ಬೆಂಗಳೂರಿನ ವೈದ್ಯರೊಬ್ಬರು, ಪದೇ ಪದೇ ಸಂಬಳದ ಬಗ್ಗೆ ಕೇಳುವ ಸಂಬಂಧಿಕರಿಗೆ ಹೇಗೆ ಉತ್ತರಿಸಬೇಕೆಂದು ಸಲಹೆ ನೀಡಿದ್ದಾರೆ. ವೈದ್ಯಕೀಯ ಓದುವಾಗ ತಂದೆಯನ್ನೇ ಅವಲಂಬಿತನೆಂದು ಗೇಲಿ ಮಾಡಿದ ಸಂಬಂಧಿಯೊಬ್ಬರಿಗೆ, ಕೆಲಸ ಸಿಕ್ಕ ನಂತರ ತಮ್ಮ ವಾರ್ಷಿಕ ತೆರಿಗೆ ಅವರ ಮಕ್ಕಳ ಆದಾಯಕ್ಕಿಂತ ಹೆಚ್ಚೆಂದು ಉತ್ತರಿಸಿದ್ದಾಗಿ ಅವರು ಹಂಚಿಕೊಂಡಿದ್ದಾರೆ. ಇಂತಹ ಅನುಭವಗಳನ್ನು ಅನೇಕರು ಎದುರಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರು (ಮಾ.19): ನಿಮ್ಮ ಸಂಬಂಧಿಕರು ಅಥವಾ ಊರಿನವರು ಪದೇ ಪದೆ ಬಂದು ಏನು ಓದಿಕೊಂಡಿದ್ದೀಯ? ಏನು ಕೆಲಸ ಮಾಡುತ್ತಿದ್ದೀಯ? ನಿಮ್ಮಪ್ಪನ ಮೇಲ ಅವಲಂಬನೆ ಆಗಿದ್ದೀಯ? ನಿಮ್ಮ ಸಂಬಳ ಎಷ್ಟು ಎಂದು ಕೇಳುವ ಮೂಲಕ ಮಾನಸಿಕ ನೆಮ್ಮದಿ ಹಾಳು ಮಾಡಿರುತ್ತಾರೆ. ಅಂಥವರಿಗೆ ಹೇಗೆ ಉತ್ತರಿಸಬೇಕು ಎಂದು ಸ್ವತಃ ವೈದ್ಯರೇ ಸಲಹೆ ಕೊಟ್ಟಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಬೆಂಗಳೂರು ಮೂಲದ ಹೃದಯರೋಗ ತಜ್ಞರೊಬ್ಬರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಅನುಭವವು ಅನೇಕರನ್ನು ಆಕರ್ಷಿಸಿದೆ. ಕೆಲಸ ಏನೂ ಸಿಕ್ಕಿಲ್ವಾ, ಎಷ್ಟು ಸಂಬಳ ಸಿಗುತ್ತೆ ಅಂತ ಪದೇ ಪದೇ ಕೇಳಿ ನಮ್ಮನ್ನು ಕಿರಿಕಿರಿ ಮಾಡಲು ಒಬ್ಬ ಸಂಬಂಧಿಯೋ ಅಥವಾ ಊರಿನವರೋ ಇರುತ್ತಾರೆ ಅಲ್ಲವೇ? ಅಂತಹವರಿಗೆ ಹೇಗೆ ಉತ್ತರ ನೀಡಬೇಕು ಎಂಬುದನ್ನು ಈ ಪೋಸ್ಟ್ ಹೇಳುತ್ತದೆ.
ಕಾವೇರಿ ಆಸ್ಪತ್ರೆಯ ಹೃದಯರೋಗ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ದೀಪಕ್ ಕೃಷ್ಣಮೂರ್ತಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ವೈದ್ಯಕೀಯ ಕ್ಷೇತ್ರಕ್ಕೆ ಬಂದಾಗ ತನ್ನ ಆರ್ಥಿಕ ಪರಿಸ್ಥಿತಿಯ ಬಗ್ಗೆ ಪದೇ ಪದೇ ಗೇಲಿ ಮಾಡುತ್ತಿದ್ದ ಸಂಬಂಧಿಯೊಬ್ಬರನ್ನು ಹೇಗೆ ಮೌನವಾಗಿಸಿದೆ ಎಂದು ಅವರು ಹೇಳಿದ್ದಾರೆ. ಎಕ್ಸ್‌ನಲ್ಲಿ (ಟ್ವಿಟರ್‌ನಲ್ಲಿ) ಯುವತಿಯೊಬ್ಬರು ಪದೇ ಪದೇ ನಮ್ಮ ಅಂಕಲ್ ಅಥವಾ ಆಂಟಿ ಬಂದು ನಿಮ್ಮ ಸಂಬಳವೆಷ್ಟು ಎಂದು ಕೇಳುತ್ತಾರೆ. ಆವರಿಗೆ ಉತ್ತರಿಸುವುದು ಹೇಗೆ ಎಂದು ಕೇಳಿದ್ದಕ್ಕೆ ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ ವೈದ್ಯ ದೀಪಕ್ ಅವರು, ತಮ್ಮದೇ ಉದಾಹರಣೆಯೊಂದನ್ನು ಕೊಡುವ ಮೂಲಕ ಪ್ರಶ್ನೆ ಕೇಳಿದ ಯುವತಿಗೆ ಉತ್ತರಿಸಿದ್ದಾರೆ. ಅವರ ಕಾಮೆಂಟ್‌ನ ಉತ್ತರವೇ ಇದೀಗ ಭಾರೀ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಮಕ್ಕಳು ಮಾಡೋಕೆ ಬಿಡ್ತಿಲ್ಲವೆಂದು ದೂರು ಕೊಟ್ಟ ಕಂಜೂಸ್ ಗಂಡನ ನೀಚ ಬುದ್ಧಿ ಬಿಚ್ಚಿಟ್ಟ ಹೆಂಡತಿ!
ಡಾ. ದೀಪಕ್ ಕೃಷ್ಣಮೂರ್ತಿ ಅವರು, 'ತಾವು ವೈದ್ಯಕೀಯ ಕ್ಷೇತ್ರಕ್ಕೆ ಬಂದಿದ್ದಕ್ಕೆ ಕುಟುಂಬದ ಸದಸ್ಯರೊಬ್ಬರು ತನ್ನನ್ನು ಹಲವು ಬಾರಿ ಗೇಲಿ ಮಾಡುತ್ತಿದ್ದರು. ತನ್ನ ವಯಸ್ಸಿನವರೆಲ್ಲಾ ದುಡಿಯುತ್ತಿರುವಾಗ ನಾನು ತಂದೆಯನ್ನೇ ಅವಲಂಬಿಸಿದ್ದೇನೆ ಎಂದು ನನ್ನ ಬಗ್ಗೆ ಮೂದಲಿಸುತ್ತಿದ್ದರು. ಇದಾದ ಕೆಲವು ದಿನಗಳ ಬಳಿಕ ನನಗೆ ಕೆಲಸ ಸಿಕ್ಕಿ ಸೆಟಲ್ ಆದ ನಂತರ ಅದೇ ಸಂಬಂಧಿ ಬಂದು ನನ್ನ ಸಂಬಳದ ಬಗ್ಗೆ ಕೇಳಿದರು. ಆಗ ಸಂಬಳವೆಷ್ಟು ಎಂದು ಕೇಳಿದವರ ಇಬ್ಬರು ಗಂಡು ಮಕ್ಕಳ ವಾರ್ಷಿಕ ಆದಾಯಕ್ಕಿಂತ ನನ್ನ ವಾರ್ಷಿಕ ತೆರಿಗೆ ಪಾವತಿ ಮಾಡುವ ಹಣವೇ ಹೆಚ್ಚಾಗಿದೆ ಎಂದು ಉತ್ತರಿಸಿದ್ದಾಗಿ ತಿಳಿಸಿದ್ದಾರೆ.
ಇನ್ನು ದೀಪಕ್ ಅವರ ಪೋಸ್ಟ್‌ಗೆ ಅನೇಕ ಜನರು ಕಾಮೆಂಟ್ ಮಾಡಿದ್ದಾರೆ, ಅವರು ಇದೇ ರೀತಿಯ ಪ್ರಶ್ನೆಗಳು ಮತ್ತು ಅವಮಾನಗಳನ್ನು ಎದುರಿಸಿದ್ದಾರೆ. ಅನೇಕರು ತಮಗೂ ಇಂತಹ ಅನುಭವವಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಕೆಲಸಕ್ಕೆ ಸೇರುವ ಸಮಯದಲ್ಲಿ ಅಥವಾ ವಿದ್ಯಾಭ್ಯಾಸ ಮುಗಿದ ನಂತರ ಸಂಬಂಧಿಕರಿಂದ ಮತ್ತು ಊರಿನವರಿಂದ ಇಂತಹ ಕಿರಿಕಿರಿ ಉಂಟುಮಾಡುವ ಪ್ರಶ್ನೆಗಳು ಬರುತ್ತವೆ ಅಲ್ಲವೇ? ಏನೇ ಆಗಲಿ, ಅಂತಹವರಿಗೆ ಹೀಗೂ ಉತ್ತರ ನೀಡಬಹುದು ಎಂದು ಈ ಪೋಸ್ಟ್‌ನಿಂದ ತಿಳಿದುಬರುತ್ತದೆ.
ಇದನ್ನೂ ಓದಿ: ಮಗುವಿಗೆ ಆರು ತಿಂಗಳಾಗುವವರೆಗೆ ನೀರು ಕೊಡದಿರುವುದಕ್ಕೆ ಕಾರಣ ಏನು?
