' 2000 ಮಂದಿ ಬೌದ್ಧ ಧರ್ಮಕ್ಕೆ ಸೇರ್ಪಡೆ'
2000ಕ್ಕೂ ಅಧಿಕ ಮಂದಿ ಬೌದ್ಧ ಧರ್ಮ ಸ್ವೀಕರಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸಾವಿರಾರು ಮಂದಿ ಅಂಬೇಡ್ಕರ್ ಅನುಯಾಯಿಗಳು ಬುದ್ಧನ ಅನುಯಾಯಿಗಳಾಗಲಿದ್ದಾರೆ.
ರಾಮನಗರ [ಅ.11]: ಬೆಂಗಳೂರಿನ ಸದಾಶಿವನಗರದಲ್ಲಿನ ನಾಗಸೇನಾ ಬುದ್ಧ ವಿಹಾರದ ಮೈದಾನದಲ್ಲಿ ಅಕ್ಟೋಬರ್ 14ರಂದು 63ನೇ ಬುದ್ಧ ಧಮ್ಮ ದೀಕ್ಷಾ ಸಮಾರಂಭ ಆಯೋಜಿಸಲಾಗಿದೆ ಎಂದು ವಿಶ್ವ ಬುದ್ಧ ಧಮ್ಮ ಸಂಘದ ಪ್ರಧಾನ ಸಂಚಾಲಕ ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಸಮಾರಂಭ ಆರಂಭಕ್ಕೂ ಮುನ್ನ ಬೆಂಗಳೂರಿನ ಟೌನ್ ಹಾಲ್‌ನಿಂದ ಪಂಚಶೀಲ ಬಾವುಟಗಳೊಂದಿಗೆ ಬೈಕ್ ರಾರಯಲಿಯಲ್ಲಿ ವಿಧಾನಸೌಧದ ಬಳಿಯಿರುವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಮಾವೇಶಗೊಳ್ಳಲಾಗುವುದು ಎಂದರು.
ಹಿರಿಯ ಬೌದ್ಧ ಬಿಕ್ಕುಗಳಾದ ಬೋಧಿದತ್ತ, ಬುದ್ಧಮ್ಮ ಸೇರಿದಂತೆ ಹತ್ತಾರು ಬೌದ್ಧ ಬಿಕ್ಕುಗಳು ಸುಮಾರು ಎರಡು ಸಾವಿರ ಮಂದಿ ಅಂಬೇಡ್ಕರ್ ಅನುಯಾಯಿಗಳಿಗೆ ಬುದ್ಧ ಧಮ್ಮ ದೀಕ್ಷಾ ನೀಡುವರು. ಧಮ್ಮಚಾರಿ ಡಾ.ಸುರೇಂದ್ರ, ನಿವೃತ್ತ ಐಪಿಎಸ್ ಅಧಿಕಾರಿಗಳಾದ ಸುಭಾಷ್ ಭರಣಿ, ಎಸ್. ಮರಿಸ್ವಾಮಿ, ಕರ್ನಾಟಕ ಬೌದ್ಧ ಸಮಾಜದ ಹ.ರಾ. ಮಹೇಶ್, ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ(ಬಿಎಸ್ಐ)ದ ಮಲ್ಲಿಕಾರ್ಜುನ ಭಾಲ್ಕೆ, ಕಲ್ಬುರ್ಗಿ ಬುದ್ಧ ವಿಹಾರಗಳ ಸಂಯೋಜಕ ದೇವೇಂದ್ರ ಹೆಗಡೆ ಬೌಧ್, ಅಂತಾರಾಷ್ಟ್ರೀಯ ಬೌದ್ಧ ಮಹಾಸಂಘದ ಡಾ.ನರೇಂದ್ರ ಕುಮಾರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ರಾಜ್ಯದೆಲ್ಲೆಡೆ ಧಮ್ಮ ದೀಕ್ಷೆ: ಕರ್ನಾಟಕದಲ್ಲಿನ ಸಮಪ್ತ ಅಂಬೇಡ್ಕರ್ ಅನುಯಾಯಿಗಳು ಬೌದ್ಧ ಧಮ್ಮ ದೀಕ್ಷೆ ಪಡೆಯಲು ಸಿದ್ಧರಾಗಿದ್ದಾರೆ. ಪ್ರತಿ ವರ್ಷದ ವಿಜಯದಶಮಿ ದಿನದಂದು ರಾಜ್ಯದೆಲ್ಲೆಡೆ ಸಾವಿರಾರು ಸಂಖ್ಯೆಯಲ್ಲಿ ಧಮ್ಮ ದೀಕ್ಷೆ ಪಡೆಯುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿ ನಾಗಪುರಕ್ಕೆ ತೆರಳಿ ಅಲ್ಲಿಯೂ ಸಹ ದೀಕ್ಷೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬುದ್ಧ ಧಮ್ಮ ದೀಕ್ಷಾ ಸಮಾರಂಭ ಆಯೋಜನೆ ಮಾಡಲಾಗಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಾಬಾ ಸಾಹೇಬ ಡಾ.ಬಿ.ಆರ್. ಅಂಬೇಡ್ಕರ್ ಅವರು 1956ರ ಅಕ್ಟೋಬರ್ 14ರಂದು ಬುದ್ಧ ಧಮ್ಮ ದೀಕ್ಷೆ ಪಡೆದರು. ಅಂದು ಸುಮಾರು 5 ಲಕ್ಷ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ಅವರು ದೀಕ್ಷೆ ಪಡೆದು ಇಂದಿಗೆ 63 ವರ್ಷಗಳಾದವು. ಇದರ ಪರಿಣಾಮವಾಗಿ ದೇಶದಾದ್ಯಂತ ಬೌದ್ಧ ಧರ್ಮಿಯರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಬೌದ್ಧ ವಿಹಾರಗಳು ಸ್ಥಾಪನೆಯಾಗಿ ಧಮ್ಮ ಪ್ರಚಾರದಲ್ಲಿ ತೊಡಗಿವೆ.
ಅಂಬೇಡ್ಕರ್ ಅವರ ಅಂದಿನ ದೀಕ್ಷೆಯು ದೇಶದಲ್ಲಿನ ಸಮಸ್ತ ದಲಿತರ ಪರಿವರ್ತನಾ ಪರ್ವಕ್ಕೆ ನಾಂದಿ ಹಾಡಿತು. ಇದೊಂದು ಸಾಂಸ್ಕೃತಿಕ ಕ್ರಾಂತಿ ಆಗಿದೆ. ಜಾತಿ ಪದ್ಧತಿಯ ಕಠೋರ ಅಸ್ಪೃಶ್ಯತೆ ಆಚರಣೆಗಳಲ್ಲಿ ನಲುಗಿ ಹೋಗಿದ್ದ ದಲಿತ ಜನಾಂಗಗಳ ವಿಮೋಚನಾ ದಿನವೆಂದೇ ಹೇಳಲ್ಪಟಿದೆ. ಆದ್ದರಿಂದಲೇ ಅಂಬೇಡ್ಕರ್ ರವರು ದೇಶದ ಸಮಸ್ತ ಶೋಷಿತ ಸಮುದಾಯಗಳ ವಿಮೋಚನೆಯ ಯುಗ ಪುರುಷರಾಗಿ ಪರಿಗಣಿಸಲ್ಪಟ್ಟಿದ್ದಾರೆ ಎಂದು ವೆಂಕಟಸ್ವಾಮಿ ಹೇಳಿದರು.
ಬೌದ್ಧ ಅಧ್ಯಯನ, ಪ್ರಚಾರ ಸಂಸ್ಥೆ:
1954ರಲ್ಲಿ ಮೈಸೂರು ಮಹಾರಾಜರು ಅಂಬೇಡ್ಕರ್ ಅವರಿಗೆ 5 ಎಕರೆ ಅರಮನೆ ಭೂಮಿಯನ್ನು ದಾನವಾಗಿ ನೀಡಿದ್ದರು. ಲ್ಲಿ ಅಂತಾರಾಷ್ಟ್ರೀಯ ಬೌದ್ಧ ಅಧ್ಯಯನ ಮತ್ತು ಪ್ರಚಾರ ಸಂಸ್ಥೆ ಪ್ರಾರಂಭಿಸಲು ಅನುವು ಮಾಡಿಕೊಟ್ಟಿದ್ದರು. ಆ ಸಂಸ್ಥೆಯ ಇಂದಿನ ಬೆಂಗಳೂರಿನ ನಾಗಸೇನ ಬುದ್ಧ ವಿಹಾರ ಆಗಿದೆ. ಇಲ್ಲಿ ಬೌದ್ಧ ದೀಕ್ಷೆ , ಅಧ್ಯಯನ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.
ನಾಗಪುರದಲ್ಲಿ ಪ್ರತಿವರ್ಷ ಬೌದ್ಧ ದೀಕ್ಷೆ ಪಡೆಯುವವರ ಸಂಖ್ಯೆ ಲಕ್ಷ ಲಕ್ಷ ಸಂಖ್ಯೆ ದಾಟುತ್ತಿದೆ. ನಾಗಪುರ ಹೊರತುಪಡಿಸಿದರೆ ಕರ್ನಾಟಕದಲ್ಲಿ ಅತಿ ಹೆಚ್ಚಿನ ಜನರು ಬೌದ್ಧ ದೀಕ್ಷೆ ಪಡೆದವರು ಇದ್ದಾರೆ. 2020ರ ಅಕ್ಟೋಬರ್ನಲ್ಲಿ 10 ಲಕ್ಷ ಅಂಬೇಡ್ಕರ್ ಅನುಯಾಯಿಗಳು ಬೌದ್ಧ ದೀಕ್ಷೆ ಸ್ವೀಕರಿಸುವ ಕಾರ್ಯಕ್ರಮ ಆಯೋಜಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಶಿವಕುಮಾರಸ್ವಾಮಿ, ಸಮತಾ ಸೈನಿಕದಳದ ಡಾ.ಜಿ. ಗೋವಿಂದಯ್ಯ, ಆರ್‌ಪಿಐ ಪಕ್ಷದ ಮುಖಂಡ ಶಿವರಾಜು ಭರಣಿ, ಚಕ್ಕೆರೆ ಲೋಕೇಶ್, ಶಂಕರ್ ನಾಯಕ್, ಬನವಾಸಿ ಗೋಪಾಲ್, ಸಂತೋಷ್, ಗಂಗಾಧರ್, ನರೇಶ್ ಮತ್ತಿತರರು ಇದ್ದರು.