ಟಿಸಿಎಸ್ 12,000 ಉದ್ಯೋಗಿಗಳನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (KITU) ರಾಜ್ಯ ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಿದೆ. ಕೈಗಾರಿಕಾ ವಿವಾದ ಕಾಯ್ದೆ ಉಲ್ಲಂಘನೆ ಮತ್ತು ನೌಕರರನ್ನು ರಾಜೀನಾಮೆ ನೀಡಲು ಬಲವಂತಪಡಿಸಿದ ಆರೋಪ ಕೇಳಿಬಂದಿದೆ.
ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ತನ್ನ 2% ಉದ್ಯೋಗಿಗಳನ್ನು ವಜಾ ಮಾಡುವ ನಿರ್ಧಾರದ ನಂತರ ಇದೀಗ ಮತ್ತೊಂದು ಸಂಕಷ್ಟವನ್ನು ಎದುರಿಸುತ್ತಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) 12,000 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂಬ ವರದಿಗಳ ಎಲ್ಲಾ ವಲಯಗಳು ತೀವ್ರ ಕಳವಳ ವ್ಯಕ್ತಪಡಿಸಿದೆ. ಕಾರ್ಮಿಕ ಸಚಿವಸಂತೋಷ್ ಲಾಡ್ ಈ ಬಗ್ಗೆ ತಮ್ಮ ಇಲಾಖೆಯು ಭಾರತದ ಅತಿದೊಡ್ಡ ಐಟಿ ಸೇವಾ ಸಂಸ್ಥೆಯಿಂದ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದ ನಿರ್ಧಾರದ ಬಗ್ಗೆ ವಿವರಣೆ ಕೇಳಿದೆ ಎಂದು ಗುರುವಾರ ಮಾಹಿತಿ ನೀಡಿದ್ದಾರೆ. ಈ ಬಾರಿ, ಟಿಸಿಎಸ್ ವಿರುದ್ಧ ಕರ್ನಾಟಕ ರಾಜ್ಯ ಐಟಿ/ಐಟಿಇಎಸ್ ನೌಕರರ ಸಂಘ (KITU) ರಾಜ್ಯ ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಿದ್ದು, ಪ್ರಕರಣ ಕೈಗಾರಿಕಾ ವಿವಾದಕ್ಕೆ ಕಾರಣವಾಗಿದೆ.
ಜುಲೈ 30ರಂದು, KITU ಪ್ರತಿನಿಧಿಗಳು ಹೆಚ್ಚುವರಿ ಕಾರ್ಮಿಕ ಆಯುಕ್ತ ಜಿ. ಮಂಜುನಾಥ್ ಅವರನ್ನು ಭೇಟಿ ಮಾಡಿ, FY26 ರಲ್ಲಿ ಟಿಸಿಎಸ್ ನ ಸಾಮೂಹಿಕ ವಜಾಗೊಳಿಸುವ ಯೋಜನೆಗಳ ವಿರುದ್ಧ ಕೈಗಾರಿಕಾ ವಿವಾದ ಅರ್ಜಿ ಸಲ್ಲಿಸಿದರು.
KITU ಆರೋಪಿಸಿದಂತೆ, TCS ಸಂಸ್ಥೆ 1947ರ ಕೈಗಾರಿಕಾ ವಿವಾದ ಕಾಯ್ದೆಯ ನಿಯಮಗಳನ್ನು ಮತ್ತು ನೌಕರರ ಸೇವಾ ವಿವರಗಳನ್ನು ನೀಡುವ ಕುರಿತಂತೆ ಕರ್ನಾಟಕ ಸರ್ಕಾರ ನಿಗದಿ ಮಾಡಿರುವ ಷರತ್ತುಗಳನ್ನು ಉಲ್ಲಂಘಿಸಿದೆ. ಇದರಿಂದಾಗಿ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ 12,200 ಉದ್ಯೋಗ ಕಡಿತ
ಜುಲೈ 27ರಂದು, ಮನಿ ಕಂಟ್ರೋಲ್ ವರದಿ ಪ್ರಕಾರ, ಟಿಸಿಎಸ್ FY26 ರಲ್ಲಿ ತನ್ನ ಜಾಗತಿಕ ಕಾರ್ಯಪಡೆಯ ಸುಮಾರು 2% ಉದ್ಯೋಗಿಗಳನ್ನು ಹಂತ ಹಂತವಾಗಿ ವಜಾ ಮಾಡುವ ಯೋಜನೆ ಹೊಂದಿದ್ದು, ಇದರಿಂದ ಸುಮಾರು 12,200 ಉದ್ಯೋಗಗಳು ಕಡಿತಗೊಳ್ಳುವ ಸಾಧ್ಯತೆ ಇದೆ. ಈ ಕ್ರಮ ಮಧ್ಯಮ ಹಾಗೂ ಹಿರಿಯ ಮಟ್ಟದ ಉದ್ಯೋಗಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ. KITU ತನ್ನ ಸದಸ್ಯರಿಂದ ಹಲವು ದೂರುಗಳನ್ನು ಸ್ವೀಕರಿಸಿದ್ದು, ಕೆಲ ಅಧಿಕಾರಿಗಳು ನೌಕರರನ್ನು ರಾಜೀನಾಮೆ ನೀಡಲು ಬಲವಂತಪಡಿಸುತ್ತಿದ್ದಾರೆ ಎಂದು ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಒತ್ತಾಯಿಸಿದೆ.
ಆಗಸ್ಟ್ 6ರಂದು ಟಿಸಿಎಸ್‌ಗೆ ರಾಜಿ ಸಭೆ?
ಕಾರ್ಮಿಕ ಇಲಾಖೆ ಈ ಕುರಿತಂತೆ ಟಿಸಿಎಸ್ ನಿರ್ವಹಣೆಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಆಗಸ್ಟ್ 6 ರಂದು ಟಿಸಿಎಸ್‌ನ ಪ್ರತಿನಿಧಿಗಳನ್ನು ರಾಜಿ ಸಭೆಗೆ ಕರೆಯಲಾಗಿದೆ. ಕೈಗಾರಿಕಾ ವಿವಾದ ಕಾಯ್ದೆಯ ಪ್ರಕಾರ, 100ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳು ಯಾವುದೇ ವಜಾ ಕ್ರಮ ಕೈಗೊಳ್ಳುವ ಮೊದಲು ಸರ್ಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಈ ಕಾನೂನು ನಿಯಮಗಳನ್ನು ಉಲ್ಲಂಘಿಸಿ ಟಿಸಿಎಸ್ ಆಡಳಿತ ಮಂಡಳಿ ನೌಕರರನ್ನು ರಾಜೀನಾಮೆ ಪಡೆಯಲು ಬಲವಂತಪಡಿಸುತ್ತಿದೆ. ಇದು ಕಾರ್ಮಿಕ ನ್ಯಾಯದ ವಿರುದ್ಧದ ಕ್ರಮವಾಗಿದೆ ಎಂದು KITU ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಕ್ರಮ
ಈ ಪ್ರಕರಣದ ಹಿನ್ನೆಲೆ, ನಸೆಂಟ್ ಐಟಿ ನೌಕರರ ಸೆನೆಟ್ (NITES) ಸಂಸ್ಥೆಯು ಕೇಂದ್ರ ಕಾರ್ಮಿಕ ಸಚಿವಾಲಯದ ಮುಖ್ಯ ಕಾರ್ಮಿಕ ಆಯುಕ್ತರ (CLC) ಕಚೇರಿಗೆ ಎರಡು ಪತ್ರಗಳನ್ನು ಕಳುಹಿಸಿ ವಜಾಗೊಳಿಸುವಿಕೆ ಹಾಗೂ ನೇಮಕಾತಿಯಲ್ಲಿ ವಿಳಂಬ ವಿಚಾರದಲ್ಲಿ ಸ್ಪಷ್ಟತೆ ನೀಡುವಂತೆ ಆಗ್ರಹಿಸಿದೆ. ಆದರೆ, ಆಗಸ್ಟ್ 1 ರಂದು, CLC ಟಿಸಿಎಸ್‌ನ ಹಿರಿಯ ಅಧಿಕಾರಿಗಳನ್ನು ಕರೆಸಿ, ಈ ವಿವಾದದ ಬಗ್ಗೆ ಚರ್ಚೆ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
