ಕೊರೋನಾ ವೈರಸ್‌ ತಂದಿಟ್ಟಿರುವ ಲಾಕ್‌ಡೌನ್‌ನಿಂದಾಗಿ ಎಲ್ಲ ಇಂಡಸ್ಟ್ರಿಗಳೂ ಮಕಾಡೆ ಮಲಗಿವೆ. ದೊಡ್ಡ ಜಾಗದಲ್ಲಿ ಕಾರ್ಯಾಚರಿಸುತ್ತಿದ್ದ ಕಂಪನಿಗಳು ಪುಟ್ಟ ಜಾಗಗಲೇ ಸಾಕು ಎನ್ನುತ್ತಿವೆ. ತಮ್ಮಲ್ಲಿ ನೂರು ಉದ್ಯೋಗಿಗಳಿದ್ದರೆ, ಐವತ್ತು ಮಂದಿ ಮನೆಯಿಂದಲೇ ಕೆಲಸ ಮಾಡುವಂತೆ ಹುಕುಂ ಹೊರಡಿಸಿವೆ. ಇನ್ನು ಕೆಲವು ಸಣ್ಣಪುಟ್ಟ ಸ್ಟಾರ್ಟಪ್‌ಗಳು, ಕಚೇರಿಯೇ ಇಲ್ಲದೆ ಮುಂದಿನ ದಿನಗಳಲ್ಲಿ ಮನೆಯಿಂದಲೇ ಕಾರ್ಯಾಚರಿಸಬೇಕಾಗಬಹುದು. ಆದರೆ ದುಡಿಯುವ ಪ್ರತಿಭೆಗಳಂತೂ ಈ ಕಂಪನಿಗಳಿಗೆ ಅಗತ್ಯವಾಗಿದೆ. ಹೀಗಾಗಿ ಹೊಸಬರನ್ನು ಕೆಲಸಕ್ಕೆ ತೆಗೆದುಕೊಳ್ಳಲಿವೆ. ಆದರೆ ಕಡಿಮೆ ಸಂಬಳದ, ಹೆಚ್ಚು ಪ್ರತಿಭೆಯ ಮತ್ತು ಹೆಚ್ಚು ದುಡಿಯಬಲ್ಲವರನ್ನು ಕೆಲಸಕ್ಕೆ ತೆಗೆದುಕೊಳ್ಳಲಿವೆ. ಅದರಲ್ಲೂ ಮನೆಯಿಂದಲೇ ಕೆಲಸ ಮಾಡುವವರಿಗೆ ಹೆಚ್ಚಿನ ಆದ್ಯತೆ ಕೊಡಲಿವೆ. 

ಮನೆಯಿಂದ ಕೆಲ್ಸ ಮಾಡೋರಿಗೆ ಹ್ಯಾಕರ್ಸ್ ಕಾಟ

ಹಾಗಾಗಿ, ಹೊಸ ಉದ್ಯೋಗಾರ್ಥಿಗಳ ಸಂದರ್ಶನದಲ್ಲೂ ವರ್ಕ್‌ ಫ್ರಮ್‌ ಹೋಮ್‌ಗೆ ಹೆಚ್ಚಿನ ಒತ್ತು ಬೀಳಲಿದೆ. ಸಂದರ್ಶಕರು ನಿಮಗೆ ಕೇಳುವ ಪ್ರಶ್ನೆಗಳು ಹೀಗಿರಬಹುದು: ನೀವು ಮನೆಯಿಂದ ಕೆಲಸ ಮಾಡಲು ಸಿದ್ಧರಿದ್ದೀರಾ? ನಿಮ್ಮ ಮನೆಯಲ್ಲಿ ಅದಕ್ಕೆ ಪೂರಕವಾದ ಸೌಲಭ್ಯಗಳು ಇವೆಯೇ? ಒಳ್ಳೆಯ ಲ್ಯಾಪ್‌ಟಾಪ್‌ ಅಥವಾ ಕಂಪ್ಯೂಟರ್‌ ಹೊಂದಿದ್ದೀರಾ? ನಿಮ್ಮ ನೆಟ್‌ವರ್ಕ್‌ ಯಾವುದು, ಎಷ್ಟು ಸ್ಪೀಡು? ವಿಡಿಯೋ ಕಾನ್ಫರೆನ್ಸಿಂಗ್‌ ಮಾಡುವುದಾದರೆ ಅದಕ್ಕೆ ತಯಾರಾಗಿರುತ್ತೀರಾ? ಮನೆಯಲ್ಲಿ ಬೇರೆ ಯಾರಿದ್ದಾರೆ, ಅವರು ನಿಮ್ಮ ಕೆಲಸಕ್ಕೆ ತೊಂದರೆಯಾಗದಂತೆ ಏನು ವ್ಯವಸ್ಥೆ ಮಾಡಿಕೊಂಡಿದ್ದೀರಿ? ಇತ್ಯಾದಿ. ಮದುವೆಯಾದ ಮಹಿಳೆಯಾಗಿದ್ದರೆ ಪ್ರಶ್ನೆಗಳು ಇನ್ನಷ್ಟು ಜಟಿಲವಾಗಿರುತ್ತೆ. ಅತ್ತೆ- ಮಾವ- ಗಂಡ- ಮಕ್ಕಳು- ಮನೆಗೆಲಸವನ್ನೆಲ್ಲ ನಿಭಾಯಿಸಿಕೊಂಡು ವರ್ಕ್‌ ಫ್ರಮ್‌ ಹೋಮ್‌ ಮಾಡಲು ನಿಮಗೆ ಸಾಧ್ಯವಾ ಎಂದು ಈ ಕಂಪನಿಯವರು ಸಹಜವಾಗಿಯೇ ತಿಳಿಯಲು ಬಯಸುತ್ತಾರೆ.

ವರ್ಕ್‌ ಫ್ರಮ್‌ ಹೋಮ್‌ಗೆ ನೀವು ಹೇಗೆ ಸಿದ್ಧತೆ ಮಾಡಿಕೊಂಡಿದ್ದೀರಿ ಎಂಬುದರ ಮೇಲೆ ನಿಮ್ಮ ಉದ್ಯೋಗಾರ್ಹತೆ ಅವಲಂಬಿಸಿರುತ್ತೆ. ನಿಮ್ಮ ಮಾನಸಿಕ ಸಿದ್ಧತೆಯೂ ಮುಖ್ಯ. ಹಾಗೇ ಮನೆಯಲ್ಲಿ ಮಾಡಿಕೊಳ್ಳುವ ಸಿದ್ಧತೆಯೂ ಮುಖ್ಯ.

- ಸರಿಯಾದ ಒಂದು ಕಂಪ್ಯೂಟರ್‌ ಡೆಸ್ಕ್‌ಟಾಪ್‌ ಅಥವಾ ಲ್ಯಾಪ್‌ಟಾಪ್‌ ಇರಬೇಕು. ಕೆಲವು ಸಲ ಕಂಪನಿಯವರು ವಿಡಿಯೋ ಕಾನ್ಫರೆನ್ಸ್‌ ಮಾಡಲು ಬಯಸಬಹುದು. ಅದಕ್ಕಾಗಿ ಸರಿಯಾದ ಕ್ಯಾಮೆರಾ ಹೊಂದಿದ ಸಿಸ್ಟಮ್‌ ಅಗತ್ಯ. ಆಗಾಗ ಕೈಕೊಡದ ಸಿಸ್ಟಮ್‌ ಇರಲಿ.
- ಮನೆಯ ಹತ್ತಿರವೇ ಇರುವ ಸಿಸ್ಟಮ್‌ ಇಂಜಿನಿಯರ್‌ ಯಾರದಾದರೂ ಪರಿಚಯವಿರಲಿ. ಕಂಪ್ಯೂಟರ್‌ ಕೈಕೊಟ್ಟರೆ ತಕ್ಷಣವೇ ಅವರು ಬಂದು ಸರಿಪಡಿಸುವಂತೆ.
- ಸರಿಯಾಗಿ ಕಾರ್ಯಾಚರಿಸುವ, ನಿಮ್ಮ ಮನೆಯ ಪ್ರದೇಶದಲ್ಲಿ ಪವರ್‌ಫುಲ್‌ ನೆಟ್‌ವರ್ಕ್‌ ಇರುವ ಇಂಟರ್‌ನೆಟ್‌ ಸಂಪರ್ಕ ತಗೊಳ್ಳಿ. ಎರಡು ಇಂಟರ್‌ನೆಟ್‌ ಸಂಪರ್ಕಗಳಿರಲಿ. ತುರ್ತು ಸಂದರ್ಭದಲ್ಲಿ ಒಂದು ಕೈಕೊಟ್ಟರೆ, ಇನ್ನೊಂದು ಕಾರ್ಯ ನಿರ್ವಹಿಸುವಂತಿರಲಿ.

ಮನೆಯಲ್ಲಿ ಆಫೀಸ್ ಕೆಲ್ಸ ಮಾಡುವ ಸ್ಥಳ ವಾಸ್ತು ಪ್ರಕಾರ ಇದೆಯಾ?

- ಮನೆಯಲ್ಲಿ ಯುಪಿಎಸ್‌ ಇದ್ದರೆ ಒಳಿತು. ಹೆಚ್ಚು ಕಾಲ ವಿದ್ಯುತ್‌ ಕೈಕೊಟ್ಟು ಸಿಸ್ಟಮ್‌ ಬ್ಯಾಟರಿ ಇಲ್ಲದೆ ಕಾರ್ಯ ನಿರ್ವಹಿಸದಂತೆ ಆಗಿಹೋದರೆ ಕಷ್ಟವಾದೀತು.
- ಮದುವೆಯಾಗಿ ಮಕ್ಕಳಿದ್ದರೆ, ಮಕ್ಕಳನ್ನು ಬೇರೆಯಾಗಿ ಆಡಲು ಬಿಟ್ಟುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು. ಮಕ್ಕಳು ಆಡುವ ಕೋಣೆಯೂ ನಿಮ್ಮ ಕಚೇರಿ ಕೋಣೆಯೂ ಒಂದೇ ಆಗಿದ್ದರೆ ಕಚೇರಿ ಕೆಲಸಕ್ಕೆ ಎಳ್ಳುನೀರು ಬಿಡುವಂತಾದೀತು. ಒಬ್ಬರು ಕೆಲಸ ಮಾಡುತ್ತಿರುವಾಗ ಇನ್ನೊಬ್ಬ ಸಂಗಾತಿ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ಮಾಡುವಂತಿದ್ದರೆ ಸೂಕ್ತ.
- ಮದುವೆಯಾದ ಹೆಣ್ಣು ಮಕ್ಕಳಿಗೆ, ವರ್ಕ್‌ ಫ್ರಮ್‌ ಹೋಮ್ ಎಂದರೇನು ಎಂಬುದನ್ನು ಮನೆಯಲ್ಲಿರುವ ಅತ್ತೆ ಅಥವಾ ಮಾವನಿಗೆ ಅರ್ಥ ಮಾಡಿಸುವುದು ಕಷ್ಟವೇ ಆದೀತು. ಇಡೀ ದಿನ ಮನೆಯಲ್ಲಿದ್ದರೂ ಮನೆಗೆಲಸ ಯಾಕೆ ಮಾಡುತ್ತಿಲ್ಲ ನೀನು ಅನ್ನುವ ಆಕ್ಷೇಪಣೆಯನ್ನೂ ಕೇಳಬೇಕಾದೀತು. ಅಂಥ ಮಾತಿನಿಂದ ಡಿಪ್ರೆಸ್‌ ಆಗಬೇಡಿ. ಪರಿಸ್ಥಿತಿಯನ್ನು ಅವರಿಗೆ ಮನದಟ್ಟು ಮಾಡಿಸಿ. ತೀರಾ ಹೊಂದಿಕೊಂಡು ಬಾಳಲು ಸಾಧ್ಯವೇ ಆಗುತ್ತಿಲ್ಲ ಎನ್ನುವ ಪರಿಸ್ಥಿತಿ ಎದುರಾದರೆ ಮಾತ್ರ ಅವರು ಬೇರೆಯಾಗಿರುವ ವ್ಯವಸ್ಥೆ ಮಾಡಿಕೊಳ್ಳಿ.
- ಮನೆಯಲ್ಲೊಂದು ಪ್ರತ್ಯೇಕ ಕಚೇರಿ ಜಾಗ ಏರ್ಪಡಿಸಿಕೊಳ್ಳುವುದು ಅಗತ್ಯವಾದೀತು. ಮನೆಯ, ಸಂಸಾರದ, ಹೊರಗಿನ ಗಲಾಟೆ ಗದ್ದಲಗಳು ಹೆಚ್ಚಾಗಿ ಕಾಡದ ಒಂದು ಪ್ರತ್ಯೇಕ ಕೋಣೆಯನ್ನೋ, ಬಾಲ್ಕನಿಯನ್ನೋ, ಟೆರ್ರೇಸ್‌ ರೂಫ್‌ಟಾಪ್ ಅನ್ನೋ ಕಚೇರಿ ಸ್ಥಳವಾಗಿ ಪರಿವರ್ತಿಸಿಕೊಳ್ಳಬಹುದು. 

#WorkfromHome ಮಾಡಿ ತಲೆ ಕೆಡ್ತಿದೆಯಾ? ಹೀಗ್ ರಿಲ್ಯಾಕ್ಸ್ ಆಗಿ...

- ಹೀಗೆ ನೀವು ಮಾಡಿಕೊಂಡು ಕಚೇರಿ ವ್ಯವಸ್ಥೆಯ ಬಗ್ಗೆ ಹೊಸ ಉದ್ಯೋಗದಾತರಿಗೆ ಮನವರಿಕೆ ಮಾಡಿಕೊಡಬೇಕಾದೀತು. ನಿಮ್ಮ ಮನೆಯಲ್ಲಿ ಹಾಗೂ ಕುಟುಂಬದಲ್ಲಿ ನಿಮ್ಮ ವರ್ಕ್‌ ಫ್ರಮ್‌ ಹೋಮ್ ವ್ಯವಸ್ಥೆಗೆ ಧಕ್ಕೆಯಾಗುವಂಥ ಯಾವುದೇ ಅಂಶಗಳಿಲ್ಲ ಎಂಬುದನ್ನು ಅವರಿಗೆ ಮನದಟ್ಟು ಮಾಡಿಸಿ. ನಿಮ್ಮ ಕಂಪ್ಯೂಟರ್‌ ವ್ಯವಸ್ಥೆ ಹಾಗೂ ನೆಟ್‌ವರ್ಕ್‌ಗಳು ಮನೆಯಿಂದ ಕಚೇರಿ ಕೆಲಸ ನಿಭಾಯಿಸುವಷ್ಟು ಬಲಿಷ್ಠವಾಗಿವೆ ಎಂದು ಮನವರಿಕೆ ಮಾಡಿಸಿ.