ಧ ಗಂಟೆಯೂ ಇಲ್ಲ! ಏಕೆಂದರೆ ಇಂದಿನ ತಾಯಂದಿರು ಕೆಲಸ ಮಾಡುತ್ತಾರೆ, ಮಕ್ಕಳನ್ನು ಬೆಳೆಸುತ್ತಾರೆ ಮತ್ತು ಮನೆಗೆಲಸದ ಸಿಂಹಪಾಲು ಮಾಡುತ್ತಾರೆ. ತಮಗಾಗಿ ಸಮಯ ಉಳಿಯುವುದಿಲ್ಲ.

15. ಮಕ್ಕಳ ವಿದ್ಯಾಭ್ಯಾಸದ ವೆಚ್ಚ: ನಿಮ್ಮ ಮಕ್ಕಳು ಜೀವನದಲ್ಲಿ ಯಶಸ್ವಿಯಾಗಬೇಕೆಂದು ನೀವು ಬಯಸಿದರೆ, ಅವರು ಉತ್ತಮ ಶಾಲೆಗೆ ಮತ್ತು ಕಾಲೇಜಿಗೆ ಹೋಗಬೇಕು. ಇದನ್ನು ಮಾಡಲು ಸಾಕಷ್ಟು ಹಣವನ್ನು ಖರ್ಚು ಮಾಡಲು ಸಿದ್ಧರಾಗಿರಬೇಕು.

16. ಮಕ್ಕಳು ಮನೆಯಿಂದಾಚೆ ಹೋಗುವುದಿಲ್ಲ: ನಿಮ್ಮ ಮಕ್ಕಳಿಗೆ 18 ವರ್ಷವಾದಾಗ ನಿಮ್ಮ ಪೋಷಕರ ಕರ್ತವ್ಯಗಳು ಕೊನೆಗೊಳ್ಳುತ್ತವೆ ಎಂದು ಯೋಚಿಸುತ್ತೀರಾ? ಇನ್ನೊಮ್ಮೆ ಆಲೋಚಿಸಿ! ಹೆಚ್ಚಿನ ಜೀವನ ವೆಚ್ಚದೊಂದಿಗೆ, ಹೆಚ್ಚುತ್ತಿರುವ ಯುವಜನರು ತಮ್ಮ 20 ಮತ್ತು 30ರ ದಶಕದಲ್ಲಿ ತಮ್ಮ ಪೋಷಕರೊಂದಿಗೆ ವಾಸಿಸಲು ಬಯಸುತ್ತಾರೆ.

Relationship Tips: ಕೋಪದಲ್ಲಾದರೂ ಇಂಥ ಮಾತುಗಳನ್ನ ಎಂದಿಗೂ ಆಡ್ಬೇಡಿ!
 

Follow Us:
Download App:
  • android
  • ios