BBMP Recruitment; ನಮ್ಮ ಕ್ಲಿನಿಕ್ ವಿವಿಧ ಹುದ್ದೆಗೆ ಒಟ್ಟು 1,499 ಅರ್ಜಿ ಸಲ್ಲಿಕೆ
ಬಿಬಿಎಂಪಿಯ 243 ವಾರ್ಡ್‌ಗಳಲ್ಲಿ ‘ನಮ್ಮ ಕ್ಲಿನಿಕ್’ ಆರಂಭಿಸಲು ಅಗತ್ಯವಿರುವ ಒಟ್ಟು 940 ಸಿಬ್ಬಂದಿಯನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಸಂಬಂಧ 1499 ಅರ್ಜಿ ಸಲ್ಲಿಕೆಯಾಗಿವೆ.
ಬೆಂಗಳೂರು (ಅ.12): ಬಿಬಿಎಂಪಿಯ 243 ವಾರ್ಡ್‌ಗಳಲ್ಲಿ ‘ನಮ್ಮ ಕ್ಲಿನಿಕ್’ ಆರಂಭಿಸಲು ಅಗತ್ಯವಿರುವ ಡಾಕ್ಟರ್, ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್ ಹಾಗೂ ಡಿ ಗ್ರೂಪ್ ನೌಕರರು ಸೇರಿದಂತೆ ಒಟ್ಟು 940 ಸಿಬ್ಬಂದಿಯನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಸಂಬಂಧ 1499 ಅರ್ಜಿ ಸಲ್ಲಿಕೆಯಾಗಿವೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ ತ್ರಿಲೋಕ ಚಂದ್ರ ತಿಳಿಸಿದರು. ಈ ಕುರಿತು ಮಾಹಿತಿ ನೀಡಿದ ಅವರು, ಎರಡು ದಿನ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಬುಧವಾರ 846 ಹಾಗೂ ಗುರುವಾರ 653 ಅರ್ಜಿ ಸಲ್ಲಿಕೆಯಾಗಿವೆ. ಈ ಪೈಕಿ ಡಾಕ್ಟರ್ ಹುದ್ದೆಗೆ 158, ಸ್ಟಾಫ್ ನರ್ಸ್ ಹುದ್ದೆಗೆ 381, ಲ್ಯಾಬ್ ಟೆಕ್ನಿಷಿಯನ್ ಹುದ್ದೆಗೆ 351 ಹಾಗೂ ಡಿ ಗ್ರೂಪ್ ಹುದ್ದೆಗೆ 609 ಅರ್ಜಿ ಸಲ್ಲಿಕೆಯಾಗಿವೆ ಎಂದು ತಿಳಿಸಿದರು.ಅರ್ಜಿಗಳನ್ನು ಒಂದು ವಾರದಲ್ಲಿ ಪರಿಶೀಲಿಸಿ ಮೆರಿಟ್ ಕಮ್ ರೋಸ್ಟರ್ ಆಧಾರದಲ್ಲಿ ಪಟ್ಟಿಬಿಡುಗಡೆ ಮಾಡಲಾಗುತ್ತದೆ. ಈ ಕುರಿತು ಆಕ್ಷೇಪಣೆ ಸಲ್ಲಿಸಲು ಒಂದು ವಾರ ಅವಕಾಶ ನೀಡಲಾಗುವುದು. ಬಳಿಕ ಅಂತಿಮ ಪಟ್ಟಿಬಿಡುಗಡೆ ಮಾಡಿ ನೇಮಕಾತಿ ಪತ್ರ ವಿತರಿಸಲಾಗುವುದು.
‘ನಮ್ಮ ಕ್ಲಿನಿಕ್’ಗೆ ಒಂದು ವರ್ಷದ ಗುತ್ತಿಗೆಗೆ ನೇಮಕವಾಗುವ ಡಾಕ್ಟರ್‌ಗೆ ಮಾಸಿಕ .47,250, ನರ್ಸ್‌ಗೆ .15,750, ಲ್ಯಾಬ್‌ಟೆಕ್ನಿಷಿಯನ್‌ಗೆ .14,609 ಹಾಗೂ ಡಿ ಗ್ರೂಪ್ ಸಿಬ್ಬಂದಿಗೆ .10,500 ವೇತನ ನಿಗದಿ ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಬಡ ವರ್ಗದವರಿಗೆ ಅನುಕೂಲವಾಗಲೆಂದು ದೆಹಲಿ ಸರ್ಕಾರ ಸ್ಥಾಪಿಸಿರುವ ‘ಮೊಹಲ್ಲಾ ಕ್ಲಿನಿಕ್’ ಮಾದರಿಯಲ್ಲಿಯೇ ರಾಜ್ಯದಲ್ಲಿಯೇ ‘ನಮ್ಮ ಕ್ಲಿನಿಕ್’ ಸ್ಥಾಪಿಸಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿ ಸೇರಿದಂತೆ ರಾಜ್ಯದಲ್ಲಿ 438 ‘ನಮ್ಮ ಕ್ಲಿನಿಕ್’ ಸ್ಥಾಪಿಸಲಾಗುತ್ತಿದೆ. ಎಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲವೋ ಅಲ್ಲಿ ಇವು ಕಾರ್ಯನಿರ್ವಹಿಸಲಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವುಗಳ ಮೇಲುಸ್ತುವಾರಿ ವಹಿಸಲಿವೆ. 15ನೇ ಹಣಕಾಸು ಆಯೋಗದ ಅನುದಾನದಡಿಯಲ್ಲಿ 155.77 ಕೋಟಿ ರು. ವೆಚ್ಚದಲ್ಲಿ ನಮ್ಮ ಕ್ಲಿನಿಕ್ ಸ್ಥಾಪಿಸಲು ಸರಕಾರ ಮುಂದಾಗಿದೆ. ಕ್ಲಿನಿಕ್‌ಗಳಿಗೆ ಒಬ್ಬ ವೈದ್ಯಾಧಿಕಾರಿ, ಶುಶ್ರೂಷಕರು ಮತ್ತು ದ್ವಿತೀಯ ದರ್ಜೆ ಸಹಾಯಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಏನಿದು ನಮ್ಮ ಕ್ಲಿನಿಕ್?
ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹೊರತಾಗಿ ನಗರ, ಪಟ್ಟಣಗಳ ವಾರ್ಡ್ ಮಟ್ಟದಲ್ಲಿ ಆರೋಗ್ಯ ಸೇವೆ ನೀಡುವ ಕೇಂದ್ರ
Karnataka Budget 2022-23: ಮೊಹಲ್ಲಾ ಕ್ಲಿನಿಕ್ ರೀತಿ ನಮ್ಮ ಕ್ಲಿನಿಕ್: ಸಿಎಂ ಬೊಮ್ಮಾಯಿ
ಯಾಕೆ ಈ ಕ್ಲಿನಿಕ್?
ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡಲು. ಹಾಗೂ, ಜನರಿಗೆ ಸ್ಥಳೀಯವಾಗಿಯೇ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ
ಎಲ್ಲೆಲ್ಲಿ ಆರಂಭ?
ಬೆಂಗಳೂರು ಮಹಾನಗರದ ಎಲ್ಲ ವಾರ್ಡ್‌ಗಳು ಸೇರಿದಂತೆ ರಾಜ್ಯದ ವಿವಿಧೆಡೆ 155.77 ಕೋಟಿ ರು. ವೆಚ್ಚದಲ್ಲಿ 438 ನಮ್ಮ ಕ್ಲಿನಿಕ್ ಆರಂಭ
ದೆಹಲಿ ಮಾದರಿ: ಕರ್ನಾಟಕದಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆಗೆ ರಾಜ್ಯ ಸಂಪುಟ ಅಸ್ತು
ಯಾರ್ಯಾರು ಇರ್ತಾರೆ?
ಪ್ರತಿ ಕ್ಲಿನಿಕ್‌ನಲ್ಲಿ ಒಬ್ಬ ವೈದ್ಯಾಧಿಕಾರಿ, ಶುಶ್ರೂಷಕ ಮತ್ತು ದ್ವಿತೀಯ ದರ್ಜೆ ಸಹಾಯಕರು ಲಭ್ಯ. ಇವರೆಲ್ಲ ಗುತ್ತಿಗೆ ಆಧಾರದ ಮೇಲೆ ನೇಮಕ.