ನೀವೇ ನಿಮ್ಮ ಬಾಸ್ ಆಗುವುದು ಹೇಗೆ? ಇಲ್ಲಿವೆ ಸೂತ್ರಗಳು
ನಮಗೆ ನಾವೇ ಬಾಸ್ ಆಗುವುದು ಹೇಗೆ? ಇಲ್ಲಿ ಕೆಲವು ಸರಳ ಸೂತ್ರಗಳಿವೆ. ಇವು ಜಗತ್ತಿನ ಖ್ಯಾತ ಕಂಪನಿಗಳನ್ನು ಕಟ್ಟಿದ ಸಿಇಒಗಳು, ಉದ್ಯಮಿಗಳು ಹೇಳಿದ ಸೂತ್ರಗಳು.
ಕೆಲವರು ಜೀವನವಿಡೀ ಒಂದೇ ಕಚೇರಿಗೆ, ಒಂದೇ ಬಾಸ್‌ಗೆ, ಒಂದೇ ಬಗೆಯ ಕೆಲಸದ ಶೈಲಿಗೆ ಒಗ್ಗಿಕೊಂಡು ಬಿಟ್ಟಿರುತ್ತಾರೆ. ಜಪ್ಪೆಂದರೂ ಅಲ್ಲಿಂದ ಕದಲುವುದೇ ಇಲ್ಲ. ಇದೇನೂ ಪೂರ್ತಿ ಕೆಟ್ಟದಲ್ಲಿ. ಇಂಥವರಿಗೆ ಒಂದು ಕೆಲಸದ ಭದ್ರತೆಯೂ ಇರುತ್ತದೆ. ಇವರು ಬಿಟ್ಟು ಹೋಗುವುದಿಲ್ಲ ಎಂದು ಬಾಸ್‌ಗೂ ಗೊತ್ತಿರುತ್ತದೆ. ನಮಗೆ ನಾವೇ ಬಾಸ್ ಆಗುವುದೆಂದರೆ ಇಂಥ ಕಂಪರ್ಟ್ ಜೋನ್‌ನಿಂದ ಮೊದಲು ಹೊರಬರಬೇಕು. ಆಗ ವಿಶಾಲ ಆಕಾಶವೇ ನಮ್ಮ ಗಡಿಗಳಾಗುತ್ತವೆ. ನಿಮ್ಮದೇ ಸಮಯ, ನಿಮ್ಮದೇ ಕೆಲಸ, ನಿಮಗೆ ನೀವೇ ಪ್ರಶ್ನೆ ಕೇಳುವವರು ಹಾಗೂ ಉತ್ತರ ಕೊಡುವವರು. ಆದರೆ ಇದೇನೂ ಹೇಳಿದಷ್ಟು ಸುಲಭವಲ್ಲ. ನಮ್ಮ ಸ್ವಂತ ಕೆಲಸ ಅಥವಾ ಉದ್ಯೋಗ ಆರಂಭಿಸುವುದು ಎಂದರೆ ರಿಸ್ಕ್ ತೆಗೆದುಕೊಳ್ಳುವುದು. ನಮ್ಮ ಲಾಭ- ನಷ್ಟದ ಹೊಣೆ ನಾವೇ ಹೊರುವುದು.
ಹಾಗಿದ್ದರೆ, ನಮಗೆ ನಾವೇ ಬಾಸ್ ಆಗುವುದು ಹೇಗೆ? ಇಲ್ಲಿ ಕೆಲವು ಸರಳ ಸೂತ್ರಗಳಿವೆ. ಇವು ಜಗತ್ತಿನ ಖ್ಯಾತ ಕಂಪನಿಗಳನ್ನು ಕಟ್ಟಿದ ಸಿಇಒಗಳು, ಉದ್ಯಮಿಗಳು ಹೇಳಿದ ಸೂತ್ರಗಳು.
1. ನೀವೇ ನಿಮ್ಮ ಸಿಇಒ ಅಂತ ಅರ್ಥ ಮಾಡಿಕೊಳ್ಳಿ
ನಿಮ್ಮ ಬದುಕಿಗೂ ನಿಮ್ಮ ಕೆರಿಯರ್‌ಗೂ ನೀವೇ ಸಿಇಒ, ನೀವು ಬೇರೆ ಯಾವ ಬಾಸ್‌ಗೂ ಉತ್ತರ ಕೊಡಬೇಕಿಲ್ಲ; ಆದರೆ ನಿಮಗೆ ನೀವೇ ಉತ್ತರದಾಯಿ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಾನೇನು ಮಾಡುತ್ತಿದ್ದೇನೆ, ಬೆಳಗ್ಗಿನಿಂದ ರಾತ್ರಿಯವರೆಗಿನ ನನ್ನ ಸಮಯವನ್ನೆಲ್ಲ ಇನ್ನೊಬ್ಬರಿಗಾಗಿ ವ್ಯಯಿಸುತ್ತಿದ್ದೇನಾ, ಅಥವಾ ನನಗಾಗಿಯೇ ಖರ್ಚು ಮಾಡುತ್ತಿದ್ದೇನಾ ಎಂಬಂಧ ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರ ಪಡೆಯಿರಿ. ನಿಮ್ಮ ಉದ್ಯಮದ ಪ್ರತಿಯೊದು ಅಂಶವನ್ನೂ ನೀವೇ ನಿರ್ವಹಿಸಬೇಕು; ಅದೆಲ್ಲವೂ ನಿಮ್ಮ ಕೈಲೇ ಇದೆ ಎಂಬುದನ್ನು ಕ್ಷಣಕ್ಷಣಕ್ಕೂ ನೆನಪಿಸಿಕೊಳ್ಳಿ.
2. ನಿಮ್ಮ ಪ್ಯಾಶನ್ ಮತ್ತು ಕೌಶಲ್ಯಗಳನ್ನು ಬೆಸೆಯಿರಿ
ಬ್ಯುಸಿನೆಸ್‌ನಲ್ಲಿ ನಿಮ್ಮ ಐಡಿಯಾ ಕ್ಲಿಕ್ ಆಗಬೇಕಿದ್ದರೆ ನೀವು ನಿಮ್ಮ ವ್ಯಾಮೋಹ ಅಥವಾ ಪ್ಯಾಶನ್ ಯಾವ ಕ್ಷೇತ್ರದಲ್ಲಿದೆ ಎಂಬುದನ್ನು ಪತ್ತೆ ಹಚ್ಚಿಕೊಳ್ಳಬೇಕು; ಹಾಗೇ ನಿಮ್ಮ ಕೌಶಲ್ಯ ಯಾವುದು ಎಂಬುದನ್ನೂ ಗೊತ್ತುಮಾಡಿಕೊಳ್ಳಬೇಕು. ನಿಮ್ಮ ಪ್ಯಾಶನ್ ಹಾಗೂ ಸ್ಕಿಲ್- ಎರಡನ್ನೂ ಬೆಸೆದಾಗ ಅದ್ಭುತವಾದ ಐಡಿಯಾ ನಿಮ್ಮದಾಗಿ ಮೂಡುತ್ತದೆ. ಈ ಐಡಿಯಾದ ಮೂಲಕ ಹೋದಾಗ ನೀವು ಕ್ಲಿಕ್ ಆಗುವ ಎಲ್ಲ ಸಾಧ್ಯತೆಗಳೂ ಇವೆ. ನಿಮಗಿಂತ ಮೊದಲು ಈ ಕ್ಷೇತ್ರಗಳಲ್ಲಿ ಮುನ್ನಡೆದವರು ಯಾವ ಕೌಶಲದಿಂದ ಸಕ್ಸಸ್ ಆದರು ಎಂಬುದನ್ನೂ ಗೊತ್ತು ಮಾಡಿಕೊಳ್ಳಿ. ನಿಮ್ಮ ಕಲ್ಪನೆಯೇ ನಿಮಗೆ ಮಿತಿಗಳನ್ನು ವಿಧಿಸಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನಾನು ಗೆಲ್ಲಲಾರೆ ಎಂದುಕೊಳ್ಳುತ್ತಿರುವುದೇ ವೈಫಲ್ಯದ ಮೂಲ.
3. ನಿಮ್ಮ ಹಣಕಾಸು ಸಾಮರ್ಥ್ಯ ಅರ್ಥ ಮಾಡಿಕೊಳ್ಳಿ
ಹಣ ಆನಂದವನ್ನು ತರಲಾರದು ಎಂಬುದು ಸುಳ್ಳು ಮಾತು. ಹಣದಿಂದಲೂ ಆನಂದವನ್ನು ಪಡೆದುಕೊಳ್ಳುವ ಸಾಧ್ಯತೆ ಕೆಲವು ಕಡೆ ಇದೆ. ಉದ್ಯಮದ ವಿಷಯಕ್ಕೆ ಬಂದಾಗ, ಹಣವೇ ಎಲ್ಲದಕ್ಕೂ ಮೂಲ. ನಿಮ್ಮ ಹೊಸ ಬ್ಯುಸಿನೆಸ್‌ಗೆ ಎಷ್ಟು ಹಣ ಮೂಲ ಬಂಡವಾಳ ಬೇಕಾಗಬಹುದು, ಈಗ ನೀವಿರುವ ಡೇ ಜಾಬ್ ಬಿಟ್ಟರೆ ತಕ್ಷಣದ ಹೊಟ್ಟೆಪಾಡಿಗೆ, ಅಂದರೆ ಉದ್ಯಮ ಕಚ್ಚಿಕೊಳ್ಳುವವರೆಗೂ ಬದುಕಿಗೆ ಬೇಕಾಗುವಷ್ಟು ಹಣಕಾಸು ನಿಮ್ಮ ಬಳಿ ಇದೆಯಾ. ಎಷ್ಟು ನಷ್ಟವಾದರೆ ಭರಿಸಲು ನೀವು ಸಿದ್ಧರಿದ್ದೀರಿ, ಹಣದಲ್ಲಿ ನಿಮ್ಮ ಪಾಲೆಷ್ಟು, ಸಾಲವೆಷ್ಟು, ಸಾಲ ತುಂಬಿಸಲು ಸಿದ್ಧರಿದ್ದೀರಾ- ಇವೆಲ್ಲವನ್ನೂ ಲೆಕ್ಕ ಹಾಕಿ ಸಿದ್ಧರಾಗಬೇಕಾಗುತ್ತದೆ. ಮಾನಸಿಕ ಹಾಗೂ ಭೌತಿಕವಾಗಿ ಸಿದ್ಧರಾಗುವರೆಗೂ ನೀವಿರುವ ಕೆಲಸಕ್ಕೆ ರಾಜೀನಾಮೆ ಕೊಡಬೇಡಿ.
ಸಂದರ್ಶನಕ್ಕೆ ತಯಾರಿ ಹೇಗೆ? ಉದ್ಯೋಗ ಆಕಾಂಕ್ಷಿಗಳಿಗೆ ಇಲ್ಲಿದೆ ಟಿಪ್ಸ್ ...
4. ಹೂಡಿಕೆ, ಹೂಡಿಕೆ, ಹೂಡಿಕೆ
ಸ್ವಂತ ಉದ್ಯಮ ನಡೆಸಲು ಇಚ್ಛಿಸುವವರು ಎಲ್ಲದರಲ್ಲೂ ಹೂಡಿಕೆ ಮಾಡುತ್ತಿರಬೇಕಾಗುತ್ತದೆ. ತಮ್ಮ ಸ್ವಂತ ಹಣವನ್ನು ಉದ್ಯಮದಲ್ಲಿ ತೊಡಗಿಸುವುದು; ತಮ್ಮ ಆಸಕ್ತಿಯನ್ನು ಹೊಸ ಸ್ಕಿಲ್‌ಗಳನ್ನು ಪಡೆಯುವಲ್ಲಿ ಮತ್ತು ಉದ್ಯಮದಲ್ಲಿ ಕಾಂಟ್ಯಾಕ್ಟ್‌ಗಳನ್ನು ಬೆಳೆಸಿಕೊಳ್ಳುವಲ್ಲಿ ಹೂಡಿಕೆ ಮಾಡುವುದು; ತಾನು ನಂಬಬಹುದಾದ ಉದ್ಯೋಗಿಗಳಲ್ಲಿ ಭರವಸೆಯನ್ನು ಹೂಡಿಕೆ ಮಾಡುವುದು; ತನ್ನ ಭವಿಷ್ಯದ ವಿಶ್ರಾಂತ ದಿನಗಳಿಗಾಗಿ ರಿಟೈರ್‌ಮೆಂಟ್ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡುವುದು ಇತ್ಯಾದಿ. ಇಲ್ಲೆಲ್ಲಾ ತುಂಬಾ ಲೆಕ್ಕಾಚಾರ ಅವಶ್ಯಕ.
6. ನಿಮ್ಮ ತಳಹದಿ ಗಟ್ಟಿ ಮಾಡಿಕೊಳ್ಳಿ
ಉದ್ಯಮಕ್ಕೆ ಇಳಿಯುವ ಮೊದಲು ನಿಮ್ಮ ಸಾಕಷ್ಟು ಬೆಂಬಲ ದೊರೆಯುತ್ತದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಿ. ನೀವು ಕನಸು ಕಂಡ ಸಂಸ್ಥೆ ಅಥವಾ ಉದ್ಯಮದ ಯಶಸ್ಸಿಗೆ ಸಾಧ್ಯವಿರುವ ಮನುಷ್ಯ ಬೆಂಬಲವನ್ನೆಲ್ಲ ಸಂಗ್ರಹಿಸಿ.
6. ನಿಮ್ಮ ಪೋರ್ಟ್‌ಫೋಲಿಯೋ ಅಪ್‌ಡೇಟ್ ಆಗಿರಲಿ
ದಿನದಿಂದ ದಿನಕ್ಕೆ ನಿಮ್ಮ ಕೌಶಲ್ಯಗಳು ಬೆಳೆಯುತ್ತಿರಲಿ; ದಿನದಿಂದ ದಿನಕ್ಕೆ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್, ಮಾತಿನ ಚತುರತೆ, ನೀವು ನಿರ್ವಹಿಸಬಹುದಾದ ಕೆಲಸಗಳ ವೈವಿಧ್ಯ, ಇವೆಲ್ಲವೂ ಬೆಳೆಯುತ್ತಿರಲಿ. ಇವೆಲ್ಲ ನಿಮ್ಮ ಬಯೋಡೇಟಾದಲ್ಲಿ ಪ್ರತಿಫಲಿಸಲಿ.
7. ನಿಮ್ಮ ದರ್ಶನವೇ ನಿಮ್ಮ ಕ್ರಿಯೆಯಾಗಲಿ
ನೀವು ಏನು ಕನಸು ಕಂಡಿದ್ದೀರೋ ಅದನ್ನು ನನಸಾಗಲು ಪ್ರಯತ್ನಿಸಿ. ಕೆಲವೊಮ್ಮೆ ಉದ್ಯಮ ಆರಂಭಿಸಿದವರು ಪರಿಸ್ಥಿತಿಗಳಿಗೆ ರಾಜಿಯಾಗಿ ತಮ್ಮ ಮೂಲಕ ಕನಸಿಗೆ ಕೊಳ್ಳೀಯಿಟ್ಟು, ನಂತರ ನಿರಂತರ ಕೊರಗುತ್ತಾರೆ. ಅದರಿಂದ ಗುರಿ ಭಗ್ನವಾಗುತ್ತದೆ.
ಕೆಲವರ ಯಶಸ್ಸಿನ ಗುಟ್ಟೇನು? ಯಶಸ್ಸು ಅವರ ಬೆನ್ನು ಹತ್ತುವುದು ಹೇಗೆ? ..
8. ನಿಮ್ಮ ಗ್ರಾಹಕರೇ ಮೊದಲು
ಉದ್ಯಮ ಆರಂಭಿಸಿದರೆ ನಿಮ್ಮ ಗ್ರಾಹಕರೇ ನಿಮ್ಮ ಲಕ್ಷ್ಯವಾಗಬೇಕು, ಕೆಲವೊಮ್ಮೆ ನಿಮ್ಮ ಕುಟುಂಬವನ್ನೂ ಈ ವಿಚಾರ ಬಂದಾಗ ಮರೆಯಬೇಕಾದೀತು. ಎರಡನ್ನು ಬ್ಯಾಲೆನ್ಸ್ ಮಾಡುವುದು ಮುಖ್ಯ. ಆದರೆ ನಿಮ್ಮ ಗ್ರಾಹಕರಿಗೆ ಯಾವುದು ಹಿತ ಎಂಬುದೇ ಯಾವಾಗಲೂ ತಲೆಯಲ್ಲಿ ಇರಲಿ.
9. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ
ಕೆಲವೊಮ್ಮೆ ನಿಮ್ಮ ಬುದ್ಧಿ ಹೇಳಿದಂತೆ ಭಾವನೆ ಕೇಳಲಿಕ್ಕಿಲ್ಲ. ಉದ್ಯಮದ ಯಶಸ್ಸಿನಲ್ಲಿ ಭಾವನೆಗಿಂತಲೂ ಬುದ್ಧಿಯ ಪಾತ್ರ ದೊಡ್ಡದು. ಹಾಗೆಂದು ಭಾವನೆಗಳನ್ನು ಪೂರ್ತಿ ಹತ್ತಿಕ್ಕಬೇಕು ಎಂದಲ್ಲ. ಭಾವನೆಗಳು ಬುದ್ಧಿಯ ನಿಯಂತ್ರಣದಲ್ಲಿ ಇರಲಿ.
10. ನಿಮಗೆ ಬೇಕಾದ ಬೆಂಬಲ ಪಡೆಯಿರಿ
ನಿಮಗೆ ಯಾವುದೋ ಬಿಕ್ಕಟ್ಟಿನ ಪರಿಸ್ಥಿತಿ ಬಂದಿದ್ದು, ಅದರಿಂದ ಪಾರಾಗಲು ನಿಮ್ಮ ಆಪ್ತರಲ್ಲದ ಒಬ್ಬರ ಸಹಾಯ ಬೇಕಾಗಿದೆ. ಹೇಗೆ ಕೇಳುವುದು ಎಂಬ ಸಂಕೋಚ ಬೇಡ. ನಿಮ್ಮ ಉದ್ಯಮ ನಿಮ್ಮ ಕೂಸಿದ್ದಂತೆ. ಅದನ್ನು ರಕ್ಷಿಸಲು ನಿಮಗೆ ಯಾವ ಬಗೆಯ ಬೆಂಬಲ ಬೇಕೋ ಅದನ್ನು ಪಡೆಯುವಲ್ಲಿ ಸಂಕೋಚ ಬೇಡ.
ಈ ದೇಶದಲ್ಲಿ ‘ಮಾನಸಿಕ ಆರೋಗ್ಯ ರಜೆ’ ಸಿಗಲಿದೆ ಗೊತ್ತಾ? ...