ರಾಯಚೂರು, (ಮಾ.20): ಪ್ರೊಬೇಷನರಿ ಪೊಲೀಸ್‌ ವರಿಷ್ಠಾಧಿಕಾರಿಯೊಬ್ಬರು ಗ್ರಾಮವೊಂದರ ಸರಕಾರಿ ಶಾಲೆಗೆ ಹೋಗಿ ಮಕ್ಕಳೊಂದಿಗೆ ಬೆರೆತು ಬಿಸಿಯೂಟ ಸವಿದು ಸರಳತೆ ಮೆರೆದಿದ್ದಾರೆ.

ಲೋಕಸಭಾ ಚುನಾವಣೆ ನಿಮಿತ್ತ ಕರ್ತವ್ಯಕ್ಕೆ ನಿಯೋಜನೆಗೊಂಡ ಪ್ರೊಬೇಷನರಿ ಎಸ್‌ಪಿ ನಿಖಿಲ್ ಬಿ. ದೇವದುರ್ಗ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಕೊಪ್ಪರ ಶಾಲೆಗೆ ಭೇಟಿ ನೀಡಿ ಮಕ್ಕಳ ಜತೆ ಮಧ್ಯಾಹ್ನ ಬಿಸಿಊಟ ಸೇವಿಸಿ ಎಲ್ಲರ ಗಮನ ಸೆಳೆದಿದ್ದಾರೆ.

 ಸೂಕ್ಷ್ಮ ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಲ್ಲಿ ಕುಡಿವ ನೀರು, ಶೌಚಾಲಯ ಸೇರಿ ಅಗತ್ಯ ಮೂಲಭೂತ ಸೌಲಭ್ಯಗಳ ಕುರಿತು ಮತ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲಾ ಆವರಣದ ಕಟ್ಟೆ ಮೇಲೆ ಕುಳಿತು ಊಟ ಮಾಡಿದರು. 

 ಊಟ ಮಾಡಿಕೊಂಡು ಹೋಗಿ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ಮಕ್ಕಳ ಕರೆಗೆ ಪ್ರೊಬೇಷನರಿ ಎಸ್ಪಿ ಊಟ ಮಾಡಲು ಒಪ್ಪಿಕೊಂಡರು. ಶಿಕ್ಷಕರು ಮುಖ್ಯಗುರುಗಳ ಕೋಣೆಯಲ್ಲಿ ಕುಳಿತುಕೊಳ್ಳಿ ಊಟ ತರುತ್ತೇವೆ ಎಂದಾಗ, ಬೇಡ ಮಕ್ಕಳ ಜೊತೆಯಲ್ಲಿಯೇ ಊಟ ಮಾಡುತ್ತೇನೆ ಎಂದು ಸರಳತೆ ಮೆರೆದಿದ್ದಾರೆ.

ಚಿತ್ರದುರ್ಗ ಮೂಲದ ಐಪಿಎಸ್‌ ಅಧಿಕಾರಿ ನಿಖಿಲ್‌ ಬುಳ್ಳಾವರ್‌ ಅವರು ರಾಯಚೂರು ಜಿಲ್ಲೆಗೆ ಪ್ರೊಬೇಷನರಿ ಎಸ್ಪಿಯಾಗಿ ನಿಯೋಜನೆಗೊಂಡಿದ್ದಾರೆ.

ಸರಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದ್ರೆ ಉನ್ನತ ಸ್ಥಾನದಲ್ಲಿದ್ದರು ಮಕ್ಕಳ ಜತೆ ಊಟ ಮಾಡಿ ಇತರರಿಗೆ ಮಾದರಿಯಾಗಿದಂತೂ ಸತ್ಯ.