ಉಪನ್ಯಾಸಕರಾಗಿ ಸೇವೆ ಆರಂಭಿಸಬೇಕಾದರೆ ಪಿಹೆಚ್‌ಡಿ ಅತ್ಯವಶ್ಯಕ. ಆದರೆ ಈ ವಿಶ್ವವಿದ್ಯಾಲದಲ್ಲಿ ಕ್ಯಾಂಟೀನ್‌ನಲ್ಲಿ ಕೆಲಸ ಮಾಡಬೇಕಾದರೂ ಪಿಹೆಚ್‌ಡಿ, ಡಾಕ್ಟರೇಟ್ ಪಡೆದಿರಬೇಕು. ಇದೀಗ ನೇಮಕಾತಿ ಕುರಿತು ಯೂನಿವರ್ಸಿಟಿ ಪ್ರಕಟಿಸಿದ ಜಾಹೀರಾತು ಭಾರಿ ಚರ್ಚೆಗೆ ಗ್ರಾಸವಾಗಿದೆ.

ನಂಜಿಂಗ್(ಜೂ.01) ವಿಶ್ವವಿದ್ಯಾಲಯದಲ್ಲಿ ದೊಡ್ಡ ಕ್ಯಾಂಟೀನ್ ನಿರ್ವಹಣೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು, ಸಿಬ್ಬಂದಿಗಳು, ಉಪನ್ಯಾಸಕರು ಸೇರಿದಂತೆ ಸಾವಿರಾರು ಮಂದಿಗೆ ಆಹಾರ ಒದಗಿಸಬೇಕಾಗುತ್ತದೆ. ಈ ಕ್ಯಾಂಟೀನ್‌ಗಳಲ್ಲಿ ಹೆಚ್ಚಿನ ಸಿಬ್ಬಂದಿಗಳು ಬೇಕಾಗುತ್ತದೆ. ಆಹಾರ ತಯಾರಿಸುವಿಕೆ, ವಿತರಣೆ ಸೇರಿದಂತೆ ಹಲವು ಹುದ್ದೆಗಳಿವೆ. ಇನ್ನು ಮ್ಯಾನೇಜರ್, ಕ್ಯಾಶರ್ ಸೇರಿದಂತೆ ಜವಾಬ್ದಾರಿಯಿತು ಹುದ್ದೆಗಳೂ ಇವೆ. ಪ್ರತಿ ಹುದ್ದೆಗೆ ಅದರದ್ದೇ ಆದ ಅರ್ಹತೆ ಬೇಕು. ಆದರೆ ಈ ವಿಶ್ವವಿದ್ಯಾಲಯದಲ್ಲಿ ಕ್ಯಾಂಟೀನ್ ಕೆಲಸಕ್ಕೆ ಸೇರಲು ಡಾಕ್ಟರೇಟ್ ಪಡೆದಿರಬೇಕು. ಇದು ವಿಶ್ವವಿದ್ಯಾಲಯದ ಪ್ರಕಟಿಸಿದ ನೇಮಕಾತಿ ಜಾಹೀರಾತಿನಲ್ಲಿ ಉಲ್ಲೇಖಿಸಿದ ಮಹತ್ವದ ಅರ್ಹತೆ. ಇದೀಗ ಈ ನೇಮಕಾತಿ ಭಾರಿ ಚರ್ಚೆಯಾಗುತ್ತಿದೆ.

ಈ ಯೂನಿವರ್ಸಿಟಿ ಕ್ಯಾಂಟೀನ್ ಎಲ್ಲಿದೆ?

ವಿಶ್ವವಿದ್ಯಾಲಯದ ಕ್ಯಾಂಟೀನ್ ಇರುವುದು ಚೀನಾದ ನಂಜಿಂಗ್ ಪ್ರಾಂತ್ಯದಲ್ಲಿ. ನಂಜಿಂಗ್ ವಿಶ್ವವಿದ್ಯಾಲಯದ ಕ್ಯಾಂಟೀನ್‌ನಲ್ಲಿ ಖಾಲಿ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಈ ಪೈಕಿ ಕ್ಯಾಂಟೀನ್ ಮ್ಯಾನೇಜರ್ ಹುದ್ದೆಗೆ ಅರ್ಹತೆ ಪಿಹೆಚ್‌ಡಿ ಆಗಿರಬೇಕು ಎಂದು ಜಾಹೀರಾತಿನಲ್ಲಿ ಹೇಳಿದೆ. ಈ ಜಾಹೀರಾತು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಆಹಾರ ತಯಾರಿಕೆ ನಿರ್ವಹಣೆ, ಸಿಬ್ಬಂದಿಗಳ ನಿರ್ವಹಣೆ, ಉಸ್ತುವಾರಿ, ಶುಚಿತ್ವ, ಉತ್ತಮ ಗುಣಟ್ಟದ ಆಹಾರವನ್ನು ಗ್ರಾಹರಿಗೆ ನೀಡುವಂತೆ ನೋಡಿಕೊಳ್ಳುವುದು ಸೇರಿದಂತೆ ಹಲವು ಜವಾಬ್ದಾರಿಗಳು ಈ ಹುದ್ದಗೆ ಆಯ್ಕೆಯಾಗುವವರು ನಿರ್ವಹಿಸಬೇಕು. ಗ್ರಾಹಕರಿಗೆ ಸಮಸ್ಯೆಯಾಗದಂತೆ, ಉತ್ತಮ ಸಂವಹನ, ನಯ ವಿನಯ ಸೇರಿದಂತೆ ಒಂದಷ್ಟು ಅರ್ಹತೆಗಳು ಈ ಹುದ್ದೆಗೆ ನೀಡಲಾಗಿದೆ. ಇದರ ಜೊತೆಗೆ ವಿದ್ಯಾರ್ಹತೆ ಕಾಲಂನಲ್ಲಿ ಕನಿಷ್ಠ ಪಿಹೆಚ್‌ಡಿ ಆಗಿರಬೇಕು ಎಂದು ನಮೂದಿಸಲಾಗಿದೆ.

ವಾರ್ಷಿಕ ವೇತನ 20.80 ಲಕ್ಷ ರೂಪಾಯಿ

ಕ್ಯಾಂಟೀನ್ ಮ್ಯಾನೇಜರ್ ಹುದ್ದೆಗೆ ಪಿಹೆಚ್‌ಡಿ ಕಡ್ಡಾಯ ಎಂದಿರುವ ವಿಶ್ವವಿದ್ಯಾಲಯ, ಸ್ಯಾಲರಿಯನ್ನು ವಿವರಿಸಿದೆ. ವಾರ್ಷಿಕ ವೇತನ 20.80 ಲಕ್ಷ ರೂಪಾಯಿ ಎಂದಿದೆ. ಉತ್ತಮ ವೇತನ ನೀಡುತ್ತಿದೆ. ಆದರೆ ಪಿಹೆಚ್‌ಡಿ ಯಾಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಉಪನ್ಯಾಸಕರು ಹೇಳುವ ತಿಂಡಿ ಹಾಗೂ ಆಹಾರ ಅರ್ಥ ಮಾಡಿಕೊಳ್ಳಲು ಕ್ಯಾಂಟೀನ್ ಮ್ಯಾನೇಜರ್‌ಗೆ ಪಿಹೆಚ್‌ಡಿ ಅಗತ್ಯವಿರಬೇಕು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಸ್ಪಷ್ಟನೆ ನೀಡಿದ ಕ್ಯಾಂಟೀನ್

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೀಮ್ಸ್ ಹರಿದಾಡಿದೆ. ಟ್ರೋಲ್ ಮಾಡಲಾಗಿದೆ. ಇದರ ಬೆನ್ನಲ್ಲೇ ಕ್ಯಾಂಟೀನ್ ಸ್ಪಷ್ಟನೆ ನೀಡಿದೆ. ಕ್ಯಾಂಟೀನ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಅತ್ಯವಶ್ಯಕತ. ಅದು ಫುಡ್ ಮ್ಯಾನೇಜ್ಮೆಂಟ್‌ ಕೋರ್ಸ್ ಸೇರಿದಂತೆ ಆಹಾರ ಹಾಗೂ ನಿರ್ವಹಣೆಯಲ್ಲಿ ಉನ್ನತ ಪದವಿ ಪಡೆದಿರಬೇಕು. ಹೊಟೆಲ್ ಮ್ಯಾನೇಜ್ಮೆಂಟ್‌ನಲ್ಲಿ ಪಿಹೆಚ್‌ಡಿ ಪಡೆದಿದ್ದರೆ ಉತ್ತಮ. ಅವರ ವಿದ್ಯಾರ್ಹತೆ ಹಾಗೂ ಅನುಭವದ ಆಧಾರದಲ್ಲಿ ನೇಮಕಾತಿ ನಡೆಯಲಿದೆ. ಹೀಗಾಗಿ ಟ್ರೋಲ್ ಮಾಡುವ ಮುನ್ನ ಹಿನ್ನಲೆ ಗಮನಿಸಿಕೊಳ್ಳಿ ಎಂದು ಕ್ಯಾಂಟೀನ್ ಸ್ಪಷ್ಟನೆ ನೀಡಿದೆ.