ಮೂವರು ಉನ್ನತ ವ್ಯಾಸಾಂಗ ಮಾಡಿದ್ದಾರೆ. ಉತ್ತಮ ಕೆಲಸ ಪಡೆದುಕೊಂಡಿದ್ದಾರೆ. ಆದರೆ ತಮ್ಮ ಜನಾಂಗದ ಸಂಪ್ರದಾಯ ಉಳಿಸಲು ಇಬ್ಬರು ಸಹೋದರನ್ನು ಯುವತಿ ಮದುವೆಯಾಗಿದ್ದಾಳೆ. ಮೂವರು ಒಪ್ಪಿ-ಅಪ್ಪಿ ಈ ಮದುವೆ ನಡೆದಿದೆ. ಆದರೆ ಮದುವೆ ಸುದ್ದಿ ತಿಳಿಯುತ್ತಿದ್ದಂತೆ ಹಲವರು ಒಂದೇ ಪ್ರಶ್ನೆ ಕೇಳಿದ್ದಾರೆ.

ಹಿಮಾಚಲ ಪ್ರದೇಶ (ಜು.19) ಒಂದು ಸಮುದಾಯ, ಜನಾಂಗದಲ್ಲಿ ಒಂದೊಂದು ಸಂಪ್ರದಾಯವಿದೆ. ಈ ಪೈಕಿ ಹಲವು ನಶಿಸಿ ಹೋಗಿದ್ದರೆ, ಮತ್ತೆ ಕೆಲವು ನಿರ್ಬಂಧಿಸಲಾಗಿದೆ. ಇನ್ನು ಕೆಲವು ಅಲ್ಲೊಂದು ಇಲ್ಲೊಂದು ಆಚರಣೆಯಲ್ಲಿದೆ. ಇದೀಗ ಸುಶಿಕ್ಷಿತ ಕುಟುಂಬದ ಮೂವರು ತಮ್ಮ ಜನಾಂಗದ ಸಂಪ್ರದಾಯ ಉಳಿಸಲು ಮದುವೆಯಾಗಿದ್ದಾರೆ. ಒಬ್ಬಳು ಯುವತಿ, ಇಬ್ಬರು ಸಹೋದರರ ಮದುವೆ ನಡಿದಿದೆ. ಯುವತಿ ಇಬ್ಬರು ಸಹೋದರರನ್ನು ಮದುವೆಯಾಗಿದ್ದಾಳೆ. ಯುವತಿ ಸುನೀತಾ ಹಾಗೂ ಇಬ್ಬರು ಸಹೋದರಾದ ಪ್ರದೀಪ್ ಹಾಗೂ ಕಪಿಲ್ ಒಪ್ಪಿ ಅಪ್ಪಿಕೊಂಡು ಆಗಿರುವ ಮದುವೆ. ಅದ್ಧೂರಿಯಾಗಿ ಮದುವೆ ಕೂಡ ನಡೆದಿದೆ. ಆದರೆ ಈ ಮಾಹಿತಿ ತಿಳಿಯುತ್ತಿದ್ದಂತೆ ಹಲವರು ಒಂದೇ ಪ್ರಶ್ನೆ ಕೇಳುತ್ತಿದ್ದಾರೆ.

ಹಟ್ಟಿ ಸಂಪ್ರದಾಯ ಉಳಿಸಲು ವಿಶೇಷ ಮದುವೆ

ಈ ವಿಶೇಷ ಮದುವೆ ನಡಿದಿರುವುದು ಹಿಮಾಚಲ ಪ್ರದೇದ ಹಿಲ್ಲಾಯಿ ಗ್ರಾಮದಲ್ಲಿ. ಹಿಮಾಚಲ ಪ್ರದೇಶದ ಬುಡಕಟ್ಟು ಹಟ್ಟಿ ಸಮುದಾಯದ ಈ ವಿಶೇಷ ಮದುವೆ ಇದೀಗ ಭಾರಿ ಸದ್ದು ಮಾಡುತ್ತಿದೆ. ಮೂರು ದಿನಗಳ ಕಾಲ ಈ ಮದುವೆ ನಡೆದಿದೆ. ಹಟ್ಟಿ ಸಮುದಾಯದಲ್ಲಿ ಈ ರೀತಿ ಮದುವೆ ಸಂಪ್ರದಾಯವಾಗಿದೆ. ಆದರ ಈ ಸಂಪ್ರದಾಯವನ್ನು ಬಹುತೇಕರು ಪಾಲಿಸುತ್ತಿಲ್ಲ. ಈ ರೀತಿ ಮದುವೆ ಇತ್ತೀಚಿನ ವರ್ಷಗಳಲ್ಲಿ ನಡೆದಿಲ್ಲ ಎಂದೇ ಹೇಳಲಾಗುತ್ತಿದೆ. ಆದರೆ ತಮ್ಮ ಸಮುದಾಯದ ಈ ಸಂಪ್ರದಾಯ ಮುಂದುವರಿಸಲು ಈ ಮೂವರು ನಿರ್ಧರಿಸಿ ಇದೀಗ ಮದುವೆಯಾಗಿದ್ದಾರೆ.

ಅಣ್ಣ ಪ್ರದೀಪ್ ಸರ್ಕಾರಿ ನೌಕರ, ತಮ್ಮ ಕಪಿಲ್ ವಿದೇಶದಲ್ಲಿ ಕೆಲಸ

ಹಟ್ಟಿ ಸಮುದಾಯ ಪ್ರದೀಪ್ ಹಿಮಾಚಲ ಪ್ರದೇಶ ರಾಜ್ಯ ಸರ್ಕಾರಿ ಹುದ್ದೆಯಲ್ಲಿದ್ದಾನೆ. ಇತ್ತ ತಮ್ಮ ಕಪಿಲ್ ವಿದೇಶದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಕೈತುಂಬ ಸಂಬಳ ಪಡೆಯುತ್ತಿದ್ದಾರೆ. ಇತ್ತ ಈ ಸಹೋದರರ ಮದುವೆಯಾದ ಸುನೀತಾ ಕೂಡ ಡಬಲ್ ಡಿಗ್ರಿ ಪಡೆದಿದ್ದಾಳೆ. ಹಟ್ಟಿ ಸಮುದಾಯದ ಸಂಪ್ರದಾಯದ ಬಗ್ಗೆ ಅರಿವಿದೆ. ಇಲ್ಲಿ ಯಾರ ಒತ್ತಡವೂ ಇಲ್ಲ. ಸಂಪ್ರದಾಯ ಹಾಗೂ ನಮ್ಮ ಮೂವರ ನಡುವಿನ ಸಂಬಂಧ ಗಟ್ಟಿಯಾಗಿತ್ತು. ಜೊತೆಗೆ ಕೂಡು ಕುಟುಂಬ, ಜೊತೆಯಾಗಿ ಬಾಳುವ ಈ ಸಂಪ್ರದಾಯ ಉಳಿಸುವ ನಿಟ್ಟಿನಲ್ಲಿ ಮೂವರು ಮದುವೆಯಾಗಿದ್ದೇವೆ ಎಂದು ಸುನೀತಾ ಹೇಳಿದ್ದಾರೆ.

ಅದ್ಧೂರಿಯಾಗಿ ನಡೆದ ಮದುವೆ

ಪ್ರದೀಪ್ ಹಾಗೂ ಕಪಿಲ್ ಶಿಲ್ಲಾಯಿ ಗ್ರಾಮದವರರು.ಇತ್ತ ಸುನೀತಾ ಕನ್ಹತ್ ಗ್ರಾಮದವರು. ಮೂರು ದಿನಗಳ ಕಾಲ ಮದುವೆ ಕಾರ್ಯಕ್ರಮ ನಡೆದಿದೆ. ಸಂಪ್ರದಾಯ ಪ್ರಕಾರ ಶಾಸ್ತ್ರೋಕ್ತವಾಗಿ ಮದುವೆ ನಡೆದಿದೆ. ಹಟ್ಟಿ ಸಮುದಾಯದವರು, ಸ್ಥಳೀಯರು, ಗ್ರಾಮಸ್ಥರು ಹಾಗೂ ಮೂವರು ಆಪ್ತರು, ಸಹೋದ್ಯೋಗಿಗಳು ಸೇರಿದಂತೆ ಸಾವಿರಾರು ಮಂದಿ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು. ಸಂಗೀತ್ ಸೆರೆಮನಿ, ಡ್ಯಾನ್ಸ್ ಸೇರಿದಂತೆ ಎಲ್ಲಾ ಅದ್ಧೂರಿತನ ಈ ಮದುವೆಯಲ್ಲಿತ್ತು.

ನಮ್ಮ ಸಂಪ್ರದಾಯ ಹೆಮ್ಮೆ ಎಂದ ಸಹೋದರರು

ನಮ್ಮ ಸಂಪ್ರದಾಯ ಬಗ್ಗೆ ಹೆಮ್ಮೆ ಇದೆ. ನಮ್ಮ ಸಂಪ್ರದಾಯದಲ್ಲಿ ಪಾರದರ್ಶಕತೆ ಇದೆ. ಕೂಡು ಕುಟುಂಬವಾಗಿ, ಜೊತೆಯಾಗಿ ಬಾಳುವ ಉತ್ತಮ ಸಂಪ್ರದಾಯ ನಮ್ಮದು. ಹೀಗಾಗಿ ನಮ್ಮ ಸಂಪ್ರದಾಯ ಉಳಿಸಲು, ನಮ್ಮ ಸಂತೋಷ ಜೀವನಕ್ಕಾಗಿ ಈ ಮದುವೆ ನಡೆಸಿದ್ದೇವೆ.

ಹಲವರ ಪ್ರಶ್ನೆ ಒಂದೆ

ಈ ಮದುವೆ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಹಲವರು ಪ್ರಶ್ನಿಸಿದ್ದಾರೆ. ಒಂದೇ ಪತ್ನಿ, ಇಬ್ಬರು ಗಂಡಂದಿರ ಸಂಸಾರದ ಸವಾಲುಗಳ ಕುರಿತು ಪ್ರಶ್ನಿಸಿದ್ದಾರೆ. ಪ್ರಮುಖವಾಗಿ ಇಬ್ಬರು ಬೇರೆ ಬೇರೆ ಕಡೆ ಕೆಲಸ ಮಾಡುತ್ತಿರುವ ಕಾರಣ ಪತ್ನಿ ಯಾರ ಜೊತೆಗಿರುತ್ತಾರೆ, ಮೊದಲ ರಾತ್ರಿ ಸೇರಿದಂತೆ ಹಲವು ಪ್ರಶ್ನೆಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಕೇಳಿದ್ದಾರೆ.