ನಿಖಿಲ್ ಭಾವಿ ಪತ್ನಿ ರೇವತಿ ಯಾವ ಕೋರ್ಸ್ ಮಾಡಿದ್ದಾರೆ ಗೊತ್ತಾ?
ನಿಖಿಲ್ ಕುಮಾರಸ್ವಾಮಿ ಭಾವಿ ಪತ್ನಿ ರೇವತಿ ಜ್ಯುವೆಲ್ಲರಿ ಡಿಸೈನ್‍ನಲ್ಲಿ ಕೋರ್ಸ್ ಮುಗಿಸಿದ್ದಾರೆ ಎಂಬುದು ಸುದ್ದಿಯಾಗಿತ್ತು. ಇದಕ್ಕೆ ಪೂರಕವೆಂಬಂತೆ ನಿಶ್ಚಿತಾರ್ಥದಲ್ಲಿ ಅವರು ತೊಟ್ಟಿದ್ದ ಆಭರಣಗಳು ಆಕರ್ಷಕವಾಗಿದ್ದವು. ಸೃಜನಶೀಲತೆ ಹೊಂದಿರುವವರಿಗೆ ಆಭರಣ ವಿನ್ಯಾಸ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಇತ್ತೀಚೆಗೆ ತಾಜ್ ವೆಸ್ಟ್ ಎಂಡ್‍ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಭಾವಿ ಪತ್ನಿ ರೇವತಿ ಕೈಗೆ ಉಂಗುರ ತೊಡಿಸಿ, ನಾವಿನ್ನು ಎಂಗೇಜ್ಡ್ ಎಂಬುದನ್ನು ಅಧಿಕೃತವಾಗಿ ಸಾರಿದ್ದಾರೆ. ಇವರಿಬ್ಬರ ಕಾಸ್ಟ್ಯೂಮ್ ಫ್ಯಾಷನ್ ಪ್ರಿಯರ ಕಣ್ಣು ಕುಕ್ಕಿತ್ತು. ಅದರಲ್ಲೂ ರೇವತಿ ಧರಿಸಿದ ವಿಶಿಷ್ಟ ವಿನ್ಯಾಸದ ಡೈಮಂಡ್ ಹಾಗೂ ಗೋಲ್ಡ್ ಜ್ಯುವೆಲ್ಲರಿಗಳು ಹೆಣ್ಮಕ್ಕಳ ಗಮನ ಸೆಳೆದಿವೆ. ಆ ಆಭರಣಗಳ ವಿನ್ಯಾಸದ ಹಿಂದೆ ರೇವತಿಯವರ ಕ್ರಿಯೇಟಿವಿಟಿಯೂ ಇರ್ಬಹುದು ಅಲ್ಲವಾ? ಅರೇ, ರೇವತಿಯವರು ಆ ಆಭರಣ ಧರಿಸಿದ ಮಾತ್ರಕ್ಕೆ ಅದರ ವಿನ್ಯಾಸದಲ್ಲಿ ಅವರ ಕೈಚಳಕವಿರಲು ಹೇಗೆ ಸಾಧ್ಯ ಅಂತೀರಾ? ರೇವತಿಯವರು ಆಭರಣ ವಿನ್ಯಾಸ ಪ್ರವೀಣೆ. ಹೌದು,ಅವರು ಜ್ಯುವೆಲ್ಲರಿ ಡಿಸೈನ್ ಹಾಗೂ ಜ್ಯುವೆಲ್ಲರಿ ಮೇಕಿಂಗ್ ಕೋರ್ಸ್ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರದ ಅರ್ವ್ ಅಕಾಡೆಮಿಯಲ್ಲಿ ಕಳೆದ ನವೆಂಬರ್‍ನಲ್ಲಷ್ಟೇ ರೇವತಿ ಆರು ತಿಂಗಳ ಜ್ಯುವೆಲ್ಲರಿ ಡಿಸೈನ್ ಕೋರ್ಸ್ ಕಂಪ್ಲೇಟ್ ಮಾಡಿದ್ದಾರೆ.
ಒಳ್ಳೇ ಕೆಲ್ಸ ಬೇಕಾ? ಫೇಸ್‌ಬುಕ್‌ನಲ್ಲಿ ಬಾಯಿಗೆ ಬಂದ ಹಾಗೆ ಬರೀಬೇಡಿ!
ಏನಿದು ಜ್ಯುವೆಲ್ಲರಿ ಡಿಸೈನ್?: ಜ್ಯುವೆಲ್ಲರಿ ಡಿಸೈನ್ ಕೋರ್ಸ್‍ನಲ್ಲಿ ಆಭರಣಗಳನ್ನು ವಿನ್ಯಾಸಗೊಳಿಸುವ ಹಾಗೂ ಸಿದ್ಧಪಡಿಸುವ ಬಗ್ಗೆ ತರಬೇತಿ ನೀಡಲಾಗುತ್ತದೆ. ನಾನಾ ವಿನ್ಯಾಸದ ನೆಕ್ಲೇಸ್, ಹಾರಗಳು, ಬಳೆಗಳು, ಜುಮ್ಕಗಳನ್ನು ನೋಡಿ ವ್ಹಾವ್ ಎಂದು ಕಣ್ಣರಳಿಸಿ ನೋಡುತ್ತೇವೆ, ಖರೀದಿಸುತ್ತೇವೆ. ಆದರೆ, ಅವುಗಳ ಉತ್ಪಾದನೆಯ ಹಿಂದೆ ಸಾಕಷ್ಟು ಶ್ರಮ ಹಾಗೂ ಕ್ರಿಯೇಟವಿಟಿ ಇರುತ್ತದೆ. ಜ್ಯುವೆಲ್ಲರಿ ಮೇಕಿಂಗ್ ತುಂಬಾ ಕ್ಲಿಷ್ಟಕರ ಕಾರ್ಯವಾಗಿದ್ದು,ಇದಕ್ಕೆ ತಾಂತ್ರಿಕ ನೈಪುಣ್ಯತೆಯ ಅಗತ್ಯವಿದೆ. ಹೇಗೆ ಯಾವುದೇ ಒಂದು ಕಟ್ಟಡ ನಿರ್ಮಿಸುವ ಮುನ್ನ ನೀಲಿನಕ್ಷೆ ಸಿದ್ಧಪಡಿಸಲಾಗುತ್ತದೋ ಹಾಗೆಯೇ ಯಾವುದೇ ಒಂದು ಆಭರಣವನ್ನು ಸಿದ್ಧಪಡಿಸುವ ಮುನ್ನ ಅದಕ್ಕೊಂದು ಡಿಸೈನ್ ಅಥವಾ ವಿನ್ಯಾಸ ರೆಡಿ ಮಾಡಲಾಗುತ್ತದೆ. ಈ ವಿನ್ಯಾಸವನ್ನು ಸಿದ್ಧಪಡಿಸುವುದು ಜ್ಯುವೆಲ್ಲರಿ ಡಿಸೈನರ್. ಸೋ,ಈ ಕಾರ್ಯಕ್ಕೆ ಸೃಜನಶಕ್ತಿ,ವಿಭಿನ್ನ ಯೋಚನೆ,ಮಾರುಕಟ್ಟೆ ಟ್ರೆಂಡ್‍ನ ಜ್ಞಾನ ಅತ್ಯಗತ್ಯ.ಜ್ಯುವೆಲ್ಲರಿ ಡಿಸೈನ್ ಕೋರ್ಸ್‍ನಲ್ಲಿ ಆಭರಣಗಳಲ್ಲಿ ಬಳಸುವ ವಿವಿಧ ವಸ್ತುಗಳ ವಿನ್ಯಾಸ ಹಾಗೂ ಬಳಕೆ ಮಾಹಿತಿ ಜೊತೆಗೆ ಅವುಗಳನ್ನು ಹೇಗೆಲ್ಲ ಬಳಸಬಹುದು,ಧರಿಸಿದರೆ ಹೇಗೆ ಕಾಣಿಸುತ್ತದೆ ಎಂಬುದರಿಂದ ಹಿಡಿದು ಮಾರ್ಕೆಟ್ ಟ್ರೆಂಡ್‍ಗಳ ತನಕ ಪ್ರತಿ ವಿಷಯವನ್ನೂ ಕಲಿಸಲಾಗುತ್ತದೆ.
ಗೆಳತಿಯರು ಬೆನ್ನಿಗಿದ್ರೆ ಉದ್ಯೋಗಸ್ಥೆ ಮಹಿಳೆಗೆ ಆನೆಬಲ
ಯಾವೆಲ್ಲ ಕೋರ್ಸ್‍ಗಳಿವೆ: ಜ್ಯುವೆಲ್ಲರಿ ಡಿಸೈನರ್ ಆಗಬೇಕೆಂದ್ರೆ ನೀವು ಜ್ಯುವೆಲ್ಲರಿ ಡಿಸೈನ್ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಮಾಡಬೇಕು. ಪದವಿ ಹಂತದಲ್ಲಿ ಬಿಡಿಇಎಸ್ ಇನ್ ಜ್ಯುವೆಲ್ಲರಿ ಡಿಸೈನಿಂಗ್, ಬಿಎಸ್ಸಿ ಇನ್ ಜ್ಯುವೆಲ್ಲರಿ ಡಿಸೈನಿಂಗ್, ಬಿಎ ಇನ್ ಜ್ಯುವೆಲ್ಲರಿ ಡಿಸೈನಿಂಗ್ ಹಾಗೂ ಬಿವಿಒಸಿ ಇನ್ ಜ್ಯುವೆಲ್ಲರಿ ಡಿಸೈನಿಂಗ್ ಎಂಬ ಕೋರ್ಸ್‍ಗಳು ಲಭ್ಯವಿವೆ. ಸ್ನಾತಕೋತ್ತರ ಪದವಿ ಹಂತದಲ್ಲಿ ಜ್ಯುವೆಲ್ಲರಿ ಡಿಸೈನ್‍ನಲ್ಲಿ ಎಂಡಿಇಎಸ್, ಎಂಎಸ್ಸಿ ಹಾಗೂ ಎಂಬಿಎ ಮಾಡಬಹುದು. ಪದವಿ ಅಥವಾ ಸ್ನಾತಕೋತ್ತರ ಪದವಿ ಹೊರತಾಗಿ ಜ್ಯುವೆಲ್ಲರಿ ಡಿಸೈನ್‍ಗೆ ಸಂಬಂಧಿಸಿ ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‍ಗಳು ಕೂಡ ಲಭ್ಯವಿವೆ.
ಅರ್ಹತೆ ಏನು?: ಜ್ಯುವೆಲ್ಲರಿ ಡಿಸೈನ್‍ನಲ್ಲಿ ಪದವಿ ಮಾಡಬಯಸುವ ಅಭ್ಯರ್ಥಿ ಮಾನ್ಯತೆ ಪಡೆದ ಬೋರ್ಡ್‍ನಿಂದ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು. ಕಲೆ, ವಾಣಿಜ್ಯ ಹಾಗೂ ವಿಜ್ಞಾನ ಸೇರಿದಂತೆ ಪಿಯುಸಿಯಲ್ಲಿ ಯಾವ ವಿಷಯ ತೆಗೆದುಕೊಂಡಿದ್ರೂ ಜ್ಯುವೆಲ್ಲರಿ ಡಿಸೈನ್ ಪದವಿಗೆ ಸೇರಲು ಅಡ್ಡಿಯಿಲ್ಲ. ಇನ್ನು ಜ್ಯುವೆಲ್ಲರಿ ಡಿಸೈನ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮಾನ್ಯತೆ ಪಡೆದ ಕಾಲೇಜು ಅಥವಾ ಸಂಸ್ಥೆಯಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಬಹುತೇಕ ಸ್ನಾತಕೋತ್ತರ ಪದವಿ ಕಾಲೇಜುಗಳು ಜ್ಯುವೆಲ್ಲರಿ ಡಿಸೈನ್‍ನಲ್ಲಿ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೇ ಹೆಚ್ಚಿನ ಒತ್ತು ನೀಡುತ್ತವೆಯಾದರೂ ಅರ್ಹ ಕೌಶಲ್ಯ ಹೊಂದಿರುವವರು ಕೂಡ ಪ್ರವೇಶ ಬಯಸಿ ಅರ್ಜಿ ಸಲ್ಲಿಸಬಹುದು.
ಇವೆಲ್ಲ ಕೌಶಲ್ಯವಿರಬೇಕು: ಜ್ಯುವೆಲ್ಲರಿ ಡಿಸೈನ್ ಕೋರ್ಸ್ ಮಾಡಲು ಶೈಕ್ಷಣಿಕ ಅರ್ಹತೆಯ ಜೊತೆಗೆ ಕ್ರಿಯೇಟಿವಿಟಿ, ಉತ್ತಮ ಕಲ್ಪನಾಶಕ್ತಿ, ಸಂವಹನ ಕೌಶಲ,ಕುತೂಹಲ,ಇನೋವೇಟಿವ್ ಸ್ಕಿಲ್, ಪ್ರತಿ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುವ ಚಾಕಚಕ್ಯತೆ,ವಿವಿಧ ಲೋಹ ಹಾಗೂ ಹರಳುಗಳ ಮಾಹಿತಿ ಜೊತೆಗೆ ಹಿಂದಿನ ಹಾಗೂ ಇಂದಿನ ಮಾರ್ಕೆಟ್ ಟ್ರೆಂಡ್‍ಗಳ ಬಗ್ಗೆ ಜ್ಞಾನ ಹೊಂದಿರುವುದು ಅಗತ್ಯ.
ಉದ್ಯೋಗಾವಕಾಶಗಳು: ಜ್ಯುವೆಲ್ಲರಿ ಡಿಸೈನ್ ಪೂರ್ಣಗೊಳಿಸಿದವರು ಜ್ಯುವೆಲ್ಲರಿ ಡಿಸೈನರ್, ಜ್ಯುವೆಲ್ಲರಿ ಮ್ಯಾನ್ಯುಫ್ಯಾಕ್ಚರರ್, ಜ್ಯುವೆಲ್ಲರಿ ಕನ್ಸಲ್ಟೆಂಟ್, ಕಸ್ಟಮ್ ಡಿಸೈನರ್, ಹ್ಯಾಂಡ್ ರೆಂಡರರ್, ಜ್ಯುವೆಲ್ಲರಿ ಬ್ಯುಸಿನೆಸ್ ಒನರ್, ಸೇಲ್ಸ್ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸಬಹುದು.