ಮುದಗಲ್[ನ.8]: ಪಟ್ಟಣದ ಬಸ್ ನಿಲ್ದಾಣದ ಮುಖ್ಯ ರಸ್ತೆಯಿಂದ ತರಕಾರಿ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳ ಎರಡು ಬದಿಗಳಲ್ಲಿನ ಟಿನ್ ಶೆಡ್‌ಗಳನ್ನು ತೆರವುಗೊಳಿಸಿರುವುದು ಖಂಡನಾರ್ಹ ಜೊತೆಗೆ ಪೂರ್ವಾಪರ ಮುನ್ಸೂಚನೆ ನೀಡದೇ ವ್ಯಾಪಾರಸ್ಥರ ಮೇಲೆ ದೌರ್ಜನ್ಯ ಮಾಡುವುದುರ ಮೂಲಕ ಪುರಸಭೆ ಮುಖ್ಯಾಧಿಖಾರಿ ನರಸಿಂಹಮೂರ್ತಿ ಪುಟ್ ಪಾಥ್ ವ್ಯಾಪರಸ್ಥರಿಗೆ ತೊಂದರೆ ನೀಡಿದ್ದಾರೆ ಎಂದು ಮುಖಂಡರಾದ ಗುರುಬಸ್ಸಪ್ಪ ಸಜ್ಜನ್ ಅವರು ಆರೋಪಿಸಿದರು. 

ಗುರುವಾರ ವ್ಯಾಪಾರಸ್ಥರ ಸಭೆ ನಡೆಸಿದ ಬಳಿಕೆ ಸುದ್ದಿಗಾರರೊಂದಿಗೆ ಮಾತನಾಡಿ, ಬುಧವಾರ ಬೆಳ್ಳಂಬೆಳಗ್ಗೆ ಜೆಸಿಬಿ ಯಂತ್ರಗಳನ್ನು ಬಳಕೆ ಮಾಡಿಕೊಂಡು ಪೊಲೀಸರ ಸಹಭಾಗಿತ್ವದಲ್ಲಿ ಟಿನ್‌ ಶೆಡ್‌ಗಳನ್ನು ತೆರವು ಗೊಳಿಸಲು ಮುಂದಾದಾಗ ಸಮಯಾವಕಾಶ ನೀಡುವಂತೆ ವ್ಯಾಪಾರಸ್ಥರು ಮನವಿ ಮಾಡಿದರೂ ಕೂಡ ಗಣನೆಗೆ ತೆಗೆದುಕೊಳ್ಳದೇ ವ್ಯಾಪಾರಸ್ಥರ ಅಂಗಡಿ ಮುಂಗಟ್ಟುಗಳ ಮುಂದೆ ಹಾಕಲಾದ ಟಿನ್‌ಶೆಡ್‌ಗಳನ್ನು ಹಾಗೂ ಕಟ್ಟೆಗಳನ್ನು ಒಡೆದು ಹಾಕಿರುವುದು ಖಂಡನೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮುಖ್ಯ ಮಾರುಕಟ್ಟೆ ಇದಾಗಿದ್ದು ಕೂಡಲೇ ತೆರವು ಮಾಡಲಾದ ರಸ್ತೆಗಳ ಎರಡು ಬದಿಗಳಲ್ಲಿ ಯಾರಿಗೂ ಅನ್ಯಾಯವಾಗದಂತೆ ಚರಂಡಿ ನಿರ್ಮಾಣ ಕಾಮಗಾರಿ ಮಾಡುವುದು, ಖಾಸಗಿ ವಾಹನಗಳ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದು, ತರಕಾರಿ ಮಾರಾಟ ಮಾಡುವವರನ್ನು ಮಾರುಕಟ್ಟೆಗೆ ಸ್ಥಳಾಂತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡುವಲ್ಲಿ ಮುಖ್ಯಾಧಿಕಾರಿಗಳು ಕಾರ್ಯಪ್ರವ್ರತ್ತರಾಗುವಂತೆ ವ್ಯಾಪಾರಸ್ಥರು ಆಗ್ರಹಿಸಿದರು. 

ಮುಖಂಡರಾದ ರಾಮಣ್ಣ ಹಿರೇಮನಿ ಮಾತನಾಡಿ, ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕೊಳೆ, ತ್ಯಾಜ್ಯ ಇದ್ದು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಬ್ಲಿಚಿಂಗ್ ಸಿಂಪಡಣೆ, ಫಾಂಗಿಗ್ ಸೇರಿದಂತೆ ಆಸ್ಪತ್ರೆಯ ಮೂಲ ವೈದ್ಯರು ಹಾಗೂ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತೋರಿದ್ದು, ಕೇವಲ ತೆರವು ಕಾರ್ಯಾಚರಣೆ ಮಾಡುತ್ತಿರುವುದು ಆಕ್ಷೇಪಾರ್ಹ ಎಂದು ತಿಳಿಸಿದ್ದಾರೆ.

ಕೂಡಲೇ ತೆರವುಗೊಂಡ ರಸ್ತೆ ಸುಧಾರಣೆಗೆ ಪುರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಚರಣೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪುರಸಭೆ ಅಧಿಕಾರಿಗಳ ವಿರುದ್ಧ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ಅಮೀರ್ ಬೇಗ್ ಉಸ್ತಾದ್, ವ್ಯಾಪಾರಸ್ಥರ ಸಂಘದ ನಿರ್ದೇಶಕ ವಾಸು ಸುರಪೂರ, ರಮೇಶ ತಾವರಗೇರಿ ಸೇರಿದಂತೆ ವ್ಯಾಪಾರಸ್ಥರು ಇದ್ದರು.

ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪುರಸಭೆ ವ್ಯಾಪಾರಸ್ಥರಿಗೆ ಸಮಯಾವಕಾಶ ನೀಡದೇ, ನೋಟಿಸ್ ನೀಡದೇ ಏಕಾಏಕಿ ಜೆಸಿಬಿ ಯಂತ್ರಗಳನ್ನು ಬಳಸಿ ತೆರವು ಕಾರ್ಯಕ್ಕೆ ಕೈಹಾಕಿರುವುದು ಖಂಡನೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಲಾಗುವುದು ಎಂದು ಮುದಗಲ್ ನ ವ್ಯಾಪಾರಸ್ಥ ಗುರುಬಸ್ಸಪ್ಪ ಸಜ್ಜನ್ ಅವರು ಹೇಳಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿದ ಮುದಗಲ್ ಪುರಸಭೆಯ ಮುಖ್ಯಾಧಿಕಾರಿ ನರಸಿಂಹಮೂರ್ತಿ ಅವರು, ಕಳೆದ ಮೂರು ತಿಂಗಳಿಂದ ನಾವು ವ್ಯಾಪಾರಸ್ಥರಿಗೆ ತೆರವು ಕಾರ್ಯದ ಬಗ್ಗೆ ತಿಳಿಸಿದ್ದೇವೆ. ಮೊಹರಂ, ದಸರಾ, ದೀಪಾವಳಿ ಹಬ್ಬದ ನಂತರ ತೆರವಿಗೆ ಮುಂದಾಗಲು ವ್ಯಾಪಾರಸ್ಥರೇ ತಿಳಿಸಿದ್ದರು. ಟಿನ್ ಶೆಡ್ ತೆರವು ಮಾಡಲಾಗಿದ್ದು, ಕೂಡಲೇ ಚರಂಡಿ ನಿರ್ಮಾಣ ಕಾಮಗಾರಿಗೆ ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ.