ಸಿರವಾರ: ನೆನೆಗುದಿಗೆ ಬಿದ್ದ ರಸ್ತೆ ಕಾಮಗಾರಿ, ಗ್ರಾಮಸ್ಥರ ಪರದಾಟ
ಕಾಮಗಾರಿ ಪ್ರಾರಂಭವಾಗಿ ವರ್ಷಗಳೇ ಉರುಳಿದರು ಸಹ ಕಾಮಗಾರಿ ಪೂರ್ಣಗೊಂಡಿಲ್ಲ| ಗಣದಿನ್ನಿ ಗ್ರಾಮದಿಂದ ಹಳ್ಳದ ಮೂಲಕ ಶಾಖಾಪೂರಕ್ಕೆ ತೆರಳಿದರೆ 1 ಕಿ.ಮೀ. ಮಾತ್ರ ದೂರವಾಗುತ್ತದೆ| ಮಳೆಯಿಂದಾಗಿ ಈಗಾಗಲೇ ಹಾಕಲಾಗಿರುವ ಮಣ್ಣು ಹಾಗೂ ಸಿಮೆಂಟ್ ಹಾಳಾಗಿದೆ| ಜಮೀನುಗಳಿಗೆ ತೆರಳಲು ರೈತರಿಗೆ ತೊಂದರೆ|
ಸಿರವಾರ[ನ.9]: ತಾಲೂಕಿನ ಗಣದಿನ್ನಿ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಸುರಿದ ಬಾರಿ ಮಳೆಗೆ ಹಳ್ಳ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಸಂಚಾರಕ್ಕೆ ಕಷ್ಟವಾಗಿದ್ದು, ಜನರು ನಿತ್ಯ ಈ ರಸ್ತೆಯಲ್ಲಿ ಸಂಚರಿಸಲು ಪ್ರಯಾಸ ಪಡುವಂತಾಗಿದೆ. ಭಾಗ್ಯನಗರದಿಂದ ಗಣದಿನ್ನಿ ಶಾಖಾಪೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 4 ಕಿ.ಮೀ. ರಸ್ತೆ ನಿರ್ಮಾಣಕ್ಕಾಗಿ 53 ಲಕ್ಷ ರು. ಅನುದಾನ ಮಂಜೂರಾಗಿದೆ.
ಈಗಾಗಲೇ ಕಾಮಗಾರಿ ಪ್ರಾರಂಭವಾಗಿ ವರ್ಷಗಳೇ ಉರುಳಿದರು ಸಹ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಗಣದಿನ್ನಿ ಗ್ರಾಮದಿಂದ ಹಳ್ಳದ ಮೂಲಕ ಶಾಖಾಪೂರಕ್ಕೆ ತೆರಳಿದರೆ 1 ಕಿ.ಮೀ. ಮಾತ್ರ ದೂರವಾಗುತ್ತದೆ. ಮಳೆಯಿಂದಾಗಿ ಈಗಾಗಲೇ ಹಾಕಲಾಗಿರುವ ಮಣ್ಣು ಹಾಗೂ ಸಿಮೆಂಟ್ ಹಾಳಾಗಿದ್ದು, ಗಣದಿನ್ನಿ ಗ್ರಾಮಸ್ಥರು ಅತ್ತನೂರಿನಿಂದ ಶಾಖಾಪೂರಕ್ಕೆ 10 ಕಿ.ಮೀ. ಕ್ರಮಿಸಬೇಕಾಗಿದೆ. ಮಾನ್ವಿಗೆ ತೆರಳಲಿ ಅನುಕೂಲವಾಗಲೆಂದು ಭಾಗ್ಯನಗರ, ಲಕ್ಕಂದಿನ್ನಿ ಸಿರವಾರ-ಮಾನ್ವಿ ರಸ್ತೆ ನಿರ್ಮಾಣ ಮಾಡಲಾಗಿತ್ತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ರಸ್ತೆಯು ಸಹ ಮಳೆಯಿಂದಾಗಿ ಹಳ್ಳದ ಸೇತುವೆ ರಸ್ತೆ ಕಿತ್ತು ಹೋಗಿರುವುದರಿಂದ ಸಿರವಾರಕ್ಕೆ ಆಗಮಿಸಿ ಮಾನ್ವಿಗೆ ತೆರಳಬೇಕಾಗಿದೆ. ಆ ರಸ್ತೆಯ ಅಕ್ಕಪಕ್ಕದಲಿರುವ ಜಮೀನುಗಳಿಗೆ ತೆರಳಲು ಸಹ ರೈತರಿಗೆ ತೊಂದರೆಯಾಗಿದೆ. ಗುತ್ತಿಗೆದಾರರು ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಒಂದೇ ಮಳೆಗೆ ಅಲ್ಲಲ್ಲಿ ನಿರ್ಮಿಸಿರುವ ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ಈ ರಸ್ತೆ ನಿರ್ಮಾಣ ಗುಣಮಟ್ಟ ಸರಿಯಾಗಿಲ್ಲ ಎಂದು ಅನೇಕ ಬಾರಿ ಗ್ರಾಮಸ್ಥರು ಆರೋಪ ಮಾಡಿದರು ಸಹ ಅಧಿಕಾರಿಗಳು ಪರಿಶೀಲಿಸದೆ ನಿರ್ಲಕ್ಷಿಸಿದ್ದರು. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾಮಗಾರಿ ಪರಿಶೀಲಿಸಿ, ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.