Asianet Suvarna News Asianet Suvarna News

ನಿಸರ್ಗದ ಮಡಿಲು ಮಕ್ಕಳ ಮನಸ್ಸಿನ ಬೇಗುದಿಗೆ ಮದ್ದು...

ನಿಸರ್ಗ ಅಂದ್ರೆ ಖುಷಿಯ ಬುಗ್ಗೆ. ನಿಸರ್ಗದ ಒಡನಾಟ ಮನಸ್ಸಿನ ಬೇಗುದಿಗಳಿಗೆ ಮದ್ದು. ದೊಡ್ಡವರು ಮಾತ್ರವಲ್ಲ,ಮಕ್ಕಳು ಕೂಡ ನಿಸರ್ಗದ ಸಾಂಗತ್ಯದಲ್ಲಿ ಖುಷಿ ಅನುಭವಿಸುವ ಜೊತೆಗೆ ಪರಿಸರಸ್ನೇಹಿ ವರ್ತನೆಗಳನ್ನು ಕಲಿಯುತ್ತಾರೆ ಎಂದಿದೆ ಹೊಸ ಅಧ್ಯಯನ.

Children who  connected to nature are tend to be more happier
Author
Bangalore, First Published Mar 4, 2020, 2:09 PM IST

ಕೆಲವೇ ದಿನಗಳಲ್ಲಿ ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಪ್ರಾರಂಭವಾಗಲಿದೆ. ಮಕ್ಕಳಿಗೆ ರಜೆ ಬಂತೆಂದ್ರೆ ಹೆತ್ತವರಿಗೆ ಆತಂಕ ಶುರುವಾಗುತ್ತೆ. ರಜೆಯಲ್ಲಿ ಮಕ್ಕಳನ್ನು ಎಂಗೇಜ್ ಆಗಿಡೋದು ಹೇಗೆ ಎಂಬುದೇ ದೊಡ್ಡ ಚಿಂತೆ. ಹಳ್ಳಿಗಳಲ್ಲಿ ಈ ಸಮಸ್ಯೆ ಅಷ್ಟಾಗೇನೂ ಕಾಡಲ್ಲ. ಮಕ್ಕಳಿಗೆ ಆಟವಾಡಲು,ಸುತ್ತಾಡಲು ಸಾಕಷ್ಟು ಸ್ಥಳಗಳಿರುತ್ತವೆ, ಸ್ನೇಹಿತರು ಹಾಗೂ ಸಂಬಂಧಿಗಳೂ ಅಕ್ಕಪಕ್ಕದಲ್ಲೇ ಇರುತ್ತಾರೆ.ಆದ್ರೆ ನಗರಗಳಲ್ಲಿರುವ ಮಕ್ಕಳ ಕಥೆ ಬೇರೇನೆ. ಅಪ್ಪ-ಅಮ್ಮ ಇಬ್ಬರೂ ಬೆಳಗ್ಗೆ ಆಫೀಸ್‍ಗೆ ಹೋದ್ರೆ ವಾಪಸ್ ಬರೋದು ಸಂಜೇನೆ. ಹೀಗಾಗಿ ರಜೆ ಇರುವಾಗಲೂ ಡೇ ಕೇರ್‍ಗೇ ಹೋಗಿ ಸಮಯ ಕಳೆಯಬೇಕಾದ ಅನಿವಾರ್ಯತೆ. ಬೇಸಿಗೆ ಶಿಬಿರ, ಸ್ವಿಮ್ಮಿಂಗ್, ಸಂಗೀತ ಕ್ಲಾಸ್ ಎಂದು ಸ್ವಲ್ಪ ಸಮಯ ಎಂಗೇಜ್ ಆಗಿರಬಹುದು. ಆದ್ರೆ ಎಲ್ಲವೂ ನಿರ್ದಿಷ್ಟ ಗೋಡೆ, ಕಂಪೌಂಡ್‍ಗಳ ಒಳಗಿನ ಬದುಕೇ. ಹಸಿರು ಹೊದ್ದ ಕಾಡು, ಬೆಟ್ಟ-ಗುಡ್ಡ, ನದಿ, ತೋಟ, ಗದ್ದೆ, ಹಕ್ಕಿಗಳ ಕಲರವ ಇದ್ಯಾವುದೂ ಕಾಣಿಸದು, ಕೇಳಿಸದು. ಆದ್ರೆ ನಿಸರ್ಗದ ಮಡಿಲಲ್ಲಿ ಮಕ್ಕಳನ್ನು ಬಿಡುವುದರಿಂದ ಅವರಿಗೆ ಸಿಕ್ಕಾಪಟ್ಟೆ ಖುಷಿಯಾಗುವ ಜೊತೆಗೆ ಪರಿಸರಸ್ನೇಹಿ ವರ್ತನೆಗಳನ್ನು ಕೂಡ ರೂಢಿಸಿಕೊಳ್ಳುತ್ತಾರೆ ಎಂದು ಹೊಸ ಅಧ್ಯಯನ ಹೇಳಿದೆ. ಹೀಗಾಗಿ ಈ ಬೇಸಿಗೆ ರಜೆಯಲ್ಲಿ ಸ್ವಲ್ಪ ಸಮಯವಾದ್ರೂ ಮಕ್ಕಳನ್ನು ನಿಸರ್ಗದ ಮಡಿಲಲ್ಲಿ ಹ್ಯಾಪಿ ಆಗಿರಲು ಬಿಡುವ ಬಗ್ಗೆ ಹೆತ್ತವರು ಈಗಲೇ ಪ್ಲ್ಯಾನ್ ರೆಡಿ ಮಾಡ್ಬಹುದು.

ಸಂಗಾತಿ ಇಲ್ಲದೇ ಮಕ್ಕಳ ಬೆಳೆಸುತ್ತಿದ್ದಾರೆ ಈ ಬಾಲಿವುಡ್ ಸಿಂಗಲ್ ಪೇರೆಂಟ್ಸ್

ಏನಿದು ಅಧ್ಯಯನ?
ಮೆಕ್ಸಿಕನ್ ಸಿಟಿಯಲ್ಲಿ 9 ಹಾಗೂ 12 ವಯಸ್ಸಿನ ನಡುವಿನ 296 ಮಕ್ಕಳನ್ನು ಅಧ್ಯಯನಕ್ಕೊಳಪಡಿಸಲಾಗಿತ್ತು. ಈ ಮಕ್ಕಳಿಗೆ ನಿಸರ್ಗದೊಂದಿಗಿರುವ ಸಂಬಂಧ, ಪರಿಸರ ಕಾಳಜಿ, ಪರಿಸರ ಪ್ರೇಮಕ್ಕೆ ಸಂಬಂಧಿಸಿದ ವರ್ತನೆಗಳು ಹಾಗೂ ಅದರಿಂದ ಅವರಿಗೆ ಸಿಗುವ ಖುಷಿಯನ್ನು ಅಳೆಯಲಾಯಿತು. ಅಂದ್ರೆ ನಿಸರ್ಗ ಹಾಗೂ ಮಾನವನ ನಡುವಿನ ಸಂಬಂಧ, ಪರಿಸರ ಕಾಳಜಿಗೆ ಕುರಿತ ಹೇಳಿಕೆಗಳಿಗೆ ಅವರ ಒಪ್ಪಿಗೆಯನ್ನು ಆಧರಿಸಿ ಪರಿಶೀಲಿಸಿದಾಗ ನಿಸರ್ಗದ ಸಾಂಗತ್ಯದಲ್ಲಿರುವ ಮಕ್ಕಳು ಇತರರಿಗಿಂತ ಖುಷಿಯಾಗಿರುವ ಜೊತೆಗೆ ಪರಿಸರ ಕಾಳಜಿ ಹೊಂದಿರುವುದು ಬೆಳಕಿಗೆ ಬಂತು.

ಕಾಡಬಹುದು ವಿಚಿತ್ರ ರೋಗ
ನಿಸರ್ಗದ ಜೊತೆ ಬೆರೆಯದ ಮಕ್ಕಳು ಭವಿಷ್ಯದಲ್ಲಿ ‘ನೇಚರ್ ಡಿಫಿಸಿಟ್ ಡಿಸಾರ್ಡರ್’ ಎಂಬ ಖಾಯಿಲೆಗೆ ತುತ್ತಾಗುವ ಸಾಧ್ಯತೆಯಿದೆ ಎಂದು ಈ ಅಧ್ಯಯನ ಹೇಳಿದೆ. ಅಂದ್ರೆ ನಿಸರ್ಗದೊಂದಿಗೆ ಉತ್ತಮ ಬಾಂಧವ್ಯ ಹೊಂದಿರದ ವ್ಯಕ್ತಿಗಳು ಕಾಡು ನಾಶ ಸೇರಿದಂತೆ ಭೂಮಿಗೆ ಹಾನಿಯುಂಟು ಮಾಡುವ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆಯಿರುತ್ತದೆ. ಅದೇ ನಿಸರ್ಗದೊಂದಿಗೆ ಬೆಳೆದ, ಅದರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ವ್ಯಕ್ತಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡುತ್ತಾನೆ. 

ಮನುಷ್ಯ ಪ್ರಕೃತಿಯ ಒಂದು ಭಾಗ. ಪ್ರಕೃತಿ ಉಳಿದ್ರೆ ಮಾತ್ರ ನಮಗೆ ಉಳಿಗಾಲ ಎಂಬುದನ್ನು ಬಾಲ್ಯದಲ್ಲೇ ಮಕ್ಕಳಿಗೆ ತಿಳಿಸುವ ಕಾರ್ಯವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕಾದ ಅಗತ್ಯವಂತು ಇಂದು ಹಿಂದಿಗಿಂತ ಹೆಚ್ಚಿದೆ. ತಾಪಮಾನ ಹೆಚ್ಚಳ, ಅರಣ್ಯನಾಶ, ಕೆಲವೊಂದು ಜೀವ ಪ್ರಭೇದಗಳ ನಾಶ ಸೇರಿದಂತೆ ನಿಸರ್ಗದ ಮೇಲಾಗುತ್ತಿರುವ ನಿರಂತರ ದೌರ್ಜನ್ಯ ಭವಿಷ್ಯದಲ್ಲಿ ಭೂಮಿ ಮೇಲಿನ ಬದುಕನ್ನು ನರಕವಾಗಿಸುವ ಭಯವಂತೂ ಇದ್ದೇಇದೆ. ಹೀಗಾಗಿ ಮಕ್ಕಳಿಗೆ ಪ್ರಕೃತಿಯ ಒಡನಾಟ ಕಲ್ಪಿಸುವ ಕಾರ್ಯವನ್ನು ತುರ್ತಾಗಿ ಮಾಡಬೇಕಿದೆ.

ಬ್ರೇಕ್‌ಅಪ್‌ನಲ್ಲಿ ಹುಟ್ಟಿದ ವೈರಾಗ್ಯ ಎಲ್ಲೀತನಕ

ಏನು ಮಾಡ್ಬಹುದು?
-ನಿಸರ್ಗ ಸೌಂದರ್ಯದಿಂದ ಕೂಡಿರುವ ಅಂದ್ರೆ ಕಾಡು, ಜಲಪಾತ, ಬೆಟ್ಟ-ಗುಡ್ಡಗಳಿಂದ ಕೂಡಿರುವ ತಾಣಗಳಿಗೆ ಮಕ್ಕಳನ್ನು ಆಗಾಗ ಪ್ರವಾಸಕ್ಕೆ ಕರೆದುಕೊಂಡು ಹೋಗಿ.
-ನಗರದಲ್ಲಿ ನೆಲೆಸಿದ್ರೆ ಸಮೀಪದಲ್ಲಿರುವ ಅರಣ್ಯ, ಅಭಯಾರಣ್ಯ, ನದಿಗಳಿರುವ ಸ್ಥಳಗಳಿಗೆ ಮಕ್ಕಳನ್ನು ರಜಾ ದಿನಗಳಂದು ಪಿಕ್‍ನಿಕ್‍ಗೆ ಕರೆದೊಯ್ಯಿರಿ.
-ಬೇಸಿಗೆ ರಜೆ ಸೇರಿದಂತೆ ದೀರ್ಘಕಾಲ ಸ್ಕೂಲ್‍ಗೆ ರಜೆಯಿರುವಾಗ ಹಳ್ಳಿಯಲ್ಲಿರುವ ಅಜ್ಜಿ ಮನೆ ಅಥವಾ ಸಂಬಂಧಿಕರ ಮನೆಗಳಲ್ಲಿ ಮಕ್ಕಳು ಸ್ವಲ್ಪ ದಿನಗಳನ್ನು ಕಳೆಯುವಂತೆ ವ್ಯವಸ್ಥೆ ಮಾಡಿ. ಇದರಿಂದ ಸಹಜವಾಗಿ ನಿಸರ್ಗದೊಂದಿಗೆ ಬೆರೆಯುವ ಅವಕಾಶ ಅವರಿಗೆ ಸಿಗುತ್ತದೆ.
-ಪ್ರಾಣಿ, ಪಕ್ಷಿಗಳು, ಮರ-ಗಿಡಗಳ ಬಗ್ಗೆ ಮಕ್ಕಳಿಗೆ ಪರಿಚಯ ಮಾಡಿಕೊಡಿ. ಅವುಗಳ ಪ್ರಾಮುಖ್ಯತೆ ಬಗ್ಗೆಯೂ ತಿಳಿಸಿ.
-ನೀರು, ಗಾಳಿ, ಮಣ್ಣು ಸೇರಿದಂತೆ ಪ್ರಕೃತಿಯಲ್ಲಿರುವ ಪ್ರತಿ ವಸ್ತುವಿನ ಮಹತ್ವವನ್ನು ಮನದಟ್ಟು ಮಾಡಿಸಬೇಕು. 

Follow Us:
Download App:
  • android
  • ios