ಓದಿದ್ದು ಎಸ್ಸೆಸ್ಸೆಲ್ಸಿ ಆದರೂ ಬುದ್ಧಿವಂತಿಕೆಯಿಂದ ಬೆಳೆದ ವ್ಯಕ್ತಿ
ಪರಮೇಶ್ವರ್ ಪಿಎ ರಮೇಶ್ ಓದಿದ್ದು ಕೇವಲ ಎಸ್ ಎಸ್ ಎಲ್ ಸಿ ಆದರೂ ಬುದ್ದಿವಂತಿಕೆಯಿಂದ ಘಟಾನುಘಟಿ ನಾಯಕರ ಜೊತೆ ಸೇರಿ ಬೆಳೆದಿದ್ದರು.
ರಾಮನಗರ [ಅ.13]: ಆದಾಯ ತೆರಿಗೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾದ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಓದಿದ್ದು ಕೇವಲ ಎಸ್ಸೆಸ್ಸೆಲ್ಸಿ ವರೆಗೆ ಆದರೂ, ಬಹಳ ಬುದ್ಧಿವಂತರಾಗಿದ್ದರು. ಇದೇ ಅವರನ್ನು ಉಪಮುಖ್ಯಮಂತ್ರಿಯ ಆಪ್ತ ಸಹಾಯಕನ ಸ್ಥಾನದ ವರೆಗೂ ಕರೆದೊಯ್ದಿತ್ತು.
ಮೂಲತಃ ರಾಮನಗರ ತಾಲೂಕಿನ ಮೆಳೇಹಳ್ಳಿಯ ಸಂಪಗಯ್ಯ ಮತ್ತು ಸಾವಿತ್ರಮ್ಮ ದಂಪತಿಯ ಮೂರನೇ ಪುತ್ರನಾದ ರಮೇಶ್, 2004ರಲ್ಲಿ ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದ ವೇಳೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ಶೀಘ್ರ ಲಿಪಿಗಾರ (ಸ್ಟೆನೋ)ಆಗಿ ಸೇರಿಕೊಂಡಿದ್ದರು. ನಂತರ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಅವರಿಗೆ ರಮೇಶ್ ಆಪ್ತರಾದರು. 18 ವರ್ಷದಿಂದ ಕಾಂಗ್ರೆಸ್‌ನಲ್ಲಿದ್ದ ರಮೇಶ್, ಕಂಪ್ಯೂಟರ್ ಆಪರೇಟರ್ ಆಗಿ, ನಂತರ ಪರಮೇಶ್ವರ್ ಅವರ ಆಪ್ತ ಸಹಾಯಕನಾಗಿ ಸುಮಾರು ಎಂಟು ವರ್ಷ ಪರಮೇಶ್ವರ್ ಅವರೊಂದಿಗೆ ಕಾರ್ಯನಿರ್ವಹಿಸಿದ್ದರು.
ರಮೇಶ್ ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾಗಿದ್ದರಿಂದ ಉದ್ಯೋಗ ಅರಸಿ ಬೆಂಗಳೂರು ಸೇರಿದ ರಮೇಶ್ ಕಾಮಾಕ್ಷಿಪಾಳ್ಯದಲ್ಲಿ ಸಣ್ಣದಾದ ರೂಮ್ ಮಾಡಿಕೊಂಡು ಸಹೋದರ ಸಂಬಂಧಿಯ ಜತೆಯಲ್ಲಿದ್ದರು. ವಿಧಾನಸೌಧದ ಎಲ್‌ಎಚ್ ಬಳಿ ಜೆರಾಕ್ಸ್ ಅಂಗಡಿಯೊಂದರಲ್ಲಿ ಟೈಪಿಂಗ್ ಕೆಲಸಕ್ಕೆ ಸೇರಿಕೊಂಡರು. ನಂತರ ಹೇಗೋ ಕಾಂಗ್ರೆಸ್ ಕಚೇರಿ ಸೇರಿಕೊಂಡಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಊರಿನ ಪಾಲಿಗೆ ಅಚ್ಚು ಮೆಚ್ಚು: ಕೆಪಿಸಿಸಿ ರಮೇಶ್ ಎಂದರೆ ಕಾಂಗ್ರೆಸ್ ಪಾಳಯದ ಮುಖಂಡರಿಗೆ ಆಪ್ತವಾಗಿ ಸ್ಪಂದಿಸುವ ಸರಳ ವ್ಯಕ್ತಿಯಾಗಿದ್ದರು. ರಾಮನಗರ ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗಂತೂ ಅಚ್ಚುಮೆಚ್ಚಿನ ಸ್ನೇಹಿತನಾಗಿ ಗುರುತಿಸಿಕೊಂಡಿದ್ದರು. ಎಲ್ಲರನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದ ರಮೇಶ್ ಹುಟ್ಟೂರಿನ ಬಗ್ಗೆ ಹೆಚ್ಚು ಕಾಳಜಿ ಇರಿಸಿಕೊಂಡಿದ್ದರು ಎನ್ನುತ್ತಾರೆ ಅವರ ಸ್ನೇಹಿತರು, ಸಂಬಂಧಿಕರು.
ನಾನು ಮತ್ತು ರಮೇಶ್ ಇಬ್ಬರು ಸಹ ಎಸ್ಸೆಸ್ಸೆಲ್ಸಿ ಫೇಲ್ ಆಗಿದ್ದೇವು. ಬಳಿಕ ಬೆಂಗಳೂರು ಸೇರಿ ಕಷ್ಟದ ದಿನಗಳನ್ನು ಎದುರಿಸಿದೆವು. ಸಾಕಷ್ಟುಪರಿಶ್ರಮ ಪಟ್ಟು ರಮೇಶ್ ಮೇಲೆ ಬಂದ. ಎಲ್ಲರೊಂದಿಗೆ ವಿಶ್ವಾಸದಿಂದ ನಡೆದುಕೊಳ್ಳುತ್ತಿದ್ದ. ಅವನ ಸಾವು ನಿಜಕ್ಕೂ ನೋವು ತಂದಿದೆ.
-ಪ್ರಕಾಶ್, ಮೃತ ರಮೇಶ್ ಸಂಬಂಧಿ.