ಒಡಲೊಳಗೆ ಜೀವವೊಂದು ಕುಡಿಯೊಡೆಯುವುದು ಹೆಣ್ಣಿನ ಬದುಕಿನ ಅತಿ ಮಹತ್ವದ ಘಟ್ಟ. ಹೆಣ್ಣು ಅದೆಷ್ಟೇ ವಿದ್ಯಾವಂತಳಾಗಿದ್ದರೂ, ಪ್ರಾಪಂಚಿಕ ಜ್ಞಾನ ಹೊಂದಿದ್ದರೂ ಗರ್ಭಿಣಿ,ತಾಯ್ತನ,ಬಾಣಂತನಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳು ಆಕೆಗೆ ತಿಳಿಯದೇ ಇರಬಹುದು.ಹೆಣ್ಣು ಅದೆಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ತಾಯಿಯಾಗಿ ತನ್ನ ಕರ್ತವ್ಯವನ್ನು ಸ್ವತಃ ನಿಭಾಯಿಸಬೇಕಾದ ಅನಿವಾರ್ಯತೆಯಿರುವ ಕಾರಣ ಈ ಬಗ್ಗೆ ಮಾಹಿತಿ ಹೊಂದಿರುವುದು ಅತ್ಯವಶ್ಯಕ.ಹೊಟ್ಟೆಯಲ್ಲಿ ಆಗ ತಾನೇ ಜೀವ ತಳೆದ ಭ್ರೂಣದ ಕಾಳಜಿಯಿಂದಲೇ ಆಕೆಯ ತಾಯ್ತನದ ಜವಾಬ್ದಾರಿ ಪ್ರಾರಂಭವಾಗುತ್ತದೆ. ಗರ್ಭಧಾರಣೆ,ಗರ್ಭಿಣಿ ಆರೈಕೆ,ಹೆರಿಗೆ,ಬಾಣಂತನ,ಮಗುವಿನ ಆರೈಕೆಗೆ ಸಂಬಂಧಿಸಿ ಎಷ್ಟು ಮಾಹಿತಿಯಿದ್ದರೂ ಕಡಿಮೆಯೇ. ಹಾಗಾಗಿ ಗರ್ಭ ಧರಿಸುವ ಮುನ್ನ ಈ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಬಯಕೆಯಿರುವ ಅಥವಾ ಆಸಕ್ತಿಯಿರುವ ಹೆಣ್ಣುಮಕ್ಕಳಿಗಾಗಿ ಲಖ್ನೋ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಸಂಸ್ಥೆ ‘ಗರ್ಭ ಸಂಸ್ಕಾರ’ ಎಂಬ ಸರ್ಟಿಫಿಕೇಟ್ ಹಾಗೂ ಡಿಪ್ಲೋಮಾ ಕೋರ್ಸ್ ಪ್ರಾರಂಭಿಸಿದೆ. ಹೊಸ ಶೈಕ್ಷಣಿಕ ವರ್ಷದಿಂದ ಈ ಕೋರ್ಸ್‍ಗೆ ಚಾಲನೆ ಸಿಗಲಿದೆ. ಈ ರೀತಿಯ ಕೋರ್ಸ್‍ವೊಂದನ್ನು ಪ್ರಾರಂಭಿಸುತ್ತಿರುವ ದೇಶದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಎಂಬ ಖ್ಯಾತಿಗೆ ಲಖ್ನೋ ವಿಶ್ವವಿದ್ಯಾಲಯ ಪಾತ್ರವಾಗಿದೆ.

ನಿಖಿಲ್ ಭಾವಿ ಪತ್ನಿ ರೇವತಿ ಯಾವ ಕೋರ್ಸ್ ಮಾಡಿದ್ದಾರೆ ಗೊತ್ತಾ?

ಕೋರ್ಸ್‍ನಲ್ಲಿ ಇವೆಲ್ಲ ಕಲಿಸುತ್ತಾರೆ: ಗರ್ಭ ಸಂಸ್ಕಾರ ಎಂಬ ಹೆಸರೇ ವಿಶಿಷ್ಟವಾಗಿದೆ. ಹೀಗಿರುವಾಗ ಈ ಕೋರ್ಸ್‍ನಲ್ಲಿ ಏನೆಲ್ಲ ಕಲಿಸುತ್ತಾರಪ್ಪ ಎಂಬ ಕುತೂಹಲ ಇದ್ದೇಇರುತ್ತದೆ. ಗರ್ಭಧಾರಣಿ, ಗರ್ಭಿಣಿ ಹಾಗೂ ತಾಯ್ತನಕ್ಕೆ ಸಂಬಂಧಿಸಿದ ಪ್ರತಿ ಮಾಹಿತಿಯನ್ನು ಈ ಕೋರ್ಸ್ ಒಳಗೊಂಡಿದೆ. ಗರ್ಭಿಣಿ ಏನು ತಿನ್ನಬೇಕು, ಧರಿಸಬೇಕು ಎಂಬಲ್ಲಿಂದ ಹಿಡಿದು ಈ ಸಮಯದಲ್ಲಿ ಆಕೆಯ ವರ್ತನೆ ಮತ್ತು ಆಲೋಚನೆಗಳು ಹೇಗಿರಬೇಕು? ಯೋಗದಿಂದ ಆಕೆಯ ಆರೋಗ್ಯಕ್ಕಾಗುವ ಪ್ರಯೋಜನಗಳು, ಯಾವ ರೀತಿಯ ಸಂಗೀತ ಆಕೆಯ ಹೊಟ್ಟೆಯೊಳಗಿರುವ ಮಗುವಿಗೆ ಒಳ್ಳೆಯದು ಎಂಬುದು ಸೇರಿದಂತೆ ಇಂಥ ಅನೇಕ ವಿಚಾರಗಳನ್ನು ಕಲಿಸಲಾಗುತ್ತದೆ. ಈ ಕೋರ್ಸ್‍ನಲ್ಲಿ ವಿದ್ಯಾರ್ಥಿಗಳಿಗೆ 16 ಮೌಲ್ಯಗಳ ಬಗ್ಗೆ ಕಲಿಸಲಾಗುತ್ತದೆ. ಫ್ಯಾಮಿಲಿ ಪ್ಲ್ಯಾನಿಂಗ್ ಹಾಗೂ ಗರ್ಭಿಣಿಯರಿಗೆ ನೀಡಬೇಕಾದ ಪೌಷ್ಟಿಕ ಆಹಾರದ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.ಇನ್ನು ತಜ್ಞರಿಂದ ವಿವಿಧ ಕಾರ್ಯಾಗಾರಗಳನ್ನು ಕೂಡ ಕೋರ್ಸ್ ಅವಧಿಯಲ್ಲಿ ಏರ್ಪಡಿಸಲಾಗುತ್ತದಂತೆ. ವಿಶೇಷವೆಂದ್ರೆ ಆಸಕ್ತ ಯುವಕರು ಕೂಡ ಈ ಕೋರ್ಸ್‍ಗೆ ಪ್ರವೇಶ ಪಡೆಯಬಹುದು ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.

ಕಂಪನಿಗೆ ರಾಜೀನಾಮೆ: ಫಸ್ಟ್ ಇಂಪ್ರೆಶನ್‌ನಷ್ಟೇ, ಕಡೆಯದ್ದೂ ಮುಖ್ಯ

ತಾಯಿ ಆರೋಗ್ಯವಾಗಿದ್ರೆ ಮಗುವೂ ಆರೋಗ್ಯವಾಗಿರುತ್ತೆ: ನಿಜ,ತಾಯಿ ಆರೋಗ್ಯ ಉತ್ತಮವಾಗಿದ್ರೆ ಹೊಟ್ಟೆಯೊಳಗಿರುವ ಭ್ರೂಣವು ಆರೋಗ್ಯದಿಂದಿರುತ್ತದೆ.ಗರ್ಭ ಧರಿಸಿದ ಬಳಿಕ ಮಾತ್ರವಲ್ಲ,ಗರ್ಭಧರಿಸುವ ಮುನ್ನವೂ ಮಹಿಳೆ ತನ್ನ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ. ಪೌಷ್ಟಿಕ ಆಹಾರದ ಜೊತೆಗೆ ಯೋಗ ಹಾಗೂ ವ್ಯಾಯಾಮದ ಮೂಲಕ ಆಕೆ ತನ್ನ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯ.ಗರ್ಭಿಣಿಯಾಗಿರುವಾಗ ಆಕೆಯ ಯೋಚನೆಗಳು,ಭಾವನೆಗಳು ಹಾಗೂ ಅವಳಾಡುವ ಮಾತುಗಳು ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತವೆ.ಮಗುವಿಗೆ ತಾಯಿಯೇ ಮೊದಲ ಗುರು ಎನ್ನುತ್ತಾರೆ. ಹೀಗಾಗಿ ಗರ್ಭದಲ್ಲಿರುವಾಗಲೇ ಮಗು ತಾಯಿ ಆಡುವ, ಕೇಳಿಸಿಕೊಳ್ಳುವ ಮಾತುಗಳನ್ನು ಆಲಿಸಲು ಪ್ರಾರಂಭಿಸುತ್ತದೆ. ಸರಳವಾಗಿ ಹೇಳೋದಾದ್ರೆ ಸಂಸ್ಕಾರದ ಪಾಠ ಮಗುವಿಗೆ ಗರ್ಭದಲ್ಲೇ ಪ್ರಾರಂಭವಾಗಿರುತ್ತದೆ. 

ಗರ್ಭ ಸಂಸ್ಕಾರಕ್ಕಿದೆ ಸುದೀರ್ಘ ಇತಿಹಾಸ: ಗರ್ಭ ಸಂಸ್ಕಾರ ಎನ್ನುವ ಪದಕ್ಕೆ ಸುದೀರ್ಘ ಇತಿಹಾಸವಿದೆ.ಸನಾತನ ಭಾರತೀಯ ಧರ್ಮಗ್ರಂಥಗಳಲ್ಲಿ ಈ ಬಗ್ಗೆ ಉಲ್ಲೇಖವಿದೆ.ಗರ್ಭ ಸಂಸ್ಕಾರ ಎನ್ನುವುದು ಸಂಸ್ಕøತ ಪದವಾಗಿದ್ದು, ಗರ್ಭ ಎಂದರೆ ಭ್ರೂಣ ಹಾಗೂ ಸಂಸ್ಕಾರ ಎಂಬ ಪದಕ್ಕೆ ಮಿದುಳನ್ನು ತರಬೇತುಗೊಳಿಸುವುದು ಎಂಬ ಅರ್ಥವಿದೆ.ಅಂದರೆ ಭ್ರೂಣದ ಮಿದುಳನ್ನು ತರಬೇತುಗೊಳಿಸುವುದು. ಗರ್ಭದೊಳಗೆ ಭ್ರೂಣ ರೂಪದಲ್ಲಿರುವಾಗಲೇ ಮಗುವಿನ ಮಾನಸಿಕ ಹಾಗೂ ವರ್ತನೆಗಳು ಅಭಿವೃದ್ಧಿ ಹೊಂದಲು ಪ್ರಾರಂಭಿಸುತ್ತವೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಇದೆ. ಕ್ರಿ.ಪೂ. 1500-500 ವರ್ಷಗಳಷ್ಟು ಹಳೆಯದಾದ ವೇದ ಗ್ರಂಥಗಳಲ್ಲಿ ಕೂಡ ಗರ್ಭ ಸಂಸ್ಕಾರದ ಬಗ್ಗೆ ಉಲ್ಲೇಖವಿದೆ. ಸುಮಾರು ಕ್ರಿಪೂ. 400ರಲ್ಲಿ ರಚಿತವಾಗಿದೆ ಎಂದು ಹೇಳಲಾಗುವ ಮಹಾಭಾರತದಲ್ಲಿ ಕೂಡ ಈ ಬಗ್ಗೆ ಉಲ್ಲೇಖವಿದೆ. ಭಾರತದ ಪುರಾತನ ವೈದ್ಯಪದ್ಧತಿ ಆಯುರ್ವೇದ ಗರ್ಭ ಸಂಸ್ಕಾರಕ್ಕೆ ಮಹತ್ವ ನೀಡುತ್ತಲೇ ಬಂದಿದೆ ಎಂಬುದು ಗಮನಾರ್ಹ ಸಂಗತಿ.

ಉದ್ಯೋಗದಲ್ಲಿ ಹೊಸ ಸವಾಲಿಗೆ ‘ಎಸ್’ ಎನ್ನಲೇಕೆ ಹಿಂಜರಿಕೆ?

ಹೆಚ್ಚುತ್ತಿರುವ ಆಸಕ್ತಿ: ಭ್ರೂಣದಲ್ಲಿ ಕಲಿಯುವಿಕೆ ಎಂಬ ವಿಷಯದ ಕುರಿತು ಇತ್ತೀಚಿನ ದಿನಗಳಲ್ಲಿ ಆಸಕ್ತಿ ಹೆಚ್ಚುತ್ತಿದೆ. ಮಗುವಿನ ಮಿದುಳಿನ ಶೇ.60ರಷ್ಟು ಬೆಳವಣಿಗೆ ಗರ್ಭದಲ್ಲಿರುವಾಗಲೇ ಆಗುತ್ತದೆ ಎಂಬುದನ್ನು ಸಂಶೋಧನೆಗಳು ಕೂಡ ದೃಢಪಡಿಸಿವೆ. ಹೀಗಾಗಿ ತಾಯಿ ಮತ್ತು ಗರ್ಭದಲ್ಲಿರುವ ಶಿಶುವಿನ ಆರೋಗ್ಯ ಕಾಳಜಿ ಹಾಗೂ ಮಾನಸಿಕ ಬೆಳವಣಿಗೆ ಕುರಿತ ಈ ಅಧ್ಯಯನ ಭವಿಷ್ಯದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಎಲ್ಲ ಸಾಧ್ಯತೆಗಳಿವೆ.